ಸ್ವಾತಂತ್ರ್ಯ ಹೋರಾಟಗಾರರು!

15 ಆಗಸ್ಟ್ 13

ನಮ್ಮೂರಿನಲ್ಲಿ ಓರ್ವ ಹಿರಿಯರು ಯಾವಾಗಲೂ ಹೇಳುತ್ತಿದ್ದರು. 

“ನಾವೆಲ್ಲಾ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು. ಈಗಿನ ಕಾಲದ ಮಕ್ಕಳಿಗೆ ಸ್ವಾತಂತ್ರ್ಯದ ಬೆಲೆ ಏನೆಂಬುದೇ ಗೊತ್ತಿಲ್ಲ”. 

“ಸ್ವಾತಂತ್ರ್ಯ ಸಿಕ್ಕುವಾಗ ನಿಮಗೆ ಎಷ್ಟು ವರ್ಷ ಪ್ರಾಯವಾಗಿತ್ತು?”

“ಹೂಂ… ಆಗ ನನಗೆ ಹತ್ತೋ ಹನ್ನೆರಡೋ ವರ್ಷ ಪ್ರಾಯ ಇದ್ದಿರಬಹುದು”

“ಹಾಗಾದರೆ ಆ ಹತ್ತರ ಪ್ರಾಯದಲ್ಲಿ ನಿಮ್ಮದು ಎಂತಹ ಸ್ವಾತಂತ್ರ್ಯಹೋರಾಟ ಅದು”

“ಅದು ಹಾಗಲ್ಲ. ಆಗಿನ ಕಾಲದಲ್ಲಿ ಬ್ರಿಟಿಷರು ಉಡುಪಿಯ ಪೇಟೆಯಲ್ಲಿ ದಾರಿದೀಪ ಹಾಕಿಸಿದ್ದರು. ನಾವು ಅದಕ್ಕೆ ಕಲ್ಲು ಹೊಡೆದು ಒಡೆದು ಹಾಕುತ್ತಿದ್ದೆವು. ಅವರು ಬಲ್ಬ್ ಬದಲಾಯಿಸಿದಾಗಲೆಲ್ಲಾ ನಾವು ಹೇಗಾದರೂ ಮಾಡಿ ಅದನ್ನು ಒಡೆದು ಹಾಕುತ್ತಿದ್ದೆವು. ಅದು ಬ್ರಿಟಿಷ್ ಸರಕಾರದ ವಿರುದ್ಧ ನಮ್ಮ ಹೋರಾಟ ಆಗಿತ್ತು” 

“ವಾಹ್… ನಿಮಗೆ ಸ್ವಾತಂತ್ರ್ಯಹೋರಾಟಗಾರರ ಪಿಂಚಣಿಯೂ ಬರ್ತಿರಬೇಕಲ್ಲಾ?”

“ಇಲ್ಲ ಮಗಾ… ಅದಕ್ಕೆ ಜೈಲಿಗೆ ಹೋಗಬೇಕಿತ್ತಂತೆ, ಜೈಲಿಗೆ ಹೋಗಲು ನಮ್ಮ ಅಪ್ಪ-ಅಮ್ಮ ಬಿಡ್ಲಿಲ್ಲ… ಏನು ಮಾಡೋದು ಹೇಳು”

 


“ಕೋಟು”ಗಳು!

15 ಆಗಸ್ಟ್ 13
ಸಖೀ,
ನಿನ್ನ ಮನಪರಿವರ್ತನೆ
ಆಗಲಿ ಎಂದು ನಾನು 
ದಿನಾ ರವಾನಿಸುತ್ತಲಿದ್ದ 
ಯಾರು ಯಾರದೋ 
ನೀತಿಸಂದೇಶಗಳಿಂದ 
ನಿನ್ನ ಮನಪರಿವರ್ತನೆ
ಆಗಿದೆ ಅನ್ನುವ ಖಾತ್ರಿ
ನನಗಿನಿತೂ ಇಲ್ಲ;
ಆದರೆ, ನನ್ನ ಮನದ
ಪರಿವರ್ತನೆಯಂತೂ
ಆಗಿಬಿಟ್ಟಿದೆ!

ಅರ್ಥ!

15 ಆಗಸ್ಟ್ 13
“ನನ್ನ ಬೆನ್ನಿನ ಮೇಲೆ 
ನೀನು ಉಗುರಿನಿಂದ 
ಗೀಚಿದ ಅಕ್ಷರ 
ಅದಾವುದೆಂದು 
ನಾನರಿತಿರುವೆನಲ್ಲಾ”

“ಆದರೆ ನಿನ್ನ ಕಣ್ಮುಂದೆ 
ನಿಂತು ನಾನಾಡಿದ 
ಮಾತಗಳೊಂದೂ 
ನಿನಗರ್ಥವಾಗಿಯೇ
ಇಲ್ಲವಲ್ಲಾ?”


ಅಳುಕು!

15 ಆಗಸ್ಟ್ 13
“ಜೊತೆಯಲ್ಲಿ 
ಕಾಫಿ
ಕುಡಿಯೋಣ
ಬಾ…”
ಎಂದು 
ಕರೆದವಳ
ಕಣ್ಣಲ್ಲಿ 
ಕಣ್ಣಿಟ್ಟು,
ಅಳುಕುತ್ತಾ
ಕೇಳಿದೆ
.
.
.
.
.
.
.
.
.
.
.
.
.
.
.
.
.
.
“ಕಾಫಿ
ಬೇಡ
ಚಹಾ
ಕುಡಿಯೋಣ 
ಆದೀತೇ?”

ಹೃದಯವ ಘಾಸಿಮಾಡಿದವನೇ…!

15 ಆಗಸ್ಟ್ 13
(ಒಂದು ಹಿಂದೀ ಚಿತ್ರಗೀತೆಯ ಭಾವಾನುವಾದದ ಯತ್ನ)
ಈ ಹೃದಯವ ಘಾಸಿಮಾಡಿದವನೇ 
ನಿನ್ನನ್ನೇ ಈ ಹೃದಯ ಹುಡುಕುತಿದೆ
ಅದ್ಯಾವ ನಗರಿಯಲ್ಲಿ ಅವಿತಿರುವೆ 
ಕೂಗಿಬಿಡು ಒಮ್ಮೆ ನನ್ನ ಎನ್ನುತಲಿದೆ
ಈ ಹೃದಯವ ಘಾಸಿಮಾಡಿದವನೇ 

ನೀನೆನಗೆ ಸಿಕ್ಕರೆ ನಿನಗೆ 
ಈ ಮನದ ಬೇಗುದಿಯನರುಹುವೆ
ನಾನಳುವೆ ಒಮ್ಮೊಮ್ಮೆ ಅಳುತ್ತಾ 
ನಿನ್ನನ್ನೂ ಅಳಿಸುವೆ ನಾನಿನ್ನೊಮ್ಮೊಮ್ಮೆ 
ನಿನ್ನನ್ನೂ ಅಳಿಸುವೆ ನಾನಿನ್ನೊಮ್ಮೊಮ್ಮೆ 
ನೀನೀ ಮನಕೆ ಮಾಡಿಹ ಘಾಸಿಯ 
ಅರಿವನ್ನು ನಿನಗೇ ನಾ ಮಾಡಿಸುವೆ

ನನ್ನೀ ಹೃದಯ ತನಗಾಸರೆಯಾದ 
ನಿನ್ನನ್ನೇ ಹುಡುಕುತ್ತಿದೆ
ನನ್ನೀ ಎದೆಯೊಳಗೆ ನಿನ್ನ ನೆನಪುಗಳ 
ಬಿರುಗಾಳಿಯೇ ಎದ್ದಂತಿದೆ

ಮನದಲ್ಲಿದೆ ನಿನ್ನ ಸನಿಹದ ಬಯಕೆ 
ನಿನ್ನ ದೃಷ್ಟಿಯಿಂದಲೇ ಬಿದ್ದವನು 
ಈಗ ನಿನ್ನೊಂದಿಗೆ ನೋಟ ಬೆರೆಸಲಂಜಿಕೆ
ಅವಮಾನಿತ, ಅಪ್ರಯೋಜಕ ನಾನು ನನ್ನಲ್ಲಿ
ಇನ್ನು ಉಳಿದಿಹುದಾದರೂ ಏನು?

ನನ್ನೀ ಹೃದಯ ತನಗಾಸರೆಯಾದ 
ನಿನ್ನನ್ನೇ ಹುಡುಕುತ್ತಿದೆ


ಹೆಮ್ಮೆ ಪಡಬೇಕು!

15 ಆಗಸ್ಟ್ 13
ಸಖೀ,
ಬಾಳಿನ ಹಳೆಯ 
ಸಿಹಿಘಟನೆಗಳನ್ನು 
ನೆನೆದು ದುಃಖ 
ಅಥವಾ 
ಸುಖಪಡುವುದು
ಒಂದು ಅನುಭವ;

ಕಹಿಘಟನೆಗಳನ್ನು 
ನೆನೆದು, ಅವುಗಳನ್ನು 
ಗೆದ್ದು ಇಂದಿನ 
ಈ ಸುಸ್ಥಿತಿಯನ್ನು 
ತಲುಪಿರುವುದಕ್ಕಾಗಿ 
ಹೆಮ್ಮೆಪಡುವುದು
ಒಂದು ಅನುಭವ!


ನಾವಾಗಬೇಕು!

15 ಆಗಸ್ಟ್ 13
ಸಖೀ,
ನಾನು ಅಳಿಯಬೇಕು
ನೀನೂ ಅಳಿಯಬೇಕು,
ಅದಕ್ಕೂ ಮೊದಲು,
ನಾನು ನೀನಾಗಬೇಕು,
ನೀನು ನಾನಾಗಬೇಕು,
ನೀನು-ನಾನು ಅಳಿದು,
ನಾವು ನಾವಾಗಬೇಕು!

ಎಚ್ಚರದ ಹೆಜ್ಜೆ ಇರಲಿ!

15 ಆಗಸ್ಟ್ 13
ಮೋದಿ ಮಾಡುವ ಭಾಷಣದ ಮೋಡಿಗೆ
ಮತ ಬೀಳುವುದಿಲ್ಲ ಭಾಜಪಾದ ಪಾಲಿಗೆ

ಗುಜರಾತಿನಲ್ಲಿ ಬಿದ್ದ ಮತ ಭಾಷಣಕ್ಕಲ್ಲ
ಅಭಿವೃದ್ಧಿಕಾರ್ಯವೂ ಕಣ್ಣೆದುರಿದೆಯಲ್ಲಾ

ಅಭಿವೃದ್ಧಿಯ ನಕಾಶೆ ತಯಾರಿಸಿಡಬೇಕು
ತಮ್ಮ ಕಾರ್ಯದ ಪರಿಯ ತೆರೆದಿಡಬೇಕು

ಆತ್ಮವಿಶ್ವಾಸ ಹೆಚ್ಚಾಯಿತೆಂದರೂ ಕೆಡುಕು
ಮತ್ತೈದು ವರುಷ ತಿನ್ನುತಿರಬೇಕು ಕುರುಕು!


ಯಾರಿಗೆ?

15 ಆಗಸ್ಟ್ 13

ಸಖೀ,
ನಾ ಹೊಗಳಿದಾಗಲೆಲ್ಲಾ
ತನಗೇ ಎಂದು
ಗ್ರಹಿಸಿಕೊಳ್ಳುತಿಹ ನೀನು
ತೆಗಳಿದಾಗ ಮಾತ್ರ
“ಯಾರಿಗೆ?” ಎಂದು
ಅನ್ನುವೆಯಾದರೆ,
ಏನ ಹೇಳಲಿ ನಾನು?


ಗ್ರಹಿಸದವರು!

15 ಆಗಸ್ಟ್ 13
ಸಖೀ,
ಬರೆದುದನ್ನು ಮೆಚ್ಚಿ ಹೋಗುತ್ತಾರೆ
ಪ್ರತಿಕ್ರಿಯೆಗಳನ್ನೂ ನೀಡಿರುತ್ತಾರೆ
ಆದರದೆಷ್ಟು ಜನ ಗ್ರಹಿಸಿರುತ್ತಾರೆ?

“ಜ್ವರ ಬಂದಿದೆ” ಎಂದು ಬರೆದು
ಹೋದವನನ್ನು ಇಲ್ಲೆಷ್ಟು ಮಂದಿ
ಹೇಗಿರುವಿರೆಂದು ವಿಚಾರಿಸಿದ್ದಾರೆ?