ಇಂಗಿತ!

31 ಆಕ್ಟೋ 13

 

ಸಖೀ,
ನಾನಾಡುವ ಮಾತುಗಳಿಗೆಲ್ಲಾ 
ನಿನ್ನ ಸಹಮತದ ಮುದ್ರೆ ಇರಲಿ
ನೀನಾಡುವ ಮಾತುಗಳಲೆಲ್ಲಾ
ನನ್ನ ಮನದ ಇಂಗಿತವಿದ್ದಿರಲಿ!

Advertisements

ಖಾತ್ರಿಯೇನು?

31 ಆಕ್ಟೋ 13

 

ಸಖೀ,
ನಿನಗಿಂತ ಚೆಲುವೆ ಇನ್ನಾರೂ ಇಲ್ಲ ಕಣೇ
ಎಂದವನ ಕಣ್ಣಲ್ಲಿ ಕಣ್ಣಿಟ್ಟು ನೋಡು ಹೆಣ್ಣೇ
ಅರಿ ನೀನಾತ ನೋಡಿಹ ಹೆಣ್ಣುಗಳೆಷ್ಟೆಂದು
ಖಾತ್ರಿಯೇನು ಇನ್ನೊಬ್ಬಳಿಷ್ಟವಾಗಳೆಂದು?


ಉದ್ಧರಣ!

31 ಆಕ್ಟೋ 13

 

ಸಖೀ,
ಸದಾ ಉದ್ಧರಿಸುತ್ತಾ ಕುಳಿತುಬಿಟ್ಟರೆ
ಸ್ವಂತದ್ದೇನೂ ಬೆಳೆಯುವುದಿಲ್ಲವೆ;
ಉದ್ಧರಣವನು ನಮ್ಮ ಜೀವನದಲಿ
ರೂಢಿಸಿ ಬೆಳೆಸಿಕೊಳ್ಳಬೇಕಲ್ಲವೇ?


ಯಾಕಿಷ್ಟು ಆಪ್ತ?

31 ಆಕ್ಟೋ 13

 

ಸಖೀ,
ನೀನ್ಯಾರೋ… ನಾನ್ಯಾರೋ ತಿಳಿಯದೇ

ಮೊದಲ ಭೇಟೀಯಲೇ ನೀ ಮಾತಿಗಿಳಿದೆ
ಬೇಡ ಬೇಡವೆನ್ನುತ್ತಲೇ ಮನದೊಳಗಿಳಿದೆ
“ಯಾಕಿಷ್ಟು ಆಪ್ತ?” ಎಂದೀಗೇಕೆನ್ನ ಕೇಳಿದೆ?


ನಿದ್ದೆ!

30 ಆಕ್ಟೋ 13

 

“ನಿನ್ನೆದೆಗೆ 
ಒರಗಿದರೆ ಸಾಕು 
ನಿನ್ನೆದೆಯ ಮಿಡಿತದ 
ಜೋಗುಳಕೆ ನನಗೆ 
ಹಾಯಾದ ನಿದ್ದೆ”

“ಹೂಂ…
ನಿದ್ದೆಯಲಿ ನೀನು
ಹೊಡೆಯುವ ಆ
ಗೊರಕೆಸದ್ದಿಗೋಡಿ
ಹೋಗುವುದೆನ್ನ ನಿದ್ದೆ!”


ನಮ್ಮ ಮನಸ್ಸುಗಳು!

30 ಆಕ್ಟೋ 13

 

ಸಖೀ,
ಅಪರಾತ್ರಿ ಹೊತ್ತಿನಲ್ಲಿ
ಮಬ್ಬುಮಬ್ಬು ಬೆಳಕಿನಲ್ಲಿ
ವಿದೇಶಿ ಮದ್ಯದಮಲಿನಲ್ಲಿ,
ನಮ್ಮ ಜೀವನವನು ರಂಗು
ರಂಗಾಗಿಸುತ್ತಾ ಇದ್ದುಬಿಟ್ಟು,
ಅಲ್ಲೆಲ್ಲೋ ದೂರದ ಗುಡಿಸಲು,
ಯಾವುದೋ ಬಸ್ ನಿಲ್ದಾಣ,
ಇನ್ನೆಲ್ಲೋ ಮರದ ಕೆಳಗೆ,
ಮೈಮೇಲೆ ಹೊದಿಕೆ ಇಲ್ಲದೇ
ಚಳಿಯಲ್ಲಿ ನಿದ್ದೆ ಬಾರದೇ
ಒದ್ದಾಡುವವರ ಚಿತ್ರವನು
ನಾನಿನ್ನ ಮುಂದಿಷ್ಟರೆಷ್ಟೇ,
ಅದಕ್ಕಾಗಿ ನಿನ್ನಿಂದ ಪಡೆವ
ಮೆಚ್ಚುಗೆಗಳ ಲೆಕ್ಕ ಅದೆಷ್ಟೇ,
ವಾಸ್ತವವನು ಬದಲಾಯಿಸೋ
ಧೈರ್ಯ ನನ್ನಲ್ಲಂತೂ ಇಲ್ಲ
ಪುರುಸೊತ್ತು ನಿನಗೂ ಇಲ್ಲ;
ನಮಗಾದರೋ ಇವುಗಳೆಲ್ಲಾ
ಮನರಂಜನೆಯ ವಸ್ತುಗಳು;
ನಮ್ಮದು, ದೀನರ ಬಡತನದ,
ಆ ಬಡಮೈಗಳ ನಗ್ನತೆಯ,
ವಿರುದ್ಧ ಅತ್ಯಾಚಾರ ನಡೆಸಿ
ಮಾನಸಿಕ ವ್ಯಭಿಚಾರ ನಡೆಸಿ
ಖುಷಿ ಪಡುವ, ಸದಾ ಅದರಲ್ಲೇ
ಸಂತೃಪ್ತರಾಗುವ ಮನಸ್ಸುಗಳು!
*******************


ಮನಸ್ಥಿತಿ ಅಲ್ಲ!

29 ಆಕ್ಟೋ 13

 

ಸಖೀ,
ನಾನಿಲ್ಲಿ ಬರೆಯುವ ಮಾತುಗಳಿಗೂ
ನನಗೂ ನಂಟು ಕಲ್ಪಿಸಿಕೊಳ್ಳದಿರು,

ಇವೆಲ್ಲಾ ಆಯಾ ಕ್ಷಣಗಳಲ್ಲಿ, ನನ್ನ 
ಮನದ ಪರದೆಯ ಮೇಲೆ ಹಾದು 
ಮರೆಯಾಗಿ ಹೋಗುವ ಭಾವಗಳು
ಮತ್ತು ಅವುಗಳ ಅಕ್ಷರರೂಪಗಳು;

ಹೆಚ್ಚಿನ ಯಾವ ಭಾವಗಳೂ ಖಾಯಂ
ಅಲ್ಲ, ನನ್ನ ಮನಸ್ಥಿತಿ ಅಲ್ಲವೇ ಅಲ್ಲ!