ಸರ್ಕಾರ “ಬ್ಲಾಗಿಗರಿಗೂ” ಕೊಡಲಿ ಮನ್ನಣೆ!

05 ಆಗಸ್ಟ್ 09

ಬರೆವವರ ಬರೆದು ಗೋಗರೆವವರ ಅಭಿಪ್ರಾಯಗಳಿಗೆ ಹಾಕುವುದಾದರೆ ಮಣೆ
ಆ ಸರ್ಕಾರ ಈ “ಬ್ಲಾಗಿಗರ” ಅಭಿಪ್ರಾಯಗಳಿಗೂ ಕೊಡಬಹುದಲ್ಲವಾ ಮನ್ನಣೆ

ಸಾಹಿತಿಗಳೇನು, ಪತ್ರಕರ್ತರೇನು, ಎಲ್ಲರನೂ ಅರ್ಧ ಗಳಿಗೆಯಲೇ ವಿಮರ್ಶಿಸಿ
ಎಲ್ಲರ ಚಿಂತನೆಯ ಒಳಮರ್ಮವನೂ ಹೊರಗೆಡಹುತ್ತೇವೆ ನಾವಿಲ್ಲಿ ಭಟ್ಟಿ ಇಳಿಸಿ

ಬರೆದವನು ಮೇಲೋ ಆ ಬರಹದ ಒಳಮರ್ಮವನು ಜನರಿಗೆ ತಿಳಿಸಿದವನೋ
ಎಂಬುದ ಅರಿತರೆ ಈ “ಬ್ಲಾಗಿಗರೂ” ಕಡಿಮೆ ಅಲ್ಲ ಎಂಬರಿವು ಆಗಬಹುದೇನೋ

ಎಲ್ಲಾ ಸಮಸ್ಯೆಗಳಿಗೂ ಸಾಹಿತಿಗಳೇ ಹುಡುಕಬಹುದಾದರೆ ಈ ನಾಡಲ್ಲಿ ಉತ್ತರ
ಕಳುಹಿಸಿ ಕಾಶ್ಮೀರದ ಕಣಿವೆಗೆ ಮಾತಾಡಿ ಬರಲಿ ಅಲ್ಲಿ ಆತಂಕವಾದಿಗಳ ಹತ್ತಿರ

ಸಾಹಿತಿಗಳು ಶಾಸಕಾಂಗದ ಒಳಹೊಕ್ಕು ಅಧಿಕಾರ ಕೈಗೆತ್ತಿಕೊಂಡು ನೋಡಲಿ
ದಿನಕ್ಕೊಂದು ಕತೆ ಬರೆದು ಶಾಸನ ಸಭೆಯೊಳಗೆ ಧಾರಾವಾಹಿಗಳನು ನಡೆಸಲಿ

ಜನರಿಗೆ ಮತ್ತೆ ಸಮಸ್ಯೆಗಳೇ ಇಲ್ಲ ಎಲ್ಲರಿಗೂ ಪುಕ್ಕಟೆ ಮನರಂಜನೆ ಹಗಲೆಲ್ಲಾ
ರಾತ್ರಿ ನಿದ್ದೆ ಬಾರದವರಿಗೆ ಇದ್ದಾರೆ ಸತ್ಸಂಗ ವ್ಯಾಯಾಮದ ಗುರುಮಂದಿ ಎಲ್ಲಾ!


ದೇವರ ಬಳಿಗೆ ಹೋಗಲೇಬೇಕೇ…?

05 ಆಗಸ್ಟ್ 09
 

ಯಾರೂ ಹಜಾಮರ ಬಳಿಗೆ ಹೋಗಿಲ್ಲ ಹಾಗಾಗವರಿಗೆ ಹಜಾಮರಿಲ್ಲ
ಯಾರೂ ದೇವರ ಬಳಿಗೆ ಹೋಗಿಲ್ಲ ಹಾಗಾಗವರಿಗೆ ದೇವರೇ ಇಲ್ಲ
 
ಹಜಾಮರ ಬಳಿಗೆ ಹೋಗದವರ ತಲೆಯಲ್ಲಿ ದಪ್ಪ ಕೂದಲುಗಳಿವೆ
ದೇವರ ಬಳಿಗೆ ಹೋಗದವರ ಜೀವನದಲಿ ಸಾಕಷ್ಟು ಕಷ್ಟಗಳಿವೆ
 
ಈ ಮೇಲಿನ ಮಾತುಗಳು ಕತೆ ಹೇಳುವವರದ್ದು ನನ್ನದಲ್ಲವೇ ಅಲ್ಲ
ಹಜಾಮನಿಗೂ ದೇವರಿಗೂ ಹೋಲಿಕೆ ಮಾಡುವ ಮಂದಿ ಇದ್ದಾರಲ್ಲ
  
ಕತೆಯಲ್ಲಿ ಸ್ವಾರಸ್ಯ ಇರಬಹುದು ಆದರೆ ಅದೇ ಸಿದ್ಧಾಂತ ಎಂದಲ್ಲ
ನಮಗೆ ಬೇಕಾದಂತೆಲ್ಲಾ ಕತೆಗಳನು ಅರ್ಥೈಸಿ ಕೊಳ್ಳಬಹುದಲ್ಲಾ
 
ಕೂದಲುಗಳ ಕಳೆದುಕೊಳ್ಳಲು ಹಜಾಮರ ಬಳಿಗೆ ಹೊಗಬೇಕು
ಕಷ್ಟಗಳ ಕಳೆಯಲು ಮನುಜ ದೇವರ ಬಳಿಗೇಕೆ ಹೋಗಬೇಕು
 
ಹಜಾಮರು ಸರ್ವಂತರ್ಯಾಮಿಯರಲ್ಲ ಅದು ನಮಗೂ ಗೊತ್ತು
ದೇವರು ಸರ್ವಂತರ್ಯಾಮಿ ಇದೂ ನಾವೆಲ್ಲ ಕೇಳಿರುವ ಮಾತು
 
ಹಜಾಮರಿಲ್ಲದ ಕಡೆ ಜನರಿದ್ದಾರೆ ಆ ಹಜಾಮರಿಗೆ ಗೊತ್ತಿಲ್ಲದೆಯೇ
ಮನುಜರು ಎಲ್ಲಾ ಕಡೆ ಇದ್ದಾರೆಂಬುದು ಆ ದೇವರಿಗೆ ಗೊತ್ತಿಲ್ಲವೇ
 
ಮನುಜ ದೇವರಿದ್ದಲ್ಲಿಗೆ ಹೋಗಲೇ ಬೇಕೆಂದೇನಿಲ್ಲ ಅದು ಸುಳ್ಳು
ಎಲ್ಲರೊಳಗೂ ಇರುವಾತನನು ಹೊರಗೆ ಹುಡುಕುವುದು ಮರುಳು

 


ಅರ್ಥ ಇಲ್ಲದ ಜೀವನಕೂ ಅರ್ಥ ಇದೆಯೇ..?!!!

03 ಆಗಸ್ಟ್ 09

ಸಂಸಾರದೊಳಗಣ ಚಿತ್ರಹಿಂಸೆಗಳಿಂದ ಬಳಲಿ ಬೆಂಡಾಗಿ
ನೋವ ನುಂಗಿ ಮನದಲಿ ಜಿಗುಪ್ಸೆ ತುಂಬಿಕೊಂಡವನಾಗಿ

ದೇವರಿಗೆ ಮೊರೆ ಇಟ್ಟು ಗೋಗರೆದರೂ ಆತ ಕೇಳದಿದ್ದಾಗ
ಈ ಜೀವನವೇ ಸಾಕೆಂಬ ನಿರ್ಧಾರದತ್ತ ಮನ ವಾಲಿದಾಗ

ಅತ್ತ ಇತ್ತಲಿನ ಮಂದಿ ಕರೆದು ಹೇಳಿದರು ಆತನ ಕಿವಿಯಲ್ಲಿ
ಯಾಕೆ ನಿನಗೀ ವ್ಯಥೆ ನಿನ್ನ ಪ್ರೀತಿಸುವ ನಾವಿರುವೆವು ಇಲ್ಲಿ

ಕರೆದು ನಗಿಸಿ ಪ್ರೀತಿಯ ಮಾತಾಡಲಿದ್ದರೂ ನೂರು ಮಂದಿ
ಜೊತೆಗೆ ಬಾಳುವವರ ಚಿತ್ರಹಿಂಸೆಯಲೇ ಆತ ಸದಾ ಬಂಧಿ

ಮನೆಯ ಹೊರಗೆ ಜನರ ನಕ್ಕು ನಗಿಸಿ ಬಾಳಿದರೂ ಫಲವಿಲ್ಲ
ಮನೆಯ ಒಳಗಿನ ಯಾತನೆಯ ಸಹಿಸಲಾತನಿಗೆ ಸಾಧ್ಯವಿಲ್ಲ

ಪ್ರತಿಭೆಯ ಕೊಂಡಾಡಿ ನಡತೆಗೆ ಸೋತು ಮೆಚ್ಚುವಂತ ಜನರು
ದಿನದಲ್ಲಿ ಇದ್ದರೂ ಸಂಜೆಯ ಮೇಲಾತಗೆ ಜೊತೆ ನೀಡುವರೇನು

ಅರ್ಥ ಇಲ್ಲದ ಜೀವನಕೂ ಅರ್ಥ ತರುವೆನೆಂಬುದು ಮೂರ್ಖತನ
ಎಂದಾತಗೇ ಅರ್ಥ ಮಾಡಿಸಿ ಕಾಡಿಸುತಿದೆ ಆತನನ್ನಿಂದು ಬಡತನ