ಕೈತುತ್ತು ನೀಡುವ ಅಮ್ಮನಿರಲು ನಮ್ಮ ಈ ಮನೆಯೇ ಸ್ವರ್ಗದಂತೆ
ನಮ್ಮಮ್ಮನಿಗೆ ಮಾತ್ರ ವರುಷದಿಂದೀಚೆಗೆ ಸ್ವರ್ಗವೇ ಮನೆಯಂತೆ!
ಕಳೆದ ವರುಷದ ಮಾರ್ಚ್ ಒಂದರ ಮುಂಜಾನೆ, ಐದು ಐದೂವರೆಯ ಸುಮಾರಿಗೆ ಕೆಟ್ಟ ಕನಸು. ಕೈಕಾಲು ಜೋರಾಗಿ ಹೊಡೆದುಕೊಳ್ಳುತ್ತಿದ್ದೆ. ಯಾರೋ ಹಿಡಿದೆಳೆಯುತ್ತಿದ್ದ ಅನುಭವ.
ನನ್ನಾಕೆ ನನ್ನನ್ನು ನಿದ್ದೆಯಿಂದ ಎಬ್ಬಿಸಿ ಕೂರಿಸದೇ ಇದ್ದರೆ, ಬಹುಶಃ ಏನಾಗುತ್ತಿತ್ತೋ ದೇವರಿಗೇ ಗೊತ್ತು.
ಏನೋ ಕೆಟ್ಟ ಕನಸು ಅನ್ನುವ ನಂಬಿಕೆಯೊಂದಿಗೆ ಮಾಮೂಲು ದಿನಚರಿಯನ್ನು ಮುಂದುವರಿಸಿದೆವು. ಏಳು ಘಂಟೆಯಾಗುವಷ್ಟರಲ್ಲಿ ಊರಿನಿಂದ ನನ್ನ ತಮ್ಮನ ಪತ್ನಿಯಿಂದ ಕರೆ ಬಂತು.
ಎಲ್ಲರೂ ಮುಂಜಾವಿನ ದಿನಚರಿಯಲ್ಲಿ ವ್ಯಸ್ತವಾಗಿರುವ ಆ ಹೊತ್ತಿನಲ್ಲಿ ಕರೆಯ ನಿರೀಕ್ಷೆ ಇರುವುದೇ ಇಲ್ಲ. ಆ ಹೊತ್ತಲ್ಲದ ಹೊತ್ತಿನಲ್ಲಿ ಕರೆ ಬಂದಾಗಲೇ, ನನ್ನ ಕೈನಡುಗಲು ತೊಡಗಿತ್ತು. ಫೋನ್ ಕೈಗೆತ್ತಿಕೊಂಡು, ಅರೆಕ್ಷಣದಲ್ಲಿ ಅರಿವಾಗಿತ್ತು. ನನ್ನ ಆ ಕನಸಿಗೆ ಅರ್ಥ ಕಂಡುಕೊಂಡಿದ್ದೆ.
ಕೂಡಲೇ ಹೊರಟರೂ, ಸೋದರಳಿಯ ಹಾಗೂ ಅಕ್ಕನವರನ್ನು ಸೇರಿಕೊಂಡು ಊರು ತಲುಪುವಾಗ ಸಾಯಂಕಾಲವಾಯ್ತು.
ಮಾರನೇ ಮುಂಜಾನೆ ಸ್ನಾನ ಮಾಡಿಸುವಾಗ, ನೀರಿನ ಬಿಸಿ ತಾಗಿ ಅಮ್ಮ ಎದ್ದು ಕೂರಲಿ ಎಂಬಾಸೆ. ಚಿತೆಯ ಜ್ವಾಲೆಗಳು ಆಕಾಶದತ್ತ ನಾಲಿಗೆ ಚಾಚಿದಾಗ, ಇನ್ನೊಮ್ಮೆ, ಆ ಬಿಸಿಗೆ ಎದ್ದು ಕೂರುತ್ತಾರೆ ಅನ್ನುವ ಆಸೆ ಮನದೊಳಗೆ. ಆದರೆ ಅಮ್ಮ ಏಳಲೇ ಇಲ್ಲ. ವಿಚಿತ್ರ ಸದ್ದಿನೊಂದಿಗೆ, ತಲೆಯ ಚಿಪ್ಪು ಒಡೆದು ಹೋದಾಗ, ಕಣ್ಣೀರ ಕೋಡಿ ಹರಿದು ನನ್ನ ಪಾದಗಳನ್ನು ತೋಯಿಸತೊಡಗಿತ್ತು.
ಚಿತೆಯತ್ತ ನನ್ನ ಚಿತ್ತ ಹರಿದಾಗ, ನನ್ನ ಮಗಳತ್ತ ಮನಸ್ಸು ಎಳೆಯುತ್ತಿತ್ತು.
ಉಳಿದುಬಿಟ್ಟೆ.
ಅಮ್ಮ, ಇನ್ನು ಸಾಕು, ಬಂದು ಬಿಡಿ, ವರುಷವಾಯ್ತು ಅಲ್ಲಿ.
ನನಗೂ ಸಾಕಾಗಿದೆ ಇಲ್ಲಿ…