ಬಾರರೇಕಂತೆ?

27 ಸೆಪ್ಟೆಂ 12

ಸಖೀ,
ನೀರಿನಲ್ಲಿ
ವಿಸರ್ಜನೆ
ಮಾಡಿದರೂ
ವರುಷ
ವರುಷವೂ
ಮರೆಯದೇ 
ಬರುವ ಆ 
ಗಣಪನಂತೆ;

ನಮ್ಮನ್ನು
ಅಗಲಿ ಹೋದ 
ನಮ್ಮಮ್ಮ-ಅಪ್ಪ
ಒಮ್ಮೆಯಾದರೂ
ಮರಳಿ ಬಾರದೇ
ಇರುವರೇಕಂತೆ?
********

ಕಂದನಳುವಿನಂತೆ!

27 ಸೆಪ್ಟೆಂ 12

ಸಖೀ,

ಅಗಲಿಕೆಯ 
ನೋವು
ಕಂದಮ್ಮಗಳ
ಅಳುವಿನಂತೆ,

ಅಳುವುದು
ಏಕೆಂದು
ಅರಿತಿದ್ದರೂ
ಪದಗಳಲ್ಲಿ
ವಿವರಿಸಲು
ಆಗದಂತೆ!
*****

ಸರೀನಾ?

27 ಸೆಪ್ಟೆಂ 12

“ಸಖೀ,
ತಪ್ಪು ಸರಿಗಳ 
ಗೊಡವೆ ಇಲ್ಲ
ಮನದಲ್ಲೇಳುವ 
ಆಸೆಗಳಿಗೆ 
ಕೊನೆಯೇ ಇಲ್ಲ,

ಯಾಕೆ ಹೀಗೆ
ಹೇಳು, ಇದು 
ನನಗಷ್ಟೇನಾ 
ನಿನಗೂ
ಹೀಗೇನಾ?”

“ನನಗೂ ಅಷ್ಟೇ 
ಏನೀಗ?
ಸುಮ್ಮನಿರಿ
ಜಾಸ್ತಿ
ಕೊರೀಬೇಡಿ
ಸರೀನಾ?”
*****


ಮುಲಾಯಮನ ಮನದಲ್ಲಿ!

27 ಸೆಪ್ಟೆಂ 12

ನೀವೀಗ ಮಾಡುತ್ತಿರುವುದು
ಮನೆಹಾಳು ಕೆಲಸವೇ ಹೌದು,
ನಿಮ್ಮ ಜೊತೆಗಿದ್ದು ಜನರಿಂದ 
ಉಗಿಸಿಕೊಳ್ಳಬೇಕಾಗಬಹುದು;

ಆದರೂ, ನಿಮ್ಮ ಬಿಟ್ಟು ಅನ್ಯರ
ಅಪ್ಪಿಕೊಂಡರೆ ನನಗಿರದು ಬೆಲೆ,
ಅವರ ಜೊತೆ ನಡೆದರೆ ಬೇಯಿಸಿ
ಕೊಳ್ಳಲಾಗುವುದಿಲ್ಲ ನನ್ನ ಬೇಳೆ;

ಹಾಗಾಗಿ ದೇಶ ಹಾಳಾಗಿ ಹೋಗಲಿ
ನನಗಿಲ್ಲ ಆ ಬಗ್ಗೆ ಎಳ್ಳಷ್ಟೂ ಚಿಂತೆ,
ನನ್ನ ಮಗ ಆಗಿದ್ದಾನೆ ಮುಖ್ಯಮಂತ್ರಿ
ನಾಳೆ ನಾ ಪ್ರಧಾನಮಂತ್ರಿಯಂತೆ!
****************


ಸವಾಲು ನಿನಗೆ!

27 ಸೆಪ್ಟೆಂ 12

ಸಖೀ,
“ನಿನ್ನ ಮಾತುಗಳಲ್ಲಿ 
ಹಿಡಿದಿಡುವ ಶಕ್ತಿ ಇಲ್ಲ,
ಮನಕಾನಂದ ನೀಡೋ 
ಪದವಿಜೃಂಭಣೆ ಇಲ್ಲ,
ಹೃದಯದಲಿ ನೋವು
ಉಂಟಾಗುವುದಿಲ್ಲ,

ಎಲ್ಲವೂ ಬರೀ ಮೇಲು
ಸ್ತರದಲ್ಲಿನ ಮಾತುಗಳು,
ಸುಲಲಿತವಾದ ನೇರ
ಅರ್ಥ ನೀಡುವ ಪದಗಳು,
ಎಲ್ಲಿವೆ ಓದುಗರ ಮೈ
ಮರೆಸುವಂತಹ ನುಡಿಗಳು?”

ಎಂದು ನನ್ನ ಪ್ರತಿ ಮಾತ
ಓದಿದಾಗಲೂ ನುಡಿಯುವ
ನೀನು,

ಬರೆದು ತೋರಿಸು ಬಾರೇ 
ಒಂದೆರಡು ಸಾಲುಗಳನ್ನು 
ಮೈಮರೆತು ಹೋಗುವಂತೆ 
ನಾನೂ!
******

ನಂಬುತ್ತೇವೆ ಸ್ವಾಮೀ!

27 ಸೆಪ್ಟೆಂ 12

ಮನಮೋಹನರೇ
ನಾವೂ ನಂಬುತ್ತೇವೆ
ನಿಜವಾಗಿ ತಮ್ಮನ್ನು
ತಾವು ನಂಬುವಂತೆ
ಆ ಅಮ್ಮ-ಮಗನನ್ನು

ಬರಿಯ ನಂಬಿಕೆಯ
ಮಾತಲ್ಲ ನೋಡಿ,
ತಮ್ಮ ಮೇಲವರು
ಮಾಡಿದ್ದಾರೆ
ಅಂತಹ ಮೋಡಿ

ತಮಗೋ ಬೇರೆ
ದಾರಿಯೇ ಇಲ್ಲ
ಅವರ ಮಾತಿಗೆ
ತಲೆದೂಗದೇ ಇದ್ದರೆ

ನಮಗೂ ಬೇರೆ
ದಾರಿಯಿಲ್ಲ
ತಮ್ಮ ಮಾತಿಗೆ
ತಲೆದೂಗದೇ ಇದ್ದರೆ!
***********


ಹೋಗ್ರೀ ಸುಮ್ನೇ…!

27 ಸೆಪ್ಟೆಂ 12

“ನಾನು”
“ನಾನು”
ಅನ್ನುತ್ತಿದ್ದಾನೆ
ಯಡ್ಡಿ,

ಆತನೊಳಗಿನ
“ನಾನು”
ಇನ್ನೂ
ಹೋಗಿಲ್ಲ
ನೋಡಿ,

ಹಾಗಾಗಿ
ಆತನೇ
ಹೋಗಲಿ,
ಬಿಡಿ!
***


ಕೆಲಸ ಮಾಡುವ ಮನಸಿದ್ದರೆ!

27 ಸೆಪ್ಟೆಂ 12

ಕೆಲಸ ಮಾಡುವ ಮನಸಿದ್ದರೆ
ಮತ ನೀಡಿದವರ ನೆನಪಿದ್ದರೆ
ಯಾವ ಪಕ್ಷದಲ್ಲಿದ್ದರೂ ಒಂದೇ
ಧನ್ಯವಾದಗಳನ್ನರ್ಪಿಸಬೇಕು,

ಕೆಲಸ ಮಾಡುವ ಇಚ್ಛೆಯಿಲ್ಲದಿರೆ
ಮತ ನೀಡಿದವರನ್ನು ಮರೆತರೆ
ಯಾವ ಪಕ್ಷದಲ್ಲಿದ್ದರೂ ಒಂದೇ
ಮುಖಕ್ಕುಗಿದು ದೂರತಳ್ಳಬೇಕು;

ಶ್ರೀ ಜಯಪ್ರಕಾಶ ಹೆಗ್ಡೆಯವರು ಆ
ಮೊದಲ ವರ್ಗಕ್ಕೆ ಸೇರಿದವರೆಂದು
ಕೆಲಸ ಮಾಡಿ ತೋರಿಸಿದ್ದಾರಿಂದು
ಹಾಗಾಗಿ ಅವರಿಗೇ ಜಯ ಮುಂದೂ,

ಎರಡನೇ ವರ್ಗದಲ್ಲಿರುವವರ ಪಟ್ಟಿ
ಬಹಳಷ್ಟು ಉದ್ದವಾಗಿಹುದು ಗೊತ್ತು
ಅಂಥವರು ಮತ ಕೇಳಲು ಬಂದರೆ
ಸೋಲಿಸೋಣ ಬಾರದಂತೆ ಎಂದೂ!
*****************


ಇಂದು ಮತ್ತೇರಿ ಓಲಾಡುತಿದೆ!

27 ಸೆಪ್ಟೆಂ 12

||ಇಂದು ಮತ್ತೇರಿ ಓಲಾಡುತಿದೆ,
ನನ್ನ ಮನಸು ನನ್ನ ಮನಸು ನನ್ನ ಮನಸೂ
ಕಾರಣ ಇಲ್ಲದೆಯೇ ನಗುತಲಿದೆ,
ನನ್ನ ಮನಸು ನನ್ನ ಮನಸು ನನ್ನ ಮನಸೂ||

ಹೂವುಗಳೇ ಪಾಲಕಿ ಶೃಂಗರಿಸಿ,
ಅಲೆಗಳೇ ಕಾಲ್ಗೆಜ್ಜೆ ತೊಡಿಸಿ
ನದಿ ನೀನು ಕನ್ನಡಿಯಾಗು,
ಕಿರಣವೇ ನೀ ಸೆರಗನು ಹೊದಿಸು

ಇಂದೀ ಜೋಗಿಣಿ ಆಗಿಹಳು ಮದುಮಗಳು,
ಎಲ್ಲಾದರೂ ಹಾರಿಹೋಗುವೆ ಅನುತಿಹಳು

||ಇಂದು ಮತ್ತೇರಿ ಓಲಾಡುತಿದೆ,
ನನ್ನ ಮನಸು ನನ್ನ ಮನಸು ನನ್ನ ಮನಸೂ
ಚೆಲ್ಲಾಟ ಆಡಲು ಹಾತೊರೆಯುತಿದೆ,
ನನ್ನ ಮನಸು ನನ್ನ ಮನಸು ನನ್ನ ಮನಸೂ||

ನಮ್ಮನ್ನಿಲ್ಲಿ ಜನ ನೋಡುತ್ತಾರೆ,
ಮರೆಯಲ್ಲಿ ಕೂರೋಣ ಬಾರೇ
ಮತ್ತೇರಿಸುವ ದಿನ ಇದೆ ಹೀಗೆ,
ಹೇಗಿರಲಿ ನಾನು ದಾಹ ತೀರಿಸದೇ 
ನಿನ್ನವನು ನಾನು, ನೀನು ನನ್ನವಳು ನಿನ್ನಾಣೆಗೂ, 
ನಿನ್ನವಳು ನಾನು, ನೀನು ನನ್ನವನು ನನ್ನಾಣೆಗೂ

||ಇಂದು ಮತ್ತೇರಿ ಓಲಾಡುತಿದೆ, 
ನನ್ನ ಮನಸು ನನ್ನ ಮನಸು ನನ್ನ ಮನಸೂ
ಚೆಲ್ಲಾಟ ಆಡಲು ಹಾತೊರೆಯುತಿದೆ, 
ನನ್ನ ಮನಸು ನನ್ನ ಮನಸು ನನ್ನ ಮನಸೂ||

ರೋಮ ರೋಮ ಹಾಡುತಿದೆ ಗೀತೆ, 
ಅಂಗಾಂಗದಲೂ ವಾದ್ಯ ಸಂಗೀತ
ಬಾಳಿನಾ ಸುಖ ಕ್ಷಣದಲ್ಲೇ ಪಡೆದೆ, 
ಎಂತೋ ಏನೋ ಬಂತು ಈ ಗಳಿಗೆ
ಇಂದು ಮುಗಿಲ ಮುಟ್ಟಿಹೆ ನಾನು, 
ಕುಣಿಯುತಿಹೆ ಮನದ ಜೊತೆ ನಾನೂ

|ಇಂದು ಮತ್ತೇರಿ ಓಲಾಡುತಿದೆ,
ನನ್ನ ಮನಸು ನನ್ನ ಮನಸು ನನ್ನ ಮನಸೂ
ಚೆಲ್ಲಾಟ ಆಡಲು ಹಾತೊರೆಯುತಿದೆ,
ನನ್ನ ಮನಸು ನನ್ನ ಮನಸು ನನ್ನ ಮನಸೂ||

ಕವಿ ನೀರಜ್ ರಚಿಸಿರುವ, ಸಚಿನ್ ದೇವ್ ಬರ್ಮನ್ ಸಂಗೀತ ನೀಡಿ, ಕಿಶೋರ್ ಕುಮಾರ್ ಹಾಗೂ ಲತಾ ಮಂಗೇಶ್ಕರ್ ಹಾಡಿರುವ, ಶಶಿ ಕಪೂರ್ ಹಾಗೂ ರಾಖಿ ಅಭಿನಯದ ಶರ್ಮಿಲೀ ಚಿತ್ರದ, ನನ್ನ ಮೆಚ್ಚಿನ ಹಾಡೊಂದರ ಭಾವಾನುವಾದದ ಯತ್ನ ಇಲ್ಲಿದೆ.


ಶೃಂಗಾರ!

27 ಸೆಪ್ಟೆಂ 12

ಸಖೀ,
ಸಮಾಜ 
ನೋಡುವ 
ಈ ಮುಖ 
ದೇಹಗಳನ್ನು
ಶೃಂಗರಿಸುವವರು
ನಾವೆಲ್ಲರೂ,

ಆ ಭಗವಂತ
ನೋಡುವ
ನಮ್ಮೊಳಗಿನ
ಹೃದಯಗಳನ್ನು
ಶೃಂಗರಿಸುವವರು
ನಮ್ಮಲ್ಲೆಷ್ಟಿಹರು
ಹೇಳು ಎಲ್ಲಿಹರು
*****