ಸಿಹಿ ಇರಲಿ!

21 ಏಪ್ರಿಲ್ 13

 

ಇಂದಿನ ಅಡುಗೆಯಲಿ ಒಂದು ಸಿಹಿತಿಂಡಿಯೂ ಇದ್ದಿರಲಿ
ಹಬ್ಬದ ದಿನವಲ್ಲ ಸಿಹಿ ಯಾಕೆ ಅನ್ನುವ ಪ್ರಶ್ನೆ ಇರದಿರಲಿ
ನಿನ್ನ ಮೊಗದಲ್ಲಿ ಇಂದಿರುವ ನಗೆ ದಿನ ಪ್ರತಿದಿನ ಇರಲಿ
ನೀನು ನಗುತಿರಲು ದಿನವೂ ಹಬ್ಬ, ಅದಕೆ ಸಿಹಿ ಇರಲಿ!

ಒಳಿತಿಗಾಗಿ ಬಾಳು!

21 ಏಪ್ರಿಲ್ 13

 

ಅಳಿದವರ ನೆನಪಲ್ಲೇ ಮನ ಮಗ್ನವಾಗಿಹುದು
ಸಹವಾಸಿಗಳ ಮುಂದೆ ಅದು ನಗ್ನವಾಗಿಹುದು;

ಅಳಿದ ಮೇಲೂ ಉಳಿಯುವ ಯೋಚನೆಯಿರಲು
ಸಹವಾಸಿಗಳ ಒಳಿತಿಗಾಗಿ ಇರಬೇಕೀ ಬಾಳು!


ಬುದ್ಧಿಯಲಿ ನೆಲೆ!

21 ಏಪ್ರಿಲ್ 13

 

ಕನಸು ನನಸಿನ ನಡುವೆ ತೆಳ್ಳಗಿನ ಗೆರೆ ಒಂದಿಹುದು
ಈ ಮನಕೆ ಸದಾ ಆ ಗೆರೆಯ ದಾಟುವ ತವಕವಿಹುದು

ಗೆರೆ ದಾಟುವ ಯತ್ನದಲಿ ಮನಕೆ ಬುದ್ಧಿಯ ತಡೆಯು
ಬುದ್ಧಿಯಲಿ ಮನ ನೆಲೆನಿಲ್ಲೆ ಶುದ್ಧ ನಿರ್ಮಲ ನಡೆಯು!


ಜನಸೇವಕರು!

21 ಏಪ್ರಿಲ್ 13

 

ಮೂರು ತಿಂಗಳೊಳಗೆ ಮೂರು ಬಾರಿ ಪಕ್ಷ ಬದಲಿಸಿದವರೂ ಜನಸೇವಕರೇ
ದುಡ್ಡಿನ ಲೆಕ್ಕಾಚಾರಕ್ಕಾಗಿ ಅಡ್ಡಾಡುವ ನಟ ನಟಿಯರೂ ಇಲ್ಲಿ ಜನಸೇವಕರೇ;
ಟಿಕೇಟು ದಕ್ಕದ ನರ್ಸ್ ದುಡ್ಡಿನಾಸೆಗಾಗಿ ಈಗ ಬಿಗ್‍ಬಾಸಿಗೆ ಮರಳಿಹಳಂತೆ
ಇಂಥವರ ನಂಬಿ ಮತ ನೀಡಲು ನಾಡಿನ ಮತದಾರ ಕಾದು ಕೂತಿರುವನಂತೆ!

ತೀಟೆ ತೀರಿಸಲು!

21 ಏಪ್ರಿಲ್ 13

ಮಾನ್ಯಮಾಡಲೀ ನಾಡಿನ ಎಲ್ಲಾ ವೇಶ್ಯಾಗೃಹಗಳನ್ನು
ಸರಕಾರಿ ನೌಕರರೆಂದು ಗುರುತಿಸಲಿ ವೇಶ್ಯೆಯರನ್ನು;

ವೇಶ್ಯೆಯರಿಗೆ ಸರಕಾರವೇ ಸಂಬಳನೀಡಿ ಸಾಕುತಿರಲಿ
ರಾಕ್ಷಸರು ಪುಕ್ಕಟೆಯಾಗಿ ತಮ್ಮ ತೀಟೆ ತೀರಿಸಿಕೊಳ್ಳಲಿ!


ಹಿರಿಯರಿರಬೇಕು!

21 ಏಪ್ರಿಲ್ 13

 

ಸದಾ ನಮ್ಮ ತಲೆಗಳ ಮೇಲೆ, ಸಲಹೆ  ನೀಡಿ
ಹರಸುವ ನಿಸ್ವಾರ್ಥಿ ಹಿರಿಯರ ಕೈಗಳಿರಬೇಕು

ಅಂಥ ಕೈಗಳೇ ಇಲ್ಲವಾದಾಗ ಮನದೊಳಗಿನ
ದುಗುಡವ ಯಾರೊಂದಿಗೆ ಅರುಹಿಕೊಳ್ಳಬೇಕು?

ಗುಡಿಸಲುಗಳ ಕೆಡವುದಕೆ ಮೊದಲು!

21 ಏಪ್ರಿಲ್ 13

 

ಭಾಜಪ ನಾಯಕರೇ ದಯವಿಟ್ಟು ಪಕ್ಕಾ ಮನೆಗಳನ್ನು ಕಟ್ಟಿಕೊಡಿ 
ಈ ರಾಜ್ಯದ ಬಡವರ ಗುಡಿಸಲುಗಳನ್ನು  ಕೆಡವುದಕೆ  ಮೊದಲು!

ಗಂಡ ಹೊಸ ಸೀರೆ ತರುವನೆಂದು ಕತ್ತಲೆಯಲಿ ಕೂತು ಕಾಯುತ್ತಾ
ಇದ್ದಳಂತೆ ಹೆಂಡತಿ ತನ್ನ ಇದ್ದೊಂದು ಸೀರೆಯ ಮಾಡಿ ಉರುವಲು!


ಮತದಾರನ ಸಮಸ್ಯೆ!

19 ಏಪ್ರಿಲ್ 13

 

 
ಸಿದ್ದರಾಮಯ್ಯ:

“ನನ್ನನ್ನು ಮುಖ್ಯಮಂತ್ರಿ ಮಾಡಬಾರದು ಎಂದು ಮಾಜಿ ಪ್ರಧಾನಿ ದೇವೇಗೌಡರು ಭಾರಿ ಪಿತೂರಿ ಮಾಡಿದರು. ಮೋಸ ಮಾಡಿ ಪಕ್ಷದಿಂದ ಹೊರಹಾಕಿದರು. ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷಕ್ಕೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ”

ಯಡಿಯೂರಪ್ಪ:

“ಭಾಜಪದವರು ಪಿತೂರಿ ನಡೆಸಿ ನನ್ನನ್ನು ಹೊರಹಾಕಿದರು. ನನಗೆ ಮೋಸ ಮಾಡಿದ ಭಾಜಪಕ್ಕೆ ತಕ್ಕ ಪಾಠ ಕಲಿಸಬೇಕು”

ಭಾಜಪ:

 “ಕಾಂಗ್ರೇಸಿನವರು ನಮ್ಮನ್ನು ಸರಿಯಾಗಿ ಆಡಲಿತ ಮಾಡಲಿಕ್ಕೆ ಬಿಡ್ಲಿಲ್ಲ. ಭಾಜಪವನ್ನು ಒಡೆದುಹಾಕುವಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಿತೂರಿ ಇದೆ. ಅವರಿಗೆ ತಕ್ಕ ಪಾಠ ಕಲಿಸಬೇಕು”

ಜೆಡಿ(ಎಸ್):

“ಕಾಂಗ್ರೇಸ್ ಮತ್ತು ಭಾಜಪ ಈ ಎರಡೂ ರಾಷ್ಟೀಯ ಪಕ್ಷಗಳು ಸರಿಯಿಲ್ಲ. ಜೆಡಿಎಸ್ ಅನ್ನು ಅಧಿಕಾರಕ್ಕೆ ತರಬೇಕು. ಗೌಡರ ಆತ್ಮಕ್ಕೆ ಶಾಂತಿ ದೊರೆಯಬೇಕು”.

ಮತದಾರ:

“ನಾನು ಇವರಲ್ಲಿ ಯಾರಿಗಾದರೂ ಮತ ಯಾಕೆ ನೀಡಬೇಕು? ಈ ರಾಜ್ಯದ ಬಗ್ಗೆ, ಈ ರಾಜ್ಯದ ಅಭಿವೃದ್ಧಿಯ ಬಗ್ಗೆ ಯಾವ ಪಕ್ಷಕ್ಕೆ ಕಾಳಜಿ ಇದೆ?”


ಕಿರಿಕಿರಿ!

19 ಏಪ್ರಿಲ್ 13

 

ಸಖೀ,
ಅದೇಕೋ ಇಲ್ಲಿ ಕೆಲವರ ಅತಿಯಾದ ವಿನಯ,
ಇನ್ನು ಕೆಲವರ ಅತಿಯಾದ ಕೋಪಕ್ಕಿಂತಲೂ
ಅತಿಯಾಗಿ ಕಿರಿಕಿರಿ ಉಂಟುಮಾಡುತ್ತಿರುತ್ತದೆ!


ಹೇಳಿಕೆ ನೀಡುವವರು!

19 ಏಪ್ರಿಲ್ 13

 

ಎಲ್ಲೋ ಒಂದು ಕಡೆ ಉಗ್ರವಾದಿಗಳಿಂದ ಬಾಂಬುಸ್ಫೋಟ ಅಥವಾ ಇನ್ನಾವುದೇ ದುಷ್ಕೃತ್ಯ ನಡೆದಾಗ, ಅದರ ಬಗ್ಗೆ ತನಿಖೆ ನಡೆದು ನಿಜವಾದ ಕಾರಣಕರ್ತರು ಯಾರೆಂದು ಜನರಿಗೆ ಗೊತ್ತಾಗುತ್ತದೋ ಇಲ್ಲವೋ, ಆದರೆ, ಈ ರಾಜಕಾರಣಿಗಳು, ದುಷ್ಕೃತ್ಯ ನಡೆದ ಎರಡೇ ನಿಮಿಷಗಳಲ್ಲಿ, ಆ ದುಷ್ಕೃತ್ಯಗಳ ಹಿಂದೆ ಯಾರ ಕೈವಾಡ ಇದೆಯೆಂಬುದನ್ನು ಘಂಟಾಘೋಷವಾಗಿ ಹೇಳಿಕೆ ನೀಡುತ್ತಾರೆ. 

ಒಂದೊಮ್ಮೆ ಇಂಥವರನ್ನು ನ್ಯಾಯಾಲಯಗಳಿಗೆ ಎಳೆದು ಸಾಕ್ಷಿ ನೀಡುವಂತೆ ಮಾಡಿದ್ದೇ ಆದರೆ, ಮುಂದೆ ಯಾವೊಬ್ಬ ರಾಜಕಾರಣಿಯೂ ಈ ರೀತಿ ಹೇಳಿಕೆ ನೀಡುವುದಿಲ್ಲ.