ಸದಾ ಸದ್ಗ್ರಂಥ ಸಜ್ಜನರ ಸಾಮೀಪ್ಯವಿರಲಿ!

 

 

ಸಖಿ, ನಂಬುಗೆಯೇ ದೀವಿಗೆಯು, ನಿನ್ನ ಆತ್ಮಬಲವು,

ಇರಲಿ ನಿನ್ನ ಬೆಂಬಲಕೆ ಸದಾ ನಿನ್ನೊಳಗಿನ ಛಲವು,

 

ಎಂದಿಗೂ ಶಾಶ್ವತವಲ್ಲ ಇಲ್ಲಿನವರಿವರ ಆಸರೆಯು,

ಎಷ್ಟೇ ಬಿಗಿಯಾಗಿ ಇದ್ದರೂ ನಿನ್ನ ಕೈಯ ಹಿಡಿತವು,

 

ಎದ್ದು ನಡೆ, ನೀ ಒದ್ದು ನಡೆ ಬಂಧನದ ಗೋಡೆಗಳ,

ಸದಾ ತೆರೆದಿಟ್ಟುಕೊಂಡಿರು, ನಿನ್ನ ಈ ಕಣ್ಣು ಕಿವಿಗಳ,

 

ಆತ್ಮಕ್ಕೆ ಪರಮಾತ್ಮನ ಆಸರೆಯೊಂದೇ ಶಾಶ್ವತವು,

ಪರಮಾತ್ಮ ಹೊರಗಿಲ್ಲ, ಬೇಕು ಇದನರಿವ ಮನವು,

 

ಇಲ್ಲಿ ಸಿಕ್ಕ ಸಿಕ್ಕವರೆಲ್ಲಾ ತೋರಬಹುದು ಅನುಕಂಪ,

ಮಧುರ ಮಾತುಗಳಿಂದ ನಿನ್ನ ಮನಕೆ ನೀಡಿ ತಂಪ,

 

ನಿನ್ನ ಬುದ್ದಿಯು ಚಂಚಲ ಮನಸಿನ ಬಂಧಿ ಆಗದಿರಲಿ,

ಆ ಮನಸ್ಸು ಸದಾ ಇರಲಿ ನಿನ್ನ ಬುದ್ಧಿಯ ಹಿಡಿತದಲಿ,

 

ತಪ್ಪು ಒಪ್ಪುಗಳ ವಿಮರ್ಶಾ ಶಕ್ತಿಯು ಬೆಳೆಯುತಿರಲಿ,

ಅದಕ್ಕಾಗಿ ಸದಾ ಸದ್ಗ್ರಂಥ ಸಜ್ಜನರ ಸಾಮೀಪ್ಯವಿರಲಿ,

 

ಬುದ್ಧಿಯನು ಒರೆಗೆ ಹಚ್ಚುವ ವಿಚಾರ ವಿನಿಮಯ ಬೇಕು,

ಜ್ಞಾನಾರ್ಜನೆಯೂ ಈ  ಜೀವನದ ಗುರಿ ಆಗಿದ್ದರೆ ಸಾಕು!

***************

1 Responses to ಸದಾ ಸದ್ಗ್ರಂಥ ಸಜ್ಜನರ ಸಾಮೀಪ್ಯವಿರಲಿ!

  1. ಮಧುಸೂದನ ಹೇಳುತ್ತಾರೆ:

    ಪುಸ್ತಕದಿ ತೆರೆದರಿವು ಮಸ್ತಕದಿ ತೆರೆದ ಮಣಿ
    ಎಂದಿತ್ತು ಮಹಾನ್ ಚೇತನ ಡಿವಿಜಿ ವಾಣಿ

    ಸಜ್ಜನರಂತೆಯೇ ಸದ್ಗ್ರಂಥಗಳು, ಮೂಡಿಸಿ ಸದ್ವಿಚಾರಗಳ
    ನಮ್ಮನ್ನು ಸನ್ಮಾರ್ಗದಲಿ ಕೊಂಡೊಯ್ಯುವ ದೀಪಗಳು.

ತಮ್ಮ ಪ್ರತಿಕ್ರಿಯೆ ನೀಡಿ.