ಭಾವಾಭಿವ್ಯಕ್ತಿ!

08 ಜನ 17

​ಸಖೀ,

ಮಾತಾದರೇನು

ಮೌನವಾದರೇನು

ಭಾವಾಭಿವ್ಯಕ್ತಿ ಮುಖ್ಯ;

ತಮ್ಮ ವೈಫಲ್ಯಕ್ಕೆ

ಅನ್ಯರನು ದೂರಿದರೆ

ಮುರಿದೀತು ನಡುವಿನ ಸಖ್ಯ!

#ಆಸುಮನ


ಸಂಯಮ!

08 ಜನ 17

​ಸಖೀ,

ಸಂಯಮ ಕಾಯ್ದುಕೊಳ್ಳಿ

ಸಂಯಮ ಕಾಯ್ದುಕೊಳ್ಳಿ

ಎನ್ನುತ್ತಿರುವವರೇ ಎಲ್ಲರೂ;
ಅಂಥ ತಪಸ್ವಿ ವಿಶ್ವಾಮಿತ್ರನೇ

ಸೋತು ಮೈಮರೆತಿದ್ದನಂತೆ

ಇನ್ನು ಎಲ್ಲಿ ಈ ಹುಡುಗರು?
ಕಡಿವಾಣ ಹಾಕಲೇಬೇಕು

ಬೇಕಾಬಿಟ್ಟಿ ಬಾಳುವುದಕ್ಕೆ

ಹುಡುಗರೂ ಹುಡುಗಿಯರೂ!
#ಆಸುಮನ


ಯಾರನ್ನೂ ಕೇಳಲಾಗದು!

21 ಜನ 16

ಸಖೀ,
ನೀನು ಹೇಗಿರುವೆ ಎಂದು
ನಾನು ಬೇರೆ ಯಾರನ್ನೂ ಕೇಳಲಾಗದು,
ನಮ್ಮನ್ನು ಬಿಟ್ಟರೆ ಇನ್ನಾರಿಂದಲೂ
ನೀನು ಹೇಗಿರುವೆ ಎಂದು ಅರಿಯಲಾಗದು;

ನೀನು ನಕ್ಕರೂ ನಗುವಿನ ಹಿಂದಿನ
ನಿನ್ನ ನೋವನ್ನು ನಾನಷ್ಟೇ ಅರಿಯಬಲ್ಲೆ,
ನೀನು ಅತ್ತರೆ ನಿನ್ನ ಅಳುವಿನ ಹಿಂದಿನ
ನೋವಿನ ಆಳವನ್ನೂ ನಾನಷ್ಟೇ ಗ್ರಹಿಸಬಲ್ಲೆ!

‪#‎ಆಸುಮನ‬


ಕಂಗಳು ತುಂಬುವವೇಕೆ?

21 ಜನ 16

ಸಖೀ,
ನನ್ನ ಹಸ್ತದೊಳಗೆ ನಿನ್ನ ಹಸ್ತ ಇರಿಸಿದಾಗ
ನಮ್ಮ ಹೃದಯಗಳು ಕರಗುವವೇಕೆ?
ನಿನ್ನ ಕೆನ್ನೆಯ ಮೇಲೆ ಮುತ್ತನ್ನೊತ್ತುವಾಗ
ನಿನ್ನ ಕಂಗಳು ತುಂಬಿ ಬರುವವೇಕೆ?

‪#‎ಆಸುಮನ‬


ಅಳಿದ ಮೇಲೆ ಕೊಂಡಾಡುವರು!

14 ಜನ 16
ಸಖೀ,
ನಾವು ದೂರವಾಗಿದ್ದೇವೆಂಬ ಕೊರಗು ಇಲ್ಲ ಎಳ್ಳಷ್ಟೂ
ಇನ್ನೂ ಹತ್ತಿರವಾಗುತ್ತೇವೆ ಜನರು ದೂರ ಎಳೆದಷ್ಟೂ;
 
ಪ್ರೀತಿ ಹೆಚ್ಚಾಗುವುದಂತೆ ದೈಹಿಕ ದೂರ ಹೆಚ್ಚಾದಂತೆ
ನಾವು ಸತ್ತರೂ ಜಗದಲ್ಲಿ ನಮ್ಮ ಪ್ರೀತಿ ಅಮರವಂತೆ;
 
ಇಂದಾಡಿಕೊಳ್ಳುವವರು ನಾಳೆಯೂ ಆಡಿಕೊಳ್ಳುವರು
ತೆಗಳುವವರೂ ನಾವಳಿದ ಮೇಲೆ ಕೊಂಡಾಡುವರು!
 
#ಆಸುಮನ

ನೋವೇ ಇಲ್ಲ!

14 ಜನ 16
ಸಖೀ,
ದುಃಖವನು ತುಂಬಿಕೊಂಡು ಭಾರವಾಗಿಹುದು ಹೃದಯ
ಆದರೂ ಕಣ್ಣುಗಳು ಹೂಡಿವೆ ಸಂಪು, ಹರಿಸವು ಹನಿಯ;

ಯಾರತ್ತಲೋ ಹೂಡಿದ ಬಾಣ ತಾಕಿದ್ದು ನನ್ನ ಎದೆಯನ್ನು
ನೋವಿಗೂ ಮಿತಿ ಇದೆ, ನೋವೇ ಆದ ಹಾಗಿಲ್ಲ ನನಗಿನ್ನೂ!

‪#‎ಆಸುಮನ‬


ಪುರುಸೊತ್ತಿಲ್ಲ!

14 ಜನ 16

ಸಖೀ,
ನಿನ್ನೊಳಗೆ ಇರುವಷ್ಟೇ ಕೊರಗು ಇಲ್ಲಿ ನನ್ನೊಳಗೂ ಇದೆ,
ಬಿಡುವಿಲ್ಲದ ದಿನಚರಿಯಿಂದ ಈ ಮನ ರೋಸಿ ಹೋಗಿದೆ,

ಯಾವುದರ ನಿರೀಕ್ಷೆ, ಎತ್ತ ಈ ಪಯಣ ಅರಿಯದಾಗಿದೆ,
ಮಾತುಕತೆಯಿಲ್ಲ ಸಂಪರ್ಕ ಸಂದೇಶಕ್ಕೆ ಸೀಮಿತವಾಗಿದೆ,

ಸಂದೇಶಗಳ ರವಾನೆಗೂ ಸಾಕಷ್ಟು ಪುರುಸೊತ್ತು ದಕ್ಕುತ್ತಿಲ್ಲ,
ಎಲ್ಲಾದರೂ ಹೋಗೋಣ ಎಂದು ಮನ ಅನ್ನುತಿಹುದಲ್ಲಾ?

ಅಂಟಿಕೊಂಡಿದ್ದಷ್ಟೂ ಅಂಟಾಗುತ್ತದೆ ಬಿಡಿಸಿಕೊಳ್ಳಲು ಕಷ್ಟ,
ಹೇಳಿಬಿಡು ನೋಡೋಣ ನಿನ್ನ ಮನಸಿಗೆ ಯಾವುದು ಇಷ್ಟ!

‪#‎ಆಸುಮನ‬