ನೇರ-ನಿಷ್ಠುರ!

25 ಏಪ್ರಿಲ್ 15

ಸಖೀ,
ನೇರ ಹಾಗೂ ನಿಷ್ಠುರವಾಗಿ
ಮಾತನಾಡದೇ ಇದ್ದರೆ ನಮ್ಮ
ಸಂಬಂಧಗಳನ್ನು ಉಳಿಸಿಕೊಳ್ಳುವುದು ಸರಳ;

ನನ್ನ ಪಾಲಿಗಂತೂ ಈಗೀಗ
ಇಲ್ಲವೇ ಇಲ್ಲ ಅನ್ನುವಷ್ಟು
ಆಗಿ ಬಿಟ್ಟಿದ್ದಾರೆ ಕಣೇ ಸಂಬಂಧಿಗಳು ವಿರಳ!


ಉಳಿದದ್ದು ಪ್ರೀತಿ!

25 ಏಪ್ರಿಲ್ 15

ಪ್ರೀತಿ ಪ್ರೇಮಗಳು ಪರಸ್ಪರರ ಮೇಲೆ ಸ್ವಾಮ್ಯ ಬಯಸಿದಾಗ ಕುಲಗೆಟ್ಟುಹೋಗುವುದು ಸ್ವಾಭಾವಿಕ.

ಅವೆಲ್ಲಕ್ಕೂ ಮೀರಿದ್ದರೆ,
ಅವೆಲ್ಲವನ್ನೂ ಮೀರಿ ಉಳಿದದ್ದೇ ಆದರೆ ಅದುವೇ ಪ್ರೀತಿ.

ಅಳಿದದ್ದಲ್ಲ ಪ್ರೀತಿ;
ಉಳಿದದ್ದು ಪ್ರೀತಿ!


ಭಾವವದೇನಿದೆ?

25 ಏಪ್ರಿಲ್ 15

ಸಖೀ,
ಮಾತಿಲ್ಲ ಕತೆಯಿಲ್ಲ
ಮೌನದಲೇ ನುಡಿವೆ ನೀನೆಲ್ಲಾ;

ಪರೋಕ್ಷವಾಗೇ ಇವೆ
ಈಗೀಗ ನಿನ್ನ ಮಾತುಗಳೆಲ್ಲಾ;

ಜಗದ ಭಯವೋ
ಅಂತರ್ಯದ ಭಯವೋ ಗೊತ್ತಿಲ್ಲ;

ಗುಂಪಿನಲಿ ನನ್ನತ್ತ
ಅಪರಿಚಿತ ನೋಟ ನೀಡುವೆಯಲ್ಲಾ?

ಬೇಡವೆಂದೊಮ್ಮೆಗೇ
ನನ್ನನ್ನು ನೀನು ದೂರ ಮಾಡುವುದಿಲ್ಲ;

ಆದರೆ ನೀನೆಂದೂ
ನನ್ನ ಜೊತೆಯಲ್ಲಿ ಇದ್ದಂತೆಯೂ ಇಲ್ಲ;

ಇಂಥ ಬಂಧಕ್ಕೇನರ್ಥ
ಅನ್ನುವ ಗೊಂದಲ ಮನದೊಳಗಿದೆ;

ನಿಜ ಹೇಳು ನೀನೊಮ್ಮೆ
ನಿನ್ನ ಮನದೊಳಗೆ ಭಾವವದೇನಿದೆ?
*******


ವಿಪರ್ಯಾಸ!

25 ಏಪ್ರಿಲ್ 15

ಸಖೀ,
ನಿನ್ನ ಕಣ್ಣ ರೆಪ್ಪೆಗಳ ಮೇಲೆ
ನೀ ಹಚ್ಚಿಕೊಂಡಿಹ ಕಾಡಿಗೆ;

ಮೈಗೆ ಹಚ್ಚಿಕೊಂಡರೆ ಬಿಳಿ
ಪಾರಿವಾಳವಾದೀತು ಕಾಗೆ;

ಕೃಷ್ಣ ವರ್ಣೀಯರಿಗೆ ತಾವು
ಬೆಳ್ಳಗಾಗಬೇಕೆಂಬ ಬಯಕೆ;

ಬೆಳ್ಳಗಿರುವವರಿಗೆ ಅದ್ಯಾಕೋ
ಕಪ್ಪು ಕಾಣಬೇಕೆಂಬ ಬಯಕೆ;

ಉಫ್ ಇದೆಂಥಾ ವಿಪರ್ಯಾಸ
ಇಲ್ಲದ್ದನ್ನು ಹೊಂದುವ ಸಾಹಸ?
*****


ನಮಸ್ತೇ ಟೀಚರ್!

24 ಏಪ್ರಿಲ್ 15

image

ಅಮ್ಮ ನನಗೆ ಕಲಿಸಿದ ಮೊದಲ ಅಕ್ಷರ ಅ(ಮ್ಮ),
ನಮ್ಮ ಟೀಚರ್ ಕಲಿಸಿದ ಮೊದಲಕ್ಷರವೂ ಅ;

ಅಲ್ಲಾ ನಮ್ಮಮ್ಮ ಅದೆಷ್ಟೊಂದು ಸ್ವಾರ್ಥಿ,
ನಮ್ಮ ಟೀಚರ್ ಮಾತ್ರ ಅಷ್ಟೇ ನಿಸ್ವಾರ್ಥಿ!

(ಇದು ನಾನು ಮೂವತ್ತು ವರುಷಗಳ ಹಿಂದೆ ಬರೆದಿದ್ದ ಮಾತು)

1967ರಲ್ಲಿ ನಮ್ಮೂರಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಮಗೆ ಅಕ್ಷರಾಭ್ಯಾಸ ಮಾಡಿಸಿ, ನನ್ನ ಕಿಂಚಿತ್ ಭಾಷಾಜ್ಞಾನಕ್ಕೆ ಭದ್ರಬುನಾದಿ ಹಾಕಿದ್ದ, ನಮ್ಮ ನಲ್ಮೆಯ, ಆ ನಿಸ್ವಾರ್ಥಿ ಯಶೋದಾ ಟೀಚರ್ (ಶ್ರೀಮತಿ ಯಶೋದಾ ಎನ್. ಜೆನ್ನಿ) ಇಂದು ನಸುಕಿನ ಮೂರು ಗಂಟೆ ಸುಮಾರಿಗೆ ಹೃದಯಾಘಾತದಿಂದ ಸ್ವರ್ಗಸ್ಥರಾಗಿದ್ದಾರೆ ಅನ್ನುವ ಸುದ್ದಿ ಬಂದಿದೆ.

ಕೊನೆಯ ಬಾರಿಗೆ, ನಮಸ್ತೇ ಟೀಚರ್!


ಬೇಸರ!

18 ಏಪ್ರಿಲ್ 15

ಸಖೀ,
ಮೂಡಣದಿ ಮೇಲೇಳುವಾಗ
ಮುದ ನೀಡುವಷ್ಟೇ ನೇಸರ,
ಪಡುವಣದಿ ಅಸ್ತಮಿಸುವಾಗ
ನೀಡಿ ಹೋಗುತ್ತಾನೆ ಬೇಸರ!


“ಬಂದ್” ಏಕೆ? “ಬಂದ್” ಬೇಕೆ?

18 ಏಪ್ರಿಲ್ 15

ನಮ್ಮ ರಾಜ್ಯ ಸರಕಾರದ ಜನೋಪಯೋಗಿ ಯೋಜನೆಗಳನ್ನು ಬೆಂಬಲಿಸಲು ನಾವೇ ರಾಜ್ಯವ್ಯಾಪಿ “ಬಂದ್”ಗೆ ಕರೆ ನೀಡುವುದು, ನಮ್ಮ ನಾಡಿನ ನಾಗರಿಕರಿಗೆ ತೊಂದರೆ ನೀಡುವುದು ಇದರ ಅರ್ಥವೇನು?

ಯೋಜನೆಯನ್ನು ಪ್ರತಿಭಟಿಸುವ ನೆರೆರಾಜ್ಯದ ಕೆಲ ಜನತೆಗೆ ನಾವು ಈ ರೀತಿ ಉತ್ತರ ನೀಡುವ ಅಗತ್ಯವಾದರೂ ಏನಿದೆ?

“ಹಲವು ತಿಂಗಳುಗಳಾದವು ಕರ್ನಾಟಕದಲ್ಲಿ “ಬಂದ್” ಆಗಿಯೇ ಇಲ್ಲ. ಹಾಗಾಗಿ, ಒಂದು “ಬಂದ್” ನಡೆಯಲಿ” ಅನ್ನುವ ಧಾಟಿಯಲ್ಲಿವೆ ಕೆಲವರ ಮಾತುಗಳು.

ನಮಗೆ ಏನು ಬೇಕು, ಏಕೆ ಬೇಕು ಅನ್ನುವುದರ ಅರಿವು ನಮಗೇ ಇಲ್ಲದಿದ್ದರೆ ಹೀಗೆಲ್ಲಾ ಆಗುವುದೇನೋ.


ಅಷ್ಟಕ್ಕೂ!

18 ಏಪ್ರಿಲ್ 15

ಸಖೀ,
ನಾನು,
ನೀನು ತಿಳಿದಿರುವಷ್ಟು
ಮುದುಕನೂ ಅಲ್ಲ,
ನಾನು ತಿಳಿದಿರುವಷ್ಟು
ಯುವಕನೂ ಅಲ್ಲ!


ಭರವಸೆ ನಮ್ಮೊಳಗಿರಲಿ!

17 ಏಪ್ರಿಲ್ 15

ಸಖೀ,
ನಾವಿಬ್ಬರೇ ಕಡಲತೀರದಲಿ
ಕೈಯಲ್ಲಿ ಕೈಹಿಡಿದು ನಡೆಯಬೇಕೆಂಬ
ನಮ್ಮ ಕನಸು ಕನಸಾಗಿಯೇ ಉಳಿದಿದೆ ಇನ್ನೂ;

ಹಿಮಾಲಯದ ತಪ್ಪಲಿನಲಿ
ನಾವಿಬ್ಬರೇ ನಮ್ಮಷ್ಟಕ್ಕೇ ಇರಬೇಕೆಂಬ
ನಮ್ಮ ಕನಸು ಕನಸಾಗಿಯೇ ಉಳಿದಿದೆ ಇನ್ನೂ;

ಬಿಡುವಿರದ ಬಾಳ ದಿನಚರಿಯಲಿ
ನಮಗಾಗಿ ಒಂದರೆ ದಿನ ಬಾಳಬೇಕೆಂಬ
ನಮ್ಮ ಕನಸು ಕನಸಾಗಿಯೇ ಉಳಿದಿದೆ ಇನ್ನೂ;

ಅಸುವಿರಲಿ ಕಸುವಿರಲಿ ದೇಹದಲಿ
ನಮ್ಮ ಈ ಕನಸುಗಳು ನನಸಾದಾವೆಂಬ
ಭರವಸೆ ನಮ್ಮೊಳಗಿರಲಿ ವರುಷಗಳ ಮೇಲಿನ್ನೂ!
******


ಹೇಳಲ್ಲಾ!

17 ಏಪ್ರಿಲ್ 15

ಸಖೀ,
ನಾನು ಹಿಂದೆಂದೋ ನುಡಿದಿಹ ಮಾತಿಗೆ
ಇಂದೂ ಇದೆ ನಿನ್ನ ಮೆಚ್ಚುಗೆ,

ಅದೇಕೋ ಏನೋ ಇಂದಿನ ಮಾತುಗಳು
ನಿನಗೆ ಇಷ್ಟವೇ ಇಲ್ಲ ಹೆಚ್ಚಿಗೆ;

ನೀನು ಬದಲಾಗಿಹೆಯೋ, ನಿನ್ನ ಅಭಿರುಚಿ
ಬದಲಾಗಿದೆಯೋ ಗೊತ್ತಿಲ್ಲ,

ನಾನು ಬದಲಾಗಿಹೆನೋ, ನಿನಗಷ್ಟೇ ಹಾಗೆ
ಅನಿಸುತಿಹುದೋ ಹೇಳಲ್ಲಾ!
*****