ಮಾನವ – ದಾನವ!

28 ಆಕ್ಟೋ 13

ಸಖೀ,
ಹಿಂದಿನ ಕಾಲದಲ್ಲೂ ಇದ್ದರು ಮಾನವರೊಂದಿಗೇ ದಾನವರು
ವಿಕಾರವಾದ ಚಿತ್ರಗಳಲ್ಲೆಮಗೆ ಭಯಂಕರವಾಗಿ ತೋರಿಸಿದ್ದರು

ಅಷ್ಟೇನೂ ವಿಕಾರವಾಗಿ ಇರಲೇ ಇಲ್ಲ ನಿಜವಾಗಿಯೂ ಅವರು
ದಾನವವೇಂದ್ರನಾದ ರಾವಣನೂ ಸುಂದರನಾಗಿದ್ದ ಎನ್ನುವರು

ನಮ್ಮ ನಡುವಿನಲ್ಲೂ ಇಲ್ಲಿಹರು ಮಾನವರೂಪದಲ್ಲೇ ದಾನವರು
ಅವರ ರಾಕ್ಷಸೀ ಗುಣಗಳಿಗೆ ಬಲಿಯಾಗುತಿಹರು ಅಮಾಯಕರು!


ವಸಂತಳಂಥ ಸೌಂದರ್ಯ!

28 ಆಕ್ಟೋ 13

ವಸಂತಳಂಥ ನಿನ್ನ ಸೌಂದರ್ಯಕ್ಕಿಲ್ಲಾವ ಹೋಲಿಕೆ
ದೇವರ ಆಣೆಗೂ ಅತಿ ಸುಂದರ ನಿನ್ನಂದವಿಹುದು

ಬಲುಗಾಂಭೀರ್ಯದಿಂದ ಬರುತಿರುವಾಗ ನೀನಡೆದು 
ಆಗಸದಿಂದ ಅಪ್ಸರೆಯೇ ಕೆಳಗಿಳಿದು ಬಂದಂತಿಹುದು
ನನಗಾಗುವೀ ಆನಂದ ನನ್ನನ್ನೇ ಮೈಮರೆಸುತಿಹುದು

ಸುಂದರ ಹಾವಭಾವ ಮನೋಹರ ಸೌಂದರ್ಯ ನಿನ್ನದು
ರವಿಕಿರಣಗಳೂ ಸೋಕದಂತೆ ಕಾಪಾಡುವ ಕೆಲಸ ನನ್ನದು
ನಿನ್ನ ಮೇಲೆ ದೃಷ್ಟಿನೆಟ್ಟು ನೋಡುವ ಧೈರ್ಯ ಇಲ್ಲಾರಿಗಿಹುದು

ನೀನೆನಗೆ ದಕ್ಕಿಹೆಯಾದರೆ ಅದು ನನ್ನ ಸೌಭಾಗ್ಯವಿಹುದು
ನನ್ನನ್ನು ನಿನ್ನವನನ್ನಾಗಿಸಿದುದರಲ್ಲಿ ನಿನ್ನ ಸಹಕಾರವಿಹುದು
ಒಂದಾಗಿದ್ದೇವೆ ಇಂದಿಲ್ಲಿ, ಅಸಾಧ್ಯ ಇನ್ನು ದೂರವಾಗುವುದು


ಕಣ್ಣುಗಳೆರಡಾದರೂ ಕತೆಯೊಂದೇ!

27 ಆಕ್ಟೋ 13

||ಕಣ್ಣುಗಳೆರಡಾದರೂ ಕತೆಯೊಂದೇ
ಸ್ವಲ್ಪ ಮೋಡ, ಅಲ್ಪವೇ ಸುರಿದ ಮಳೆ,
ಆದರೂ ಅಲ್ಲಿದ್ದುದು ಕತೆಯೊಂದೇ||

ಚಿಕ್ಕಚಿಕ್ಕೆರಡು ಝರಿಗಳಲ್ಲಿ
ಹರಿಯುತ್ತಿರುತ್ತದೆ
ಕೇಳೋರಿದ್ದರೂ, ಇಲ್ಲದಿದ್ದರೂ, ಹೇಳುತ್ತಿರುತ್ತದೆ
ಸ್ವಲ್ಪ ಬರೆದುದರಿಂದ, ಸ್ವಲ್ಪ ತನ್ನ ನೆನಪಿನಿಂದ,

||ಸ್ವಲ್ಪ ಮೋಡ, ಅಲ್ಪವೇ ಸುರಿದ ಮಳೆ,
ಆದರೂ ಅಲ್ಲಿದ್ದುದು ಕತೆಯೊಂದೇ
ಕಣ್ಣುಗಳೆರಡಾದರೂ ಕತೆಯೊಂದೇ||

ಒಂದಷ್ಟು ಅರಿತಿರುವುದು
ಇನ್ನಷ್ಟು ಅರಿಯದೇ ಉಳಿದುದು
ಕಣ್ಣೀರು ನಿಂತೆಡೆಯಲ್ಲೇ, ಕತೆಯೂ ಪೂರ್ಣಗೊಂಡಿಹುದು
ಹೊಸದೆಂದನಿಸಿದರೂ ಈ ಕತೆ ಹಳೆಯದೇ

||ಸ್ವಲ್ಪ ಮೋಡ, ಅಲ್ಪವೇ ಸುರಿದ ಮಳೆ,
ಆದರೂ ಅಲ್ಲಿದ್ದುದು ಕತೆಯೊಂದೇ
ಕಣ್ಣುಗಳೆರಡಾದರೂ ಕತೆಯೊಂದೇ||

ಒಂದು ಮುಗಿಯುತಿದ್ದಂತೆಯೇ
ಇನ್ನೊಂದು ನೆನಪಾಗುತಿಹುದು
ಮರೆತ ಮಾತುಗಳೆಲ್ಲಾ ನೆನಪಾಗಿ
ತುಟಿಗಳ ಮೇಲೆ ಕತೆ ಮೂಡುತಿಹುದು
ಎರಡು ಕಣ್ಣುಗಳದೇ ಕತೆಯಿದು

||ಸ್ವಲ್ಪ ಮೋಡ, ಅಲ್ಪವೇ ಸುರಿದ ಮಳೆ,
ಆದರೂ ಅಲ್ಲಿದ್ದುದು ಕತೆಯೊಂದೇ
ಕಣ್ಣುಗಳೆರಡಾದರೂ ಕತೆಯೊಂದೇ||

ಹಿಂದೀ ಹಾಡಿನ ಭಾವಾನುವಾದದ ಯತ್ನ: ದೋ ನೈನಾ ಇಕ್ ಕಹಾನೀ

http://www.youtube.com/watch?v=glWOVwU3uss


ಕೃತಿಚೌರ್ಯ?

27 ಆಕ್ಟೋ 13

 

ನನ್ನ ಮನದಲ್ಲಿ ಇಂದು ಮೂಡಿ, ಅಕ್ಷರರೂಪ ಪಡೆದಿರುವ ಭಾವನೆಗಳು, ಹಿಂದೆಂದೋ ಇನ್ಯಾರದೋ ಮನದಲ್ಲೂ ಮೂಡಿ ಅಕ್ಷರರೂಪ ಪಡೆದಿದ್ದವೆಂದಾದರೆ ಹಾಗೂ ಆ ಬಗ್ಗೆ ನನಗೆ ಮಾಹಿತಿಯೇ ಇಲ್ಲವೆಂದಾದರೆ, ಅದರಲ್ಲಿ ನನ್ನದೇನು ತಪ್ಪು?

ನನ್ನ ಮಾತುಗಳನ್ನು ಕೃತಿಚೌರ್ಯ ಅನ್ನುವವರಿಗೆ ಒಂದು ಪ್ರಶ್ನೆ!

ಈ ಕಾರಣದಿಂದಾಗಿಯೇ, ನಾನು “ಓದುವುದು ಬಹಳ ಕಡಿಮೆ”


ಬಾಳಿನರ್ಥ!

27 ಆಕ್ಟೋ 13

 

ಸಖೀ,
ನಾನು ಬರೆದಷ್ಟೂ ಕವಿತೆಗಳು
ನಿನಗೆ ಅರ್ಥವಾಗದೇ ಇದ್ದರೂ
ಚಿಂತೆ ಇಲ್ಲ ಕಣೇ, ನನಗೆ;

ನಾನು ಬಾಳಿದ ರೀತಿಯದು
ನಿನಗೆ ಅರ್ಥವಾಗಿದೆಯಾದ್ರೆ
ಅಷ್ಟೇ ಸಾಕು, ಸಾಕು ನನಗೆ!


ಪ್ರೀತಿ!

27 ಆಕ್ಟೋ 13

“ಅವನು ಅಷ್ಟೂ ಹುಡುಗಿಯರನ್ನು ಪ್ರೀತಿಸುತ್ತಾನಂತೆ. ಅವನಿಗೇನು ಹುಚ್ಚ? ಅವಳೂ ಅಷ್ಟೇ, ಅದೆಷ್ಟೊ ಹುಡುಗರನ್ನು ಪ್ರೀತಿಸುತ್ತಾಳಂತೆ. ಇದಕ್ಕೇ ಏನನ್ನಬೇಕೋ ಆ ದೇವರಿಗೇ ಗೊತ್ತು”

ಈ ಮಾತುಗಳು ಇತ್ತೀಚೆಗೆ ನನ್ನ ಕಿವಿಗಳಿಗೆ ಬಿದ್ದಿದ್ದವು. ಆಗ ನನ್ನ ಮನದಲ್ಲಿ ಉಂಟಾದ ಸ್ಪಂದನಗಳು, ರೂಪುಗೊಂಡ ಭಾವಗಳು ಹಾಗೂ ಪ್ರತಿಕ್ರಿಯೆಗಳಿವು: 

ದಶರಥ ಮಹಾರಾಜನಿಗೆ ಮೂರು ಜನ ಪತ್ನಿಯರು. ಪಾಂಡು ಚಕ್ರವರ್ತಿಗೆ ಇಬ್ಬರು ಪತ್ನಿಯರು. ದ್ರೌಪದಿಗೆ ಐದು ಮಂದಿ ಪತಿಯರು. ದಶರಥ ಹಾಗೂ ಪಾಂಡುವಿಗೆ ತಮ್ಮ ಎಲ್ಲಾ ಪತ್ನಿಯರ ಮೇಲೆ ಪ್ರೀತಿ ಇದ್ದಿರಲಿಲ್ಲವೇ? ದ್ರೌಪದಿಗೆ ತನ್ನ ಐದೂ ಮಂದಿ ಪತಿಯರ ಮೇಲೆ ಪ್ರೀತಿ ಇದ್ದಿರಲಿಲ್ಲವೇ?

ಆ ಪ್ರಶ್ನೆಗಳಿಗೆ “ಹೌದು” ಎನ್ನುವುದು ನಮ್ಮ ಉತ್ತರವೆನ್ನುವುದಾದರೆ, ಈಗಲೂ, ಒಬ್ಬ ವ್ಯಕ್ತಿ (ಗಂಡಸೋ ಅಥವಾ ಹೆಂಗಸೋ) ಒಬ್ಬರಿಗಿಂತ ಹೆಚ್ಚು ಮಂದಿಯನ್ನು ಪ್ರೀತಿಸುವುದು ಸಾಧ್ಯ ಅನ್ನುವುದೂ ಸತ್ಯವಲ್ಲವೇ?

ನಾನು ದೈಹಿಕ ಅಥವಾ ಲೈಂಗಿಕ ಸಂಬಂಧಗಳ ಬಗ್ಗೆ ಮಾತಾಡುತ್ತಿಲ್ಲ. 

ಮಾತಾಪಿತರು ತಮ್ಮ ಎಲ್ಲಾ ಮಕ್ಕಳನ್ನೂ ಸಮಾನವಾಗಿ ಪ್ರೀತಿಸಬಹುದಾದರೆ, ನಾವು ಅನೇಕ ಸ್ನೇಹಿತರನ್ನು ಪ್ರೀತಿಸಲಾಗದು ಎಂದು ಹೇಗೆ ಹೇಳಲು ಸಾಧ್ಯ?

ಒಬ್ಬಳು ಹುಡುಗಿ ತನ್ನ ಅನೇಕ ಸ್ನೇಹಿತೆಯರನ್ನು ಸಮಾನವಾಗಿ ಪ್ರೀತಿಸಬಹುದು. ಒಬ್ಬ ಹುಡುಗ ತನ್ನ ಅನೇಕ ಸ್ನೇಹಿತರನ್ನು ಸಮಾನವಾಗಿ ಪ್ರೀತಿಸಬಹುದು. ಹಾಗಿರುವಾಗ, ಒಬ್ಬಳು ಹುಡುಗಿ ತನ್ನ ಅನೇಕ ಸ್ನೇಹಿತರನ್ನು ಹಾಗೂ ಒಬ್ಬ ಹುಡುಗ ತನ್ನ ಅನೇಕ ಸ್ನೇಹಿತೆಯರನ್ನು ಸಮಾನವಾಗಿ ಪ್ರೀತಿಸಲಾಗದು ಏಕೆ?

ನಮ್ಮೊಳಗೆ ಪ್ರೀತಿ ಅನ್ನುವುದು ಲಿಂಗಭೇಧವಿಲ್ಲದೇ ಹುಟ್ಟಲಾರದೇ, ಬೆಳೆಯಲಾರದೇ?

ಪ್ರೀತಿ ಅಂದಕೂಡಲೇ, ಅದಕ್ಕೆ ಲೈಂಗಿಕ ಸಂಬಂಧ ಅನ್ನುವ ಹಣೆಪಟ್ಟಿಯನ್ನು ಕಟ್ಟಿಯೇ ತೀರಬೇಕೇ? 

ಗಂಡು ಹೆಣ್ಣಿನ ನಡುವಣ ಪವಿತ್ರ ಪ್ರೀತಿಗೆ ವಿಪರೀತ ಅರ್ಥ ನೀಡುವ ಅಗತ್ಯ ಇದೆಯೇ? 

ನಾವು ಒಬ್ಬರಿಗಿಂತ ಹೆಚ್ಚು ಮಂದಿಯನ್ನು ತಮ್ಮ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸಲು ಸಾಧ್ಯವಿಲ್ಲವೇ?

ನಮ್ಮೊಳಗಿನ ಷಡ್ವೈರಿಗಳು ರಾಕ್ಷಸೀ ಅಂಶಗಳಾದರೆ, ತಾಮಸ ಗುಣಗಳಾದರೆ, ಪ್ರೀತಿ ಅನ್ನುವುದು ನಮ್ಮೊಳಗಿರುವ ಸಾತ್ವಿಕ ಗುಣ ಅಥವಾ ದೈವಿಕ ಅಂಶ. ಅದುವೇ ದೈವತ್ವ. ಈ ದೈವಿಕವಾದ ಪ್ರೀತಿ ಹುಟ್ಟಲು ಹಾಗೂ ಬೆಳೆಯಲು ದೈವಪ್ರೇರಣೆಯ ಅಗತ್ಯವೂ ಇದೆ. ಅದು ಮಾನವರ ಹಿಡಿತಕ್ಕೂ ಮೀರಿದ್ದು. ಹಾಗಿರುವಾಗ, ಯಾರನ್ನೇ ಆಗಲಿ ನಾವು ಪ್ರೀತಿಸುತ್ತೇವಾದರೆ, ಒಂದು ಆತ್ಮ ಇನ್ನೊಂದು ಆತ್ಮದ ನಡುವೆ ಸಂಬಂಧ ಏರ್ಪಡಿಸಿಕೊಳ್ಳುತ್ತಿದೆ ಎಂದು ಅರ್ಥ. ಅದುವೇ ಅಧ್ಯಾತ್ಮದ ಮೂಲ ಹಾಗೂ ಪಾರಮಾರ್ಥಿಕತೆಯ ಜೀವಾಳ.
*****


ಆಸ್ತಿಕ!

26 ಆಕ್ಟೋ 13

 

ದೇವಾ, 
ನೀನಿರುವೆಯಾದರೆ 
ನಾನೂ ಇರುವೆ;

ನಾನಿರುವೆನಾದರೆ, 
ದೇವಾ, 
ನೀನೂ ಇರುವೆ!


ಬಿಡುಗಡೆ!

26 ಆಕ್ಟೋ 13

 

ಸಖೀ,
ದಿನವೂ ಹೊಸಹೊಸ ಸೇರ್ಪಡೆ,
ದಿನವೂ ಕೆಲವರಿಂದ ಬಿಡುಗಡೆ, 
ಇನ್ನು ಸಾಕು ಎಂದಂದುಕೊಂಡೆ;

ನಾಲ್ಕಾರು ಘಂಟೆಗಳ ದ್ವಂದ್ವದ
ನಂತರ, ಗೊಂದಲದ ನಂತರ, 
ಕೊನೆಗೂ ಮೈಕೊಡವಿಕೊಂಡೆ!


ಅಮ್ಮನೇ ದಾಖಲೆ!

26 ಆಕ್ಟೋ 13

 

ಸಖೀ,
ತನ್ನ ಗಂಡನನ್ನು ನನ್ನಪ್ಪಯ್ಯನವರೆಂದ ಅಮ್ಮನನ್ನು ನಂಬಿದೆ 
ಶ್ರೀರಾಮನು ವಿಷ್ಣುವಿನ ಅವತಾರ ಎಂದ ಮಾತನ್ನೂ ನಂಬಿದೆ
ಅದಕ್ಕೆ ದಾಖಲೆಗಳನ್ನು ಕೇಳಿರದ ನಾನು, ಇದಕ್ಕೂ ಕೇಳಿರಲಿಲ್ಲ
ದಾಖಲೆಯೇ ನಿರ್ಧರಿಸುವುದೆಂದಾದರೆ ಯಾರಿಗೆ ಯಾರೂ ಇಲ್ಲ!


ವಯಸ್ಸಾದಂತೆ…!

26 ಆಕ್ಟೋ 13

 

ಸಖೀ,
ವಯಸಾಗುತ್ತಾ ಹೋದಂತೆ
ಅನುಭವ ಮತ್ತು ಜಾಣ್ಮೆಯನ್ನು
ಬೆಳೆಸಿಕೊಳ್ಳುತ್ತಾ ಹೋಗಬೇಕು;

ಅವೆರಡರ ಕೊರತೆ ನಮ್ಮಲ್ಲಿದ್ದರೆ
ಮೌನವಾಗಿ ಇರುವುದನ್ನಾದರೂ
ಬಾಳಿನಲ್ಲಿ ರೂಢಿಸಿಕೊಳ್ಳಬೇಕು;

ಪುಕ್ಕಟೆಯಾಗಿ ಅನ್ಯರಪಹಾಸ್ಯಕ್ಕೆ
ಬಲಿಯಾಗುವುದನ್ನು ಹೀಗಾದರೂ
ನಾವು ತಪ್ಪಿಸಿಕೊಳ್ಳುತ್ತಿರಬೇಕು!