ಹೊಟ್ಟೆಗೇನು ತಿನ್ನುತ್ತಾರೆ?

31 ಮೇ 14

ಸಖೀ,
ಯಾವ ಖಾಸಗಿ ಕಾರ್ಯಕ್ರಮಗಳಲ್ಲೂ ಮಾಡಬಾರದಂತೆ ಖರ್ಚು ಹೆಚ್ಚು
ಚುನಾವಣೆಯಲ್ಲಿ ಖರ್ಚು ಮಾಡುತ್ತಾರಲ್ಲಾ ಅದು ಯಾವ ತರಹದ ಹುಚ್ಚು
ಭ್ರಷ್ಟಾಚಾರವನು ನಿರ್ಮೂಲನ ಮಾಡಿ ಅನ್ನುತ್ತಿದ್ದಾರೆ ನಾಡಿನೆಲ್ಲಾ ಮಂದಿ
ಜನರ ಸುಲಿಗೆಗಿಳಿದಿರುವ ರಾಜಕಾರಣಿಗಳು ಹೊಟ್ಟೆಗೇನು ತಿನ್ನುತ್ತಾರಂದಿ?

Advertisements

ಬಾಳು ನಿಲ್ಲದು!

31 ಮೇ 14

 

ಸಖೀ,
ಮನದೊಳಗೆ ಇಳಿದವರ ಹಚ್ಚಿಕೊಳ್ಳುವುದು ಉಂಟು
ಇರಲಾರೆವೇನೋ ಬಿಟ್ಟು ಎಂದನಿಸುವುದೂ ಉಂಟು
ಅಮ್ಮಅಪ್ಪಯ್ಯನವರಗಲಿದರೂ ಬಾಳುತಿಹೆ ನಾನಿಂದು
ಮನದಿಂದ ನಡೆದವರಿಲ್ಲದೆಯೂ ಬಾಳುವೆ ಮುಂದೂ!


ಸ್ನೇಹದರ್ಪಣದಲ್ಲಿ!

31 ಮೇ 14

 

ಸಖೀ,
ಸುಳ್ಳನ್ನಾಡುವುದೇ ಇಲ್ಲ ಸ್ನೇಹದರ್ಪಣವೆಂದೆ
ಅದರ ಮುಂದಿಟ್ಟದ್ದನ್ನೇ ನಮ್ಮ ಮುಂದಿಡುತ್ತದೆ
ನಾಚುತ್ತಾ ನಿಂತರೆ ನಾಚಿಕೆಯೇ ಕಾಣಸಿಗುತ್ತದೆ 
ಪ್ರೀತಿಯನು ತೋರಿದರೆ ಪ್ರೀತಿ ಪ್ರತಿಫಲಿಸುತ್ತದೆ
ಅನುಮಾನದಿಂದಿದ್ದರೆ ಅನುಮಾನವೇ ಕಾಣುತ್ತದೆ
ದ್ವೇಷ ಕಾರಿದರೆ ಅದೂ ಬೇರೇನನ್ನು ಕಾರುತ್ತದೆ?


ಪೈಪೋಟಿಗಿಳಿದರೆ!

31 ಮೇ 14

ಸಖೀ,
ಪ್ರೀತಿಯಲಿ ಸೋಲಿಸಿದರೆ
ಒಪ್ಪಿಕೊಳ್ಳುತ್ತೇನೆ ಸೋಲನ್ನು
ಅಪ್ಪಿಕೊಳ್ಳುತ್ತೇನೆ ನಾ ನಿನ್ನನ್ನು

ನೀನು ಪೈಪೋಟಿಗೆ ಇಳಿದರೆ
ಸೋಲಿಸುತ್ತೇನೆ ನಾ ನಿನ್ನನ್ನು
ಮರೆಸುತ್ತೇನೆ ನನ್ನ ನೆನಪನ್ನೂ!


ಪರದೂಷಣೆ!

31 ಮೇ 14

ಸಖೀ,
ತಮ್ಮ ಮಕ್ಕಳು
ಕೆಟ್ಟವರಾದರೆಂದು
ಪತಿ-ಪತ್ನಿಯರು
ಪರಸ್ಪರರನ್ನು
ದೂರುತ್ತಿದ್ದಾರಂತೆ,

ಅಂದು ಒಟ್ಟಾಗಿ
ಚಪ್ಪಾಳೆ ಹೊಡೆದ
ಹಸ್ತಗಳೆರಡೂ,
ಹೊಮ್ಮಿದ ಸದ್ದಿಗಾಗಿ
ಪರಸ್ಪರರನ್ನು
ದೂರುತ್ತಿರುವಂತೆ!


ಭಿತ್ತಿಮಾತು!

31 ಮೇ 14

 

ಸಖೀ,
ಭಿತ್ತಿಗಂಟಿಸಿದ ಮಾತುಗಳಿಲ್ಲಿ ಮುದ ನೀಡುವುದು ಕ್ಷಣಿಕ
ಮನದಿ ಬಿತ್ತಿದ ಮಾತುಗಳುಳಿಯುವುದು ಕೊನೆಯತನಕ
ಮನಕೂ ಭಿತ್ತಿಗೂ ನಡುವೆ ಇರಲಿ ಅಲ್ಪವಾದರೂ ಅಂತರ
ಏಕೆ ಇರಬೇಕು ಮನವನ್ನೇ ಭಿತ್ತಿಯಾಗಿಸಿಬಿಡುವ ಕಾತರ?


ಇನ್ನು ಒಲವಿನತ್ತ!

31 ಮೇ 14

ಸಖೀ,
ಅಂತೂ ಆ ಪೂತನಿಯ ಪಕ್ಷ ಮೂಲೆಸೇರಿದೆ ಸೋತು 
ಸಾಕು ಬಿಡು ಬೇಡ ನಮಗಿನ್ನು ರಾಜಕೀಯದ ಮಾತು
ಗೆದ್ದವರು ಐದುವರ್ಷ ಕೆಲಸಮಾಡಲಿ ಅಭಿವೃದ್ಧಿಯತ್ತ
ಇಲ್ಲಿನ್ನು ಕೇವಲ ನಮ್ಮ ನಡುವಣ ಒಲವಿನತ್ತಲೇ ಚಿತ್ತ!