ತನ್ನ ಕೆಟ್ಟ ಭಾಷೆಯಿಂದಾಗಿ ಇಂದಿಳಿದ ನೋಡಿ ಸೊಂಟದಿಂದ ಕೆಳಕ್ಕೆ!!!

11 ಜನ 10

ಈ ಮಣ್ಣಿನ ಮಗ ಎಂದೂ ನೇಗಿಲು ಹಿಡಿದು ಹೊಲಕ್ಕಿಳಿದಿರಲಿಲ್ಲ ಉಳುವುದಕ್ಕೆ

ಆದರೂ ತನ್ನ ಕೆಟ್ಟ ಭಾಷೆಯಿಂದಾಗಿ ಇಂದಿಳಿದ ನೋಡಿ ಸೊಂಟದಿಂದ ಕೆಳಕ್ಕೆ

 

ಯಾವ ಗದ್ದುಗೆಯನೇರಿ ಕುಳಿತರೂ ಮನುಷ್ಯನ ಸಂಸ್ಕಾರ ಬದಲಾಗುವುದಿಲ್ಲ

ಬಾಲ್ಯದಲ್ಲಿ ತನಗೆ ದೊರೆತಿದ್ದ ಸಂಸ್ಕಾರದ ಪ್ರದರ್ಶನ ಆತ ಮಾಡುತ್ತಿರುವನಲ್ಲ

 

ಮಾತನಾಡಿ ತಾನಾಡಿಯೇ ಇಲ್ಲ ಎನ್ನುವುದು ಈ ರಾಜಕಾರಣಿಗಳದ್ದು ಹಳೆಯ ಚಾಳಿ

ದೂರದರ್ಶನದ ಕ್ಯಾಮೆರಾಗಳ ಮುಂದೆ ಆತ ಆಡಿದ್ದನ್ನೂ ನಂಬದಿರಲಾಗುತ್ತಾ ಹೇಳಿ

 

ಈ ದೇಶದ ಎರಡನೇ ಅತ್ಯುನ್ನತ ಸ್ಥಾನಕ್ಕೆ ಏರಿದ್ದವನ ಕತೆ ಇಂತಾದರೆ ನಮ್ಮಲ್ಲಿ

ವಿಶ್ವದಲ್ಲಿಯೇ ಪ್ರತಿಷ್ಠಿತ ಸ್ಥಾನಕ್ಕೇರಲಿದ್ದವನ ಕತೆಯೂ ಬೇರೆಯಾಗಿಲ್ಲ ದಿಲ್ಲಿಯಲ್ಲಿ

 

ಶಶಿ ತರೂರ ಮಾತನಾಡುತ್ತಾನೆ ತನ್ನ ನಾಲಗೆಯನು ಹರಿಯ ಬಿಟ್ಟು ಬೇಕಾಬಿಟ್ಟಿ

ಆಮೇಲೆ ತಪ್ಪನ್ನರಿತು ನಿಲ್ಲುತ್ತಾನೆ ಮನಮೋಹನ, ಸೋನಿಯಾ ಮುಂದೆ ಕೈಕಟ್ಟಿ

 

ಜನರು ನೀಡುವ ಗೌರವವನ್ನು ಮನ್ನಿಸಿ ತಕ್ಕಂತೆ ಬಾಳುತ್ತಿರಬೇಕು ನಾವೆಂದೆಂದಿಗೂ

ತಮ್ಮ ಗರಿಮೆಗೇ ಅಪಚಾರವಾಗುವಂತಹ ಮಾತನ್ನು ಆಡಬಾರದು ಯಾವ ಮಂದಿಗೂ

****************************************************


ನರ್ಸಮ್ಮ ನಿಂದದ್ಯಾಕೋ ಅತಿ ಆಯ್ತು ಅಲ್ವಾ?

07 ಜನ 10

ನರ್ಸಮ್ಮ ನಿನ್ನದು ಅದ್ಯಾಕೋ ಅತಿ ಆಯ್ತು ಅಲ್ವಾ?

ನ್ಯಾಯಾಲಯದಲ್ಲಿ ಕಟ್ಲೆ ಹೂಡಿ ರಸ್ತೆಗಿಳಿದಿದಿಯಲ್ವಾ?

 

ದಾವೆ ಹೂಡಿದಾಕೆಯೇ ನ್ಯಾಯಾಲಯದಲಿ ಇರಲಿಲ್ಲ

ನಿನಗೂ ಸಮನ್ಸ್ ಜಾರಿ ಅಲ್ಲಿ ಬೇರೆ ದಾರಿ ಇರಲಿಲ್ಲ

 

ದೂರದರ್ಶನಕೆ ಸಂದರ್ಶನ ನೀಡಲು ಸಮಯ ಇತ್ತು

ನ್ಯಾಯಾಲಯಕೆ ನೀ ಏಕೆ ಗೈರು ಹಾಜರಾಗ ಬೇಕಿತ್ತು

 

ಆತನೊಂದಿಗೆ ಅಂದಾಡಿದ ಆಟಕ್ಕೆ ಒಪ್ಪಿಗೆ ಪಡೆದಿಲ್ಲ

ಈಗ ಎಲ್ಲದಕ್ಕೂ  ಜನರ ಬೆಂಬಲ ಕೇಳುತಿಹೆಯಲ್ಲ

 

ಮುಚ್ಚಿದ ಕೋಣೆಯೊಳಗೆ ಬೆಚ್ಚಗೆ ಆ ಆಟವಾಡಿದ್ದೇಕೆ

ಚುಂಬಿಸಲು ಬಂದವಗೆ ತನ್ನ ಗಲ್ಲವನು ತಾ ಒಡ್ಡಿದ್ದೇಕೆ

 

ಕೈಯೊಂದು ತಾನೆಷ್ಟು ಆಡಿದರೂ ಚಪ್ಪಾಳೆ ಕೇಳಿಸದು

ಕೈಜೋಡಿಸಿದಾಕೆ ನೀ ಮರುಗಿದರೆ ಕನಿಕರವೇ ಬಾರದು

 

ಚಿತ್ರ ಪ್ರದರ್ಶಿಸಿ ಮರ್ಯಾದೆಯ ಮಾಡಿ ಮೂರಾಬಟ್ಟೆ

ಈಗ್ಯಾಕೆ ಹತ್ತಿ ಕೂತಿದ್ದೀಯ ಊರ ಪಂಚಾಯತಿ ಕಟ್ಟೆ

 

ನೈತಿಕತೆಯನು ಗಾಳಿಗೆ ತೂರಿ ಬಾಳನ್ನು ಮಾಡಿ ಚಿಂದಿ

ಈಗ ಅಳು ಏಕೆ, ನಿನ್ನಡುಗೆಯನ್ನೇ ತಾನೇ ನೀ ತಿಂದಿ

 

ನಿನ್ನ ಕರ್ಮಗಳಿಗೆ ನೀನೇ ಜವಾಬ್ದಾರಿ ನಾವ್ಯಾರೂ ಅಲ್ಲ

ನೀನು ಗಳಿಸಿದ ಆಸ್ತಿಯಲಿ ನಾವೇನೂ ಪಾಲುದಾರರಲ್ಲ!!!

*************************************


ನನ್ನ ಆ ಅಪರಿಚಿತ ಅಭಿಮಾನಿ ಇನ್ನಿಲ್ಲ!!!

04 ಜನ 10

ಸಖೀ,

ಕಳೆದೆರಡು ತಿಂಗಳಿಂದ ಜಂಗಮ ದೂರವಾಣಿಯಲಿ ಸಂದೇಶಗಳ ರವಾನಿಸುತ್ತಿದ್ದಾಕೆ

ಅಪರಿಚಿತ ಅಭಿಮಾನಿ ಆಗಿಯೇ ಉಳಿದು ಸದಾ ನನ್ನ ಕವನಗಳ ಕೊಂಡಾಡುತ್ತಿದ್ದಾಕೆ

 

ಇಹಲೋಕ ತ್ಯಜಿಸಿ ಅದಾಗಲೇ ಎರಡು ದಿನಗಳಾಗಿವೆ ಎಂಬ ಸುದ್ದಿ ಬಂದಿದೆ ಇಂದು

ನನ್ನ ಕಿವಿಗಳ ನಂಬಲಾಗದೇ ಮಾತು ಹೊರಡದೇ ಯೋಚಿಸಿದೆ ಸುಮ್ಮನೇ ನಿಂದು

 

ಯಾರಾಕೆ, ಅದ್ಯಾಕೆ ನನ್ನ ಮನದ ಕದ ಬಡಿದು ಕಿಟಕಿಯಲಿ ಇಣುಕಿ ಮರಳಿದಳವಳು

ನಾನಿನ್ನು ಈ ಜೀವನ ಪೂರ್ತಿ ನೆನೆ ನೆನೆದು ಕೊರಗುವಂತೆ ಮಾಡಿ ಹೋದಳವಳು

 

ಮುಖವ ನಾ ಕಂಡಿಲ್ಲ, ಮಾತೊಂದನೂ ಆಡಿಲ್ಲ, ಬರಿಯ ಸಂದೇಶಗಳೇ ಪರಿಚಯ

ಅಂದಿದ್ದಳಾಕೆ, ಕಾಯುತ್ತಿರಿ ಸದ್ಯವೇ ಬರಬಹುದು ಮಾತನಾಡುವ ಸುವರ್ಣ ಸಮಯ

 

ಮಾತಿಲ್ಲ ಕತೆಯಿಲ್ಲ ಹೋಗುವಾಗ ಹೋಗುತ್ತೇನೆಂಬ ಸುಳಿವು ನೀಡದೆಯೇ ಹೋದಳು

ಎಲ್ಲಾ  ಸಂದೇಶಗಳನ್ನು ಅಳಿಸಿಯಾಗಿದೆ ಮನದಲಿನ್ನು ಬರೀ ನೆನಪಾಗಿಯೇ ಉಳಿವಳು

 

ಆಕೆಗೆನ್ನ ದೂರವಾಣಿ ಸಂಖ್ಯೆ ನೀಡಿದವರಾದರೂ ಏನು ಪರಿಚಯ ನೀಡಿಯಾರು ನನಗೆ

ಇನ್ನು ಏನ ನೀಡಿದರೂ ನಿಜದಿ ಏನು ಮತ್ತು ಹೇಗೆ ಪ್ರಯೋಜನ ಹೇಳು ಅವುಗಳಿಂದೆನಗೆ

 

ಅಗಲಿದ ಆಕೆಯಾತ್ಮಕ್ಕೆ ಚಿರ ಶಾಂತಿಯ ನೀಡಿರೆಂದು ಕೋರುವೆ ನಾನು ಆ ಭಗವಂತನಲ್ಲಿ

ಇನ್ನೆಂದೂ ಈ ತೆರನಾದ ಆಟ ನಡೆಯದಿರಲಿ ದೇವ ಎನ್ನುವೆ ಮುಂದಿನ ಜೀವನ ಕಾಲದಲ್ಲಿ!!!

************************************************************

ಆಕೆಯ ಬಗ್ಗೆ ನಾನಿಲ್ಲಿ ಬರೆದಿದ್ದೆ:  ನನ್ನ ಆ ಅಪರಿಚಿತ “ಫ್ಯಾನು”

 

 


“ಒಲವಿನ ಟಚ್” “ನಲಿವಿನ ಟಚ್” ಈ ಹೆಸರುಗಳೇ ಬೇಕಿದ್ದವೇ ನಿಮಗೆ

04 ಜನ 10

 

 

ಶನಿವಾರ ಶ್ರೀವತ್ಸ ಜೋಶಿಯವರ ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ

ಹೋಗದೇ ಇರಲಾಗಲಿಲ್ಲ ಕೊಡಬೇಕಿತ್ತು ಬೆಲೆ ಅವರ ಆ ಆಮಂತ್ರಣಕ್ಕೆ

 

ಕಂಡು ಕೈಕುಲಿಕಿದರೆ ಹೆಸರ ನೆನಪಿಸಲು ತೊಡಗಿದರು ಶ್ರೀವತ್ಸ ಜೋಶಿ

ನಾನಂದೆ “ನಾ ಆಸು” ಅದಕೆ ಅವರು ನಕ್ಕು ತೋರಿಸಿಕೊಂಡರು ಖುಷಿ

 

ಉಪಾಹಾರ ಲಘು ಎಂದು ಅರಿತು ಮನೆಯಲ್ಲೇ ನಾ ತಿಂದು ಹೋಗಿದ್ದೆ

ಆದರೆ ಅದು ಲಘು ಆಗಿರದೆ ಭರ್ಜರಿಯೇ ಆಗಿದ್ದುದನ್ನು  ನಾನು ಕಂಡಿದ್ದೆ

 

ಕಾಫಿಯ ಸವಿ ಸವಿಯುತ್ತಾ ಬಂದು ನಮಸ್ಕರಿಸಿದರು ನಮ್ಮ ಹರಿ ನಾಡಿಗ

ನಮ್ಮನ್ನಲ್ಲಿ ಸೇರಿದರು ವಿದೇಶವಾಸೀ ಅನಿಲ ಜೋಶಿ ಮತ್ತವರ ಸಂಗಡಿಗ

 

ಮೂರು ದಿಗ್ಗಜರ ಸಮ್ಮುಖದಲ್ಲಿ ಆಸೀನನಾದೆ ನಾ ಸಭೆ ಆರಂಭವಾದಾಗ

ಹಿರಣ್ಣಯ್ಯ -ಕಾಯ್ಕಿಣಿ -ವಿ.ಭಟ್ಟ ದಿಗ್ಗಜರಲ್ಲವೇ ಅವರವರ ಕ್ಷೇತ್ರದಲ್ಲಿ ಈಗ

 

ಜೋಶಿ ದಂಪತಿಗಳಿಗಲ್ಲಿ ಸನ್ಮಾನ ಜೊತೆಗೆ ಪುಷ್ಪಮಾಲೆಗಳ ವಿನಿಮಯ

ಪುಸ್ತಕಗಳ ಲೋಕಾರ್ಪಣೆಯ ನಂತರ ಲೇಖಕರ ಗುಣಗಾನದ ಸಮಯ

 

ಜಯಂತ ಕಾಯ್ಕಿಣಿ ಮತ್ತು ಹಿರಣ್ಣಯ್ಯನವರ ಹಾಸ್ಯಭರಿತ ಮಾತ ಸುಗ್ಗಿ

ವಿಶ್ವೇಶ್ವರ ಭಟ್ಟರೂ ಬರುವಂತೆ ಮಾಡಿದರು ನಗು, ನಡು ನಡುವೆ ನುಗ್ಗಿ

 

ಇಳಿಸಿದ ದರದಲಿದ್ದ ಪುಸ್ತಕಗಳ ಮೇಲೆ ಪಡೆದು ಜೋಶಿಯವರ ಸಹಿಯ

ನಕ್ಕು ಕುಲುಕಿದೆ ವಿ.ಭಟ್ಟ, ಕಾಯ್ಕಿಣಿ ಮತ್ತು ಹಾಲ್ದೊಡ್ಡೇರಿಯವರ ಕೈಯ

 

ಜೋಶಿಯವರೇ ನಿಮ್ಮ ಪರಾಗ ಸ್ಪರ್ಶವೆಂಬ ಬರಹಗಳ ಸಂಕಲನಗಳಿಗೆ

“ಒಲವಿನ ಟಚ್” “ನಲಿವಿನ ಟಚ್” ಈ ಹೆಸರುಗಳೇ ಬೇಕಿದ್ದವೇ ನಿಮಗೆ

 

“ಸ್ಪರ್ಶ” ಇದರ ಕಂಪನ್ನು ನೀವೊಮ್ಮೆ ಯೋಚಿಸಿ ನೋಡಿ ಜೋಶಿಯವರೇ

“ಒಲವಿನ ಸ್ಪರ್ಶ” “ನಲಿವಿನ ಸ್ಪರ್ಶ” ಇವನ್ನೂ ನಾವೆಲ್ಲಾ ಮೆಚ್ಚುವವರೇ

 

ಆಂಗ್ಲಪದಗಳನ್ನು ಕನ್ನಡದಲ್ಲಿ ಬರೆದು ಸಿಗುವ ಆನಂದ ಅದೆಂತಹುದು ಹೇಳಿ

ಆಂಗ್ಲರು ಕನ್ನಡ ಪದಗಳ ಶೀರ್ಷಿಕೆ ನೀಡಿದ್ದಿದ್ದರೆ ಒಮ್ಮೆ ನೆನಪು ಮಾಡಿ ಹೇಳಿ

 

ನಿಮ್ಮ ಕನ್ನಡಾಭಿಮಾನವ ನಾ ಪ್ರಶ್ನಿಸುತ್ತಿಲ್ಲ ಇಲ್ಲಿ ಶ್ರೀವತ್ಸ ಜೋಶಿಯವರೇ

ಕನ್ನಡ ಚಿನ್ನಕ್ಕೆ ಆಂಗ್ಲ ಒಪ್ಪದ ಅಗತ್ಯ ಇಲ್ಲವೆಂದು ನೀವೂ ಅರಿಯದಿರುವಿರೇ?

*************************************************


ಇಂದು ಜಾರಿಗೊಳಿಸಿದಂತಿದೆ ನನಗೆ ಸಜೆ!!!

04 ಜನ 10

 

 

ಸಖೀ,

ಬಾನ ಚಂದಿರನೀ ಬುವಿಯ ಮೇಲೆ ಚೆಲ್ಲುವಂತೆ ಬೆಳದಿಂಗಳು

ಆಕೆ ಬಂದಾಗಲೆಲ್ಲಾ ನಮ್ಮ ಮನ-ಮನೆಯನು ಬೆಳಗಿಸುವಳು

 

ಹುಣ್ಣಿಮೆಗಾಗಿ ನೀವೆಲ್ಲಾ ಕಾಯುವಿರಿ ಒಂದೇ ಒಂದು ತಿಂಗಳು

ಆದರೆ ನಾವು ನಮ್ಮ ಮಗಳಿಗಾಗಿ ಕಾಯಬೇಕಾರು ತಿಂಗಳು

 

ಕಚೇರಿಯಿಂದ ದೊರೆತ ಹತ್ತು ದಿನಗಳ ವರ್ಷಾಂತ್ಯದಾ ರಜೆ

ಕಳೆದಾದ ಮೇಲೆ ಇಂದು ಜಾರಿಗೊಳಿಸಿದಂತಿದೆ ನನಗೆ ಸಜೆ

 

ಹತ್ತು ದಿನಗಳನ್ನು ಕಳೆದೆವು ಹತ್ತು ಕ್ಷಣಗಳಂತೆ ಮಗಳೊಂದಿಗೆ

ನಡುವೆ ಅಗಲಿದರು ನಮ್ಮೆಲ್ಲರ ಮನ ಗೆದ್ದಿದ್ದಿಬ್ಬರು ದೇವರೂರಿಗೆ

 

ಮತ್ತೀಗ ಭಾರವಾದ ಹೃದಯವ ಹೊತ್ತು ಬಂದಿಹೆನು ಕಚೇರಿಗೆ

ಬಾರದಿರಲು ಆಗದು ತಿಂಗಳ ಸಂಬಳ ಬೇಕೇ ಬೇಕಲ್ಲ ಖರ್ಚಿಗೆ

 

ಈ ಯಾಂತ್ರಿಕ ಬಾಳಿನ ಸೂತ್ರ ಇಹುದು ಯಾರದೋ ಕೈಯಲ್ಲಿ

ಆತನು ಆಡಿಸಿದಂತೆ ಏಳು ಬೀಳಿನ ನಡೆ ನಮ್ಮದೀ ಭೂಮಿಯಲ್ಲಿ!!!

******************************************