ಮಾನವ ದೇಹ ಮತ್ತು ಭೂಮಿ!

29 ಮೇ 10

 

ಮಾನವ ದೇಹವಿದು

ನಿಜದಿ ಭೂಮಿಯ ಚಿಕ್ಕದಾದ ರೂಪ

 

ಭೂಮಿಯಂತೆಯೇ ಇದೂ

ನಿಗೂಢ ಚಟುವಟಿಕೆಗಳ ಕೂಪ

 

ಕಾಡು ಮೇಡುಗಳಿವೆ

ಬುವಿಯ ಮೇಲ್ಮೈಯಲ್ಲಿರುವಂತೆ

 

ದಿಣ್ಣೆ ಕಣಿವೆಗಳೂ ಇವೆ

ಭೂಮಿಯುದ್ದಗಲಕೂ ಇರುವಂತೆ

 

ಇಲ್ಲಿ ಕ್ರಿಮಿ ಕೀಟಾಣುಗಳ ವಾಸ

ಅಲ್ಲಿ ಪ್ರಾಣಿ ಪಕ್ಷಿ ಸಂಕುಗಳಿರುವಂತೆ

 

ಇಲ್ಲಿ ಖಾಯಿಲೆ ಖಸಾಲೆಗಳು

ಅಲ್ಲಿನ ಅತಿವೃಷ್ಟಿ ಅನಾವೃಷ್ಟಿಗಳಂತೆ

 

ಮಾಂಸಖಂಡಗಳು ಆಡುವವು

ಅಲ್ಲಿ ಭೂಕಂಪನಗಳು ಆಗುವಂತೆ

 

ಇಲ್ಲಿ ವಾಂತಿ ಭೇದಿಗಳಿವೆ

ಅಲ್ಲಿರುವ ಜ್ವಾಲಾಮುಖಿಗಳಂತೆ

 

ಇಲ್ಲಿಯೂ ನಿರಂತರ ಚಲನೆ

ಭೂಮಿಯ ಆ ಪರಿಭ್ರಮಣದಂತೆ

 

ಮಾನಸಿಕ ಚಂಚಲತೆ ಇಲ್ಲಿ

ಅಲ್ಲಿನ ವಾತಾವರಣದಲ್ಲಿರುವಂತೆ

 

ಆದರೆ ಒಂದೇ ಅಂತರ

ಇಲ್ಲಿಗೂ ಅಲ್ಲಿಗೂ ಅರಿತಿರಾ?

 

ಇಲ್ಲಿ ಏರುಪೇರಿನಲ್ಲಿ

ಒಮ್ಮೊಮ್ಮೆ ವಿಪರೀತ ಉಷ್ಣತೆ

 

ಅಲ್ಲಿ ಉಷ್ಣತೆಯಲ್ಲಿ

ಒಮ್ಮೊಮ್ಮೆ ವಿಪರೀತ ಏರುಪೇರು!

***********************


ಹೇಗೆ ತಪ್ಪಾಯ್ತು?!

27 ಮೇ 10

 

ಸಖೀ

ಅಂದು

ಮೇನಕೆ

ವಿಶ್ವಾಮಿತ್ರನ

ತಪಸ್ಸನ್ನು

ಭಂಗ ಪಡಿಸಿದ್ದು

ತಪ್ಪಾಗಿರದಿದ್ದಲ್ಲಿ

ಇಂದು

“Bus Stop” ನಲ್ಲಿ

ನಿಂತಿದ್ದ

ಹುಡುಗಿಯ

ಹುಡುಗನೋರ್ವ

ಚುಡಾಯಿಸಿದ್ದು

ಹೇಗೆ ತಪ್ಪಾಯ್ತು?!

*********


ಇದೇಕೆ ಹೀಗೆ?

27 ಮೇ 10

 

ಸಖೀ,

ನೀ ನಿನ್ನ

ಬಾಹುಗಳಿಂದ

ನಿನ್ನ ಮಗುವನು

ತಬ್ಬಿಕೊಂಬಾಗ

ಅದರ ಮೈಮೇಲೆ

ಚುಂಬನದ

ಮಳೆಗರೆಯುವಾಗ

ಮಗು ನಿನ್ನ

ಎದೆ ಹಾಲ

ಸವಿಯುತಿರುವಾಗ

ನಿನ್ನ ಜೊತೆಯಲೇ

ಮತ್ತೆ ರಾತ್ರಿಯನು

ಕಳೆಯುವಾಗ

ನನ್ನ ಮೈಮನ

ಕುದಿಯುತದೆ

ನಿನ್ನ ಮಗುವಿನ

ಮೇಲೆ ಮತ್ಸರದ

ಕಿಚ್ಚು ಹಚ್ಚಿಕೊಳ್ಳುತ್ತದೆ

ಇದೇಕೆ ಹೀಗೆ?

ಸಖೀ

ಹೇಳೆಯಾ

ಇದೇಕೆ ಹೀಗೆ?

*******


ದೇವರೇ ರಜೆ ಹಾಕಿದರೇ?

26 ಮೇ 10

 

ನಡೆಯಲು

ಅಪ್ಪಣೆಕೊಟ್ಟು

ಕಾಲುಗಳನ್ನು

ನೀಡಿದವನ

ಮಾತನ್ನೇ ಮೀರಿ

ರೆಕ್ಕೆ ಕಟ್ಟಿಕೊಂಡು

ಬಾನಿನಲ್ಲಿ ಹಾರುವ

ಹಾರಾಟ ಇಲ್ಲಿ

 

ಎಲ್ಲವೂ ನಿನ್ನದೇ

ಹಾಗಾದರೆ

ನನ್ನದೇನಿಲ್ಲವೇ

ಎಂದ ಆ ದೇವರು

ಮುನಿಸಿಕೊಂಡು

ನೀನೇ ನೋಡಿಕೋ

ಎಂದು ಒಮ್ಮೊಮ್ಮೆ

ತೆರಳುತ್ತಾನೆ

ರಜೆಯಲ್ಲಿ

 

ಆಗ ನೋಡಿ

ಹಾರಾಡುವ

ಬಾನಾಡಿಗಳು

ಕಾರಣವೇನೂ

ಇಲ್ಲದೆಯೇ

ರೆಕ್ಕೆಮುರಿದು

ನೆಲಕ್ಕಪ್ಪಳಿಸುತ್ತವೆ

 

ಅಮಾಯಕ

ಜೀವಗಳು

ದೇವರ ಮನೆಯನ್ನು

ಸೇರಿ ಆತನನ್ನು

ಬೇಡಿ ರಜೆಯಿಂದ

ಮರಳಿ ಕೆಲಸಕ್ಕೆ

ಹಾಜರಾಗಿಸುತ್ತವೆ!

***************


ಪ್ರಕಾಶ ರೈಗಳಿಗೆ ತುಂಬು ಹೃದಯದ ಧನ್ಯವಾದ!

26 ಮೇ 10

 

ಪ್ರಕಾಶ ರೈಗಳಿಗೆ ತುಂಬು ಹೃದಯದ ಧನ್ಯವಾದ

ಬರಿಯ ಚಿತ್ರವಲ್ಲವದು ಒಂದು ಸುಂದರ ಸಂವಾದ

 

ನಾ ವೀಕ್ಷಿಸುತ್ತಿದ್ದಾಗ ಚಿತ್ರ ನಾನೂ ನನ್ನ ಕನಸೂ

ಮುದಗೊಂಡೆವು ಅಂದು ನಾನೂ ನನ್ನ ಮನಸೂ

 

ಒಂಟಿ ಮಗಳ ಅಪ್ಪ ನಾನೂ ಅಲ್ಲಿನ ಉತ್ತಪ್ಪನಂತೆ

ನನ್ನ ಮಗಳೂ ನನ್ನ ಕನಸು ಆತನ ಆ ಕನಸಿನಂತೆ

 

ನಮ್ಮದೇ ಚಿತ್ರ ಬಿಡಿಸಿಕೊಂಡಂತಾಗಿ ನನ್ನ ಕಣ್ಮುಂದೆ

ಸಂತಸದೊಂದಿಗೆ ಅಲ್ಲಿ ಕ್ಷಣ ಪ್ರತಿಕ್ಷಣ ನಾನು ನೊಂದೆ

 

ಹೆಣ್ಮಗಳ ಅಪ್ಪನಾಗುವುದು ನಿಜದಿ ಅದೆಂತಾ ಸೌಭಾಗ್ಯ

ನನ್ನದು ಅದು ನಿಜದಿ ಬಯಸಿ ಬಯಸಿ ಬಂದಂತ ಭಾಗ್ಯ

 

ಮೊನ್ನಿನ ತನಕ ಹೆಗಲೇರಿ ಕೂರುತ್ತಿದ್ದವಳು ಭಯವಿಲ್ಲದೇ

ಭುಜದೆತ್ತರಕ್ಕೆ ಬೆಳೆದು ನಿಂತಾಗಿದೆ ಈಗ ನನಗರಿವಿಲ್ಲದೇ

 

ಭವಿಷ್ಯದ ವಿದಾಯದ ಚಿತ್ರ ಕಣ್ಣೆದುರು ತೆರೆದುಕೊಂಡಾಗ

ಅನ್ಸುತ್ತೆ ಧೈರ್ಯ ತುಂಬಲು ದೇವರೇ ಬರಬೇಕಾದೀತಾಗ

*************************************


ನೆರಳೂ ಕಾಣೆಯಾಗುವುದೇಕೆ?

26 ಮೇ 10

 

ಹಗಲೆಲ್ಲಾ

ನನ್ನ ಬೆಂಗಾವಲಿಗಿರುವ

ನನ್ನ ನೆರಳೂ

ರಾತ್ರಿಯ ಕತ್ತಲೆಯಲ್ಲಿ

ನನ್ನನ್ನು ಬಿಟ್ಟು

ಕಾಣೆಯಾಗುವುದೇಕೆ?

 

ಬಾಳ ಬಟ್ಟೆಯಲಿ

ಕತ್ತಲಾವರಿಸಿ

ದಿಕ್ಕುಕಾಣದೇ

ತತ್ತರಿಸಿದಾಗ

ಆಪ್ತರಾದವರೂ

ಕೈಬಿಡುವರೆಂಬ

ಸೂಚನೆ

ನೀಡುತ್ತಿರಬಹುದೇ…

ಜೋಕೆ!

******


ಮತ್ತೆ ಕಂಡಂತಾಯ್ತು ನಿನ್ನ ಆ ಒನಪು!

26 ಮೇ 10

 

ಖಾಲಿ ಖಾಲಿ ಮನದೊಳಗೆ

ಬರೇ ನಿನ್ನ ನೆನಪು

ಮತ್ತೆ ಕಂಡಂತಾಯ್ತು ಸಖೀ

ನಿನ್ನ ಆ ಒನಪು

 

ನಂಬಿದ್ದೆ ನಾನು ನಿನಗೆ ಅಲ್ಲಿ

ಸಿಗಬಹುದೆಂದು ಸುಖ

ನಿನ್ನಷ್ಟಕ್ಕೆ ನಿನ್ನನ್ನು ಬಿಟ್ಟು

ನಾ ಸಹಿಸಿದೆನಷ್ಟೂ ದುಃಖ

 

ನಮ್ಮ ಪ್ರೀತಿ ನಮ್ಮದೆಂದು

ಇತ್ತು ನಮಗೆ ನಂಬಿಕೆ

ಆದರೇನು ಮಾಡಲೇಳು

ಇತ್ತು ಜನರ ಹೆದರಿಕೆ

 

ನಾನು ನಿನ್ನವನಾಗಲಿಲ್ಲ

ಎಂದು ಹೇಗೆ ಹೇಳಲಿ

ನಾನು ನಾನೇ ಅಲ್ಲ ಈಗ

ಏನಿದೆ ನನ್ನ ಬಾಳಲಿ

 

ನೀನು ಎಲ್ಲೇ ಇದ್ದರೂ

ನನ್ನವಳಲ್ಲ ಎನುವೆಯಾ

ನನ್ನ ಒಳಗೆ ನೀನೇ ನೀನು

ಇಲ್ಲ ಎಂದು ಎನುವೆಯಾ

 

ದೂರ ದೂರ ಇದ್ದರೂ

ಸದಾ ಮೌನ ಸಂಭಾಷಣೆ

ಸಹಿಸುತಿರಲೇಬೇಕು ಸದಾ

ನಮ್ಮೊಳಗಿನ ಈ ಬವಣೆ

 

ಖಾಲಿ ಖಾಲಿ ಮನದೊನೊಳಗೆ

ಬರೇ ನಿನ್ನ ನೆನಪು

ಮತ್ತೆ ಕಂಡಂತಾಯ್ತು ಸಖೀ

ನಿನ್ನ ಆ ಒನಪು!

**********


ನಿಲ್ದಾಣ ನುಡಿದಾಗ!

25 ಮೇ 10

 

ಬಸ್ಸಿಗಾಗಿ

ಕಾಯುತ್ತಲಿದ್ದೆ

ನಾನೊಬ್ಬನೇ

ನನ್ನ ಜೊತೆಗೆ

ಆ ನಿಲ್ದಾಣ

 

ಸೂರ್ಯಕಿರಣಗಳು

ತಮ್ಮ ಕೋನ

ಬದಲಿಸಿದರೂ

ಬಸ್ಸು ಬರಲೇ ಇಲ್ಲ

ನುಡಿಯಿತು ಬೇಸತ್ತ

ಆ ನಿಲ್ದಾಣ

 

ಏನ್ರೀ ಸ್ವಾಮೀ

ಸ್ವಲ್ಪ ಸುತ್ತಾಡಿಕೊಂಡು ಬನ್ನಿ

ನನಗೂ ಇದೆ ಏಕಾಂತದಾಸೆ!

*******************


ನಿಮ್ಮಲ್ಲಿ ಯಾರಿಗಾದರೂ ಇದ್ದರೆ ಪತ್ರ ಓದುವಾಸೆ!

25 ಮೇ 10

 

ಅಂದು ಇದ್ದಿದ್ದರೂ ಊರಿಗೆಲ್ಲ “ಫೋನು” ಒಂದೇ ಒಂದು

ಕರೆ ಮಾಡಿ ವಿಚಾರಿಸುತ್ತಿದ್ದರು ನೀನು ಹೇಗಿರುವೆ ಎಂದು

 

“ಫೋನು” ಮಾಡಲಾಗದೇ ಇದ್ದಲ್ಲಿ ಬರೆದು ಉದ್ದುದ್ದ ಪತ್ರ

ಸದಾ ಸಂಪರ್ಕದಲ್ಲಿ ಇರುತ್ತಿದ್ದರು ಎಲ್ಲಾ ತಮ್ಮವರ ಹತ್ರ

 

ಆಗ ಎಲ್ಲರ ಮನಗಳಲ್ಲಿ ತುಂಬಿತ್ತು ಅನ್ಯರ ಬಗ್ಗೆ ಕಾಳಜಿ

ಮಾಡಿದ್ದೇ ಇಲ್ಲ ಯಾರೂ ಆಗ ಬಡತನದೊಂದಿಗೆ ರಾಜಿ

 

ಮತ್ತೆ ಬಂತು ಮನೆ ಮನೆಯಲ್ಲೂ ಒಂದೊಂದು “ಫೋನು”

ಈಗ ಆಗಿದೆ ನೋಡಿ ಪ್ರತೀ ಕೈಗೊಂದೊಂದು “ಫೋನು”

 

ಆದರೂ ಒಬ್ಬರ ಜೊತೆಗೆ ಸಂಪರ್ಕ ಇನ್ನೊಬ್ಬರಿಗೆ ಇಲ್ಲ

ಎಲ್ಲರದೂ ಬರಿಯ ಹುಸಿಕರೆಗಳಲೇ ಮುಕ್ತಾಯ ಎಲ್ಲಾ

 

ಒಮ್ಮೆ ರಿಂಗಣಿಸಿದರೆ ತಿಳಿದುಕೋ ಇಲ್ಲಿ ಸೌಖ್ಯ ನಾನು

ಎರಡು ಬಾರಿಯಾದರೆ ನಾ ಕೇಳುತಿಹೆ ಹೇಗಿರುವೆ ನೀನು

 

ಅಂದು ಮಾತಿಗೆ ಮೊದಲು ಎಲ್ಲ ಹೇಗಿರುವೆ ಎನ್ನುತ್ತಿದ್ದರು

ಈಗ ಹಾಗಲ್ಲ ಕೈಗೆತ್ತಿಕೊಂಡರೆ ಸಾಕು ಎಲ್ಲಿರುವೆ ಎಂಬರು

 

ಪತ್ರ ಬರೆಯುವ ಆಸೆ ನಿಜಕೂ ಜೀವಂತವಾಗಿದೆ ನನ್ನಲ್ಲಿ

ಆದರೆ ಓದುವವರು ಯಾರೂ ಇಲ್ಲವೆಂಬ ಚಿಂತೆಯಿದೆಯಿಲ್ಲಿ

 

ಹೇಳಿ ನಿಮ್ಮಲ್ಲಿ ಯಾರಿಗೇ ಆದರೂ ಇದ್ದರೆ ಪತ್ರ ಓದುವಾಸೆ

ನಾನು ಬರೆಯುತ್ತೇನೆ ತೀರಿಸಿಕೊಳ್ಳುವಂತೆ ನನ್ನ ಮನದಾಸೆ

***************************************


ಹರಿದಾಸನಲ್ಲ!

24 ಮೇ 10

 

ನಾನು ನುಡಿದಂತೆ

ನಡೆಯಲು

ಆ ದೇವರೇನು

ನನ್ನ ದಾಸನಲ್ಲ,

ಆ ದೇವರ

ಮಹಿಮೆಗಳ

ಕಂಡು ಬರಿದೆ

ಅಚ್ಚರಿಪಡುವೆ,

ಹಾಡಿ ಕೊಂಡಾಡಲು

ನಾನು ಹರಿದಾಸನಲ್ಲ!

**********