ಬೆಳೆಸುವಾಶಯ ಇರಲಿ!

15 ಜೂನ್ 13

 

ಸಖೀ,
ಬೆಳೆಸುವ ಆಶಯವಿರಲಿ, ಬರಿದೇ ಬಳಸುವ ಆಶಯವು ಸಲ್ಲ

ಪ್ರದರ್ಶನಕ್ಕಿಟ್ಟ ಬೊಂಬೆಯಂತೆ ಯಾರನ್ನೂ ಬಳಸಬಾರದಲ್ಲ

ತಮ್ಮ ಬಿರುದುಗಳ ಪ್ರಚಾರಕ್ಕಾಗಿ ಅನ್ಯರ ಬೆನ್ನೇರುವುದು ಸಲ್ಲ
ಅತಿಯಾದ ಪ್ರದರ್ಶನ ಅದೇನಿದ್ದರೂ ಹೇಸಿಗೆ ಮೂಡಿಸುವುದಲ್ಲ?


ಏನೂ ಅಲ್ಲ ಎಂಬ ಅರಿವು!

15 ಜೂನ್ 13

 

ಸಖೀ,
ನಾನು ಏನೂ ಅಲ್ಲ ಅನ್ನುವ ಅರಿವಿನೊಂದಿಗೆ ನಿದ್ರೆಗೆ ಜಾರುತ್ತೇನೆ
ಏಕೆಂದರೆ ನನ್ನೀ ಅರಿವಿಗೆ ಮುದ್ರೆಯೊತ್ತುತ್ತಾರೆ ನನ್ನವರು ಆಗಾಗ;

ಅರಿವಾದರೆ ಏಳುತ್ತೇನೆ, ಅರಿವಾಗದೇ ಇದ್ದರೂ ಎದ್ದೇ ಏಳುತ್ತೇನೆ
ಏಕೆಂದರೆ ಅರಿವಿನತ್ತ ಸಾಗುವ ನನ್ನ ಈ ಪಯಣ ನಿಲ್ಲಬಾರದೀಗ!


ನನ್ನವಳಾಗುತ್ತಿದ್ದೆ!

15 ಜೂನ್ 13

 

ಸಖೀ,
ನಾ ಗೀಚಿದ್ದೆಲ್ಲಾ ಕವಿತೆಯಾಗಿದ್ದಿದ್ದರೆ
ಇಂದು ನಾನೂ ಕವಿಯಾಗಿರುತ್ತಿದ್ದೆ

ನಾ ಬರೆದದ್ದನ್ನೆಲ್ಲಾ ನೀನೊಪ್ಪಿದ್ದಿದ್ದರೆ
ಇಂದು ನೀನು ನನ್ನವಳಾಗಿರುತ್ತಿದ್ದೆ!


ನೆನಪನುಳಿಸು!

15 ಜೂನ್ 13
 
ಸಖೀ,
ರಾತ್ರಿಯೆಲ್ಲಾ ಕನವರಿಸುತ್ತಿದ್ದುದು ಏನೆಂದು
ಬೆಳಗಾದಾಗ ನೆನೆಸಿದರೀಗ ನೆನಪಾಗುತ್ತಿಲ್ಲ
ನನ್ನ ಕನವರಿಕೆಗೆ ಕಾರಣ ನೀನೋ ಅಥವಾ
ನಿನ್ನ ನೆನಪುಗಳೋ ಒಂದೂ ಅರಿವಾಗುತ್ತಿಲ್ಲ

ಕನಸಿನ ಲೋಕದಲ್ಲಿ ಸಹಚಾರಿಣಿಯಾಗುವೆಲ್ಲ
ಪರವಾಗಿಲ್ಲ ನನಗಲ್ಲಾರ ಭಯವೂ ಇಲ್ಲ ಬಿಡು
ಆದರೆ ನನಸಿನಲ್ಲಿ ನೆನೆಸಿಕೊಳ್ಳಲು ಆ ಕನಸಿನ
ಕಿಂಚಿತ್ ನೆನಪನ್ನಾದರೂ ನನ್ನಲ್ಲಿ ಉಳಿಸಿಬಿಡು!


ಮದಿರೆ ಅನಗತ್ಯ!

15 ಜೂನ್ 13

 

ಸಖೀ,
ಮದಿರೆಯ ಅಗತ್ಯ ಇಲ್ಲ ನಿನ್ನ ನೆನಪ ಮರೆಸಲು
ನಿದಿರೆ ಜೊತೆಗಿದ್ದರೆ ಸಾಕು ನನ್ನನ್ನೇ ಮರೆಸಲು;

ಮದಿರೆಯ ಅಗತ್ಯ ಇಲ್ಲ ನನಗೆ ನಿದಿರೆ ಬರಿಸಲು
ನಿನ್ನ ನೆನಪು ಇದ್ದರೆ ಸಾಕು ನನ್ನನ್ನೇ ಮರೆಸಲು!


ಬಾನು ಕಂಬಳಿಯಂತೆ!

15 ಜೂನ್ 13

 

ಸಖೀ,
ಚಂದ್ರನಿಲ್ಲದ ಈ ಇರುಳು, 
ಇಳೆಯೇ ಹಾಸಿಗೆಯಾಗಿ,
ನಮ್ಮ ಮೈಮೇಲೆ ಕಂಬಳಿ
ಹೊದಿಸಿರುವಂತೆ ಆ ಬಾನು;

ಕಂಬಳಿಯ ಸೂಕ್ಷ್ಮರಂಧ್ರಗಳ
ಮೂಲಕ ಇಣುಕುತ್ತಲಿರುವ ಆ
ನಕ್ಷತ್ರಗಳು ಕಂಗೆಡಿಸದಿನಿತೂ
ನನ್ನೊಡನೆ ಇರುವಾಗ ನೀನು!


ವಿಮರ್ಶೆಯ ಗೊಬ್ಬರ!

15 ಜೂನ್ 13

 

ಸಖೀ,
ಬೆಳೆಸುವವರು ವಿಮರ್ಶೆಯ ಗೊಬ್ಬರ ಹಾಕಬೇಕು,
ಬರೀ ಮೆಚ್ಚುಗೆಯ ನೀರು ಸುರಿಯುವುದಲ್ಲ

ನೀರು ಜಾಸ್ತಿಯಾಗಿ ಕೊಳೆತು ನಾರತೊಡಗಿದರೆ,
ಮುಂದೆ ಬೆಳೆಯುವ ಮಾತೇ ಉಳಿಯದಲ್ಲ!


ಭಯವೇಕೆ?

15 ಜೂನ್ 13

 

ಸಖೀ,
ರಾತ್ರಿಹೊತ್ತಿನಲ್ಲಿ ಮನೆಯ ಕರೆಗಂಟೆ ಸದ್ದಾದರೆ ಭಯ
ಅಪರಾತ್ರಿಯಲ್ಲಿ ದೂರವಾಣಿಯ ಕರೆ ಬಂದರೂ ಭಯ

ಕತ್ತಲು ಅನ್ನುವುದು ತುಂಬುವುದೇಕೆ ನಮ್ಮೊಳಗೆ ಭಯ
ಅಜ್ಞಾನದ ಕತ್ತಲನ್ನು ತುಂಬಿಕೊಂಡವರಿಗೇಕಿಲ್ಲ ಭಯ?


ಹಾಲು-ನೀರು!

15 ಜೂನ್ 13

ಸಖೀ,
ಒಡನಿದ್ದ ನೀರಹನಿ ಆವಿಯಾಗಿ ಹೋಪಾಗ ಹಾಲು
ನಾನಿನ್ನ ಬಿಡಲೊಲ್ಲೆ ಎಂದು ಮೇಲೇರಿ ಬರುವುದು

ಸಜ್ಜನರ ಕೊಂಚಕಾಲದ ಸಂಗವನೂ ಸುಲಭದಲಿ
ಬಿಡಲಾಗದು ಎಂಬ ಸಂದೇಶವನೇ ನೀಡುವುದು!


ದಿನದಾರಂಭ!

15 ಜೂನ್ 13

 

ಸಖೀ,
ಕೋಳಿ ಕೂಗುತ್ತದೋ ಇಲ್ಲವೋ ನನಗಂತೂ ಗೊತ್ತಾಗುವುದಿಲ್ಲ
ನಿನ್ನ ಸಂದೇಶ ಬೆಳಗಾದುದರ ಸೂಚನೆ ತಪ್ಪದೇ ನೀಡುತ್ತಿರುತ್ತದೆ

ಸೂರ್ಯೋದಯದ ಸಮಯ ಬದಲಾಗುವುದು ನಿನಗೂ ಗೊತ್ತಲ್ಲ
ನಿನ್ನಿಂದಾಗಿ ನನ್ನ ದಿನ ಒಂದೇ ಸಮಯಕ್ಕೆ ಆರಂಭವಾಗುತ್ತದೆ