ಮನಸ್ಥಿತಿ!

29 ಆಕ್ಟೋ 14

ಸಖೀ,
ನಮಗೆ ಅತಿ ಪ್ರಿಯರಾದವರ ಪ್ರತಿ ನಡೆಯೂ ನಮಗಿಷ್ಟವಾಗುವುದು ಇದೆ
ಒಂದು ಹಂತದಲ್ಲಿ ಅವರ ಪ್ರತಿ ನಡೆಯನ್ನು ನಾವು ದ್ವೇಷಿಸುವುದೂ ಇದೆ;

ಮನುಜನ ಮನಸ್ಥಿಯ ಅರಿವು ಸುಲಭದಲ್ಲಿ ನಮಗೆ ಆಗುವುದೇ ಇಲ್ಲ ಕೇಳು
ಏಕೆ ಏನು ಎಂದು ವಿಮರ್ಶಿಸುತ್ತಾ ಕೂತುಬಿಟ್ಟರೆ ಬಾಳೆಲ್ಲಾ ಬರೀ ಗೋಳು!


ಹಸನಾಯ್ತು ಬಾಳು!

29 ಆಕ್ಟೋ 14

ಸಖೀ,
ನಿನ್ನ ಮಾತುಗಳಿಗಿಹವು ನೂರೆಂಟು ಅರ್ಥಗಳು
ಅವನ್ನೆಲ್ಲಾ ಅರಿಯಲೆತ್ನಿಸಿದೆ ವ್ಯರ್ಥ ಗೋಳು;

ಕೈಸೋತು ಸುಮ್ಮನೇ ಕೂತುಬಿಟ್ಟಾಗ ನಾನು
ಹೂ ನಗೆಯಿಂದ ಬಾಳು ಹಸನಾಗಿಸಿಹೆ ನೀನು!


ನಕ್ಕು ಸುಮ್ಮನಾಗು!

29 ಆಕ್ಟೋ 14

ಸಖೀ,
ಒಮ್ಮೊಮ್ಮೆ ನಕ್ಕು ಸುಮ್ಮನಾಗು ನೀನು
ಬರಿದೆ ಮಾತಿಗಿಳಿಯಬೇಡ ಇಲ್ಲೆಲ್ಲೆಲ್ಲೂ;

ಜಾಗ್ರತೆಯಿಂದ ಮುನ್ನಡೆಯುತಿರು ನೀನು
ಕೊಚ್ಚೆ ಈ ನಗರದ ಬೀದಿಗಳಲಿ ಎಲ್ಲೆಲ್ಲೂ!


ಇನ್ನು ಮೌನವೇ ಚೆನ್ನ!

29 ಆಕ್ಟೋ 14

ಸಖೀ,
ಮೌನಿಯಾಗಿ ಉಳಿದರೆ ನಾನು ಮಾಗುತ್ತಾ ಸಾಗುವೆ
ಮಾಗಿದಂತೆ ಇನ್ನಿನ್ನೂ ಮೌನಿಯಾಗುತ್ತಾ ಹೋಗುವೆ;

ಮಾತು ಮೌನಗಳ ನಡುವೆ ಅಂತರ ಅತ್ಯಲ್ಪವೇ ಕಣೇ
ಮಾತು ಮಾತುಗಳ ನಡುವೆ ಸುದೀರ್ಘ ಮೌನ ಕಣೇ!


ನಂಬಿಕೆ ಇದೆ!

29 ಆಕ್ಟೋ 14

ಸಖೀ,
ಬಾರದ ನಿನಗಾಗಿ ಕಾಯುವುದರಲ್ಲೂ ಒಂದು ಆನಂದವಿದೆ.
ಏಕೆಂದರೆ, ಅಲ್ಲಿಗೆ ನೀನು ಬರುತ್ತೀ ಎಂಬ ಒಂದು ಸುಳ್ಳು ಸೂಚನೆ ಇದೆ;

ಕಾಣದ ದೇವರನ್ನು ನೆನೆಯುವುದರಲ್ಲೂ ನನಗೆ ಆನಂದವಿದೆ.
ಏಕೆಂದರೆ ನನ್ನ ಪ್ರತಿ ಉಸಿರಿನಲ್ಲೂ ಆ ದೇವರ ಇರವಿನ ಸೂಚನೆ ಇದೆ!


ನೀನೆಲ್ಲಿರುವೆ?

26 ಆಕ್ಟೋ 14

ದೇವಾ,
ನಮ್ಮೂರ ದೇವಸ್ಥಾನದ ಮುಂದೆ ನಿಂತಿದ್ದೆ
ಗರ್ಭಗುಡಿಯ ಬಾಗಿಲಿಗೆ ಬೀಗ ಜಡಿದಿತ್ತು;

ನೀನು ಒಳಗಿರುವೆವೋ ಹೊರಗಿರುವೆಯೋ
ಅರಿಯಲಾಗಲೇ ಇಲ್ಲ, ಮರಳಿದೆ ಅಲ್ಲಿಂದ,
ಈ ಮನವೊಂದು ಗೊಂದಲದ ಗೂಡಾಗಿತ್ತು!


ಪ್ರತಿದಿನವೂ ದೀಪಾವಳಿ!

26 ಆಕ್ಟೋ 14

ಸಖೀ,
ನನ್ನೆರಡು ಕಣ್ಣುಗಳ ಹಿಂದಿನ ದೃಷ್ಟಿ ನಮ್ಮಮ್ಮ ಅಪ್ಪ
ಅವರಿಂದ ದಕ್ಕಿದ ಜ್ಞಾನಕ್ಕಿಂತ ಮಿಗಿಲಿನ್ನಾವುದಿಲ್ಲಪ್ಪ;

ಅದರಿಂದೀ ಬಾಳಹಾದಿಯಲಿ ದಿನವೂ ದೀಪಾವಳಿಯೇ
ಕಗ್ಗತ್ತಲು ಕವಿದ ಮರುಕ್ಷಣವೆನ್ನ ಪಯಣ ಅವರತ್ತಲೇ!


ದಿನಾ ಸಾಯುವವರಿಗೆ!

26 ಆಕ್ಟೋ 14

ಸಖೀ,
ಮನ ಅಳುತ್ತಿದ್ದರೂ ಹರಿಯುವುದೇ ಇಲ್ಲ ಕಣ್ಣೀರು
ಕಂಗಳನ್ನೇ ಕೇಳಿದೆ “ಯಾಕೆ ಎಲ್ಲೋಯ್ತು ಕಣ್ಣೀರು?”
ನಿರ್ಲಿಪ್ತ ಭಾವದಿಂದ ಉತ್ತರಿಸಿದವು ನನ್ನ ಕಣ್ಣುಗಳು
ದಿನಾ ಸಾಯುವವರಿಗೆ ಅಳುವವರು ಯಾರು ಹೇಳು!


ನಿಗೂಢ ಮನುಜ!

26 ಆಕ್ಟೋ 14

ಸಖೀ,
ಎಲ್ಲರ ಎಲ್ಲವುದರ ಬಗ್ಗೆ ಅರಿಯುವ ಯತ್ನವೇ ವ್ಯರ್ಥ
ನಾವೆಷ್ಟೇ ಯತ್ನಿಸಿದರೂ ಆಗುವುದಿಲ್ಲ ನಮಗೆ ಅರ್ಥ
ಅರ್ಥವಾದಷ್ಟರಲ್ಲೇ ನಾವು ಭಾವಬಂಧಿಯಾಗಿರಬೇಕು
ಅರಿಯಲು ಯತ್ನಿಸಿದಷ್ಟೂ ನಿಗೂಢ, ಸಾಕಪ್ಪಾ ಸಾಕು!


ಹಬ್ಬದ ಸಂಭ್ರಮ!

26 ಆಕ್ಟೋ 14

ಇದಕ್ಕಿಂತ ಸಂಭ್ರಮದ ಹಬ್ಬವಿದೇಯೇ ನನ್ನ ಪಾಲಿಗೆ?

ನನ್ನನ್ನು ಒಮ್ಮೆಯೂ ಭೇಟಿಯಾಗದ,
ನಮ್ಮ ಅಪ್ಪಯ್ಯನವರನ್ನು ನನ್ನ ಮಾತುಗಳ ಮೂಲಕವಷ್ಟೇ ತನ್ನ ಅರಿವಿಗಿಳಿಸಿಕೊಂಡ
ಒಂದು ಪರಿಶುದ್ಧ ಆತ್ಮದಿಂದ ಇಂದು ನನಗೆ ಬಂದಿರುವ ಸಂದೇಶ:

“ನನಗ್ಯಾಕೆ ನಿಮ್ಮ ಅಪ್ಪಯ್ಯನ ನೆನಪು…?
ಅದೂ ಕಣ್ಣು ಒದ್ದೆಯಾಗೋ ಅಷ್ಟು !
ನಿಮ್ಮೊಳಗಿನ ಅಪ್ಪಯ್ಯ ಒಳಗೂ ಹೊರಗೂ ಬೆಳಕಾಗಿ ಬೆಳಗಲಿ.
ದೀಪಾವಳಿಯ ಶುಭಾಶಯಗಳು!”.

ಒಂದು ಆತ್ಮದಿಂದ ಇನ್ನೊಂದು ಆತ್ಮದೆಡೆಗೆ ಸತತವಾಗಿ ಸದಾ ಹರಿಯುತ್ತಿರುವ, ಅದ್ಯಾವುದೋ ದಿವ್ಯಶಕ್ತಿಗೆ ನಮೋನಮಃ