ಭಾಷೆ!!!

18 ಏಪ್ರಿಲ್ 09

ಸಖೀ,
ಆತ ವೈದ್ಯ,
ನೋಯುತಿರುವ
ನನ್ನ ಹೃದಯವನು
ಪರೀಕ್ಷಿಸುವ
ಆತನಿಗೆ,
ಹೃದಯದ
ಬಡಿತಗಳು
ಗಣನೆಗೆ
ಸಿಲುಕುವವಾದರೂ,
ಮಿಡಿತದ
ಅನುಭವ
ಆಗುವುದೇ
ಇಲ್ಲ;
ರಕ್ತದ
ಒತ್ತಡವೆಷ್ಟೆಂದು
ಆತ ಅರಿವನಾದರೂ,
ನನ್ನ ಹೃದಯದೊಳು
ಬಚ್ಚಿಟ್ಟುಕೊಂಡಿರುವ
ನಿನ್ನ ಪ್ರೀತಿಯ
ಒತ್ತಡವನು
ಆತನಿಂದ
ಅರಿಯಲಾಗುವುದೇ
ಇಲ್ಲ;
ಈ ಹೃದಯದ
ಕಾರ್ಯಶೈಲಿಯನು
ಅರಿವನಾದರೂ,
ಹೃದಯವಂತಿಕೆಯನು
ಆತನಿಂದ
ಅರಿಯಲಾಗುವುದೇ
ಇಲ್ಲ.
ಅಂತೆಯೇ
ಈತ,
ಈ ಕನ್ನಡ ಪಂಡಿತ,
ನನ್ನ ಕವನಗಳನು ಓದಿ
ಆಮೂಲಾಗ್ರವಾಗಿ
ವಿಶ್ಲೇಷಿಸಿದನೇನೋ ಸರಿ,
ಕೆಲವನ್ನು
ಕವನಗಳೆಂದೂ,
ಕೆಲವನ್ನು
ರಗಳೆಗಳೆಂದೂ,
ಕೆಲವನ್ನು
ವಚನಗಳ
ಮಟ್ಟದವೆಂದೂ,
ಇನ್ನು ಕೆಲವನ್ನು
ನವ್ಯಕವಿತೆಗಳೆಂದೂ
ವರ್ಗೀಕರಿಸಿದನಾದರೂ,
ನಾನು
ವ್ಯಕ್ತಪಡಿಸಿರುವ
ನನ್ನ ಹೃದಯದ
ಆಶಯಗಳ,
ಮನದ
ಕೂಗುಗಳ,
ಆತನಿಂದ
ಅರಿಯಲಾಗಲೇ
ಇಲ್ಲ.
ನಿಜ ನುಡಿಯಲೇ
ಸಖೀ?
ಅದನರಿಯಲು,
ನನ್ನ – ನಿನ್ನಂತೆ,
ಹೃದಯದ
ಭಾಷೆಯನು
ಅರಿತವರಿರಬೇಕು,
ಬರೇ
ಪದಗಳಿಗಲ್ಲದೇ,
ಅವುಗಳ
ನಡುವಡಗಿರುವ
ಮೌನಕ್ಕೂ,
ಅರ್ಥ
ಕೊಡುವವರಿರಬೇಕು!
*-*-*-*-*-*-*-*


ಬಂಧನ!!!

18 ಏಪ್ರಿಲ್ 09
ಸಖೀ,
ಸ್ವಚ್ಛಂದ ಬಾನಿನಲ್ಲಿ
ಕಾಡೆಂಬ ತನ್ನ ನಾಡಿನಲ್ಲಿ
ಸ್ವತಂತ್ರವಾಗಿ
ಹಾರಾಡುತ್ತಿರುವ
ಗಿಳಿಯನ್ನು ತಂದು
ಪಂಜರದಲ್ಲಿ ಕೂಡಿಟ್ಟು
ನಮ್ಮ ಭಾಷೆಯನ್ನು
ಅದಕ್ಕೂ ಕಲಿಸಿದರೆ
ಸವಿಯಾದ ತಿನಿಸುಗಳ
ತಿನಿಸಿದರೆ
ಬಂಧನದ
ಅಸಹಾಯಕತೆಯಿಂದ
ತಿನಿಸುಗಳ ಆಸೆಯಿಂದ
ನಾವಾಡಿದಂತೆ
ಅದು ಆಡಬಹುದು
ನಮ್ಮ ಮನಕೆ
ತನ್ನ ಆಟಗಳಿಂದ
ಮುದ ನೀಡಬಹುದು
ಆದರೆ
ಒಂದಲ್ಲ ಒಂದು ದಿನ
ಸಿಗುವ ಅವಕಾಶವನು
ವ್ಯರ್ಥಗೊಳಿಸದೇ ಪುರ್ರನೇ
ಹಾರಿಬಿಡಬಹುದು
ಸ್ವಚ್ಛಂದ ಬಾನಿನತ್ತ
ಕಾಡಿನಲ್ಲಿರುವ
ತನ್ನ ನಾಡಿನತ್ತ
ಪಂಜರದಿಂದ ಹೊರಗೆ
ಬಂಧಿಸಿದರೆ ನಾವದನು
ಅನುಬಂಧದಿಂದ
ಆಡಿದರೆ ನಾಲ್ಕು ಮಾತು
ನಮ್ಮ ಹೃದಯದಾಳದಿಂದ
ಅಳೆದು, ಅರ್ಥೈಸಿಕೊಂಡರೆ
ಅದರ ನೋವನು
ನಾವು ನಮ್ಮ ಮನದಿಂದ
ಮುದ ನೀಡಿದರೆ ಅದಕೂ
ನಮ್ಮ ಪ್ರತಿಸ್ಪಂದನದಿಂದ
ಇರಬಹುದೇನೋ
ಸಖೀ
ಅನವರತ ಅದೂ
ನಮ್ಮೊಂದಿಗೆ ಆನಂದದಿಂದ!
***************

ನನಗೂ ಓದುವಾಸೆ!!!

15 ಏಪ್ರಿಲ್ 09
 
paarivaala4 
ನಾನೂ ಓದಬೇಕೆಂಬಾಸೆ ತುಂಬಿದೆ ನನ್ನೀ ಮನದೊಳಗೆ 
ಊರೂರು ಸುತ್ತಾಡಿ ಬಂದೆನದಕೆ  ಪುಸ್ತಕದಂಗಡಿಯೊಳಗೆ 
 
ಪ್ರೇಮ ಪತ್ರಗಳ ರವಾನಿಸುವ ಕೆಲಸಕ್ಕೆ ಈಗಿಲ್ಲ ಅಷ್ಟು ಬೇಡಿಕೆ 
ಈ ಸಮೋಸಗಳಿಂದಾಗಿ ಈಗ ಇಲ್ಲ ಪತ್ರ ಬರೆಯುವ ವಾಡಿಕೆ 
 
ಓದು ಬರಹ ತಿಳಿಯದ ನಾನಿಳಿಯ ಬಹುದಿತ್ತು ರಾಜಕೀಯಕ್ಕೆ 
ಆದರೆ ರೋಸಿಹೋಗಿದೆ ಮನಸ್ಸು ಅಲ್ಲಿನ ಹೊಲಸು ಕಿತ್ತಾಟಕ್ಕೆ 
 
ಇನ್ನು ಉಳಿದದ್ದೆಂದರೆ ಚಿತ್ರರಂಗದಲಿ ಕೈಯಾಡಿಸುವಾ ಆಸೆ 
ಅದಕ್ಕೆ ಮೊದಲು ಸ್ವಲ್ಪ ಓದು ತಿಳಿದು ತಯಾರಾಗುವ ಆಸೆ 
 
ಮಸಕ್ಕಲಿಯನಾಡಿಸಿ ಕೋಟಿಗಟ್ಟಲೆ ಸಂಪಾದಿಸಿದರಂತೆ 
ನಾನೂ ಎರಡಕ್ಷರ ಕಲಿತರೆ ನನ್ನನ್ನೂ ಕರೆಯಬಹುದಂತೆ 
 
ಓದು ತಿಳಿಯದ ಮಸಕ್ಕಲಿಗೇ ಅಷ್ಟು ಬೇಡಿಕೆ ಇದ್ದಿರುವಾಗ  
ಓದು ಕಲಿತರೆ ಹೆಚ್ಚಿಸಿಕೊಳ್ಳಬಹುದೇನೋ ನನ್ನ ಬೆಲೆ ಆಗ 
 
ಓದು ತಿಳಿಯದ ಮಸಕ್ಕಲಿಗೆ ಅಲ್ಲಿ ಮಾತು ದೊರಕದಂತಾಯ್ತು 
ಓದು ಕಲಿತರೆ ನನ್ನಿಂದ ಆಡಿಸಬಹುದೇನೋ ಎರಡು ಮಾತು 
**************************************** 
ಚಿತ್ರ ಕೃಪೆ: ಶ್ರೀ ಗುರು ಬಾಳಿಗಾ (ಸಂಪದ ಡಾಟ್ ನೆಟ್)

ಮೂರು ಹನಿಗಳು!!!

14 ಏಪ್ರಿಲ್ 09

೧. ಓಯಸ್ಸಿಸ್!

ಸಖೀ,

ನನ್ನ

ಮರುಭೂಮಿ

ಅಂತಿರುವ

ಬಾಳಿನಲಿ

ನೀನೊಂದು

ಓಯಸ್ಸಿಸ್!

೨ ತಿಪ್ಪೆ!

ಸಖೀ,

ನೀ

ನನ್ನ

ಒಪ್ಪೆಯಾದರೆ

ನನ್ನ

ಬದುಕೊಂದು

ಕಸದ

ತಿಪ್ಪೆ!

೩. ಮೀನು!

ಸಖೀ,

ನೀನು

ಇಲ್ಲದ

ನಾನು,

ನೀರು

ಇಲ್ಲದ

ಮೀನು!


ನಮ್ಮವರೆಂದರಿತರೆ ಇಲ್ಲಿ ನಮ್ಮವರೇ ಎಲ್ಲಾ!

14 ಏಪ್ರಿಲ್ 09

ಸಖೀ,

ಅರಿಯಬೇಕು ನಾವು, ಈ ಜೀವನವೊಂದು ಪಯಣ
ಮುಂದುವರಿಯಲೇ ಬೇಕು ನಮ್ಮಲ್ಲಿಲ್ಲದಿದ್ದರೂ ತ್ರಾಣ

ನಾಲ್ಕು ಹೆಜ್ಜೆ ನಮ್ಮ ಜೊತೆ ಜೊತೆಗೆ ನಡೆಯುವವರು
ಮುಂದೆ ನಮ್ಮ ಸಂಗವನೇ ತೊರೆದತ್ತ ತೆರಳುವವರು

ಅಲ್ಪ ಸಮಯದ ಸಂಗವು ಜೀವನವನೇ ಆವರಿಸಬಹುದು
ದೀರ್ಘಕಾಲದ ಸಂಗವನೂ ಅಲ್ಪದರಲೇ ಕಳೆಯಬಹುದು

ಹಾದಿಯಲಿ ಸಿಕ್ಕವರೆಲ್ಲಾ ನಮ್ಮ ಮನೆಗೆ ಬರುವವರಲ್ಲ
ಮನೆಗೆ ಬಂದವರೆಲ್ಲಾ ನಮ್ಮ ಮನದೊಳಗೆ ಬಾರರಲ್ಲಾ

ಮನದೊಳಗೆ ಬಂದವರನು ತೊರೆಯಲಾಗುವುದೇ ಇಲ್ಲ
ತೊರೆದು ತೆರಳಿದರೆ ಮತ್ತೆ ತಿರುಗಿ ಕರೆಯಲಾಗುವುದಿಲ್ಲ

ನಮ್ಮವರು ಎಂದರಿತರೆ ನಿಜದಿ ಇಲ್ಲಿ ನಮ್ಮವರೇ ಎಲ್ಲಾ
ಇಲ್ಲವೆಂದರಿತರೆ, ಸಖೀ, ಈ ಜಗದಿ ಯಾರಿಗಾರೂ ಇಲ್ಲ
************************************


ನಿನ್ನ ಸೆರಗು!!!

13 ಏಪ್ರಿಲ್ 09
ಸಖೀ,
ನಿನ್ನ ಸೀರೆಯ
ಸೆರಗಾಗಿ
ಸದಾ ನಿನ್ನ
ಮೈಗಂಟಿಕೊಂಡೇ
ಇರುವಾಸೆ,
ನೀ ಮುಖವೊರೆಸಿ
ಕೊಂಬಾಗಲೆಲ್ಲಾ
ನಿನ್ನ ಆ
ಮುದ್ದು ಮುಖಕ್ಕೆ
ಮುತ್ತಿಡುವ
ಒಳ ಬಯಕೆ,
ನನ್ನಲ್ಲಿತ್ತು
ಸಹಜ;
ಆದರೆ,
ಈಗ
ಹಗಲಿರುಳೂ
ಸೋರುತ್ತಿರುವ
ನಿನ್ನ ಮೂಗನ್ನು
ಅದೇ ಸೆರಗಿನಿಂದ
ನೀನು ಒರೆಸುವುದನು
ಕಂಡಾಗೆಲ್ಲಾ,
ನನ್ನಾಸೆಯ
ಈಡೇರಿಸದೇ,
ಬಚಾವು
ಮಾಡಿದೆ
ದೇವರೇ
ಅನ್ನುತ್ತಿದ್ದೇನೆ,
ಸಖೀ,
ಇದು ನಿಜ!
*-*-*-*-*

ಹಾದಿಯಲಿ ನಡೆವಾಗ…!

10 ಏಪ್ರಿಲ್ 09

ಸಖೀ
ಹಾದಿಯಲಿ ನಡೆವಾಗ ದಿನವೂ
ನನಗೆ ಕಾಣ ಸಿಗುವ ಮುಖಗಳಲಿ
ಕಂಡು ಕೊಂಡಿದ್ದೇನೆ ನಾನು
ಈ ಹಲವಾರು ಬಗೆಗಳನು;

ನಾನು ಹಾದಿಯಲಿ ಕಾಣ ಸಿಕ್ಕಿದ್ದೇ
ಭಾಗ್ಯವೆಂದು ಮುಖವೆಲ್ಲಾ ಅರಳಿಸಿ
ನಲಿವಿಂದ ನನ್ನೊಡನೆ ಮಾತಾಡ
ಬಯಸುವ ನಮ್ಮವರದೊಂದು ಬಗೆ;

ನೋಡಿದ ಮೇಲೆ ನಗಲೇಬೇಕಲ್ಲಾ
ಎಂದುಕೊಳ್ಳುತ್ತಾ ಒತ್ತಾಯದ
ದೇಶಾವರಿ ನಗೆ ಚೆಲ್ಲುವ ನಮ್ಮವರು
ಎನಿಸಿಕೊಂಡಿರುವವರದೊಂದು ಬಗೆ;

ನೋಡಿದ್ದು ಗೊತ್ತಾಗಬಾರದೆಂದು
ನೋಡಿಯೂ ನೋಡದವರಂತೆ
ನಟಿಸುತ್ತಾ ನನ್ನನ್ನು ಕದ್ದು ನೋಡಿ
ಆನಂದಿಸುವವರದೊಂದು ಬಗೆ;

‘ಓ.. ನಾನೇನೂ ನೋಡಿಲ್ಲಪ್ಪಾ’
ಅಂತ ದೂರದ ಮೊದಲ
ನೋಟದಿಂದಲೇ ಮುಖ ಮರೆಸಿ
ಮುನ್ನಡೆವವರದೊಂದು ಬಗೆ;

‘ಥೂ .. ಇವರೆಲ್ಲಿ ಸಿಕ್ಕಿದರಪ್ಪಾ’
ಎಂದು ಮನದೊಳಗೆ ಸಹಸ್ರ
ನಾಮ ಜಪಿಸುತ್ತಾ ಕಣ್ಣಲ್ಲಿ
ಕಿಡಿಕಾರುವವರದೊಂದು ಬಗೆ;

‘ಓ… ಅದು ಅವರಲ್ಲವೇ?
ಛೆ! .. ನಾನು ನೋಡಿಯೇ ಇಲ್ಲ,
ಏನಂದುಕೊಂಡರೋ’ ಎಂದು
ಬೇಸರಿಸುವವರದೊಂದು ಬಗೆ;

ಇಷ್ಟಾದರೂ ನಾನು ನಾನೇ,
ನನ್ನ ಒಂಟಿ ವ್ಯಕ್ತಿತ್ವದ ದರುಶನ
ಆದಾಗ ಕಾಣುವ ಪ್ರತಿಕ್ರಿಯೆಗಳು
ಒಬ್ಬೊಬ್ಬರಲ್ಲಿ ಒಂದೊಂದು ಬಗೆ!
*-*-*-*-*-*-*-*-*-*


ಈ ಕವಿಗಳೇ ಹೀಗೆ…!!!

10 ಏಪ್ರಿಲ್ 09

ಸಖೀ,

ಕವಿ ಬರೇ ಕವಿತೆಗಳನ್ನಷ್ಟೇ ರಚಿಸುತ್ತಿರುತ್ತಾನೆ
ಅಂತ ಅಂದರೆ ಅದು ತಪ್ಪಾಗುತ್ತದೆ ತಾನೆ

ಆದದ್ದನ್ನೆಲ್ಲಾ ಈತ ಒಮ್ಮೊಮ್ಮೆ ಆಗಿಲ್ಲವೆನ್ನುತ್ತಾನೆ
ಆಗದ್ದನ್ನೆಲ್ಲಾ ಕೆಲವೊಮ್ಮೆ ಆಗಿದೆಯೆನ್ನುತ್ತಾನೆ

ಕಾಣದ್ದನ್ನೂ ಈತ ನಿಜಕ್ಕೂ ಕಂಡವರಂತಾಡುತ್ತಾನೆ
ಕಂಡದ್ದನ್ನೂ ಬೇಕೆಂದೇ ಮರೆಯಲೆತ್ನಿಸುತ್ತಾನೆ

ಒಮ್ಮೊಮ್ಮೆ ನಗುವವರ ನಡುವೆ ಒಬ್ಬನೇ ಅಳುತ್ತಾನೆ
ಅವರಿವರ ಹೃದಯಗಳ ಚುಚ್ಚಿ ಬರಿದೇ ಅಳಿಸುತ್ತಾನೆ

ಅಳುವವರ ನಡುವೆ ಈತ ತಾನೊಬ್ಬನೇ ನಗುತ್ತಾನೆ
ಅವರಿಗೂ ಕಚಗುಳಿಯಿಟ್ಟು ತನ್ನೊಡನೆ ನಗಿಸುತ್ತಾನೆ

ಕವಿಯನ್ನು ಹೊಗಳಲು ಹೋದರೆ ಈತ ನಮ್ಮನ್ನೇ
ಟೀಕಿಸುವ ಚುಟುಕವೊಂದನ್ನು ಬರೆದು ಬಿಡುತ್ತಾನೆ

ಅವನನ್ನು ತೆಗಳುವ ಪ್ರಯತ್ನ ಮಾಡಿದರೆ ತನ್ನ ಹೊಸ
ರಚನೆಯಿಂದ ನೋಡು, ನಮ್ಮ ಮನಸ್ಸನ್ನೇ ಗೆಲ್ಲುತ್ತಾನೆ

ನಮ್ಮೆಲ್ಲರ ನಡುವೆ ಇದ್ದೂ ಈತ ಇಲ್ಲದಂತೆ ಇರುತ್ತಾನೆ
ತನ್ನದೇ ಲೋಕದಲ್ಲಿ ಸದಾ ಒಂಟಿ ವಿಹರಿಸುತ್ತಿರುತ್ತಾನೆ

ಎಂದೂ ಕಾಣದವರ ಬಣ್ಣಿಸಿ ಹೊಗಳಿ ಅಟ್ಟಕ್ಕೇರಿಸುತ್ತಾನೆ
ಕಣ್ಣೆದುರು ದಿನಾ ಕಾಂಬವರ ಬರಿದೇ ತೆಗಳುತ್ತಿರುತ್ತಾನೆ

ಯಾರು ಯಾರನ್ನೋ ಕವಿ ತನ್ನವರೆಂದು ಅನ್ನುತ್ತಾನೆ
ತನ್ನವರನ್ನೇ ನಿಜದಿ ಈತ ಕೆಲವೊಮ್ಮೆ ಮರೆತಿರುತ್ತಾನೆ

ತನ್ನವರಲ್ಲದವರ ಮನದಿ ಮನೆಮಾಡಿರುತ್ತಾನೆ
ಮನೆ ಮಂದಿಯ ಮನವ ನೋಯಿಸುತ್ತಿರುತ್ತಾನೆ

ಈತನ ಕಲ್ಪನಾ ಲೋಕದಲ್ಲಿ ಮಿಥ್ಯವೆಲ್ಲವೂ ಸತ್ಯ
ಈತನಿಗೆ ಒಮ್ಮೊಮ್ಮೆ ಅಲ್ಲಿ ಸತ್ಯವೆಲ್ಲವೂ ಮಿಥ್ಯ

ಕವಿ ಬರೇ ಕವಿತೆಗಳನ್ನಷ್ಟೇ ರಚಿಸುತ್ತಿರುತ್ತಾನೆ
ಅಂತ ಅಂದರೆ ಅದು ತಪ್ಪಾಗುತ್ತದೆ ತಾನೆ
*-*-*-*-*-*-*-*-*-*-*-*-*-*-*-*


ಬಾರದೇಕೆ ಸಾವು!!!

10 ಏಪ್ರಿಲ್ 09

ಸಖೀ,
ಸಾವರಿಸಿಕೊಳ್ಳಬಹುದಾದರೂ ಬಾಳ
ಹಾದಿಯಲಿ ಮುಗ್ಗರಿಸಿ ಬಿದ್ದು ಎದ್ದು
ಸಹಿಸಲಾಗದು ನಮ್ಮವರಿಂದಲೇ ನಮಗೆ
ಸದಾ ಸಿಗುವ ಈ ಮುಸುಕಿನೊಳಗಿನ ಗುದ್ದು

ಇದು ಅತ್ತ ಉಗಿಯಲಾಗದೆ, ಇತ್ತ ನುಂಗಲಾಗದೆ
ನಮ್ಮ ಬಾಯೊಳಗಿದ್ದು ಸುಡುವ ಬಿಸಿ ತುಪ್ಪದಂತೆ
ನಮ್ಮನ್ನು ಒಳಗೊಳಗೆ ಕೊರಗಿಸುತಾ ಕ್ಷೀಣಿಸುತಾ
ಸದಾ ಕಾಲ ನಡೆವ ಒಂದು ಶೀತಲ ಯುದ್ಧದಂತೆ

ಸಾಕು ಸಾಕೆನಿಸುತಿದೆ ಈ ಮಾನಸಿಕ ಚಿತ್ರಹಿಂಸೆ
ಅನವರತ ನನ್ನೀ ಮನಕೆ ನೀಡುತಿರುವ ನೋವು
ಬರಬಾರದೇಕೆನಿಸುತಿದೆ ನನಗೆ ಈ ನೋವನ್ನೆಲ್ಲಾ
ಒಮ್ಮೆಗೇ ನುಂಗಿಬಿಡುವಂತೆ ಈಗಲೇ ನನ್ನ ಸಾವು

ಪ್ರಬುದ್ಧನಾಗಿರಿಸದೇ ಆ ದೇವರು, ಮೂರ್ಖರ
ನಡುವೆ ನನ್ನನ್ನೂ ಮೂರ್ಖನನ್ನಾಗಿರಿಸಬೇಕಿತ್ತು
ಎಲ್ಲರೊಂದಿಗೂ ಸ್ಪಂದಿಸುವ ಹೃದಯದ ಬದಲು
ಎನ್ನ ಈ ಎದೆಯೊಳಗೊಂದು ಕಲ್ಲನಿರಿಸಬೇಕಿತ್ತು

ಎಂತೆಂತವರನ್ನೆಲ್ಲಾ ಬೇಕೆಂದಾಗ ಕಾರಣ ನೀಡದೇ
ದೇವರು ತನ್ನಲ್ಲಿಗೆ ಮರಳಿ ಕರೆಸಿಕೊಳ್ಳುವಂತೆ
ನನ್ನ ಬಾಲ್ಯದ ಆ ಕೆಟ್ಟ ಖಾಯಿಲೆಯ ನೆಪದಲ್ಲಿ
ನನ್ನನ್ನೂ ತನ್ನಲ್ಲಿಗೆ ಒಯ್ದಿದ್ದರೆ ಏನಾಗುತ್ತಿತ್ತಂತೆ
*-*-*-*-*-*-*-*-*-*-*-*-*-*-*-*


ಪರೀಕ್ಷೆ!

09 ಏಪ್ರಿಲ್ 09
ಸಖೀ,
ರಾಮಾಯಣದಲಿ,
ವನವಾಸ ಮಾಡಬೇಕಾಗಿ
ಬಂದುದು ಸಾಧ್ವಿ ಸೀತೆಗೆ;
ಕ್ರೂರಿ ಮಂಥರೆಗೂ ಅಲ್ಲ,
ದುಷ್ಟೆ ಕೈಕಯಿಗೂ ಅಲ್ಲ.

ಮಹಾಭಾರತದಲಿ ಕಷ್ಟವನುಂಡವರು,
ಕೃಷ್ಣನ ಸಖರಾದ ಪಾಂಡವರು;
ಧರ್ಮ ಭ್ರಷ್ಟರಾದ ಕೌರವರಲ್ಲ.

ಅಂದು ಸತ್ಯವಾದಿ ಹರಿಶ್ಚಂದ್ರನಿಗೂ
ಬಂದಿತ್ತು ಕೇಡುಗಾಲ,
ಆಗಿದ್ದ, ಆತನೂ
ಸ್ಮಶಾನದಲಿ ದ್ವಾರಪಾಲ.

ರಾಮನ ಪಾದ ಸ್ಪರ್ಶಕ್ಕಾಗಿ
ಕಲ್ಲಾಗಿ ಕಾದಿರಲಿಲ್ಲವೇ ಅಹಲ್ಯೆ?
ಒಮ್ಮೆ ಯೋಚಿಸಿ ನೋಡು,
ನಿಜವಾಗಿ ನೀನಿದನೆಲ್ಲ ಬಲ್ಲೆ.

ಜೀವನದಲಿ ಕಷ್ಟವನು
ಅನುಭವಿಸ ಬೇಕಾದವರು,
ಆ ದೇವನಿಗೆ ಪ್ರಿಯರಾದ,
ಸದ್ಗುಣಿಗಳು ಸಖೀ.

ದುರ್ಗುಣಿಗಳು ಎಂತಿದ್ದರೆ
ಅವನಿಗೆ ಏನಂತೆ?
ತನಗೆ ಪ್ರಿಯರಾದವರ
ಪರೀಕ್ಷೆ ನಿತ್ಯ ನಡೆಸ
ಬೇಕಾಗಿದೆಯಂತೆ

ಚಿನಿವಾರನ ಪೆಟ್ಟಿಂದಲೇ
ಚಿನ್ನಕ್ಕೆ ಶೋಭೆ ಬರುವಂತೆ
ಈ ನಿತ್ಯ ಪರೀಕ್ಷೆಗಳಿಂದಲೇ
ನಾವೂ ಪರಿಶುದ್ಧರಾಗಬೇಕಂತೆ

ಅದಕಾಗಿ ಜೀವನದಲಿ
ಸದಾ ಎಚ್ಚರವಿರಬೇಕು
ಯಾವುದೇ ಅನಾಚಾರ
ಆಗದಂತೆ ದೃಢ ಚಿತ್ತರಾಗಿರಬೇಕು

ಕಷ್ಟ-ಕಾರ್ಪಣ್ಯಗಳನು ನಾವು,
ಅಂದು ಕಲ್ಲಾಗಿದ್ದ ಅಹಲ್ಯೆಯಂತಿದ್ದು
ಸಹಿಸಬೇಕು, ಜಯಿಸಬೇಕು
ಜಲಧಾರೆಗೆ ಎದುರಾಗಿ
ಈಜಿ ದಡವ ಸೇರುವಂತೆ
ಎಲ್ಲವನೂ ದಾಟಿ ಈ ಆತ್ಮವನು,
ಆ ಪರಮಾತ್ಮನಲಿ ಲೀನವಾಗಿಸಬೇಕು!
*-*-*-*-*-*-*-*-*-*