ಮೌನ ಕೊಲೆ!

31 ಮೇ 14

 

ಸಖೀ,
ಸದಾ ಸಾವಿನ ಬಗ್ಗೆಯೇ 
ಮಾತನಾಡುತಿರಬೇಡ, 
ಎಂದು ಅನ್ನುತ್ತಿದ್ದವಳು;

ಒಮ್ಮೆಗೇ ಮೌನವಾಗಿ 
ಹೀಗೆನ್ನ ಕೊಲ್ಲುತ್ತಿರುವೆ 
ಇನ್ನು ಬದುಕೆಲ್ಲಿದೆ ಹೇಳು!


ಎಲ್ಲರಂತಾಗುವಾಸೆ!

31 ಮೇ 14

 

ಸಖೀ,
ಎಲ್ಲಿಂದಲೋ ನಕಲಿಸಿ ತಮ್ಮದೆಂಬವರ ಕಾಟ
ಅಭಿಪ್ರಾಯ ತಿಳಿಸಿ ಅನ್ನುವವರದ್ದು ಪೀಕಲಾಟ
ಸ್ವಂತಿಕೆ ಇಲ್ಲದಿದ್ದರೂ ಇಲ್ಲಿ ಸ್ವಂತ ಹೆಸರಿನಾಸೆ
ಎಲ್ಲರಂತಾಗುವ ಆಸೆಯನು ಬಿಟ್ಟು ಬಿಡು ಕೂಸೆ!


ಕುವೆಂಪು ತ್ರೇತಾಯುಗದಲ್ಲೆಲ್ಲಿದ್ದರು?

24 ಮೇ 14

ಸಖೀ,
ಕವಿತೆಗಳನ್ನು ಓದಿ ಅವುಗಳಿಗೆ ಸ್ಪಂದಿಸುತಿರುವುದು ಚಂದ
ಕವಿಯ ಮನವನ್ನು ಕೆಣಕಿದೆಯಾದರೆ ಅದರಲ್ಲೇನಿದೆ ಅಂದ
ಪ್ರೇಮಗೀತೆ ಬರೆದವನ ಪ್ರೇಯಸಿಯನೆಂದೂ ಹುಡುಕದಿರು
ರಾಮಾಯಣ ಬರೆದ ಕುವೆಂಪು ತ್ರೇತಾಯುಗದಲ್ಲೆಲ್ಲಿದ್ದರು?


ಸದಾ ತುಂಬುತ್ತಿರಬೇಕು!

24 ಮೇ 14

 

ಸಖೀ,
ಸ್ನೇಹವೆಂದರೆ ಕೊಡುಕೊಳ್ಳುವ ವ್ಯವಹಾರವಲ್ಲ
ಅಲ್ಲಿ ಎಂದೂ ಲೆಕ್ಕಾಚಾರದ ಮಾತುಗಳೇ ಸಲ್ಲ
ತಳವಿರದ ಪಾತ್ರೆಯದು ತುಂಬುತ್ತಲೇ ಇರಬೇಕು
ಪ್ರೀತಿ ವಿಶ್ವಾಸ ಸದಾ ತುಂಬಿ ತುಳುಕುತ್ತಿರಬೇಕು!


ದೇವರೆಂದರೆ ಯಾರು?

24 ಮೇ 14

ಸಖೀ,
ಪ್ರಾರ್ಥನೆಗೆ ಕೂತಾಗಲೂ ನಿನ್ನದೇ ನೆನಪು
ಅಗರಬತ್ತಿಯ ಹೊಗೆಯಲ್ಲೂ ನಿನ್ನದೇ ಕಂಪು
ದೇವರೆಂದರೆ ಯಾರೆಂದು ಕೇಳಿದರೆ ನನ್ನನ್ನು
ಪ್ರೀತಿಸೋ ಮನವೆನುವೆ ತೋರುವೆ ನಿನ್ನನ್ನು!


ಪೋಲಾಗದಿರಲಿ!

24 ಮೇ 14

ಸಖೀ,
ಬರೆಯುವವನ ಭಾವ ಓದುಗರ ಮನಗಳನು ತಟ್ಟಬೇಕು
ಬರಹಗಾರ ಭಾವಾಭಿವ್ಯಕ್ತಿಯ ಕಲೆಯನ್ನು ಅರಿತಿರಬೇಕು
ಪದವಿಜೃಂಭಣೆಯೇ ಮಿಗಿಲಾದರೆ ಈರ್ವರಿಗೂ ಸೋಲು
ಬರಹಗಾರ ಓದುಗರೀರ್ವರ ಸಮಯ ಬರಿದೇ ಪೋಲು!


ಇನ್ನೇನು ಬೇಕು?

24 ಮೇ 14

ನಾ ಬರೆದು ಇಟ್ಟದ್ದೆಲ್ಲಾ ಗೊಬ್ಬರದರಾಶಿಯಂತಿದೆ
ರಾಶಿಯಲ್ಲಿ ಈಗ ಹುಳುಗಳೂ ಕಾಣಿಸುವಂತಾಗಿದೆ
ಪುಟ್ಟ ಹುಳುಗಳ ಜೀವನೋಪಾಯಕ್ಕಾದರೂ ಸರಿ
ಅಂತೂ ಪ್ರಯೋಜನವಾಯ್ತಲ್ಲಾ, ಇನ್ನೇನು ಬೇಕ್ರೀ?


ಬಚ್ಚಿಡಲಾರೆ!

24 ಮೇ 14

ಸಖೀ,
ನನ್ನ ಪ್ರೀತಿಯನು 
ನಿನ್ನಿಂದ ಎಂದೂ
ಅರಿಯಲಾಗುವುದಿಲ್ಲ;

ನಿನ್ನ ಪ್ರೀತಿಯನು 
ನನ್ನಿಂದ ನೀನೆಂದೂ
ಬಚ್ಚಿಡಲಾಗುವುದಿಲ್ಲ!


ಬೆಳದಿಂಗಳು!

24 ಮೇ 14

ಸಖೀ,
ಮನಸುಗಳು ಮುನಿದಿರಲು
ಹುಣ್ಣಿಮೆಯ ಬೆಳದಿಂಗಳಲೂ
ತನು-ಮನ ಉರಿಯಬಹುದು;

ಮನದ ತುಂಬಾ ಒಲವಿರಲು 
ಅಮವಾಸ್ಯೆಯ ರಾತ್ರಿಯಲೂ 
ಬೆಳದಿಂಗಳನನುಭವಿಸಬಹುದು!


ಕಾರಣ ಇದ್ದೇ ಇದೆ!

24 ಮೇ 14

 

ಸಖೀ,
ನಮ್ಮ ಬಾಳಿನಲ್ಲಿ ಯಾರೂ 
ಒಂದರೆ ಕ್ಷಣವೂ ಪ್ರವೇಶಿಸಲು 
ಆಗುವುದಿಲ್ಲ, ಇಲ್ಲದೇ ಕಾರಣ;
ಒಂದೋ ಎಲ್ಲಿಯದೋ ಋಣ,
ಈಗ ಮುಕ್ತವಾಗುತಿಹ ಕಾರಣ;
ಅಥವಾ ಇದೀಗ ಇಲ್ಲಿ ಈ ಕ್ಷಣ
ಹೊಸತೊಂದು ಋಣಭಾರವನು
ಹೆಗಲೇರಿಸಿಕೊಳ್ಳುವುದೇ ಕಾರಣ!