ಹುಚ್ಚಿ!

11 ನವೆಂ 12
ಸಖೀ,
ನೀನು
ನನ್ನವಳು
ಅನ್ನುವುದು
ಗೊತ್ತು,

ನೀನು
ಹುಚ್ಚಿ
ಅನ್ನುವುದೂ
ಗೊತ್ತು,

ಆದರೆ,
ನೀನು
ನನ್ನಿಂದ
ಹುಚ್ಚಿಯೋ,
ನನಗಾಗಿ
ಹುಚ್ಚಿಯೋ,
ಅನ್ನುವುದು
ನಿನ್ನೊಳಗಿನ
ನನ್ನೊಳಗಿನ
ನಿನಗಷ್ಟೇ
ಗೊತ್ತು!
***


ಏಕಾಂತವೇ ಶಿಕ್ಷೆ ನಿನಗೆ!

07 ನವೆಂ 12

ಸಖೀ,
ವಾಹನ ಚಲಾಯಿಸುವಾಗೆಲ್ಲಾ  
ಏಕಾಗ್ರತೆ ಇರಬೇಕೆನ್ನುತ್ತಾರೆ
ಆದರೆ ನಗುತ್ತೀಯೇನೋ ನೀ
ನನ್ನೀ ಮನದ ಕತೆ ಕೇಳಿದರೆ

ಹೊರಡುವುದಷ್ಟೇ ಗೊತ್ತೆನಗೆ
ದಾರಿ ಸವೆದ ಅರಿವಿರುವುದಿಲ್ಲ
ದಾರಿಯುದ್ದಕ್ಕೂ  ನಿನ್ನೊಡನೆ
ಸಂಭಾಷಣೆ ಸಾಗುತ್ತಿರುವುದಲ್ಲ

ನಿನ್ನೊಡನೆ ನಾನಲ್ಲಿ ನಡೆಸುವ
ಸಂಭಾಷಣೆ ಕವನವಾಗುತ್ತದೆ
ಗುರಿ ಸೇರಿದ ಮರುಕ್ಷಣ ಅದು
ಅಕ್ಷರಗಳ ರೂಪ ತಾಳುತ್ತದೆ

ಒಂದೊಮ್ಮೆ ನಾನು ಮೈಮರೆತು
ಓಗೊಟ್ಟು ನಡೆದರೆ ಕಾಲನ ಕರೆಗೆ
ಖಂಡಿತ ನಿನ್ನದೇ ಅಪರಾಧ ನಿಜದಿ
ಏಕಾಂತವೇ ಆಜೀವ ಶಿಕ್ಷೆ ನಿನಗೆ!
*****************


ವಚನಬದ್ಧತೆ!

07 ನವೆಂ 12
 
ಸಖೀ,
ಪ್ರೀತಿಯ ಮಾತುಗಳಿಗೀ
ವಚನಗಳ ಬಂಧನವೇಕೆ
ನಾವೀರ್ವರೂ ಒಂದಾದರೆ
ಹಿರಿಯರಾರೆಂಬ ಮಾತೇಕ

ಬಹುವಚನವಷ್ಟೇ ನಿಜದಿ
ಇಲ್ಲಿ  ಗೌರವ ಸೂಚನೆಯೇ
ಹಾಗಾದರೆ ಭಗವಂತನಿಗೆ
ಏಕವಚನದಲ್ಲಿ ದೂಷಣೆಯೇ

ಮನದ ಭಾವವನರಿತು ಅಲ್ಲಿ
ಇರುವ ಪ್ರೀತಿಯ ಗುರುತಿಸು
ಏಕ ಮತ್ತು ಬಹುವಚನ ಎಂಬ
ಭೇದವನು ಇಂದು ತಿರಸ್ಕರಿಸು

ಬಹುವಚನದಲಿದ್ದರೆ ಬೈಗುಳ
ನಿನಗೆ ಅದು ಸ್ವೀಕಾರಾರ್ಹವೇ
ಪ್ರೀತಿಯಲ್ಲಿ ವಚನಬದ್ಧರಾಗಿ
ಇದ್ದರೆ ಅಷ್ಟೇ ಸಾಕಲ್ಲವೇ?
*******


ಕಾಲ ಮೀರಿದೆ!

06 ನವೆಂ 12

ಸಖೀ,
ನಿನ್ನ ಕಣ್ಣಲ್ಲಿ ಕಂಡಿದ್ದ
ಪ್ರೀತಿಯನ್ನು ಅರಿತೂ
ಅಂದು ನಾ ಸುಮ್ಮನಿದ್ದೆ

ನನ್ನ ಬಾಯಿಗೆ ಬಂದಿದ್ದ
ಮಾತನ್ನು ನುಡಿಯದೇ
ನಾನು ಮೌನಿಯಾಗಿದ್ದೆ

ಇಂದೀಗ ನಿನ್ನ ಕಣ್ಣಲ್ಲಿ
ಪ್ರೀತಿಯ ಛಾಯೆಯೇ
ಕಾಣಿಸದಂತಾಗಿದೆಯಲ್ಲ

ಎಲ್ಲವನ್ನೂ ನಾನೀಗ
ಬಾಯ್ಬಿಟ್ಟು ಹೇಳಿದರೂ
ನೀ ನಂಬುತ್ತಿಲ್ಲವಲ್ಲಾ?!


ಡವಡವ!

06 ನವೆಂ 12

ಸಖೀ,
ನಾ ಬಡಿಯದೇ
ನಿಂದ್ದಿದ್ದೇಕೆಂದು
ಕೇಳದಿರು ನಿನ್ನ
ಮನದ ಕದವ;

ನನಗೆ ಆಗಲೇ
ಕೇಳಿಸುತ್ತಲಿತ್ತು
ಕಣೇ ನಿನ್ನೆದೆಯ
ಒಳಗಿನ ಡವಡವ!


ಹೇಗಂತೆ?

05 ನವೆಂ 12

ಸಖೀ,
ನನ್ನ ಕವಿತೆಗಳಿಗೆ ಎಂದೂ
ಮೆಚ್ಚುಗೆಯನ್ನು ಸೂಚಿಸದೆ
ಪ್ರತಿಕ್ರಿಯೆಯನ್ನೂ ನೀಡದೆ
ಇರುತ್ತಿದ್ದನಲ್ಲ ಈ ಪುಣ್ಯಾತ್ಮ
ಓದಿದರೂ ಓದದವನಂತೆ,

ಆದರೀಗ ನಿನ್ನ ಹೆಸರಿನಲ್ಲಿ ನಾ
ಪ್ರಕಟಿಸಿದ ಈ ಒಂದೇ ಒಂದು
ಕವಿತೆಯನ್ನೋದಿ ಇಷ್ಟೊಂದು
ಸಾಹಿತ್ಯಾಸಕ್ತನಾಗಿಬಿಟ್ಟನಲ್ಲಾ
ಹೇಳು ಅದು ಹೇಗಂತೆ?!
***************


ಜೀವಂತ ಸಾಕ್ಷಿ!

05 ನವೆಂ 12

ಸಖೀ,
ನಾ ಪ್ರಕಟಿಸುವ ಕವಿತೆಗಳ
ಪದ-ಬಣ್ಣ ಬದಲಿಸಿ ತಮ್ಮ
ಹೆಸರುಗಳಡಿ ಪ್ರಕಟಿಸುವ
ಅನ್ಯರ ಕವಿತೆಗಳು ನಿನಗೆ
ನನ್ನ ನೆನಪನ್ನು ತರುತ್ತವೆ
ಎಂಬ ನಿನ್ನ ಈ ಮಾತು
ನಮ್ಮ ನಡುವಣ ಪ್ರೀತಿಗೆ
ಜೀವಂತ ಸಾಕ್ಷಿಯಂತೆ!
 *************


ದ್ವಂದ್ವಗಳ ಗೂಡು!

05 ನವೆಂ 12

ಸಖೀ,
ನಾನು ಅದೇನೇನೋ
ಬರೆಯಬೇಕೆಂದಿಚ್ಛಿಸಿ,
ನನ್ನೀ ಮನದೊಳಗೇ
ಮಂಥನಗೈದು ಬಂದು
ಕೂತಿದ್ದೆ, ಇದೀಗ ಏನೂ
ನೆನಪಾಗುತ್ತಿಲ್ಲ ನೋಡು;

 
ಒಂದರ ಮೇಲೊಂದರಂತೆ
ಪ್ರಕಟವಾಗುವ ಹತ್ತಾರು
ಕತೆ ಕವನ ಲೇಖನಗಳನ್ನು
ಓದುತ್ತಾ ಕೂತವನ ಮನ,
ಅದ್ಯಾಕೋ ಆಗಿದೆಯಲ್ಲಾ
ಈಗ ದ್ವಂದ್ವಗಳ ಗೂಡು!
 **************


ಪ್ರೀತಿ ಎಲ್ಲಿರೋದು?

03 ನವೆಂ 12

ನನ್ನ ಸಖಿ ಕೇಳಿದಳು:
“ಪ್ರೀತಿ ಎಲ್ಲಿರುವುದು
ಹೇಳು ನೋಡೋಣ,
ಮನಸ್ಸಿನೊಳಗೋ
ಹೃದಯದೊಳಗೋ
ಉಸಿರಿನೊಳಗೋ?”

“ಎಲ್ಲರಿಗೂ ಗೊತ್ತು
ಪ್ರೀತಿ ನಮ್ಮ ಈ
ಹೃದಯದೊಳಗೇ
ಇರುವುದು ಕಣೇ”

“ಹಾಗಾದರೆ ಹೃದಯ
ಕಸಿ ಮಾಡಿಸಿಕೊಂಡವನು
ಯಾರನ್ನು ಪ್ರೀತಿಸುತ್ತಾನೆ
ತನಗೆ ಹೃದಯ ದಾನ
ಮಾಡಿದವನ ಪ್ರೇಮಿಯನ್ನೇ?
ಅಥವಾ ತನ್ನ ಪ್ರೇಮಿಯನ್ನೇ?”
*****************


ಶಿವ ಶಿವಾ!

01 ನವೆಂ 12
ಸಖೀ,
ಗೊಮ್ಮಟನನ್ನು
ಕೆತ್ತಿ ನಿಲ್ಲಿಸಿದ
ಮಹಾನ್ ಶಿಲ್ಪಿ
ಗಣಪತಿ ಮೂರ್ತಿ
ಮಾಡುವವನ
ಬೆನ್ನು ತಟ್ಟಿ ಮೆಚ್ಚಿ
ಕೊಂಡಾಡಿದಾಗ
ಆಗುವ ಅನುಭವ
ಒಮ್ಮೊಮ್ಮೆನನಗೂ
ಶಿವ ಶಿವಾ!