ಮನುಜ ಮತ ಪ್ರತಿಪಾದಕನಾಗು!!!

30 ಏಪ್ರಿಲ್ 09

ಈಗ ಅರ್ಧ ಘಂಟೆಗೆ ಮೊದಲು ನನ್ನ ಅನುಜ ಆತ್ರಾಡಿ ಪೃಥಿರಾಜ್ ಹೆಗ್ಡೆಯಿಂದ ಈ ಸಂದೇಶ ಬಂತು:

“ನನಗೆ ಯಾರೂ ನಾಯಕರಿಲ್ಲ,
ಆದರೆ, ನಾ ನಿಂತ ಜನರ ಸಾಲಿನ ಮುಂಚೂಣಿಯಲ್ಲಿ ಆಡ್ವಾನಿಯ ಕಂಡೆ;
ನನಗೆ ಯಾವ ಪಕ್ಷವೂ ಇಲ್ಲ,
ಆದರೆ, ನನಗೆ ಜೈಕಾರ ಹಾಕುವವರ ಕೈಯಲ್ಲಿ ಬಿಜೆಪಿಯ ಧ್ವಜವ ಕಂಡೆ;
ನನಗೆ ಯಾವ ಮತವೂ ಇಲ್ಲ,
ಆದರೆ, ಕನಸಲ್ಲಿ ಶಿವ ಬಂದು ನಿನ್ನ ಧರ್ಮ ಯಾವುದು ಎಂದಾಗ ಹಿಂದೂ ಎಂದೆ;
ನಾನು ದೇವರಲ್ಲಿ ಏನನ್ನೂ ಬೇಡುವುದಿಲ್ಲ,
ಆದರೆ, ಶಿವ ಕನಸಲ್ಲಿ ಬಂದು ಕೇಳಿದಾಗ ಪುನರ್ಜನ್ಮ ಇದ್ದರೆ ಹಿಂದುವಾಗೇ ಹುಟ್ಟಿಸು ಅಂದೆ;
ತಾಯ್ನೆಲಕೆ, ತಾಯ್ನುಡಿಗೆ, ತಾಯ ರಕ್ತದ ಋಣಕೆ, ಬಿಜೆಪಿಯನ್ನಲ್ಲದೆ ಅನ್ಯ ರಾಜಕೀಯ ಪಕ್ಷವ ಕಾಣೆ!!!”

ಅದಕ್ಕೆ ನಾನು ಕಳುಹಿಸಿದ ಉತ್ತರ ಇಲ್ಲಿದೆ:

“ಮನುಜನಾಗು,
ಮನುಜ ಧರ್ಮೀಯನಾಗು,
ಮನುಜ ಮತ,
ವಿಶ್ವಮತದ
ಪ್ರತಿಪಾದಕನಾಗು.
ನೀನು ಇಂತಾದೊಡೆ,
ಮೋಕ್ಷ ನಿನಗಕ್ಕು
ನಿನ್ನ ಬಾಳು ನಾಕಕ್ಕೆ ದಾರಿಯಕ್ಕು,
ಇಲ್ಲವಾದೊಡೆ ಈ ನಿನ್ನ ಬದುಕು
ನರಕದ ರಹದಾರಿಯಕ್ಕು!!!”

(ಯಾವುದೇ ಪಕ್ಷ ಮತಗಳ ಬಗ್ಗೆ ಪೂರ್ವಗ್ರಹವಿಲ್ಲದೇ, ಓದುಗರೊಂದಿಗೆ ಇದನ್ನು ಹಂಚಿಕೊಳ್ಳುವ ಒಂದೇ ಉದ್ದೇಶದೊಂದಿಗೆ ಪ್ರಕಟಿಸುತ್ತಿದ್ದೇನೆ).

Advertisements

ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ…?

29 ಏಪ್ರಿಲ್ 09
ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ
ಅದಕಾಗಿ ಗೆಳೆಯನಿಗಿತ್ತಳೇ ಬಿಡುಗಡೆಯ ಬಹುಮಾನ
 
ಎರಡು ದಶಕಗಳ ಹಿಂದೆ ತಿಂದರು ಯಾರೋ ಲಂಚ
ಅಲ್ಲಿಂದ ಇಲ್ಲೀವರೆಗೂ ಪರಿಸ್ಥಿತಿ ಬದಲಾಗಿಲ್ಲ ಕೊಂಚ
 
ಲಂಚ ಪಡೆದವರ ಹಿಡಿಯುವ ಇಚ್ಛಾಶಕ್ತಿ ಇದ್ದಂತಿಲ್ಲ
ಆದರೆ ಅದಕೆ ಮುಕ್ತಾಯ ಹಾಡಲು ಮನಸ್ಸೂ ಇಲ್ಲ
 
ಬೋಫೋರ್ಸ್ ಬೇತಾಲದ ಬೆನ್ನು ಹತ್ತಿದ ವಿಪಿ ಸಿಂಗ
ಪ್ರಧಾನಮಂತ್ರಿಯಾಗಿ ಬಿಟ್ಟ ಸ್ವಲ್ಪವೂ ಪಡದೇ ಭಂಗ
 
ಪ್ರತೀ ಚುನಾವಣೆಯಲ್ಲೂ ಬೇತಾಲವನ್ನು ಬಡಿದೆಬ್ಬಿಸಿ
ಪ್ರಯೋಜನ ಪಡೆದರು ದೀರ್ಘಕಾಲ ಜೀವಂತ ಉಳಿಸಿ
 
ಈಗ ಆ ಕೊಟ್ರೋಚಿಯನ್ನುಳಿದು ಬದುಕುಳಿದಿಲ್ಲ ಯಾರೂ
ಆತನ ನೆನಪು ಯಾರಿಗೂ ಇದ್ದಿರಲಿಲ್ಲ ಈ ಬಾರಿ ಚೂರೂ
 
ಆತನೆಲ್ಲೋ ಇದ್ದ ಇದುವರೆಗೆ ಬೂದಿಯೊಳಗಣ ಕೆಂಡದಂತೆ
ಈಗ ನೆನಪಿಸಿ ಆಯುಧ ಕೊಟ್ಟರು ಮತ್ತವನ ಕಾಡಿಸುವಂತೆ
 
ಉಪಕಾರ ಮಾಡಹೋಗಿ ಮಾಡಿದಂತಾಯ್ತವಗೆ ಅಪಕಾರ
ಸುಮ್ಮನೇ ಇದ್ದಿದ್ದರೆ ಯಾರಾದರೂ ಎತ್ತುತ್ತಿದ್ದರೇ ಚಕಾರ

ಕುಡುಕರಿಗಷ್ಟೇ ಅರ್ಥ ಆಗ್ಬೇಕು…!!!

29 ಏಪ್ರಿಲ್ 09
asu010
ಮೊನ್ನೆ ಚುನಾವಣೆಯ ಹಿಂದಿನ ದಿನ ದೊಮ್ಮಲೂರಿನ ಒಳ ವರ್ತುಲ ರಸ್ತೆಯಲ್ಲಿರುವ ಹೋಟೆಲೊಂದರಲ್ಲಿ ಕಂಡುಬಂದ ಸೂಚನಾಫಲಕ.
ಬಹುಷಃ ಈ ಫಲಕ ಬರೆಯುವವ ಬರೆಯುವಾಗಲೇ ಪಾನಮತ್ತನಾಗಿ ಬಿಟ್ಟಿದ್ದ ಅಂತ ಕಾಣುತ್ತೆ.
ಕನ್ನಡದಲ್ಲಿ ಬರೆಯಬಾರದಿತ್ತೇನೋ…
ಕೇಳಿದರೆ “ಹೌದು ಸಾರ್ ಸ್ವಲ್ಪ ಮಿಸ್ಟಿಕ್ ಆಗಿದೆ…ಓನ್ಲೀ ಟು ಡೇಸ್…ತಾನೇ …ಆಮೇಲೆ ಹೇಗಿದ್ದರೂ ರಿಮೂವ್ ಮಾಡ್ತೀವಿ…” ಅಂದರು.
ಆ ದೇವರೇ ಕಾಪಾಡಬೇಕು ಈ ಆಂಗ್ಲ ಭಾಷಾ ಪ್ರೇಮಿಗಳನ್ನು.
😀

ಜರ್ದಾರಿ-ಒಬಾಮಾ ಸಂವಾದ…!!!

28 ಏಪ್ರಿಲ್ 09
ಜರ್ದಾರಿ: ಒಸಾಮ-ಬಿನ್-ಲಾಡೆನ್ ಜೀವಂತವಾಗಿಲ್ಲ.
ಒಬಾಮಾ: ನಾವು ಇದನ್ನು ನಂಬೋಲ್ಲ.
 
ಜರ್ದಾರಿ: ನಿಜವಾಗಿಯೂ ಆತ ಜೀವಂತವಾಗಿಲ್ಲ.
ಒಬಾಮಾ: ನಿಜವಾಗಿಯೂ ನಾವು ಇದನ್ನು ನಂಬೋಲ್ಲ.
 
ಜರ್ದಾರಿ: ಒಸಾಮ ಸತ್ತು ತಿಂಗಳುಗಳೇ ಆಗಿವೆ.
ಒಬಾಮಾ: ಒಸಾಮ ಸತ್ತ ಸುದ್ದಿ ನಮಗೆ ದೊರೆತೇ ಇಲ್ಲ.
 
ಜರ್ದಾರಿ: ಒಸಮಾ ಸಾವಿನ ಸುದ್ದಿ ನಿಜಕ್ಕೂ ನಂಬಲರ್ಹ.
ಒಬಾಮಾ: ನೀವ್ಯಾರೂ ನಂಬಲರ್ಹರಲ್ಲ, ಆ ಸುದ್ದಿಯೂ ಕೂಡ.
 
ಜರ್ದಾರಿ: ನಮ್ಮನ್ನು ನಂಬಬೇಡಿ, ಆದರೆ ಈ ಸುದ್ದಿಯ ಮೂಲವನ್ನಾದರೂ ನಂಬಿ.
ಒಬಾಮಾ: ಹೇಗೆ ನಂಬಬಹುದು ಆ ಸುದ್ದಿಯ ಮೂಲದ ಬಗ್ಗೆ ನಮಗೆ ಗೊತ್ತೇ ಇಲ್ಲ.
 
ಜರ್ದಾರಿ: ನಮಗೆ ಗೊತ್ತಿದೆ ಆ ನಂಬಲರ್ಹ ಮೂಲ ಯಾವುದೆಂದು. ದಯವಿಟ್ಟು ನಂಬಿ.
ಒಬಾಮಾ: ಹೇಗೆ ನಂಬಬಹುದು ಸ್ವಾಮೀ, ಯಾವುದದು ಅಷ್ಟು ನಂಬಿಕೆಯ ಮೂಲ?
 
ಜರ್ದಾರಿ: ಹೀಗೆಯೇ ಬನ್ನಿ, ಅಲ್ಲಿ ಒಳಕೋಣೆಯಲ್ಲಿ ಇದ್ದಾನೆ, ಈ ಸುದ್ದಿಯ ನಂಬಲರ್ಹ ಮೂಲ.
ಒಬಾಮಾ: ಯಾರವನು ನಿಮ್ಮ ಒಳಕೋಣೆಯಲ್ಲಿ ಕುಳಿತಿರುವವನು, ಅಷ್ಟು ನಂಬಿಕೆಯ ವ್ಯಕ್ತಿ?
 
ಜರ್ದಾರಿ: ನೀವು ಅವನ ಮಾತನ್ನಲ್ಲದೆ ಇನ್ಯಾರ ಮಾತನ್ನೂ ನಂಬೋಲ್ಲ ಅಂತ ಗೊತ್ತು. ಹೋಗಿ ಅಲ್ಲಿದ್ದಾನೆ ನೋಡಿ ಒಸಾಮಾ-ಬಿನ್-ಲಾಡೆನ್. ಅವನೇ ಹೇಳ್ಸಿರೋದು ನನ್ನಿಂದ ಇದನ್ನೆಲ್ಲಾ…
🙂

ಬಂಗಾರಪ್ಪನವರೇ ವಿಶ್ರಾಂತಿ..ಶಾಂತಿ…ಶಾಂತಿ..!!!

28 ಏಪ್ರಿಲ್ 09

ಮುದುಕನಾದ ಮೇಲೆ ಸೈಕಲ್ ಬಿಡುವ ದುಸ್ಸಾಹಸ ತಪ್ಪು
ಕೊನೆಗಾಲದಲಿ ಕೈಯ ಆಸರೆ ಸಿಕ್ಕರದನು ಮನಸಾರೆ ಒಪ್ಪು

ಇಂದು ಒಂದಾದರೂ ಹಿಂದೆ ನಿಮ್ಮದು ಒಡೆದ ಮನೆ-ಮನ
ರಾಘವೇಂದ್ರ ಹಾಗಲ್ಲ ಒಪ್ಪಿಸಿದ್ದಾನೆ ಅಪ್ಪನಿಗೇ ತನು ಮನ

ಮಗನಲ್ಲಿ ನೆಪಮಾತ್ರ ಯುದ್ಧ ಯಡ್ಯೂರಪ್ಪನವರದೇ ಅಲ್ಲಿ
ಸೋಲುಂಡರೆ ಮಾತ್ರ ಯಾರ ಶೋಭೆಯೂ ಉಳಿಯದಲ್ಲಿ

ಜನ ಸೇವೆ ನಾಡ ಸೇವೆ ಎಲ್ಲಾ ನಿಮ್ಮ ಬರಿಯ ಬಾಯಿ ಮಾತು
ಮಾಡಲಾಗದೇ ಸೇವೆ ಒಂದುವೇಳೆ ನೀವು ಹೋದರೂ ಸೋತು

ಬಂಗಾರಪ್ಪನವರೇ ಸಾಕು ನೀವು ಮಾಡಿರುವ ಸೇವೆ ನಮ್ಮ ನಾಡಿಗೆ
ಇನ್ನಾದರೂ ವಿಶ್ರಾಂತಿ ಪಡೆದು ಮಕ್ಕಳನ್ನು ಬಿಡಿ ಅವರವರ ಪಾಡಿಗೆ


ಜಾಣೆ!

28 ಏಪ್ರಿಲ್ 09
ಖೀ,
ಊರ
ಬಾವಿಯಿಂದ
ನೀರ ಸೇದಿ,
ಕೊಡವನೇರಿಸಿ
ಸೊಂಟದ ಮೇಲೆ,
ಬಳುಕುತ್ತಾ
ಬರುತ್ತಿದ್ದ ನೀರೆಯ
ಕಂಡು ಆತ:
“ಆಹಾ ಆ
ಕೊಡದ ಭಾಗ್ಯವೇ,
ನಾನಾದರೂ
ಆ ಕೊಡವಾಗಿದ್ದಿದ್ದರೇ..”
ಎಂದೆನ್ನಲು,
ಆ ಜಾಣೆ:
“ಈ ಕೊಡವ
ನೆಲಕ್ಕಪ್ಪಳಿಸಿ
ದಿನವೂ
ನೀ ಕೊಡುವ
ಕಿರುಕುಳದಿಂದ
ಎಂದೋ
ತಪ್ಪಿಸಿ ಕೊಳ್ಳುತ್ತಿದ್ದೆ”
ಎನ್ನಬೇಕೆ?!

ಈ ಸೋಲು ಮುಂದಿನ ನಿನ್ನ ಗೆಲುವಿಗೆ ದಾರಿ…!!!

24 ಏಪ್ರಿಲ್ 09

prithvi3

ಇಂದಿನ ಈ ಸೋಲು ಮುಂದಿನ ನಿನ್ನ ಗೆಲುವಿಗೆ ದಾರಿ

ಒಮ್ಮೆಲೇ ನಕ್ಷತ್ರಗಳ ಹಿಡಿಯಬಾರದು ಆಕಾಶಕ್ಕೆ ಹಾರಿ

ಸೋಲಿನ ರುಚಿ ಉಂಡವಗೆ ಗೆಲುವಿನ ರುಚಿ ಸಹನೀಯ

ಒಮ್ಮೆ ಗೆದ್ದರೆ ಮತ್ತೆ ಸೋಲುಂಬುದದೆಷ್ಟು ಅಸಹನೀಯ

ಪಕ್ಷ ಮತ ಜಾತಿ ರಾಜಕೀಯದದಿಂದ ಇರಬೇಕು ದೂರ

ಆಗ ನೀ ಆಗುವೆ ಜನರ ಹೃದಯಗಳನೇ ಗೆಲ್ಲುವ ಶೂರ

ಶಾಶ್ವತ ಅಲ್ಲ ಗೆಲುವು ಬುದ್ಧಿವಂತಿಕೆಯಿಂದ ಜನರ ಗೆದ್ದರೆ

ಶಾಶ್ವತ ಜನರ ಒಲವು  ಹೃದಯವಂತಿಕೆ ನಿನಗೆ ತಂದರೆ

ನಿನ್ನ ಭವ್ಯ ಭವಿಷತ್ತಿನ ಕನಸು ಕಾಣುತಿವೆ ನನ್ನ ಕಂಗಳು

ಮುಂದಿನದಕೆ ಭದ್ರ ಬುನಾದಿ ಇಂದಿನ ಏಳು ಬೀಳುಗಳು

ಮಾತಾಪಿತರ ಆಶೀರ್ವಾದ ಎಂತಿಹುದೋ ನಿನ್ನೊಂದಿಗೆ

ಅಂತೆಯೇ ನಾನೂ ಇರುವೆ ಸದಾ ನಿನ್ನ ಜೊತೆ ಜೊತೆಗೆ

**********************************

ಇಂದು ನಡೆದ, ಉಡುಪಿ ಬಾರ್ ಕೌನ್ಸಿಲ್ ಕಾರ್ಯದರ್ಶಿಯ ಚುನಾವಣೆಯಲ್ಲಿ

ಸೋಲುಂಡ ನನ್ನ ತಮ್ಮ ಪೃಥ್ವಿರಾಜನಿಗೆ.