ಸಮ್ಮತಿದಾನ!

28 ಡಿಸೆ 13

ಅಪ್ಪಯ್ಯನವರ ಮಾತು, “ಎಲ್ಲಾ ದಾನಗಳಿಗಿಂತ ಮೇಲು ಸಮ್ಮತಿದಾನ”
ಅರವಿಂದ ಕೇಜ್ರೀವಾಲ, ನಿನ್ನ ಯೋಜನೆಗಳಿಗಿದೆ ನನ್ನಯ ಸಮ್ಮತಿದಾನ
ಬೆಳದಿಂಗಳಿಗೆ ಕೊಡೆ ಹಿಡಿಯದಿರು, ಸಾಗುತಿರು ನೀನು ಸದಾ ನಿಧಾನ!


ಜೈ ಅಣ್ಣಾ ಹಜಾರೆ!

28 ಡಿಸೆ 13

 

ಸಖೀ
ಯಾರೋ ಬಿತ್ತಿದ ಬೀಜ 
ಎಂದೋ ಸುರಿದ ಮಳೆಗೆ
ಮೊಳಕೆಯೊಡೆದಿದೆ ದಿಲ್ಲಿಯಲ್ಲಿಂದು;

ನಿಸ್ವಾರ್ಥ ಆಶಯಗಳೊಂದಿಗೆ
ಅಂದು ಬೀದಿಗಿಳಿದ ಮುದಿಜೀವ
ಅಣ್ಣಾ ಹಜಾರೆ ನೆನಪಿನಲ್ಲಿರಲಿಂದು!


ತುಲನೆ!

28 ಡಿಸೆ 13

 

ಸಖೀ,
ನನ್ನನ್ನು ಸದಾ ಇತರರ ಜೊತೆಗೆ ತುಲನೆ ಮಾಡುತ್ತಾ ದೂಷಿಸುತ್ತಾ ಇರುವರು ನನ್ನವರು,
ಸೇಬಿನ ತುಲನೆ ಕಿತ್ತಳೆಯೊಂದಿಗೂ ಕಿತ್ತಳೆಯ ತುಲನೆ ಸೇಬಿನೊಂದಿಗೂ ಮಾಡುತಿಹರು,
ನನ್ನ ಹಿನ್ನೆಲೆಗೂ ಆ ಇತರರ ಹಿನ್ನೆಲೆಗೂ ಸಾಮ್ಯವೇ ಇಲ್ಲದಿರುವುದನ್ನೇಕೆ ಅರಿತಿಲ್ಲದಿಹರು?


ಪ್ರತಿಕ್ರಿಯೆಯೇ ಜೀವನ!

27 ಡಿಸೆ 13

 

ಸಖೀ,
ಪ್ರತಿಕ್ರಿಯೆಗಳೇ ಈ ನಮ್ಮ ಜೀವನದ ಒಳಗುಟ್ಟು
ಎಲ್ಲವೂ ಇನ್ನಾವುದರಿಂದಲೋ ಆಗಿಹುದು ಹುಟ್ಟು
ಉತ್ತೇಜಿಸುವಿನ್ನಾವುದೋ ಕ್ರಿಯೆಗೆ ಪ್ರತಿಕ್ರಿಯೆ ಇಲ್ಲಿ
ಕಾರಣ ಇಲ್ಲದೇ ತಾನಾಗಿ ಜನಿಸದು ಏನೇನೂ ಇಲ್ಲಿ!


ಕೊಂಚವಾದರೂ!

27 ಡಿಸೆ 13

 

ಸಖೀ,
ಮುಗ್ಗರಿಸಿ, ಬಿದ್ದು, ಎದ್ದು,
ಸಾವರಿಸಿಕೊಳ್ಳುವುದರಲ್ಲೇ
ಮುಗಿಯುತ್ತದೆ ಅರ್ಧ ಜೀವನ,

ಸಾವರಿಸಿಕೊಂಡ ನಂತರದ
ನಮ್ಮ ಬಾಳಾದರೂ ಆಗಿರಲಂತೆ
ಬಿಡು, ಕೊಂಚ ಪಾವನ!


ವಿರಾಜಮಾನಿ ನೀನೇ!

26 ಡಿಸೆ 13

 

ಸಖೀ,
ಹೆಚ್ಚಿನೆಲ್ಲಾ ಕವಿಗಳಿಗೆ, ಕವಯಿತ್ರಿಯರಿಗೆ 
ತಮ್ಮ “ಹಿಂದಿನ ಪ್ರೀತಿ” ಸಂತೆಯಲ್ಲೋ, 
ಜಾತ್ರೆಯಲ್ಲೋ, ಮದುವೆಮನೆಯಲ್ಲೋ, 
ಹೋಟೇಲಿನಲ್ಲೋ ಸಿಕ್ಕಿ, ಮನದೊಳಗೆ 
ತಳಮಳ ಉಂಟುಮಾಡಿ, ತಮ್ಮ ಹಳೆಯ 
ನೆನಪುಗಳನ್ನೆಲ್ಲಾ ಕೆದಕಿ, ನಿಂತ ನೆಲ 
ಪಾದದಡಿಯಿಂದ ಸರಿದುಹೋದಂತೆ 
ಭಾಸವಾಗುವಂತೆ ಮಾಡಿಹೋಗುತ್ತಿರುತ್ತದೆ;

ನನಗೆ ಆ ಭಾಗ್ಯ ಇಲ್ಲ ಕಣೇ… 
ಅಂದೂ ನೀನೇ … 
ಇಂದೂ ನೀನೇ… 
ನನ್ನ ಕಲ್ಪನಾಲೋಕದಲ್ಲಿ 
ಸದಾಕಾಲ ವಿರಾಜಮಾನಿ ನೀನೇ!


ಕೆಂಗೆನ್ನೆಯ ಹುಡುಗಿ!

26 ಡಿಸೆ 13

 

ಕೆಂಪುಗೆನ್ನೆಯ ಹುಡುಗಿ 
ನಾಚಿದರೂ ಅರಿವಾಗುವುದಿಲ್ಲ
ಕೋಪಿಸಿಕೊಂಡರೂ ತಿಳಿಯುವುದಿಲ್ಲ
ಆದರೆ ತಮಾಷೆಗೂ ಸಾಯುತ್ತೇನೆಂದರೆ
ಭಯಪಡುವ ಪರಿ ಕೂಡಲೇ ತಿಳಿಯುವುದಲ್ಲಾ
ಕೆಂಗೆನ್ನೆಗಳು ಭಯದಿಂದ ಬಿಳಿಚಿಕೊಳ್ಳುವುದಲ್ಲಾ
ಎರಡು ಕಣ್ಣುಗಳಿಂದಲೂ ಹನಿಗಳು ಜಾರುವವಲ್ಲಾ?!


ಬಂಡಾಯ ನಿನಗಿರಲಿ!

26 ಡಿಸೆ 13

ನನ್ನ ತಲೆಯಲ್ಲಿ ಬಿತ್ತದಿರು ಬೀಜ ನಾನೂ ಶೂದ್ರನೆಂದು
ನೆನಪಿಸದಿರು ನಾನು ಮರೆಯಲೆತ್ನಿಸುವ ಮಾತನಿಂದು
ನನ್ನನ್ನೂ ನನ್ನವರನ್ನೂ ಯಾರೋ ತುಳಿಯುತ್ತಿಹರೆಂದು

ಎದ್ದು ನಡೆದಿದ್ದೇನೆ ಒದ್ದು ನಡೆದಿದ್ದೇನೆ ಸದ್ದುಮಾಡದೇ
ಬದುಕಿದ್ದೇನೆ ಇಷ್ಟು ವರ್ಷ ಯಾರ ಹಂಗಿಗೂ ಬೀಳದೇ
ಕಂಡುಕೊಂಡಿದ್ದೇನೆ ಬಾಳಿನಲ್ಲಿ ನಾನು ದಾರಿ ನನ್ನದೇ

ನೀನು ಕಟ್ಟಿಕೊಡುವ ಬುತ್ತಿ ಬಾರದು ಬಾಳದಾರಿಗುಂಟ
ನಿಜವಾಗಿ ಇಲ್ಲಿ ಯಾರ ಮೇಲಾದರೂ ನಂಬಿಕೆ ಉಂಟಾ
ನಿನ್ನಲ್ಲೀಗ ಬರೀ ಸ್ವಾರ್ಥ ನನ್ನರಿವಿನರಿವು ನಿನಗುಂಟಾ?

ಬಂಡಾಯದ ಕೂಗು ನನ್ನ ಬಾಲ್ಯದಲೂ ಕೇಳಿಸಿತ್ತೆನಗೆ
ಅಂದೂ ಇಷ್ಟವಾಗಲಿಲ್ಲ ಹಿಡಿಸಿದ್ದು ನವೋದಯವೆನಗೆ
ಜಾತಿ-ಮತಗಳ ಬಿಟ್ಟು ನಾನಾನಾಗಿರುವ ಆಸೆಯೆನಗೆ!


ಮೊದಲ ಭೇಟಿಯೇ ಕೊನೆಯ ಭೇಟಿ ಆಗಬೇಕಿತ್ತೇ?

26 ಡಿಸೆ 13

shailajamma

 

ನನಗೆ ಇಲ್ಲೋರ್ವರು ಸ್ನೇಹಿತರಿದ್ದಾರೆ. ಅವರದೊಂದು ಅಂಗಡಿ ಇದೆ. 

ಆ ಸ್ನೇಹಿತರು ಯಾರು, ಅವರ ಅಂಗಡಿ ಯಾವುದರದ್ದು, ಅನ್ನುವುದು ಸದ್ಯ ಅಪ್ರಸ್ತುತ.

ಕಳೆದ ಏಳನೇ ದಿನಾಂಕದಂದು ಪೂರ್ವಾಹ್ನ ಹನ್ನೊಂದರ ಸುಮಾರಿಗೆ, ಅವರ ಅಂಗಡಿಯ ಮುಂದೆ ಹಾದುಹೋಗುತ್ತಿದ್ದಾಗ, ಆ ಸ್ನೇಹಿತರ ಮಗ ಮಾತ್ರ ಅಂಗಡಿಯಲ್ಲಿದ್ದ. 

ಆತನನ್ನು ಮಾತಾಡಿಸುತ್ತಾ ನಿಂತಿದ್ದೆ. ಆಗ ಆತನಿಗೆ ಆತನ ತಾಯಿಯ ಕರೆ ಬಂತು.

ತಾಯಿಯೊಂದಿಗೆ ಮಾತಾಡಿ ಮುಗಿಸಿದ ಆತ “ಅಂಕಲ್… ನಾನು ಮನೆ ಬಾಗಿಲಿಗೆ ಹೊರಗಡೆಯಿಂದ ಚಿಲಕ ಹಾಕಿಕೊಂಡು ಬಂದಿದ್ದೇನಂತೆ. ಹೋಗ್ತಾ ಬಾಗಿಲು ತೆರೆದುಕೊಟ್ಟುಹೋಗಿ ಪ್ಲೀಸ್” ಅಂದ.

ಸರಿ ಅಂತ ಅವರ ಮನೆಯ ಕಡೆಗೆ ಹೋದೆ.

ಬಾಗಿಲು ತೆರೆದು ಒಳಗಡಿಯಿಡುವಾಗ ಅಲ್ಲಿ ನನಗೆ ಪರಿಚಯವಿಲ್ಲದ ಓರ್ವ ಮಹಿಳೆ ಕೂತಿದ್ದರು. 

ಆಕೆ ಸುಮಾರು ಐವತ್ತೈದರಿಂದ ಅರವತ್ತು ವರುಷ ಪ್ರಾಯದ ಮಹಿಳೆ.

ನನ್ನ ಹೆಸರು ಆಕೆಗೆ ಗೊತ್ತಿಲ್ಲ. ಆಕೆಗೆ ಹೆಸರು ನನಗೆ ಗೊತ್ತಿಲ್ಲ.

ಅವರು ಹಿಂದಿನ ದಿನ ಅಲ್ಲಿಗೆ ಅತಿಥಿಯಾಗಿ ಬಂದ್ದಿದ್ದವರಂತೆ. 

ಪರಿಚಯ ಮಾಡಿಕೊಳ್ಳುವ ಯತ್ನದಲ್ಲಿ “ನಮಸ್ಕಾರ ಅಮ್ಮ” ಅಂದೆ.

“ನಮಸ್ಕಾರ… ಅಮ್ಮ ಅಂದೀಯಲ್ಲಾ, ನೀನೂ ನಂಗೆ ಮಗನೇ ಕಣಯ್ಯಾ ಇನ್ ಮೇಲೆ” ಅಂದರು. 

“ಅದು ಸರಿ, ನಾನು ಯಾರು ಅಂತ ನಿಮಗೆ ಗೊತ್ತಾ?” ಎಂದು ಕೇಳಿದೆ.

“ನೀನು ಯಾರಾದರೇನು. ನನ್ ಮಗ ಅಂತ ಅದ್ನಲ್ಲಾ ನಾನು. ನೀನು ದೇವರನ್ನು ನಂಬುತ್ತೀ ಕಣಯ್ಯಾ. ಆದರೆ ಪೂಜೆ ಗೀಜೆ ಮಾಡೋಲ್ಲ. ದೇವರಿಗೆ ಕೈ ಮುಗಿಬೇಕೋ ಕೈ ಮುಗೀಬೇಕು, ದೊಡ್ಡವರಿಗೆ ಬೆಲೆ ಕೊಡಬೇಕೋ ಬೆಲೆ ಕೊಡಬೇಕು. ಅದನ್ನು ಬೇರೆಯವರು ನೋಡಲಿ ಅಂತ ಮಾಡಲ್ಲ. ಬಣ್ಣ ಗಿಣ್ಣ ಇಲ್ಲ, ನೀನು ಬಣ್ಣದ ಮನುಷ್ಯ ಅಲ್ಲ ಕಣಯ್ಯಾ”.

ಒಂದೇ ಸಮನೆ ನುಡಿಯತೊಡಗಿದರು. 

ಈ ಮಹಿಳೆಯಲ್ಲಿ ಏನೋ ವಿಶೇಷ ಜ್ಞಾನ ಇದೆ ಎಂಬ ಅರಿವಾಗಲು ಹೆಚ್ಚು ಸಮಯ ಬೇಕಾಗಿರಲಿಲ್ಲ ನನಗೆ.

ಕೂಡಲೇ ನಾನು ಒಂದು ಪ್ರಶ್ನೆ ಮಾಡಿದೆ

“ನನ್ನನ್ನು ನಂಬಬಹುದಾ ಜನರು?”

“ನಿನ್ನನ್ನು ನಂಬಲ್ಲಾ ಜನರು”

“ನನ್ನನ್ನು ನಂಬಬಾರದಾ?”

“ಅಲ್ಲ ಕಣಯ್ಯಾ, ನಂಬಬಾರದು ಅಂತ ಹೇಳ್ತಾ ಇಲ್ಲ, ನಾನು. ಆದರೆ ನಿನ್ನನ್ನು ನಂಬಲ್ಲ ಜನರು”.

“ಯಾಕೆ?”

“ಯಾಕಂದರೆ ನೀನು ಒರಿಜಿನಲ್ ಅಲ್ವಾ? ಡುಪ್ಲಿಕೇಟ್ ಆಗಿದ್ರೆ ನಂಬುತ್ತಿದ್ದರು. ಎಲ್ಲರೂ ಮಾಡಿದ್ದನ್ನು ನೀನು ಮಾಡೋ ತರಹ ಡುಪ್ಲಿಕೇಟ್ ಆಗಿದ್ರೆ ನಂಬುತ್ತಿದ್ದರು. ಏನಾದರೂ ಮಾಡಿದ್ರೆ ಹಾಗೆ ಮಾಡ್ಬಾರ್ದು, ಹೀಗೆ ಮಾಡ್ಬಾರ್ದು ಅಂತೀಯಲ್ಲಾ, ಅದಕ್ಕೆ ಜನ ನಿನ್ನನ್ನು ನಂಬಲ್ಲ”.

ಹೀಗೆಯೇ ನನ್ನ ಬಗ್ಗೆ ಸುಮಾರು ಮೂವತ್ತು ನಿಮಿಷ ಮಾತನಾಡಿದರು.

“ನಾನು ಕೇವಲ ಮೂರನೇ ಕ್ಲಾಸ್ ಫೇಲ್” ಅಂತ ಅಂದಿದ್ದ ಆಕೆ, ಅಂದು ನನ್ನ ಬಗ್ಗೆ ಆಡಿದ ಮಾತುಗಳಲ್ಲಿ ಒಂದು ಕೂಡ “ಹಾಗಲ್ಲ ಅಥವಾ ಅದು ಸರಿಯಲ್ಲ” ಅನ್ನುವಂತಿರಲೇ ಇಲ್ಲ.

“ನಮ್ ಮನೆಗೆ ಬಾರಯ್ಯಾ ಶಿವಮೊಗ್ಗಕ್ಕೆ ಬಂದಾಗ… ನನ್ ಮನೆ ಬಾಗಿಲು ಯಾವಾಗಲೂ ತೆರೆದಿರುತ್ತೇ ನಿನಗೆ” ಅಂದಿದ್ದರು.

ಎಂಟರಂದು ನಾನು ಉಡುಪಿಗೆ ತೆರಳಿದ್ದೆ. ಅವರು ಹದಿಮೂರಕ್ಕೆ ಶಿವಮೊಗ್ಗಕ್ಕೆ ತೆರಳಿದ್ದರು. 

ಹದಿನಾಲ್ಕರಂದು ಕರೆಮಾಡಿ ಮಾತಾಡಿದ್ದೆ. 

ಕಾರಿನಲ್ಲಿ ಬೆಂಗಳೂರಿಗೆ ಮರಳುವಾಗ ಶಿವಮೊಗ್ಗ ದಾರಿಯಾಗಿ ಬಂದು ತಮ್ಮ ಮನೆಗೆ ಬರುತ್ತೇನೆ ಅಂದಿದ್ದೆ. 

“ಸರಿ ಕಣಯ್ಯಾ ನನಗೂ ಖುಷಿಯಾಗುತ್ತೆ ಬಾ” ಅಂದಿದ್ದರು.

ಅವರ ಹೆಸರು ಶೈಲಜಮ್ಮ.

ಕಳೆದ ಸೋಮವಾರ ಮುಂಜಾನೆ ಒಂಬತ್ತು ಘಂಟೆ ಸುಮಾರಿಗೆ ನನಗೊಂದು ಕರೆಬಂತು.

ಎರಡುದಿನಗಳ ಹಿಂದೆ ತನ್ನ ನಾದಿನಿ ನಿಧನರಾದ ಹಿನ್ನೆಲೆಯಲ್ಲಿ ಶಿವಮೊಗ್ಗದಿಂದ ಚನ್ನಗಿರಿಗೆ ಹೋಗಿದ್ದ ಶೈಲಜಮ್ಮ, ಸೋಮವಾರ ಮುಂಜಾನೆ ಏಳು ಘಂಟೆಗೆ ಚನ್ನಗಿರಿಯಲ್ಲೇ ಹಠಾತ್ ಹೃದಯಾಘಾತವಾಗಿ ನಿಧನರಾಗಿಬಿಟ್ಟಿದ್ದಾರೆ ಎಂಬ ಸುದ್ದಿಯೂ ಬಂತು.

ಬೆಂಗಳೂರಿನಲ್ಲಿ ದಶಂಬರ ಏಳರಂದು ನಡೆದಿದ್ದ ನಮ್ಮ ಆ ಮೊದಲ ಭೇಟಿ, ನಮ್ಮೀರ್ವರ ಕೊನೆಯ ಭೇಟಿಯೂ ಆಗಿತ್ತು. 

ಹಾಗಾದರೆ ಆ ಭೇಟಿ ಯಾಕೆ ಆಗಿತ್ತು? 

ನನ್ನ ಸ್ನೇಹಿತರ ಮಗ, ಹಿಂದೆಂದೂ ಬಾಗಿಲಿಗೆ ಹೊರಗಡೆಯಿಂದ ಚಿಲಕ ಹಾಕಿಕೊಂಡು ಹೋಗದವನು ಅಂದು ಯಾಕೆ ಹಾಗೆ ಮಾಡಿದ್ದ?

ನನಗಿನ್ನೂ ಉತ್ತರ ಸಿಕ್ಕಿಲ್ಲ.

ವಿಚಿತ್ರ ಅನಿಸುತ್ತದೆ. ಅಲ್ಲವೇ?


ನಮ್ಮತನವಿರಲಿ!

25 ಡಿಸೆ 13

 

ಸಖೀ,
ನಾನು ಅನುಭವಿಸಿದುದಕ್ಕೆ ನನ್ನದೇ ಪ್ರತಿಸ್ಪಂದನ
ನೀನು ಅನುಭವಿಸಿದುದಕ್ಕೆ ನಿನ್ನದೇ ಪ್ರತಿಸ್ಪಂದನ
ನೀನು ನಾನಾಗಲಾರೆ ನಿನ್ನತನವನೇ ನೀ ಕೊಂದು
ನಾನು ನೀನಾಗಲಾರೆ ನನ್ನತನವನೇ ನಾ ಕೊಂದು!