ನನ್ನ ನೆರಳಾಗಿ ಆಗ ನೀನಿರಬೇಕು!

15 ಜೂನ್ 10

ಸಖೀ

ಹೋಳಿ-ದೀಪಾವಳಿಗಳ

ಹಬ್ಬ ಹರಿದಿನಗಳಲಿ

ಒಟ್ಟಾಗಿ ನಲಿದು

ತಿಂದು ತೇಗುವುದಕೆ

ನೀನೇ ಎಂದೇನು

ಹತ್ತಾರು ಮಂದಿ

ಸಿಗಬಹುದು ನನಗೆ

ನಡೆದೀತು ಇಲ್ಲದಿದ್ದರೂ

ಆಗ ನೀ ನನ್ನ ಜೊತೆಗೆ

 

ಆದರೆ

ಜನನಿಬಿಡ ಜಾತ್ರೆಯಲೂ

ನಾ ಒಬ್ಬಂಟಿಯಾದಾಗ

ಜೀವನದ ಬಿರುಗಾಳಿಯಲಿ

ಸಿಕ್ಕು ತರಗೆಲೆಯಂತಾಗಿ

ದಿಕ್ಕೇ ಕಾಣದಾದಾಗ

ಬಾಳಬಟ್ಟೆಯಲಿ ಬಳಲಿ

ಬೆಂಡಾಗಿ ತಬ್ಬಿಬ್ಬಾದಾಗ

ನನಗೆ ನಿನ್ನ ಜೊತೆಬೇಕು

ನನ್ನ ಹಸ್ತದೊಳು

ನಿನ್ನ ಹಸ್ತವಿರಬೇಕು

ನನಗೆ ಬೆಂಬಲಿಗಳಾಗಿ

ನೀ ಧೈರ್ಯ ನೀಡಬೇಕು

ನನ್ನ ನೆರಳಾಗಿ ಸಖೀ

ನೀನಿರಬೇಕು!
*-*-*-*-*-*


ಕರಗಿಹೋಗದೇ ಹೇಗಿರಲಿ ನಾನು?

11 ಜೂನ್ 10

 

ಸುಟ್ಟುಹೋಗುತ್ತಿದ್ದ

ಮೋಂಬತ್ತಿಯ ದಾರ

ಕೇಳಿತು ತನ್ನನ್ನು

ಸುತ್ತುವರಿದಿದ್ದ

ಮೇಣವನ್ನು:

“ಇಲ್ಲಿ ಸುಡುತ್ತಿರುವುದು

ನಾನು ಆದರೆ

ಕರಗಿಹೋಗುತ್ತಿರುವೆ

ಹೀಗೇಕೆ ನೀನು?”

 

ಮೇಣ ನುಡಿಯಿತು

ಭಾರವಾದ ದನಿಯಿಂದ:

“ಈ ಹೃದಯದೊಳಗೆ

ಭದ್ರವಾಗಿ ನಿನ್ನನ್ನು

ಇರಿಸಿಕೊಂಡಿದ್ದೆ

ಇದುವರೆಗೆ ನಾನು

 

ನೀನೀಗ ಉರಿದು

ನಾಶವಾಗುವುದನು

ಕಂಡು ಕೈಲಾಗದೇ

ಅಸಹಾಯಕತೆಯ

ಬೇಗೆಯಲಿ ಬೆಂದು

ಕರಗಿಹೋಗದೇ

ಹೇಗಿರಲಿ ನಾನು?”

*************


ನಕ್ಕುಬಿಡು ಇಂದೇ!

11 ಜೂನ್ 10

 

ಸಖೀ

ನೀನು ಮುಖ

ಸಿಂಡರಿಸಿಕೊಂಡಿದ್ದಾಗ

ನನ್ನ ಪಾಲಿಗೆ

ದಿನವೂ ಅಮವಾಸ್ಯೆ

 

ಇಂದು ನಿನ್ನ

ಮುಗುಳ್ನಗೆ ಕಂಡ ನನಗೆ

ಪಾಡ್ಯದ-ಬಿದಿಗೆಯ

ಚಂದ್ರನ ದರುಶನವಾಯ್ತು

 

ನನಗೀಗ ಆ ನಾಳಿನ

ನೀನು ಪೂರ್ತಿ ನಕ್ಕಾಗ ಸಿಗುವ

ಪೂರ್ಣಚಂದ್ರ ದರುಶನದ

ಹುಣ್ಣಿಮೆಯ ನಿರೀಕ್ಷೆ

 

ಏಕೆ ಕಾಯಿಸುವೆ

ಸುಮ್ಮನೆ ಸತಾಯಿಸುವೆ

 

ನಕ್ಕು ಬಿಡಬಾರದೇಕೆ

ಪೂರ್ಣಚಂದ್ರನ ದರುಶನ

ನನಗೆ ಮಾಡಿಸಬಾರದೇಕೆ

 

ನಿನಗೆಲ್ಲಿಯ ಕಟ್ಟುಕಟ್ಟಳೆ

ಆ ಚಂದ್ರನಿಗಿರುವಂತೆ

 

ನಕ್ಕುಬಿಡು ಇಂದೇ

ನಮ್ಮ ಮನದಂಗಳದಿ

ಬೆಳದಿಂಗಳ ಚೆಲ್ಲಿಬಿಡು ಇಂದೇ

 

ಏಕೆ ಕಾಯಿಸುವೆ

ಸುಮ್ಮನೆ ಸತಾಯಿಸುವೆ

************


ಹಾಸ್ಯ ಕಲಿಸಿದ ಹಿಂದೀ ಮೇಸ್ಟ್ರು ಇನ್ನಿಲ್ಲವಂತೆ!

10 ಜೂನ್ 10

 

೧೯೭೪ ರಿಂದ ೧೯೭೭ರ ಅವಧಿಯಲ್ಲಿ ನಾನು ಪರ್ಕಳ ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿದ್ದೆ. ಆಗ ನಮಗೆ ಹಿಂದೀ ಬೋಧನೆ ಮಾಡುತ್ತಿದ್ದ ಕೆ. ಪದ್ಮನಾಭ ಭಟ್ (ಹಿಂದೀ ಪಂಡಿತರು) ಇಹಲೋಕ ತ್ಯಜಿಸಿದ್ದಾರೆ ಎನ್ನುವ ಸಂದೇಶ ನನ್ನ ಸಹೋದರನಿಂದ ಇಂದು ಮುಂಜಾನೆ ಬಂತು. ಉದಯವಾಣಿಯಲ್ಲಿ ಹುಡುಕಿದಾಗ ಸುದ್ದಿಯ ಸಚಿತ್ರ ವರದಿ ಸಿಕ್ಕಿತು.

ಪದ್ಮನಾಭ ಭಟ್ರ ವಿದ್ಯಾರ್ಥಿಗಳಾಗಿದ್ದ ಯಾರೊಬ್ಬರೂ ಅವರ ಹಾಸ್ಯಪ್ರಜ್ಞೆಯನ್ನು ಮರೆಯಲು ಸಾಧ್ಯವೇ ಇಲ್ಲ. ಪ್ರತಿಯೊಂದು ನಿಮಿಷಕ್ಕೂ ಒಂದೊಂದು ಹಾಸ್ಯ ಚಟಾಕಿ ಹಾರಿಸುತ್ತಿದ್ದ, ಎಲ್ಲಾ ಮಾತುಗಳಿಗೂ ಹಾಸ್ಯದ ಲೇಪನ ಕೊಟ್ಟು ಮಾತನಾಡುತ್ತಿದ್ದ ಅವರು, ನನ್ನಲ್ಲಿ ಹಾಸ್ಯಪ್ರಜ್ಞೆ ಮೂಡಿಸಿದ ಎರಡನೇ ಗುರು ಅಂದರೆ ತಪ್ಪಾಗಲಾರದು. ಮೊದಲನೆಯವರು ನಮ್ಮ ತೀರ್ಥರೂಪರು.  ಕಣ್ಣು ಮತ್ತು ಕಿವಿಗಳನ್ನು ತೆರೆದಿಟ್ಟುಕೊಂಡರೆ ಹಾಸ್ಯವನ್ನು ಎಲ್ಲೂ, ಯಾವಾಗಲೂ ಕಾಣಬಹುದು, ಅನುಭವಿಸಬಹುದು ಎನ್ನುವ ಸೂಕ್ಷ್ಮತೆಯ ಅರಿವು ಮಾಡಿಕೊಟ್ಟವರು ಅವರೀರ್ವರು.  ಈಗ ಈರ್ವರೂ ಇಲ್ಲ.
ಆದರೆ, ಹಾಸ್ಯ ಇನ್ನೂ ಜೀವಂತವಾಗಿದೆ ನನ್ನಲ್ಲಿ ಮತ್ತು ಅವರ ಸಾವಿರಾರು ವಿದ್ಯಾರ್ಥಿಗಳ ಜೀವನಗಳಲ್ಲಿ.

ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸುತ್ತಾ,  ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸುವಂತೆ ಆ ಭಗವಂತನಲ್ಲಿ ಬೇಡುತ್ತೇನೆ.

***************

 

 

 


ಸಾಕ್ಷಿಗಳು ತಾನೇ?

09 ಜೂನ್ 10

 

ಸಖೀ

ನಿನ್ನ ಕೋಣೆಯ

ಬಾಗಿಲನು ನಾನು

ಬಡಿಯುತಿದ್ದೇನೆ

ಎಂದೆನಿಸುವುದು

 

ಕಿಟಕಿಯ ಹಿಂದೆ

ನಾನು ನಿಂತಿದ್ದೇನೆ

ಎಂದೆನಿಸುವುದು

 

ಗವಾಕ್ಷದ ಮೂಲಕ

ನಾನು ಇಣುಕುತಿದ್ದೇನೆ

ಎಂದೆನಿಸುವುದು

 

ಇವೆಲ್ಲಾ

ಮುನಿಸಿನಿಂದ ಇನ್ನು

ನಿನ್ನ ಮನದ ಬಾಗಿಲನು

ನನಗಾಗಿ ತೆರೆಯಲಾರೆ

ಎನುತಿರುವ ನೀನು

ಇನ್ನೂ ನನ್ನನ್ನು

ಮರೆತಿಲ್ಲ ಎನ್ನುವುದಕೆ

ಸಾಕ್ಷಿಗಳು ತಾನೆ?

***********


ಇಂತವರಿಗಿಂತ ಅಂತವರು ಬೇಕು!

04 ಜೂನ್ 10


ನನಗನ್ನಿಸುತ್ತೆ,


ನಮ್ಮನ್ನು ಅಪಾರ್ಥ

ಮಾಡಿಕೊಂಡು, ನುಡಿದರೆ

ಎಲ್ಲಿ ನೋವಾದೀತೋ

ಎಂದು ಮೌನಿಯಾಗಿಯೇ

ಇರುವವರಿಗಿಂತ,


ಮಾತುಗಳೊಂದಿಗೆ

ನಮ್ಮೊಡನೆ ಜಗ್ಗಾಡಿದರೂ

ನಮ್ಮನ್ನು ನಿಜವಾಗಿಯೂ

ಅರ್ಥಮಾಡಿಕೊಳ್ಳುವವರು

ಬೇಕಾಗಿದ್ದಾರಂತ!

***********


ತೆರಳಿಬಿಡು ನನ್ನ ನೆನಪಿಂದ ನೀನು!

03 ಜೂನ್ 10

 

ನೀ ನನ್ನ ಬಾಳಿನಲ್ಲಿ

ನೆನಪಾಗೇ ಉಳಿದು ಹೋದೆ

ನೀನಿರದ ಬಾಳು ನಾನು

ನಿನ್ನ ನೆನಪಿನಲ್ಲೇ ಕಳೆದೆ

 

ಆ ದೇವರಂತೆ ಕಂಡೆ

ನನ್ನ ಪಾಲಿಗಾಗ ನೀನು

ನನ್ನ ಪ್ರೀತಿ ಭಕ್ತಿಯಂತೆ

ನಿನ್ನ ಪೂಜಿಸಿದ್ದೆ ನಾನು

 

ನೀ ನನ್ನ ಅರಿಯಲಿಲ್ಲಾ

ನಾ ನಿನ್ನ ಮರೆಯಲಿಲ್ಲಾ

 

||ನೀ ನನ್ನ ಬಾಳಿನಲ್ಲಿ||

 

ಬರಲಾರೆ ನೀನು ಮರಳಿ

ಈ ಸತ್ಯ ನನಗೆ ಗೊತ್ತು

ಸರಿ ಒಮ್ಮೆ ತೆರಳು ನನ್ನ

ನೆನಪಿಂದ ನೀ ಈ ಹೊತ್ತು

 

ನಾ ನಿನ್ನ ಪಡೆಯಲಾರೆ

ನಾ ನಿನ್ನ ಕರೆಯಲಾರೆ

 

||ನೀ ನನ್ನ ಬಾಳಿನಲ್ಲಿ||

**************


ಸಹೋದರನಿಗೆ ಹಾರ್ದಿಕ ಅಭಿನಂದನೆಗಳು!

01 ಜೂನ್ 10

 

 

 

ಕೇಂದ್ರ ಸರಕಾರದಿಂದ ನೋಟರಿಯಾಗಿ ನೇಮಕಗೊಂಡಿರುವ ನ್ಯಾಯವಾದಿ, ನನ್ನ ಸಹೋದರ

ಆತ್ರಾಡಿ ಪೃಥ್ವಿರಾಜ ಹೆಗ್ಡೆಗೆ ನನ್ನ ಹಾರ್ದಿಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು!