ಆಸೆಗಳು ಹಾಗೂ ನಿರೀಕ್ಷೆಗಳು!

07 ಫೆಬ್ರ 14

“ನಮಗೆ ಕೈಗೂಡದ ಆಸೆಗಳು ಇರಬಾರದು ಕಣೋ”

“ಯಾಕೆ ಇರಬಾರದು, ಹೇಳು ?”

“ಕೈಗೂಡೋದಿಲ್ಲ ಅನ್ನೋದು ಗೊತ್ತಿದ್ದ ಮೇಲೆ ಆ ಆಸೆಗಳು ಯಾಕಿರಬೇಕು ಹೇಳು?”

“ಹಾಗಲ್ಲ. ಕೈಗೂಡುವ ಆಸೆಗಳು ಮಾತ್ರ ಇದ್ದರೆ, ಆಸೆಗಳೆಲ್ಲಾ ಕೈಗೂಡುತ್ತಾ ಇದ್ದರೆ, ಈ ಜೀವನ ನೀರಸ ಆಗಿ ಬಿಡುತ್ತದೆ”

“ಹೌದಾ?” 

“ಕೈಗೂಡುವವೋ ಕೈಗೂಡದವೋ ಆಸೆಗಳು ಇರಲೇಬೇಕು. ಆದರೆ ಆ ಆಸೆಗಳು ಕೈಗೂಡಲೇಬೇಕೆನ್ನುವ ನಿರೀಕ್ಷೆಗಳು ಇರಬಾರದು”.

“ಏನೋ ಇದು? ಆಸೆಗಳು ಇರಬೇಕು, ಅವು ಕೈಗೂಡಲೇಬೇಕೆನ್ನುವ ನಿರೀಕ್ಷೆಗಳು ಇರಬಾರದು ಅಂದರೆ. ಎರಡೂ ಒಂದೇ ಅಲ್ವೇನೋ?”

“ಆಂಗ್ಲದಲ್ಲಿ “desires” ಹಾಗೂ “expectations” ಅನ್ನುವ ಪದಗಳಿವೆ. ಅವುಗಳ ಅರ್ಥಗಳೂ ನಿನಗೆ ಗೊತ್ತಿವೆ ಅಲ್ಲವೇ?”

“ಹೂಂ… ಹೌದು”

“ಅದೇ ಹೇಳಿದ್ದು ನಾನು. “desires” ಇರಲಿ. “expectations” ಬೇಡ”

“ಆಸೆಗಳು ಇದ್ದರೆ ನೋವಾಗುವುದಿಲ್ಲ. ನಿರೀಕ್ಷೆಗಳು ಇದ್ದರೆ ನೋವು ಖಾತ್ರಿ. ಅಸೆಗಳು ನಮ್ಮ ಕಲ್ಪನಾಲೋಕದಲ್ಲಿ ನಮ್ಮದೇ ರೀತಿಯಲ್ಲಿ ಕೈಗೂಡಿ ನಮಗೆ ಸುಖಾನುಭವ ನೀಡಲೂಬಹುದು. ಯೋಚಿಸಿ ನೋಡು”

“ಹೂಂ ಯೋಚಿಸುತ್ತೇನೆ”.

Advertisements

ಜೀವನಧರ್ಮ!

07 ಫೆಬ್ರ 14

“ಇವತ್ತೇಕೋ ಮನದಲ್ಲಿ ಆಸೆಗಳು ಗರಿಗೆದರುತ್ತಿವೆ”

“ಹೂಂ… ಏನವು?”

“ನಿನ್ನ ಸನಿಹದ ಬಯಕೆ ಮನದಲ್ಲಿ ತುಂಬಿದೆ”

“ಮುಂದ…?”…

“ನನ್ನ ಹಸ್ತದಲಿ ನಿನ್ನ ಹಸ್ತವನಿಟ್ಟುಕೊಂಡು, ಕಣ್ಣಲ್ಲಿ ಕಣ್ಣಿಟ್ಟು, ಮಾತನಾಡುತ್ತಾ ಕೂರುವಾಸೆ”

“ಓಹ್…”

“ಬೆಳದಿಂಗಳಾಗಸದ ಕೆಳಗೆ ಕೈಕೈ ಹಿಡಿದುಕೊಂಡು ನಡೆಯುವಾಸೆ”

“ಶೀತಲ ಗಾಳಿಗೆ ನಡುಗಿ ನೀ ನನ್ನ ಸನಿಹ ಬಂದಾಗ, ನಿನ್ನ ಕಿವಿಯಲ್ಲಿ ಆ ಮೂರು ಪದಗಳನ್ನು ಬಾರಿ ಬಾರಿ ನುಡಿಯುತ್ತಿರುವಾಸೆ”.

“ಎಷ್ಟೆಲ್ಲಾ ಆಸೆಗಳೊ ನಿನಗೆ?”

“ಈ ಚಿಕ್ಕ ಚಿಕ್ಕ ಆಸೆಗಳು ಕೈಗೂಡಿಯಾವೇ ಆ ದೇವರು ಅಂದಾನೇ ತಥಾಸ್ತು?”

“ತಥಾಸ್ತು”

“ನಿನ್ನ ಮನದಲ್ಲೂ ನನ್ನಾಸೆಗಳೇ ಇವೆ ಅನ್ನುವುದಕ್ಕೆ ಇದೇ ಅಲ್ಲವೇ ಸಾಕ್ಷಿ?”

“ಹೂಂ”

“ನಿನ್ನಾಸೆಗಳನ್ನೂ ನಾನೇ ಹೇಳಿಕೊಳ್ಳಬೇಕು. ಇದು ನಮ್ಮ ಪ್ರೀತಿಯ ಕರ್ಮ”

“ಅಲ್ಲ ಅದುವೇ ನಮ್ಮ ಜೀವನಧರ್ಮ”

 


ಕಾವ್ಯಸೃಷ್ಟಿ!

06 ಫೆಬ್ರ 14

ಕಾವ್ಯ ತನ್ನನ್ನು ತಾನಾಗಿಯೇ ಬರೆಸುತ್ತಾಳೆ.

ಹೆಚ್ಚಿನೆಲ್ಲಾ ಕಾವ್ಯ ರಚನೆಗಳಿಗೆ ಯಾವುದೇ ಪೂರ್ವ ತಯಾರಿಯ ಅಗತ್ಯ ಇರುವುದಿಲ್ಲ.

ಯಾವುದೋ ಬೀಜದೊಳಗಿಂದ ಜೀವಾಂಕುರವಾಗುವಂತೆ, ಕಾವ್ಯ ಕೂಡ ಕವಿಯ ಒಳಪ್ರತಿಭೆಯಿಂದ ಅಂಕುರಿಸುತ್ತಾಳೆ.

ಕವಿಗೆ ಪ್ರಕೃತಿಯನ್ನು ಪಂಚೇಂದ್ರಿಯಗಳಿಂದ ಆಸ್ವಾದಿಸುವ, ಮೆಚ್ಚುವ ಕಲೆ ಕೈಗೂಡಬೇಕು. 

ಸುಲಲಿತ ಪದಗಳ ಭಂಡಾರ ಶ್ರೀಮಂತವಾಗಿರಬೇಕು ಹಾಗೂ ಸಮಯೋಚಿತವಾದ, ಸೂಕ್ತ ಪದಬಳಕೆಯ ಅರಿವಿರಬೇಕು. 

ಅಧ್ಯಯನ ಜಾಸ್ತಿ ಆದಷ್ಟು ನಕಲಿಸುವುದು ಜಾಸ್ತಿ ಆಗುತ್ತಾ ಹೋಗುವ ಸಾಧ್ಯತೆ ಇರುತ್ತದೆ. 

ಹಾಗಾಗಿ ಓದಿನ ಅಥವಾ ಅಧ್ಯಯನದ ಮೂಲ ಉದ್ದೇಶ ಜ್ಞಾನವೃದ್ಧಿ ಆಗಿರಬೇಕೇ ಹೊರತು ಓದಿ ಮುಗಿಸುವುದರೊಳಗೆ ತನ್ನದೊಂದು ರಚನೆಯಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿ ಇರಬಾರದು!


ನಿದಿರಾದೇವಿ!

05 ಫೆಬ್ರ 14

 

ಕೂಗಿ ಕರೆಯುವುದಿಲ್ಲ
ಬೈದು ಜರೆಯುವುದಿಲ್ಲ
ಸದ್ದಾಗದಂತೆ ಬಂದು
ಆವರಿಸಿಬಿಡುವಳಲ್ಲಾ;

ಅವಳ ಈ ಆರೈಕೆಯಲೂ
ಅಮ್ಮನ ಮಮತೆಯಿದೆ 
ಅಪ್ಪನ ವಾತ್ಸಲ್ಯವಿದೆ
ಎಲ್ಲಿಲ್ಲದ ಅಕ್ಕರೆಯಿದೆ!


ಅರ್ಥ ಇರದಲ್ಲಿ!

05 ಫೆಬ್ರ 14

 

ನಿನ್ನ ನನ್ನ ನಡುವಣ ಈ ಬಂಧವನು ಬೆಸೆದವರು ಯಾರೋ
ನಮ್ಮ ಈ ಬಂಧಕ್ಕೆ ಯಾವುದೋ ಹೆಸರಿಡುವವರು ಯಾರೋ 

ನನಗೆ ನಿನ್ನ ಆವಶ್ಯಕತೆಯೋ ನಿನಗೆ ನನ್ನ ಆವಶ್ಯಕತೆಯೋ
ಎಂದು ಪ್ರಶ್ನಿಸಿದರೆ ಅದಕಿಲ್ಲಿ ಉತ್ತರ ಕೊಡುವವರು ಯಾರೋ

ನಿನ್ನ ಯೋಚನೆ ಸಾಕು ನನ್ನಲ್ಲಿ ರೋಮಾಂಚನ ಮೂಡಿಸಲು
ನಿನ್ನ ನೆನಪು ಸಾಕೆನ್ನ ಎದೆಯಲ್ಲಿ ಹೊಸರಾಗ ಹೊಮ್ಮಿಸಲು

ಅರ್ಥ ಇಲ್ಲದಲ್ಲೂ ಅರ್ಥಪೂರ್ಣ ಸಂಬಂಧಗಳಿರುತ್ತವೆ ಕಣೇ
ಅರ್ಥಕ್ಕಾಗಿಯೇ ಸಂಬಂಧ ಬೆಳೆಸುವುದಕ್ಕಿದೆ ಏನರ್ಥ ಹೆಣ್ಣೇ?


ಈಗಿನ ಹೊಸ ಚಾಳಿ!

02 ಫೆಬ್ರ 14

 

ಸೃಜನಶೀಲರಿಗೆ ನಾಲ್ಕುದಿನ ನೆನಪಲ್ಲಿ ಉಳಿಯುವಷ್ಟು ಮೆಚ್ಚುಗೆಯ ಮಾತುಗಳು
ಸೃಜನಶೀಲರನ್ನು ಕಲೆಹಾಕಿ, ಅದರ ಪ್ರಚಾರ ಮಾಡಿಸಿಕೊಂಡವರಿಗೆ ಪ್ರಶಸ್ತಿಗಳು;

ಹೊಲದಲ್ಲಿ ಶ್ರಮಪಟ್ಟು ಬೆವರಿಳಿಸಿ ಬೆಳೆಬೆಳೆಯುವ ರೈತ ಬಾಂಧವರಿಗೆ ಜುಜುಬಿ
ರೈತ – ಗ್ರಾಹಕರ ನಡುವಿರುವ ಮಧ್ಯವರ್ತಿಗಳಿಗೆ ಸಂತಸ ತಮ್ಮ ಜೇಬು ತುಂಬಿ;

ಕೃಷಿಯನ್ನು ಉಳಿಸಿದ್ದು ಆ ಮಧ್ಯವರ್ತಿಗಳು ಎಂದರೆ ಎಷ್ಟು ಹಾಸಾಸ್ಪದವೋ ಅಲ್ಲಿ
ಅಷ್ಟೇ ಹಾಸ್ಯಾಸ್ಪದ ಭಾಷೆಯನ್ನು ಉಳಿಸುವವರೀ ಸಂಯೋಜಕರೆಂದರೆ ನಾವಿಲ್ಲಿ!


ಖಾತ್ರಿ!

02 ಫೆಬ್ರ 14

 

“ಸೂರ್ಯೋದಯಕ್ಕಾಗಿ 
ಎಂದೂ ಕಾದಿಲ್ಲ ನಾನು 
ನಿನ್ನ ಸಂದೇಶಕ್ಕಾಗಿ 
ಇಂದಿಲ್ಲಿ ಕಾದಷ್ಟು”

“ಕಾಯಬೇಕಾಗಿಲ್ಲ ನೀ
ಅದಕ್ಕೂ ಇದಕ್ಕೂ, 
ಇದೂ ಖಾತ್ರಿ ಕಣೇ 
ಆ ಸೂರ್ಯೋದಯದಷ್ಟು”