ಅಪಕಾರಿ!

30 ಮಾರ್ಚ್ 13
 
ಸಖೀ,
ತಮ್ಮ ಮಕ್ಕಳು ತಪ್ಪು ಮಾಡಿದಾಗ ಸುಮ್ಮನಿರುವ ಮಾತಾಪಿತರಿಲ್ಲ
ಸುಮ್ಮನಿದ್ದಾರೆಂದಾದರೆ ಮಾತಾಪಿತರೇ ಮಕ್ಕಳ ಶತ್ರುಗಳು ಸುಳ್ಳಲ್ಲ;

ಅನ್ಯರನೂ ನಮ್ಮವರೆಂದು ಅರಿತು ಅರಿವ ನೀಡುವುದೂ ಜವಾಬ್ದಾರಿ
ಯಾರು ಹೇಗಿದ್ದರೇನೆಂದೆಲ್ಲರನೂ ಮೆಚ್ಚಿ ಹೊಗಳುವವನೇ ಅಪಕಾರಿ!


ಅರಿಯದವರಿಗರಿವು!

30 ಮಾರ್ಚ್ 13
 
ಸಖೀ,
ಅನ್ಯರಲ್ಲಿ ಹುಳುಕುಗಳನ್ನು ಹುಡುಕಬೇಡಿ ಅನ್ನುವುದರ ಅರ್ಥ ನಿನಗಾಗಿದೆಯೇ ಹೇಳು
ಅನ್ಯರ ಹುಳುಕುಗಳು ಹುಡುಕದೆಯೇ ಕಂಗಳಿಗೆ ಬಿದ್ದರೆ ಏನು ಮಾಡಬೇಕೆಂದು ಹೇಳು;

ತಪ್ಪು ಒಪ್ಪುಗಳ ವಿಮರ್ಶೆ ಮಾಡದೇ ಎಲ್ಲವನೂ ಎಲ್ಲರೊಪ್ಪಿ ನಡೆಯಲಾದೀತೇ ಹೇಳು
ಅರಿತವರೆಲ್ಲಾ ಸುಮ್ಮನಿರೆ ಅರಿಯದವರಿಗರಿವನ್ನು ನೀಡದ ತಪ್ಪೆಸಗಿದಂತಲ್ಲವೇ ಹೇಳು!


ಕಿರಿದಾದ ಜಗ!

30 ಮಾರ್ಚ್ 13
 
ಸಖೀ,
ನಾಲ್ಕು ದಿನಗಳ ನಮ್ಮ ಒಡನಾಟ
ಮತ್ತೆತ್ತೆತ್ತಲೇನೋ ನಮ್ಮೆಲ್ಲರ ಓಟ;

ಕಿರಿದಾದ ಜಗವಿದು ದೊಡ್ಡದೇನಲ್ಲ
ನಾವೂ ಇನ್ನದೆಲ್ಲೋ ಸಿಗಬಹುದಲ್ಲ?


ಹತ್ತು ವರುಷಗಳು!

30 ಮಾರ್ಚ್ 13
ಸಖೀ,
ನಾನವರ ನೆನೆಯದ ಕ್ಷಣಗಳಿಲ್ಲ
ಆ ಎಲ್ಲಾ ಕ್ಷಣಗಳ ಲೆಕ್ಕ ಇಟ್ಟಿಲ್ಲ

ಮನದಲ್ಲಿ ಮೌನ ಆವರಿಸುತ್ತಲಿದೆ
ಇಲ್ಲೆಲ್ಲವೂ ಅರ್ಥಹೀನ ಎನ್ನುತ್ತಲಿದೆ

ಅನ್ಯರಿಗೆ ಮಸಣ ವೈರಾಗ್ಯವಂತೆ
ನನಗಿದು ಮುಗಿಯದ ವ್ಯಥೆಯಂತೆ

ವರುಷಗಳು ಹತ್ತು ಸಂದವಿಂದಿಗೆ
ಅಪ್ಪಯ್ಯ ಸಾಗಿ ದೇವರ ಮನೆಗೆ!

(೨೮ ಮಾರ್ಚ್ ೧೩)


ಕಕ್ಕುವಾಗ!

30 ಮಾರ್ಚ್ 13
 
ಸಖೀ,
ಹೊಟ್ಟೆ ತೊಳಸಿದಂತಾಗಿ ನೀ
ಕಕ್ಕುವಾಗಲೂ ಇರಲಿ ಜಾಗ್ರತೆ;

ಕಿತ್ತು ಬಂದಾವು ಕರುಳುಗಳೂ
ಇನ್ನೆಂದೂ ನೀ ತಿನ್ನಲಾಗದಂತೆ!

ನಿನಗಾಗಿ!

30 ಮಾರ್ಚ್ 13
ಸಖೀ,
ಅದೇನ ಬರೆದರೂ ಶಾಂತಿ ಸಿಗದು ನನ್ನ ಈ ಮನಕೆ
ನಿನಗಾಗಿ ಎರಡು ಮಾತ ಬರೆದು ಮುಗಿಸದ ತನಕ;

ಅವರಿವರ ಮಾತು ನೂರು ಆಡಿದರೇನು ನಾನು ಇಲ್ಲಿ
ನಿನ್ನ ಕಿವಿಯಲ್ಲಿ ಪ್ರೀತಿಯ ನುಡಿಯ ಉಲಿಯದಿರುವನಕ

ಕಳೇಬರ!

30 ಮಾರ್ಚ್ 13
ಸಖೀ,
ಸತತ ಚಟುವಟಿಕೆಗಳಿದ್ದರೇ
ಈ ಜೀವನಕೂ ಅರ್ಥವಂತೆ

ಚಟುವಟಿಕೆಗಳೇ ಇಲ್ಲದ ನಾವು
ಶವಾಗಾರದಲ್ಲಿನ ಕಳೇಬರದಂತೆ


ಕೇಳದಿರಿ ಯಾರೆಂದು!

30 ಮಾರ್ಚ್ 13
ಕೇಳದಿರಿ ನನ್ನನ್ನು ಸಖೀ ಯಾರೆಂದು ಹೀಗೆ ಜೋರಾಗಿ
ಈ ಸಖೀ ಯಾರು ಎಂಬ ಗುಟ್ಟನ್ನು ನಾನಿಲ್ಲಿ ಇಟ್ಟರೆ ಬಿಚ್ಚಿ;

ಇಲ್ಲಿನ ಹುಡುಗಿಯರಿಗಂತೂ ನೋವು ಹೊಟ್ಟೆಕಿಚ್ಚು ಹೆಚ್ಚಾಗಿ,
ಹುಡುಗರೆಲ್ಲಾ ಸುಸ್ತು ಹೊಸ ಸ್ಪೂರ್ತಿಗಾಗಿ “ಲೈನ್” ಹಚ್ಚಿ!


ವೇದವಾಕ್ಯ!

23 ಮಾರ್ಚ್ 13
ಸಖೀ,
ತಾನು ನುಡಿದದ್ದೆಲ್ಲಾ ವೇದವಾಕ್ಯ
ಅಂದವರೇನೂ ವೇದಾಂತಿಗಳಲ್ಲ
ಅವರು ಅಂದದ್ದೆಲ್ಲಾ ಅವರಿಗಷ್ಟೇ
ವೇದವಾಕ್ಯ ಅನ್ಯರಿಗಲ್ಲವೇ ಅಲ್ಲ!

ಅವರ ಮಾತನ್ನು ಅವರಾದರೂ
ನಂಬಲೇಬೇಕು ಎರಡು ಮಾತಿಲ್ಲ
ತಾನು ನಂಬಲೇಬೇಕಾದ ಮಾತು
ವೇದವಾಕ್ಯ ಎನ್ನುವುದೂ ಸುಳ್ಳಲ್ಲ!


ಸಖೀ ಯಾರು?

23 ಮಾರ್ಚ್ 13
ಸಖೀ,
ಈ ಮನಕೆ ಬೇಸರವಾದಾಗಲೂ
ನನಗೆ ನೆನಪಾಗುವವಳು ನೀನೇ,

ಮನದಿ ಸಂತಸ ತುಂಬಿದಾಗಲೂ
ನನಗೆ ನೆನಪಾಗುವವಳು ನೀನೇ;

ನಿನ್ನ ನನ್ನ ನಡುವಣ ಈ ಬಂಧಕ್ಕೆ
ಅರ್ಥ ನೀಡುವ ಯತ್ನದಲಿ ಸೋತೆ,

ನನ್ನ ಓದುಗರೆಲ್ಲರದೂ ಈಗಂತೂ
ಈ ಸಖಿ ಯಾರು ಎಂಬುವ ಮಾತೇ!