ಭಾರ ಇಳಿಸಿ ಸಾಗೋಣ!

21 ನವೆಂ 13

 

ಸಖೀ,
ಹೊರಲಾಗದ ಭಾರವನು ಇಳಿಸಿ ನಡೆಯಬೇಕು
ಅಳಿಸಲಾಗದ ಕುರುಹನಿಲ್ಲಿ ಉಳಿಸಿ ಹೋಗಬೇಕು
ಕೊರಗುತಾ ಕೂತರೀ ಪಯಣ ಸಾಗದು ಮುಂದೆ
ಬಿದ್ದೊದ್ದೆದ್ದು ಸಾಗುತಿದ್ದರಷ್ಟೇ ಗಮ್ಯ ಕಣ್ಣ ಮುಂದೆ!


ಆತ್ಮಸ್ಥೈರ್ಯ ಕ್ಷೀಣಿಸಿದಾಗ!

21 ನವೆಂ 13

 

ದೇವಾ,
ನಿನ್ನ ಮೇಲೆ ನಾನು ಹೊರಿಸುತಿಹ ಅಪವಾದಗಳಿಗೆಲ್ಲಾ
ಕಾರಣ ನನ್ನ ಮನದೊಳಗೆ ಹುಟ್ಟಿರುವ ಅನುಮಾನಗಳು
ನನ್ನ ಮನದೊಳಗಿನ ಅನುಮಾನಗಳಿಗೆಲ್ಲಾ ಕಾರಣ
ಕ್ಷೀಣಿಸುತ್ತಿರುವ ನನ್ನ ಆತ್ಮಸ್ಥೈರ್ಯ ಮತ್ತು ನಂಬಿಕೆಗಳು!


ಜ್ಯೋತಿ!

21 ನವೆಂ 13

 
(ಭಾವಾನುವಾದ)

ಅಹೋರಾತ್ರಿ ಬೆಳಗುತಿಹುದಾದರೂ ಜ್ಯೊತಿ
ನನ್ನ ಮನಮಂದಿರದಲ್ಲಿ ಇನ್ನೂ ಕತ್ತಲಿಹುದು
ಅದೆಲ್ಲಿರುವೆಯೋ ಓ ನನ್ನ ಸಾಥಿ, ನೀನು
ಜೊತೆಯಾದರೆ ನನ್ನೀ ಬಾಳು ಬೆಳಗಬಹುದು

ಪ್ರತಿ ಹೆಜ್ಜೆಯಲೂ ಎಡವುತಿರುವೆ ನಾನು
ಸೂರ್ಯ ಚಂದ್ರರೂ ತೋರುತ್ತಿಲ್ಲ ಹಾದಿ
ನನ್ನ ಇನಿಯನ ದರ್ಶನವಾಗಲು ಎನಗೆ
ಅಂಥ ಬೆಳಕು ತುಂಬಿಬಿಡಲೊಮ್ಮೆ ಮನದಿ

ನನ್ನೊಂದಿಗನ್ಯಾಯ ಎಸಗಿದವರು ಯಾರು
ಎಂಬ ರಹಸ್ಯವನ್ನು ಯಾರಾದಾರೂ ಹೇಳಿ
ದೀಪ ಹಚ್ಚಿದವರ ಮನೆಯನ್ನು ಬೆಳಗದೇ
ಇತರರ ಮನೆಯ ಬೆಳಗುತಿರುವುದೇಕೆ ಹೇಳಿ

ನನ್ನ ಗಮ್ಯ ಯಾವುದು ಎಂಬ ಅರಿವೂ ಇಲ್ಲ
ಯಾರ ನಿರೀಕ್ಷೆ ಈ ಕಣ್ಣುಗಳಿಗೆ ಎಂಬರಿವಿಲ್ಲ
ನದಿಯಲಿ ಅಲೆಗಳೇಳಿಬೀಳುವಂತೆ, ಮನದ
ಪಯಣವೂ ಕುತೂಹಲಕಾರಿಯಾಗಿಹುದಲ್ಲಾ?

http://www.youtube.com/watch?v=SA_PmbS7O6k


ಉಸಿರಾಡುವ ಕೊರಡು!

19 ನವೆಂ 13

 

ಸಖೀ,
ನನ್ನ ಇರವಿನ ಅರಿವೂ ಆಗುತ್ತಿಲ್ಲ ಎಂದನ್ನದಿರು
ನಾನಿದ್ದೇನೆ ಅನ್ನುವುದನ್ನೂ ನೀನು ನಂಬದಿರು
ನಿನ್ನ ಮನದಲ್ಲಿ ಅನುಮಾನಗಳು ಮೂಡಿದಾಗ
ನಿನ್ನ ಮನದಲ್ಲಿ ಪ್ರಶ್ನೆಗಳು ಏಳ ತೊಡಗಿದಾಗ
ನಾನು, ನಿನ್ನೊಳಗಿನ ನಾನು, ಸತ್ತಿದ್ದೇನೆ ಹೆಣ್ಣೇ
ಇದೀಗ ಕೇವಲ ಉಸಿರಾಡುವ ಕೊರಡು ಕಣೇ!


ಹೊಟ್ಟೆಕಿಚ್ಚು!

19 ನವೆಂ 13

ಸಖೀ,
ಕೆಲವೊಮ್ಮೆ, 

ಇತರರ ಮೇಲೆ
ನಮ್ಮೊಳಗಿರುವ
ಹೊಟ್ಟೆಕಿಚ್ಚು ಕೂಡ 
ನಮ್ಮಿಂದ ಬರೆಸುತ್ತದೆ;ಆದರೆ, 
ಅದು ನಮ್ಮನ್ನು 
ಇತರರ ಮುಂದೆ 
ಬಹು ಸುಲಭವಾಗಿ 
ತೆರೆದಿಡುತ್ತದೆ!


ಕವಿ ಕಲ್ಪನೆ!

19 ನವೆಂ 13

ಸಖೀ,
ಕವಿಯಾದವನು ಕಲ್ಪನೆಯ ಆಗಸದಲಿ
ತನ್ನ ಭಾವಗಳಿಗೆ ರೆಕ್ಕೆಮೂಡಿಸಬೇಕು
ಅವು ವಾಸ್ತವದಂತೆ ಕಾಣುವಂತಿರಲಿ
ಆದರೆಂದಿಗೂ ವಾಸ್ತವವಾಗಿರದಿರಲಿ;

ವಾಸ್ತವಕ್ಕೆ ರೆಕ್ಕೆ ಕಟ್ಟಿ ಹಾರಿಸಿದರೆ ಕಷ್ಟ
ಲೋಕದ ಬಾಯಿಗೆ ನಮ್ಮ ಇಷ್ಟಾನಿಷ್ಟ
ಓದುವವರಿಗೆ ಸದಾ ಇಲ್ಲದ ಕುತೂಹಲ
ಬರೆವವರಿಗೆ ಇಲ್ಲೆಂದೂ ಶಾಂತಿಯಿಲ್ಲ!


ತಾಳ್ಮೆ ಬೇಕು!

18 ನವೆಂ 13

 

ಸಖೀ,
ಮನ ಚಂಚಲಗೊಂಡಾಗ ಮೌನ ವಹಿಸಿದ್ದರೆ
ಪ್ರಶ್ನೆಗಳು ಎದ್ದಾಗೆಲ್ಲಾ  ತಾಳ್ಮೆಯಿಂದಿದ್ದಿದ್ದರೆ 
ಇಂದೀಗ ಈ ಪರಿಸ್ಥಿತಿ ಇದಿರಾಗುತ್ತಲಿರಲಿಲ್ಲ
ನಿನ್ನ ದೃಷ್ಟಿಯಲ್ಲೇ ನೀ ಕುಬ್ಜಳಾಗುತ್ತಿರಲಿಲ್ಲ!


ಅರಿತಾಳು!

18 ನವೆಂ 13

 

“ಸಖೀ,
ನನ್ನ ಸ್ನೇಹಿತರ ಪಟ್ಟಿಯಲ್ಲಿ ಹೆಣ್ಣು ಮಕ್ಕಳೇ 
ಜಾಸ್ತಿ ಇದ್ದಾರೆ ಏಕೆಂದು ಕೇಳುತಿಹಳಾಕೆ”

“ಕೇಳಿಬಿಡಿ ಕಾರಣವನಾ ಪಟ್ಟಿಯಲ್ಲಾಕೆಯ
ಇರವಿಗೆ, ತಂತಾನೇ ಅರಿತಾಳಾಗ ಆಕೆ”


ಎಲ್ಲರೂ ಮರುಳರೇ!

18 ನವೆಂ 13

 

ಸಖೀ,
ನಿನ್ನ ಬಗ್ಗೆ ನಾನು ಯಾರಲ್ಲಿ ದೂರು ನೀಡಲಿ
ಇಲ್ಲಿ ಎಲ್ಲರೂ ಮರುಳರೇ ನಿನ್ನ ಒಲವಿನಲಿ
ನನ್ನ ಮಾತಿಗೆ ಕಿವಿಕೊಡಲು ಯಾರಿಹರಿಲ್ಲಿ
ಬರಿದೆ ಮರುಗಬೇಕು ನಾನಿನ್ನ ವಿರಹದಲಿ!


ಏನಿಹುದು ಬೆಲೆ?

18 ನವೆಂ 13

ಸಖೀ,
ಮಾತುಗಳು ಕಹಿಯಾಗತೊಡಗಿದಾಗ ಮೌನ ಚೆನ್ನ
ಇತರೊಡನೆ ತುಲನೆ ಆರಂಭವಾದಾಗ ಮೌನ ಚೆನ್ನ
ಪ್ರೀತಿಯದು ಮೋಹವಾಗತೊಡಗಿದರೆ ಮೌನ ಚೆನ್ನ
ನಾವಿದ್ದಂತೆ ಸ್ವೀಕರಿಸದವರ ಜೊತೆಗೆ ಮೌನ ಚೆನ್ನ

ನೀನನ್ನ ಅರಿತಿದ್ದಾಗ ನಾಹೇಳಲೇನೂ ಉಳಿದಿರಲಿಲ್ಲ
ನೀನನ್ನ ಅರಿಯೆನೆಂಬಾಗ ಹೇಳಲಿನ್ನೇನೂ ಉಳಿದಿಲ್ಲ
ನಾನನ್ನ ಬಗ್ಗೆ ಹೇಳಿಕೊಂಡರೆ ನಿನ್ನರಿವಿಗೇನಿದೆ ಬೆಲೆ
ನಿನ್ನರಿವ ನಾ ಪ್ರಶ್ನಿಸಿದರೆ ನನ್ನರಿವಿಗೇನಿಹುದು ಬೆಲೆ?