ನಮ್ಮ ಬೆಂಗ್ಳೂರು ಮತದಾನದ ದಿನ “ಆಲಸಿ ಬೆಂಗಳೂರು” ಯಾಕಾಯ್ತೂ…?!

29 ಮಾರ್ಚ್ 10
 
 
 
ಮತದಾನದ ಮುನ್ನಾದಿನ:
 
“ಅಕ್ಕಾವ್ರೇ…ಅಕ್ಕಾವ್ರೇ…”
 
ನಮ್ಮ ಬಾಗಿಲಿನಲ್ಲಿ ನಿಂತು ಯಾರೋ ಕರೆಯುತ್ತಿದ್ದರು.
 
 
ನನ್ನಾಕೆ ಬಾಗಿಲು ತೆರೆದು ನೋಡಿದರೆ, ನೆರೆಮನೆಯ ಕೆಲಸದಾಕೆ ಮುನಿಯಮ್ಮ ನಿಂತಿದ್ದಳು.
 
“ಏನಮ್ಮಾ…? ಏನು ಬೇಕಿತ್ತು?”
 
“ಏನೂ ಇಲ್ಲ ಅಕ್ಕಾವ್ರೇ… ಅಲ್ಲಿ ಎಲ್ರಿಗೂ ಕಾಸ್ ಕೊಡ್ತಾವ್ರೇ…ನಾನೂ ಇಸ್ಕಂಡ್ ಬಂದೆ… ನಿಮ್ಗೂ ಹೇಳಾವ ಅಂತ ಕೂಗ್‍ದೇ..ಅಕ್ಕಾವ್ರೇ”
 
“ಹೌದಾ… ಎಷ್ಟು ಕಾಸು ಸಿಗ್ತು ನಿಂಗೆ?”
 
“ನನಗೆ ಒಂದ್ ಸಾವ್ರಾ  ಕೊಟ್ರಕ್ಕಾವ್ರೇ…ನಮ್ಮೆಜ್ಮಾನ್ರಿಗೆ…ಐನೂರ್ ಜಾಸ್ತಿ ಕೊಟ್ಟವ್ರೇ…”
 
“ಯಾವ ಪಕ್ಷದೋರಮ್ಮಾ…?”
 
“ನಿನ್ನೆ ಕೊಟ್ರಲ್ಲಾ ಅವ್ರು ದಳದೋರಂತೆ…ಅಕ್ಕಾವ್ರೇ…ಇವತ್ತ್ ಕೊಡ್ತಿರಾದು.. ಕಮಲ್ದ ಪಕ್ಷದೋರಂತೆ…”
 
“ಓಹೋ ನಿನ್ನೇನೂ ತಕ್ಕೋಂಡಿದ್ಯಾ…”
 
“ಕೋಡೋವಾಗ ಬ್ಯಾಡಾಂತ ಹೆಂಗನ್ಲೀ..ಅಕ್ಕಾವ್ರೇ?  ನಾವ್ ತಕ್ಕಂಡಿಲ್ಲಾಂದ್ರೆ ಅವ್ರೆಲ್ಲಾ ತಿಂದ್ ಹಾಕಾಕಿಲ್ವಾ…? ಅಲ್ದೇ ಈ ಕಮಲ್ದ ಪಕ್ಷ ಕೊಡ್ತಿರಾದ್ ಸರ್ಕಾರದ್ ದುಡ್ಡು…ಸರ್ಕಾರದ್ ದುಡ್ಡ್ ನಮ್ಮ್ ದುಡ್ಡೆ ಅಲ್ವಾ ಅಕ್ಕಾವ್ರೇ? ಅದೂನ್ನಾ ಬ್ಯಾಡಾನ್ನಾಕ್ಕಾಯ್ತದಾ?”
 
“ಸರೀನಮ್ಮಾ…ಒಟ್ಟ್ ಎಷ್ಟ್ ಕಾಸ್ ಬಂತು ನಿಮ್ ಮನೆಗೆ..?”
 
“ಎಲ್ಡು ಪಾರ್ಟೀದು ಸೇರ್ ನಾವ್ ಮೂರ್ ಜನಾಕೆ ನಾಲ್ಕೂವರೆ ಸಾವ್ರಾ ಬಂದದೆ ಅಕ್ಕಾವ್ರೇ…”
 
“ಸರಿ ಬಿಡು ಈ ಚುನಾವಣೆಯಿಂದ ನಿಮಗಾದ್ರೂ ಲಾಭ ಆಯ್ತಲ್ವಾ …?”
 
ನಕ್ಕು ನಡೆದಿದ್ದಳು ಮುನಿಯಮ್ಮ…
 
 
 
ಮತದಾನದಂದು ಸಾಯಂಕಾಲ:
 
ನೆರೆಮನೆಗೆ ಕೆಲಸಕ್ಕಾಗಿ ದಿನಾ ಬೆಳಿಗ್ಗೆ ಬರುತ್ತಿದ್ದ ಮುನಿಯಮ್ಮ, ಅಂದು ಸಾಯಂಕಾಲ ಬರುತ್ತಿದ್ದುದನ್ನು ಕಂಡು ನನ್ನಾಕೆ ಕರೆದು ಕೇಳಿದಳು
 
“ಏನ್ ಮುನಿಯಮ್ಮಾ…ವೋಟ್ ಹಾಕಿದ್ರೇನಮ್ಮಾ…?”
 
“ಇಲ್ಲಾ ಅಕ್ಕಾವ್ರೇ..”
 
“ಅದ್ಯಾಕ್ ಮುನಿಯಮ್ಮಾ… ಅಷ್ಟೊಂದು ಕಾಸು ತಗೋಂಡು ವೋಟ್ ಹಾಕ್ದೇ ಹೆಂಗಿದ್ರೀ ನೀವು?
 
“ಇಲ್ಲಾ ಅಕ್ಕಾವ್ರೇ ನಾನ್ ಹೋಗಾಣಂತಿದ್ದೆ… ನಮ್ಮೆಜ್ಮಾನ್ರೇ ಹೇಳಿದ್ರು… ಯಾರ್ಗೂ ಮೋಸ ಮಾಡ್ಬಾರ್ದೂ … ಎಲ್ಡು ಪಾರ್ಟೀಯವ್ರೂ ಕಾಸ್ ಕೊಟ್ಟವ್ರೇ…ಯಾರಿಗ್ ವೋಟ್ ಹಾಕಿದ್ರೂ…ಇನ್ನೊಬ್ರಿಗೆ ಮೋಸ ಮಾಡ್‍ದಂಗೇ… ನಮ್ಮನ್ನ..ನಿಯತ್ತ್ ಇಲ್ದೋರ್ ಅಂತಾರೆ… ಹಂಗಾಗಿ…ನಾವ್ ಹೋಗಾದೇ ಬೇಡಾ ಅಂದ್ಬಿಟ್ರು…”
 
“ಅಯ್ಯೋ ದೇವ್ರೇ…ಹೀಗೆಲ್ಲಾ ಮಾಡ್ಬಾರ್ದಮ್ಮಾ…ವೋಟ್ ಹಾಕ್ದೇ ಇರ್ಬಾರ್ದಮ್ಮಾ…”
 
 
“ನೀವ್ ಹೇಳಾದೂ ಸರೀನೇ ಅಕ್ಕಾವ್ರೇ… ಆದ್ರೆ ನಮ್ಮೆಜ್ಮಾನ್ರ್ ಮಾತ್ನ ಮೀರಕ್ಕಾಯ್ತದಾ? ಅಲ್ದೇ…ನಿನ್ನೆ ರಾತ್ರಿ ಕಾಂಗ್ರೇಸ್ ಲೀಡ್ರು ಗಿರೀಶಪ್ಪಾ ಮೂರ್ ಇಸ್ಕಿ ಬಾಟ್ಲಿ ಬೇರೆ ಕೊಡ್ಸಿದ್ರಾ… ಅದ್ರಾಗ್ ನಂಗೂ ವಸಿ ಬಗ್ಸಿ ಕೊಟ್ಟಿದ್ರು… ನಮ್ಮೆಜ್ಮಾನ್ರು. ಹಂಗಾಗಿ ಮುಂಜಾನಿಂದ ನಂಗೂ ತಲೀನೋವು ಅಕ್ಕಾವ್ರೇ…  ಹಂಗಾಗಿ ನಾನೂ ಮನೀಕ್ಕಂಡಿದ್ದೆ..  ಈವಾಗಷ್ಟೇ ಎದ್ ಈಕಡಿಗ್ ಬಂದೆ ಅಕ್ಕಾವ್ರೇ…..”
 
ಈವಾಗ್ ಕೇಳ್ತೀರಾ ನಮ್ ಬೆಂಗ್ಳೂರು ಮತದಾನದ ದಿನ “ಆಲಸಿ ಬೆಂಗಳೂರು” ಯಾಕಾಯ್ತೂ…ಅಂತಾ?
 
*********************
 
 
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ನಿನ್ನೆ (೨೮ ಮಾರ್ಚ್ ೨೦೧೦ರಂದು) ನಡೆದಿತ್ತು.
 
 

ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ?

19 ಮಾರ್ಚ್ 10

 

ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ

ದುಃಖವನು ನಾನರಿತರೂ ಹೇಗೆ ಹಂಚಿಕೊಳ್ಳಲಿ

 

ಅವರಿಗೆ ಅಲ್ಲಾದ ನಷ್ಟವನು ಅವರಷ್ಟೇ ಅರಿವರು

ನಮ್ಮ ನುಡಿಗಳಿಂದ ಆ ನೋವನೆಂತು ಮರೆವರು

 

ಆತ್ಮವಿಲ್ಲದ ದೇಹಕ್ಕೆ ಎಲ್ಲಾ ಮಂದಿ ನಮಿಸುವರು

ದೇಹಕ್ಕೆ ನಮಿಸಿದರೆ ಅಲ್ಲಿ ಇದ್ದವರಷ್ಟೇ ಅರಿವರು

 

ಶವ ಯಾರದ್ದೇ ಆದರೂ ಮನವ ಕರಗಿಸುವುದು

ನಮ್ಮಂತ್ಯದ ಚಿತ್ರವನು ಮನದಿ ಬಿಂಬಿಸುವುದು

 

ಆ ಅರೆಗಳಿಗೆ ಮನಸ್ಸು ಮುದುಡುವುದಷ್ಟೇ ನಿಜ

ಮತ್ತಿತ್ತ ಬಂದರೆ ಮರೆತು ಹೋಗುವುದೆಲ್ಲ ಸಹಜ

 

ಆ ಚಿತ್ರಗುಪ್ತನಿಗೆ ಈ ಸಾವುಗಳೆಲ್ಲ ಯಾವ ಲೆಕ್ಕ

ಆತನಿಗೋ ಈ ಹುಟ್ಟು ಸಾವುಗಳೆಲ್ಲ ಬರಿಯ ಲೆಕ್ಕ

 

ನಮ್ಮದೀ ಜೀವನದಿ ನಮ್ಮದೆಂದು ಏನಿಲ್ಲ ಪಕ್ಕಾ

ಶೂನ್ಯವನೇ ಸೇರುವುದೀ ಕೂಡು ಕಳೆಯುವ ಲೆಕ್ಕ

*****

 

 “ನನ್ನ ಸಹೋದ್ಯೋಗಿಯೋರ್ವರ ತಾಯಿ ನಿನ್ನೆ ರಾತ್ರಿ ಸ್ವರ್ಗಸ್ಥರಾದರು.

ಇಂದು ಮುಂಜಾನೆ ಅಂತಿಮ ದರ್ಶನ ಪಡೆದು ಹಿಂತಿರುಗಿದಾಗ

ಆಸುಮನದಲ್ಲಿ ಮೂಡಿದ ಭಾವನೆಗಳು ಅಕ್ಷರರೂಪ ಪಡೆದದ್ದು ಹೀಗೆ”


ನಾವೆಲ್ಲಾ ಒಂದೇ ಆಗಿರಲು ನಮಗಿರಲಿ ಒಂದೇ ಮಾನ!!!

17 ಮಾರ್ಚ್ 10

 

 

ಚಾಂದ್ರಮಾನ ಸೌರಮಾನವೆಂಬ ಈ ಭೇದಭಾವವೇಕೆ

ನಾವು ಹಿಂದುಗಳು ಒಂದೇ ಮಾನದವರಾಗಬಾರದೇಕೆ

 

ನೆರೆಯ ಮನೆಯಲ್ಲಿ ಯುಗಾದಿ ಆಚರಣೆ ನಡೆಯುತ್ತಿರಲು

ಪಕ್ಕದ ಮನೆಯ ಮಕ್ಕಳೇಕೆ ಕಾಯಬೇಕೊಂದು ತಿಂಗಳು

 

ಇಡೀ ನಾಡು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಿ ಮುಗಿಸಿದ್ದಾಗ

ಉಡುಪಿ ಮಠದದವರು ಕಳೆದ ವರ್ಷ ಹಾಡಿದ್ದು ಬೇರೆ ರಾಗ

 

ಚಾಂದ್ರ – ಸೌರಮಾನಗಳ ನಡುವಲ್ಲಿ ದೇವರ ಅಪಮಾನ

ಎರಡು ಜನ್ಮದಿನ ಆಚರಿಸಿದರೆ ಆದೀತೆ ಹೆಚ್ಚಿನ ಸನ್ಮಾನ

 

ಭವಿಷ್ಯ ನುಡಿಯುವುದಕೂ ಇಲ್ಲ ನೋಡಿ ಏಕ ಮಾನದಂಡ

ರಾಶಿಯಲಿ ಶುಕ್ರದೆಸೆ, ಲಗ್ನ ನೋಡಿ ಇದೆಯೆಂಬರು ಗಂಡ

 

ರಾಶಿ, ಮಾಸ,  ತಿಂಗಳು, ಲಗ್ನಗಳಲಿ ಹೋಗದಿರಲಿ ಮಾನ

ನಾವೆಲ್ಲಾ ಒಂದೇ ಆಗಿರಲು ನಮಗಿರಲಿ ಒಂದೇ ಮಾನ!!!

******

 


ನಿತ್ಯಾನಂದನ ಮಾತಿನಲ್ಲೂ ಇದೆಯಂತೆ ಸತ್ಯ!?

15 ಮಾರ್ಚ್ 10

 

“ಬ್ರಹ್ಮಚರ್ಯ ಎನ್ನುವುದು ವಾಸ್ತವಿಕ ಮಿಥ್ಯ

ನಿತ್ಯಾನಂದನ ಮಾತಿನಲ್ಲೂ ಇದೆ ಸ್ವಲ್ಪ ಸತ್ಯ” 

 

ಹೀಗೆಂದು ವಾದಿಸುವ ಬಂಧುಗಳಿಗೆ ಕಿವಿಯಾದೆ

ಸ್ವಾಮಿಯನು ಬೆಂಬಲಿಸುತಿರುವುದಕೆ ದಂಗಾದೆ 

 

ಬ್ರಹ್ಮಚರ್ಯ ಕಡ್ಡಾಯ ಅಲ್ಲ ಅನ್ನುವುದೂ ಸರಿ

ಆದರೆ ನಿತ್ಯಾನಂದ ಆಗಲೇ ಬೇಕಿತ್ತೆ ವ್ಯಭಿಚಾರಿ 

 

ಬ್ರಹ್ಮಚಾರಿಯಾಗಿ ಇರಲಾಗದವನು ಆಗಲಿ ಗೃಹಸ್ಥ

ಕಂಡೆಲ್ಲ ಹೆಣ್ಣುಗಳ ಮೇಲೆ ಹರಿಯ ಬಿಡಲೇಕೆ ಚಿತ್ತ 

 

ವ್ಯಕ್ತಿ ಹೀಗೆಯೇ ಇರಬೇಕೆಂದು ಹೇಳುವುದಿಲ್ಲ ಜನ

ನುಡಿಯಂತೆ ನಡೆಯನ್ನು ನಿರೀಕ್ಷಿಸುವುದು ಅವರ ಮನ 

 

ಆದರಣೀಯನಾದರೆ ಆದರ್ಶಪ್ರಾಯನೂ ಆಗಿರಬೇಕು

ಸದಾ ತೆರೆದ ಪುಸ್ತಕದಂತೆ ಆತನ ಜೀವನ ಇರಬೇಕು 

 

ಮನೆಗೆ ಕನ್ನ ಹಾಕಿದರೊಮ್ಮೆ ಮನಸ್ಸು ಕ್ಷಮಿಸಬಹುದು

ನಂಬಿಕೆ ದ್ರೋಹ ಮಾಡಿದವನನ್ನು ಎಂದಿಗೂ ಕ್ಷಮಿಸದು

*********


ಭಾಷೆಗಳ ವಿಲೀನ – ಕನ್ನಡ ಮಲಿನ!!!

11 ಮಾರ್ಚ್ 10

 

( ೨೦೧೦ರ ಸುಧಾ – ಯುಗಾದಿ ವಿಶೇಷಾಂಕದ  ಓದುಗರ ವೇದಿಕೆಯಲ್ಲಿ ಪ್ರಕಟವಾದ ಬರಹದ ಪೂರ್ಣ ಪಾಠ ಇಲ್ಲಿದೆ)

ಒಂದು ಮನದ ಭಾವನೆಗಳನ್ನು ಇನ್ನೊಂದು ಮನಕ್ಕೆ ತಲುಪಿಸುವ ಮಾಧ್ಯಮವೇ ಭಾಷೆ. ನಮ್ಮ ದೇಶದಲ್ಲಿ ಇರುವಷ್ಟು ವೈವಿಧ್ಯಮಯ ಭಾಷೆಗಳು ಬೇರೆಲ್ಲೂ ಕಾಣಸಿಗವು ಅನ್ನಬಹುದೇನೋ. ಪ್ರತೀ ಭಾಷೆಯೂ ತನ್ನದೇ ಆದ ವೈಶಿಷ್ಟ್ಯತೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋದರೆ ಮಾತ್ರ ಆ ಭಾಷೆ ಉಳಿಯಲು ಸಾಧ್ಯ.

ನಮ್ಮ ಭಾಷೆಯಲ್ಲಿ ಪದಪ್ರಯೋಗ ರೀತಿ ಮತ್ತು ಪದಗಳ ಸರಿಯಾದ ಉಚ್ಛಾರವನ್ನು ತಿಳಿದುಕೊಳ್ಳುವಲ್ಲಿ ಆಕಾಶವಾಣಿ ಹಾಗೂ ದೂರದರ್ಶನದ ವಾಹಿನಿಗಳು ಪ್ರಮುಖವಾಗಿ ಸಹಕಾರಿಯಾಗುತ್ತವೆ. ಉದ್ಘೋಷಕರು ಮತ್ತು ವಾರ್ತಾ ಓದುಗರು ಮಾಡುವ ಪದಪ್ರಯೋಗ ಮತ್ತು ಉಚ್ಛಾರಗಳನ್ನು ಶ್ರೋತೃಗಳು ಆಲಿಸಿ, ಅನುಸರಿಸುವುದು ಸಾಮಾನ್ಯ. ಹಾಗಾಗಿ, ಆಕಾಶವಾಣಿ ಮತ್ತು ದೂರದರ್ಶನ ಇವೆರಡರಲ್ಲೂ ಬಳಕೆಯಾಗುವ ಭಾಷೆ ಉತ್ತಮ ಮಟ್ಟದ್ದಾಗಿರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ, ಆಕಾಶವಾಣಿ ಮತ್ತು ದೂರದರ್ಶನದ  ಹೆಚ್ಚಿನೆಲ್ಲಾ ಖಾಸಗೀ ವಾಹಿನಿಗಳು, ಆಂಗ್ಲ, ಹಿಂದಿ ಮತ್ತು ಇತರ ಭಾಷಾ ಪದಗಳಿಂದ ಮಿಶ್ರಿತವಾದ  ಕನ್ನಡವನ್ನು ಬಳಸುತ್ತಿರುವುದರಿಂದ ಕನ್ನಡ ಭಾಷೆ ತನ್ನತನವನ್ನು ಕಳೆದುಕೊಳ್ಳುತ್ತಿದೆಯೇನೋ ಅನ್ನುವ ಭಯ ಕಾಡತೊಡಗಿದೆ.

ಮೊದಮೊದಲಿಗೆ, ನಮ್ಮ ಭಾಷೆಯಲ್ಲಿ ಸರಿಯಾದ ಪದಗಳು ಸಿಗದಾದಾಗ, ಪರ ಭಾಷಾ ಪದಗಳನ್ನು ಅನಾಯಾಸವಾಗಿ ಬಳಸಿಕೊಳ್ಳಲು ಆರಂಭ ಮಾಡಿ, ನಂತರ ಆ ಪದಗಳನ್ನು  ಕನ್ನಡದೊಂದಿಗೆ ವಿಲೀನಗೊಳಿಸಿಕೊಂಡು ಬಳಸುತ್ತಲೇ ಹೋಗುತ್ತಾರೆ. ಹಾಗಾಗಿ ಆ ಪದಗಳು ಕನ್ನಡದವೇನೋ ಅನ್ನುವಷ್ಟು ಹಾಸುಹೊಕ್ಕಾಗಿ ಬಿಟ್ಟಿರುತ್ತವೆ. ಇದು ಹೀಗೆಯೇ ಮುಂದುವರಿದರೆ, ಮುಂದಿನ ಜನಾಂಗದ ಮಕ್ಕಳಿಗೆ ಆ ಪದಗಳು ಕನ್ನಡದವಲ್ಲವೆಂದು ನಂಬಲೂ  ಕಷ್ಟವಾದೀತು.

ಉದ್ಘೋಷಕರಿಗೆ ಮತ್ತು ವಾರ್ತಾ ಸಂಪಾದಕರಿಗೆ ನಮ್ಮ ಭಾಷೆಯ ಮೇಲೆ ಸಮಗ್ರ ಜ್ಞಾನ, ಹಿಡಿತ ಮತ್ತು ಅಭಿಮಾನ ಇರಬೇಕಾದುದು ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ ಪ್ರಚಲಿತವಾಗಿರುವ ಸ್ವಭಾಷಾ ನಿರಭಿಮಾನ ಹಾಗೂ ನಿಯಂತ್ರಣ ಮತ್ತು ಪರಿಶ್ರಮ ರಹಿತವಾದ ಉದ್ಯೋಗ ಶೈಲಿಯೇ ಈ ಸಮಸ್ಯೆಗೆ ಕಾರಣವಾಗಿದೆಯೇನೋ ಅನಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬನ ದೃಷ್ಟಿಕೋನವೂ ಬದಲಾಗಬೇಕು. “ಹೇಗಿದ್ದರೂ ಸರಿ, ನಡೆಯುತ್ತದೆ ಬಿಡಿ”, ಎನ್ನುವ ಮನೋಭಾವನೆಯಿಂದ ಪ್ರತಿಯೊಬ್ಬನೂ ಹೊರಬರಬೇಕು.

ಆಂಗ್ಲ ಬಾಷೆಯಂತೆ ಕನ್ನಡ ಭಾಷೆಯೂ ಕೂಡ, ತನ್ನ ಮಡಿವಂತಿಕೆಯನ್ನು ತೊರೆದು, ಪರಭಾಷಾಪದಗಳನ್ನು ತನ್ನೊಳಗೆ ಸೇರಿಸಿಕೊಂಡು ಬೆಳೆಯಬೇಕು ಎನ್ನುವ ಮಾತುಗಳೇ ಈಗ ಎಲ್ಲೆಡೆ ಕೇಳಿಬರುತ್ತಿವೆ. ಅದರೆ, ತನ್ನತನವನ್ನು ತೊರೆದು ಗಳಿಸಿದ ಸಂಪತ್ತಿಗೆ ಹೇಗೆ ಬೆಲೆ ಇರುವುದಿಲ್ಲವೋ, ಹಾಗೇಯೇ ತನ್ನದಲ್ಲದ ಪದಗಳಿಂದ ಸಂಪಧ್ಭರಿತವಾದ ಭಾಷೆಯೂ ಸ್ವಂತಿಕೆ ಇಲ್ಲದೆ ತನ್ನ ಬೆಲೆಯನ್ನು ಕಳೆದುಕೊಳ್ಳುತ್ತದೆ.

ನಮ್ಮ ಬಾಷೆಯನ್ನು ಬಳಸಿ, ಉಳಿಸಿ, ಬೆಳೆಸಲು ಆಕಾಶವಾಣಿ ಮತ್ತು ದೂರದರ್ಶನ ವಾಹಿನಿಗಳ ಪ್ರತಿಯೊಬ್ಬ ಉದ್ಘೋಷಕ, ಲೇಖಕ ಮತ್ತು ಸಂಪಾದಕನೂ ಮನಸ್ಸು ಮಾಡಿ, ತನ್ನ ಪಾಲಿನ ಸೇವೆ ಮಾಡುತ್ತಿರಬೇಕು. ಆಗಷ್ಟೇ ನಮ್ಮ ಭಾಷೆ ಉಳಿಯಲು ಮತ್ತು ಬೆಳೆಯಲು ಸಾಧ್ಯ.

*****


ಸ್ನೇಹಕ್ಕೆ ಸಂಬಂಧಗಳ ಅಡ್ಡ ಹೆಸರುಗಳೇಕೆ ಬೇಕು?

11 ಮಾರ್ಚ್ 10

 

“ಪ್ರಪಂಚದಲ್ಲಿ ಮಿಕ್ಕೆಲ್ಲಾ ಸಂಬಂಧಗಳಿಗಿಂತ

ಸ್ನೇಹ ಸಂಬಂಧಕ್ಕೇ ಸಿಗುವುದು ಗೆಲುವು

 

ಪ್ರೌಢರಾದ ಮೇಲೆ ಒಡಹುಟ್ಟಿದವರನ್ನೂ

ಸ್ನೇಹಿತರಂತೆ ನೋಡಿದರಷ್ಟೇ ಚೆಲುವು

 

ಸ್ನೇಹಿತರಂತೆಯೆ ಇರುವ ದಂಪತಿಗಳೂ

ಬೆಳೆಸಿಕೊಳ್ಳಬಲ್ಲರು ತಮ್ಮ ನಡುವೆ ಒಲವು

 

ಅಪ್ಪ ಮಕ್ಕಳೂ ಸ್ನೇಹಿತರಾಗಿ ಇರಬೇಕು

ಎನ್ನುವ ಮಾತಿಗೇ ಈಗ ಎಲ್ಲರ ಒಲವು”

 

ಇಂತಹ ಮಾತುಗಳು ನಮ್ಮ ಕಿವಿಗಳಿಗೆ

ಬೀಳುತ್ತಲೇ ಇರುತ್ತವೆ ದಿನ ಪ್ರತಿ ದಿನವೂ

 

ಸ್ನೇಹ ತಳವೂರಿದ ಮೇಲೆ ಸ್ನೇಹಿತರ ನಡುವೆ

ಸಂಬಂಧಗಳ ಕಲ್ಪಿಸಿಕೊಳ್ಳುವುದೇಕೆ ನಾವು?

 

ನಮ್ಮ ಸ್ನೇಹಿತೆಯರನ್ನು ಬರಿಯ ಸ್ನೇಹಿತೆಯರಲ್ಲ

ಸಹೋದರಿಯರಂತೆ ಅಂತನ್ನುವುದೇಕೆ ನಾವು?

 

ಸ್ನೇಹಿತರನ್ನು ಸ್ನೇಹಿತರಿಗಿಂತಲೂ ಹೆಚ್ಚಾಗಿ

ಸಹೋದರರಂತೆ ಅಂತನ್ನುವುದೇಕೆ ನಾವು?

 

 

ಸ್ನೇಹಕ್ಕೆ ಸಂಬಂಧಗಳ ಅಡ್ಡ ಹೆಸರನ್ನು ನೀಡಿ

ವೈರುಧ್ಯದ ಪ್ರದರ್ಶನ ಮಾಡುವುದೇಕೆ ನಾವು?

 

ಸ್ನೇಹವನು ಬರಿಯ ಸ್ನೇಹವಾಗಿಯೇ ಉಳಿಸಿ

ಬೆಳೆಸಿಕೊಂಡು ಹೋಗಲಾರೆವೇನು ನಾವು?

**************************


ಪರಾವಲಂಬಿಯಾದರೆ ಕೊನೆಗೂ ಸೋಲು!!!

10 ಮಾರ್ಚ್ 10

  

 ವಿಧವೆಯನು ವರಿಸಿದನಂದು ಆ ಮಹಾನ್ ಪುರುಷ

ಆತನ ದೃಷ್ಟಿಯಲಿ ಇದ್ದದ್ದು ಬರೀ ತನ್ನದೇ ಹರುಷ

 

ವಿಧವೆಯ ಪುತ್ರನನು ಒಲವಿಲ್ಲದೇ ನಿರ್ಲಕ್ಷ್ಯದಿ ಸಾಕಿ

ತನ್ನ ಪುತ್ರನ ಕಾಳಜಿಯಿಂದ ಬೆಳೆಸಿ ಮಾಡಿದ ಶೋಕಿ

 

ಹಿರಿಯ ಮಗನಾದರೆ ತನ್ನ ಬಲದಿಂದಲೇ ಜಗವ ಗೆದ್ದ

ಕಿರಿಯವನು ಸದಾ ಪರಾವಲಂಬಿಯಾಗಿಯೇ ಇರುತ್ತಿದ್ದ

 

ಕಿರಿಯನ ಬೆಳೆಸಿ ಚಕ್ರವರ್ತಿಯಾಗಿಸುವಾಸೆ ಆತನಿಗಿತ್ತು

ಹಿರಿಯನನು ಕೊನೆಗೆ ಒಳಸಂಚಿನಿಂದ ಮುಗಿಸಬೇಕಿತ್ತು

 

ತಾನೆಣಿಸಿದ ಕಾರ್ಯ ನಡೆಯಲೇ ಇಲ್ಲ ನೋಡಿ ಹೇಗೂ

ಹಿರಿಯನೆದುರು ಕಿರಿಯ ಸೋತು ಮರೆಯಾದ ಕೊನೆಗೂ

*******

ಟೈಮ್ಸ್ ಆಫ್ ಇಂಡಿಯಾ (ಆಂಗ್ಲ) ದ ಬರಿಯ ಕನ್ನಡ ಅನುವಾದ ರೂಪವಾಗಿದ್ದ ಟೈಂಸ್ ಆಫ್ ಇಂಡಿಯಾ (ಕನ್ನಡ) ಪತ್ರಿಕೆ ಇಂದಿನಿಂದ ಪ್ರಕಟವಾಗುವುದಿಲ್ಲ ಎಂಬ ಸುದ್ದಿ ಓದಿದಾಗ ಆಸುಮನದಲ್ಲಿ ಮೂಡಿದ ಭಾವನೆಗಳು ಅಕ್ಷರ ರೂಪ ತಾಳಿದ್ದು ಹೀಗೆ.

 


ಇದುವರೆಗೆ ಪುರುಷರಿಗೆ ಸಮಾನರೆಂದು ತಿಳಿದಿದ್ದೆವು ನಾವು!!!

08 ಮಾರ್ಚ್ 10

 

“ಸಖೀ ಯಾಕಿಂದಿಲ್ಲಿ ಈ ರೀತಿ ಮೋಡ ಕವಿದ ವಾತಾವರಣ

ಮಹಿಳಾ ದಿನದಂದೇ ಏಕೆ ನಿನ್ನೀ ಮೊಗದ ಸಂತಸ ಹರಣ

 

ಸೂರ್ಯೋದಯಕೆ ಮೊದಲೇ ನಾನಿನಗೆ ಶುಭ ಹರಸಿಯಾಗಿದೆ

ನಿನ್ನೀ ಮುನಿಸಿಗೆ ಕಾರಣವೇನೆಂದೆನಗೆ ತಿಳಿಯ ಬೇಕಾಗಿದೆ”

 

“ನಿಮಗೊಂದಿಷ್ಟೂ ಗೊತ್ತಾಗೋದಿಲ್ಲ ಈ ಮಹಿಳೆಯರ ಕಷ್ಟ

ಮೀಸಲಾತಿ ತರುತ್ತಿದ್ದಾರೆ ನೋಡಿ ನಮಗಿಲ್ಲದಿದ್ದರೂ ಇಷ್ಟ

 

ಸರ್ಕಾರ ಅಂತಿದೆ ಇದು ಎಲ್ಲಾ ಮಹಿಳೆಯರಿಗೆ ಬಹುಮಾನ

ಬಹುಮಾನ ಅಲ್ಲವದು ಭಾರತೀಯ ಸ್ತ್ರೀಯರಿಗೆ ಅಪಮಾನ

 

ಇದುವರೆಗೆ ಪುರುಷರಿಗೆ ಸಮಾನರೆಂದು ತಿಳಿದಿದ್ದೆವು ನಾವು

ಇನ್ನು ಬರೀ ಮೂವತ್ಮೂರು ಉಳಿದ ಅರುವತ್ತ ಏಳು ನೀವು

 

ಮಹಿಳೆಯರಿನ್ನು ಯಾವ  ವಿಷಯಕ್ಕೆ ಹೋರಾಡುವುದು ಹೇಳಿ

ಹೀಗೆ ಹೋರಾಡುವವರ ಬಾಯ್ಮುಚ್ಚಿಸಿದರಲ್ಲಾ ನೀವೇ ಹೇಳಿ

 

ಈ ದಿನವನ್ನೂ ಕೂಡ ಸಂತಸದಿ ಆಚರಿಸಲು ಬಿಡಲಿಲ್ಲ ಏಕೆ

ಅವರ ರಾಜಕೀಯದಾಟಕ್ಕೆ ಮಹಿಳೆಯರನ್ನು ಬಲಿ ಕೊಡಬೇಕೆ?”

************************************


ಯಾಕೆ? … ಸಂಪರ್ಕ!!!… ಹಳಸುತ್ತವೆ!!!

04 ಮಾರ್ಚ್ 10

ಯಾಕೆ?

ಸಖೀ,

ನನ್ನ

ಮೇಲಿನ

ಮುನಿಸಿಗೆ

ಅನ್ಯರ

ನೆಪ

ಯಾಕೆ?

 

ಮುನಿಸಿದ್ದರೆ

ಇದೆಯೆನ್ನು

ಅದಕ್ಕೆ

ಮುಜುಗರ

ಯಾಕೆ?

********

 

ಸಂಪರ್ಕ!!!

ಸಖೀ,

ಹೃದಯಗಳ

ನಡುವೆ

ಇದ್ದರೂ

ಪ್ರೀತಿಯ

ಒರತೆ,

 

ಇರಬಾರದು

ಎಂದಿಗೂ

ಸಂಪರ್ಕದ

ಕೊರತೆ;

 

ಸಂಪರ್ಕ

ಆದರೆ

ಒಂದು

ವೇಳೆ

ವಿರಳ,

 

ಉಳಿಯದು

ಪ್ರೀತಿಯೂ

ವರ್ಷಗಳು

ಬಹಳ!!!

*******

 

ಹಳಸುತ್ತವೆ!!!

ಸಖೀ,

ಸಂಬಂಧಗಳೂ

ಹಳಸುತ್ತವೆ

ದಿನ

ಕಳೆದಂತೆ,

 

ದಿನಗಳು

ಕಳೆದರೆ

ಹಳಸುವ

ಆಹಾರದಂತೆ;

 

ಸಂಬಂಧಗಳಿಗೆ

ಬೇಕು

ಒಲವಿನ

ಒಡನಾಟ

ತಿಕ್ಕಾಟ

ಆಗಾಗ,

 

ಬಿಸಿಯಾಗಿ

ಅಥವಾ

ತಂಪಾಗಿರಿಸಿ

ಇರಿಸಿದರೆ

ಆಹಾರವೂ

ಕೆಡುವುದಿಲ್ಲ

ನೋಡು

ನೀನಾಗ!!!

*******


ಮಾನ್ಯ ಲೋಕಾಯುಕ್ತರೇ ದಯವಿಟ್ಟು ರಾಜೀನಾಮೆ ನೀಡಿ!!!

02 ಮಾರ್ಚ್ 10

 

“ಬೆಂಗಳೂರು, ಮಾ.1 : ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ [^]ರ ಕೈಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದ ಕೆಜಿಎಫ್ ಶಾಸಕ ವೈ ಸಂಪಂಗಿ ಆರೋಪದಿಂದ ಮುಕ್ತರಾಗಿದ್ದು, ಶಾಸಕರ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಯತ್ನಿಸಿದ ಫಾರೂಕ್ ಎಂಬುವವರ ವಿರುದ್ಧ ವಾಗ್ದಂಡನೆ ವಿಧಿಸಬೇಕು ಎಂದು ಪ್ರಕರಣಕ್ಕೆ ಸಂಬಂಧಿಸಿ ಸರಕಾರ ರಚಿಸಿದ್ದ ಸದನ ಸಮಿತಿ ವರದಿ ನೀಡಿದೆ. ..”

 http://thatskannada.oneindia.in/news/2010/03/01/bribe-case-kgf-mla-sampangi-gets-clean-chit.html

ಈ ಸುದ್ದಿಯನ್ನು ಓದಿ, ಕೇಳಿ, ನೋಡಿ, ತಿಳಿದಾಗ ನನ್ನ ಮನದಲ್ಲಿ ಮೂಡಿದ ಅನಿಸಿಕೆಗಳಿವು.

ಅವುಗಳನ್ನು ಇಲ್ಲಿ ಅಕ್ಷರ ರೂಪದಲ್ಲಿ ಹೊರಹಾಕುತ್ತಿದ್ದೇನೆ :

 “ಮಾನ್ಯ ಲೋಕಾಯುಕ್ತರೇ ದಯವಿಟ್ಟು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ.

ಲಂಚ ಸ್ವೀಕರಿಸುತ್ತಿದ್ದಾಗ ನಿಮ್ಮ ತಂಡದ ಕೈಗೆ ಸಿಕ್ಕಿ ಬಿದ್ದಾತನನ್ನು ಆರೋಪ ಮುಕ್ತ ಗೊಳಿಸಿದ ಮತ್ತು ಆತನ ಮೇಲೆ ದೂರು ನೀಡಿದವರ ವಿರುದ್ಧ ವಾಗ್ದಂಡನೆ ವಿಧಿಸಬೇಕು ಎಂದು ಶಿಫಾರಸು ಮಾಡಿರುವ, ಸರಕಾರವೇ  ರಚಿಸಿರುವ ಸಮಿತಿಯ ವರದಿ, ಪರೋಕ್ಷವಾಗಿ ನಿಮ್ಮನ್ನೇ ತರಾಟೆಗೆ ತೆಗೆದುಕೊಂಡಿದೆ ಅಂತ ಅನ್ನಿಸುವುದಿಲ್ಲವೇ? ದೂರು ನೀಡಿದ್ದು ತಪ್ಪು ಅಂತಾದರೆ ಆ ತಪ್ಪು ದೂರಿನನ್ವಯ ಕಾರ್ಯಾಚರಣೆ ನಡೆಸಿದ್ದೂ ತಪ್ಪು ಅಂದ ಹಾಗಾಯ್ತು.

ನೀವು ಮತ್ತು ನಿಮ್ಮ ಲೋಕಾಯುಕ್ತ ತಂಡ ನಡೆಸುವ ಕಾರ್ಯಾಚರಣೆಗಳಿಗೆ ಮತ್ತು ಸಲ್ಲಿಸುವ ವರದಿ ಶಿಫಾರಸ್ಸುಗಳಿಗೆ ಕಿಂಚಿತ್ತೂ ಬೆಲೆ ನೀಡದ ಈ ಜಾಣ ಕಿವುಡು ಸರಕಾರ ನೀಡುವ ಸಂಬಳ ಪಡೆದು, ಅದೇ ಕೆಲ್ಸದಲ್ಲಿ ಮುನ್ನಡೆಯುವ ಅಸಹಾಯಕತೆ ನಿಮಗೇನಿದೆ? ಈ ಹುದ್ದೆಯಲ್ಲಿದ್ದು ನೀವಿನ್ನು ಸಾಧಿಸಬೇಕಾದ್ದು ಏನಿದೆ? ಏನನ್ನಾದರೂ ಸಾಧಿಸಲು ಬಿಟ್ಟಾರೇ? 

ಮುಂದೊಂದು ದಿನ ಈ ಭ್ರಷ್ಟಾಚಾರಿ ರಾಜಕಾರಣಿಗಳ ದಂಡು ನಿಮ್ಮ ತಲೆಯ ಮೇಲೇ ಗೂಬೆ ಕೂರಿಸಿ ನಿಮ್ಮ ಮುಖಕ್ಕೇ ಮಸಿ ಬಳಿಯುವ ಪ್ರಯತ್ನ ಮಾಡದಿರದು ಎಂದು ನಂಬುವುದು ನಮ್ಮಿಂದ  ಅಸಾಧ್ಯ. ಆ ಕರಾಳ ದಿನವನ್ನು ನೋಡುವ ಮೊದಲೇ, ನಿಮ್ಮಲ್ಲಿ ಈ ಕಳಕಳಿಯ ವಿನಂತಿ ಮಾಡುತ್ತಿದ್ದೇನೆ.

ಮಾನ್ಯ ಲೋಕಾಯುಕ್ತರೇ ದಯವಿಟ್ಟು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ”.

– ಆತ್ರಾಡಿ ಸುರೇಶ ಹೆಗ್ಡೆ.