ಮತಭೇದ!

23 ಮಾರ್ಚ್ 13
ಸಖೀ,
ಅಮ್ಮನ ಮೃತದೇಹದ ಪಕ್ಕ ನಿಂತು
ಆ ಮಕ್ಕಳು ಹರಿಸಿದ ಕಣ್ಣೀರಿನಲ್ಲಿ
ಇದ್ದಿರಲಿಲ್ಲವಲ್ಲ ಕೊಂಚವೂ ಭೇದ

ಚಿತೆಯ ಬೆಂಕಿ ಆರಿದ ಮರುಕ್ಷಣವೇ
ಶುರುವಾಯ್ತು ಮೇಲ್ಗೈ ಸಾಧಿಸಲು
ಮಕ್ಕಳ ನಡುವಿದ್ದಂಥ ಮತಭೇದ!


ನಿರೀಕ್ಷೆ ಸಹಜ!

23 ಮಾರ್ಚ್ 13
ಸಖೀ,
ನೀನು ನನ್ನ ಬಗ್ಗೆ ಕೆಲವು ನಿರೀಕ್ಷೆಗಳನ್ನು ಇಟ್ಟುಕೊಂಡಿರುವುದು ಸತ್ಯ
ನನಗೆ ನಿನ್ನಿಂದ ನಿರೀಕ್ಷೆಗಳೇ ಇಲ್ಲ ಎನ್ನುವುದು ನಿಜವಾಗಿಯೂ ಮಿಥ್ಯ;

ನಾನು ಇನ್ನೂ ಎತ್ತರೆತ್ತರಕ್ಕೆ ಬೆಳೆಯುತ್ತಿರಬೇಕೆಂಬುದು ನಿನ್ನ ನಿರೀಕ್ಷೆ
ಜನರ ದೃಷ್ಟಿಯಿಂದ ನೀನು ಕೆಳಗೆ ಬೀಳಬಾರದೆಂಬುದು ನನ್ನ ನಿರೀಕ್ಷೆ!


ಪರಿಣತಿ ಯಾವುದರಲ್ಲಿ?

23 ಮಾರ್ಚ್ 13
ಮೊನ್ನೆ ನನ್ನ ಸಹೃದಯಿ ಸ್ನೇಹಿತರೊಬ್ಬರು ನನ್ನಲ್ಲಿ ಕೇಳಿದ ಪ್ರಶ್ನೆ:“ಆಸು, ನೀವು ಕವನ ಅಲ್ಲದೇ ಯಾವ ವಿಷಯ ಬರೆಯೋದರಲ್ಲಿ ಎಕ್ಸ್ಪರ್ಟ್?”ಅದಕ್ಕೆ ನಾನು ನೀಡಿದ ಉತ್ತರ:“ನಾನು ಯಾವುದರಲ್ಲೂ ಎಕ್ಸ್ಪರ್ಟ್ ಅಲ್ಲ ಅನ್ನುವುದು ಸತ್ಯ. ಆದರೆ ಆಸಕ್ತಿ ಇರುವ ವಿಷಯಗಳು ಜೀವನದ ಸತ್ಯಗಳ ಬಗ್ಗೆ.ಸರಿ ಏನು ಸಂಗತಿ?

… ನೌಕರಿ ಕೊಡಿಸ್ತೀರಾ? 🙂

ಬರೆಯುವುದು ಏಕೆ? ಎಂದು ಕೇಳುತ್ತೀರಾದರೆ, ನನ್ನ ಉತ್ತರ ಇದಾಗಿದೆ:

ಕನ್ನಡದ ಸೇವೆ ಮಾಡುತ್ತಿದ್ದೇನೆಂಬ ಭ್ರಮೆಯೊಂದಿಗೆ, ನನ್ನ ಮನದಲ್ಲಿ ಮೂಡುವ ಸ್ಪಂದನ ಪ್ರತಿಸ್ಪಂದನಗಳನ್ನು ಮಾತುಗಳ ಮೂಲಕ ಹೊರಹಾಕುವುದಕ್ಕೆ.

ಯಾವುದರಲ್ಲಿ ಆಸಕ್ತಿ ಇದೆ? ಅಂತ ಕೇಳಿದರೆ, ನನ್ನ ಉತ್ತರ:

ರಾಜಕೀಯ, ಪತ್ರಿಕೋದ್ಯಮ, ಅಧ್ಯಾತ್ಮ, ಪ್ರಚಲಿತ ವಿದ್ಯಮಾನ, ಮಾನವೀಯತೆ ಉಳ್ಳ ಸಹೃದಯರೊಂದಿಗಿನ ಸ್ನೇಹ, ಪರೋಪಕಾರ… ನಿಜ ಹೇಳಬೇಕೆಂದರೆ ಎಲ್ಲದರಲ್ಲೂ ಆಸಕ್ತಿ

ನಾನು ಯಾವುದೇ ಒಂದು ವಿಷಯದ ಮೇಲೆ ಬರೆಯಬಲ್ಲ ಎಕ್ಸ್ಪರ್ಟ್ ಅಲ್ಲ. ಆದರೆ, ನಾನು ನನ್ನ ಅರಿವಿಗೆ ಬರುವ ಯಾವುದೇ ವಿಷಯದ ಬಗ್ಗೆ ಬರೆಯಬಲ್ಲೆ.

ಕೆಲವು ಚಿಕ್ಕ ಪುಟ್ಟ ಕತೆಗಳನ್ನು ಬರೆದಿದ್ದೇನೆ. ಕೆಲವು ವೈಚಾರಿಕ ಲೇಖನಗಳನ್ನು ಹಾಗೂ ವಿಡಂಬನಾ ಬರಹಗಳನ್ನು ಬರೆದಿದ್ದೇನೆ.

ಜಾಸ್ತಿ ಅಟ್ಟಕ್ಕೇರಿಸಬೇಡಿ.

ನಾನು ಎಲ್ಲಿದ್ದೇನೋ ಅಲ್ಲೇ ಇರಲು ಬಿಡಿ”.

ಮತ್ತೆ ಅವರಿಂದ ಈ ಪ್ರಶ್ನೆ:

“ಯಾವುದಾದರೂ ಒಂದು ವಿಷಯದ ಮೇಲೆ, ಅಂದರೆ ಜನರಿಗೆ ಇಷ್ಟ ಆಗುವ ಸರಳ ವಿಷಯದಲ್ಲಿ ಲೇಖನ ಬರೆಯೋದಿಲ್ವಾ?”

ಅದಕ್ಕೆ ನನ್ನ ಉತ್ತರ:

“ನಾನು ಕಳೆದ ಮೂವತ್ತೈದು ವರುಷಗಳಲ್ಲಿ ನನಗಿಷ್ಟವಾಗುವುದಕ್ಕಷ್ಟೇ ಬರೆದದ್ದು. ಜನರಿಗಾಗಿ ಬರೆದೇ ಇಲ್ಲ. ಇನ್ನು ಮುಂದೆಯಾದರೂ ಅಷ್ಟೇ. ನಾನು ನನಗಾಗಿ ಬರೆಯುತ್ತೇನೆ. ನನ್ನ ಮನಕ್ಕೆ ಸರಿ ಅನಿಸಿದ್ದನ್ನು ಬರೆಯುತ್ತೇನೆ.
ಜನರ ಇಷ್ಟಕ್ಕಾಗಿ ಬರೆಯಲಾರೆ. ಎಂದಿಗೂ ಬರೆಯಲಾರೆ. ಏನಂತೀರಿ?”.


ಜ್ಞಾನದ ಅಗತ್ಯವಿದೆ!

22 ಮಾರ್ಚ್ 13

ಸಖೀ
ಮನ ನಡೆಸೋ ವಿಶ್ಲೇಷಣೆಗೆ ಜ್ಞಾನದ ಬೆಂಬಲ ಇರಬೇಕು
ಅನ್ಯ ಅದು ಸದಾ ಅರ್ಥಹೀನವಾಗಿಯೇ ಉಳಿಯುವುದು

ಹೃದಯ ನಡೆಸೋ ವಿಶ್ಲೇಷಣೆಗೆ ಆ ಬೆಂಬಲದ ಅಗತ್ಯವಿಲ್ಲ
ಮನ ಮೋಸ ಮಾಡಬಹುದು ಹೃದಯ ಮೋಸ ಮಾಡದು

ವಿಶ್ಲೇಷಣೆ ಮನ ನಡೆಸಿದೆಯೋ  ಹೃದಯ ನಡೆಸಿದೆಯೋ
ಎಂದರಿತುಕೊಳ್ಳಲು ಜ್ಞಾನದ ಅಗತ್ಯ ಇದ್ದೇ ಇರುವುದು!


ಮನಸ್ಸಾಕ್ಷಿ – ಆತ್ಮಸಾಕ್ಷಿ!

22 ಮಾರ್ಚ್ 13

ಸಖೀ,
ಮನಸ್ಸಾಕ್ಷಿ ಮನುಜನಿಂದ ಸದಾ ಮೋಸ ಮಾಡಿಸುತಿಹುದು
ಆತ್ಮಸಾಕ್ಷಿಯಾತನಲ್ಲಿ ಅಪರಾಧೀ ಭಾವ ತುಂಬುತಿಹುದು;

ಯಾವುದು ಮೇಲ್ಗೈ ಸಾಧಿಸುವುದೋ ಅದರದ್ದೇ ಅಧಿಕಾರ
ಮನದ ಕೈಗೆ ಸಿಕ್ಕಿ ಬಾಳುತಿದ್ದರೆ ಕೊನೆಗಿಲ್ಲಿ ಹಾಹಾಕಾರ!


ಪ್ರೀತಿಯ ಪರೀಕ್ಷೆ!

22 ಮಾರ್ಚ್ 13

 

ಸಖೀ,
ಪ್ರೀತಿಯಿಂದ ಅಧಿಕಾರ
ಅಧಿಕಾರದಿಂದ ನಿರೀಕ್ಷೆ

ಅಧಿಕಾರ ಅತಿಯಾದರೆ
ಪ್ರತಿದಿನವೂ ಇಲ್ಲಿ ಪರೀಕ್ಷೆ!


ನೆಮ್ಮದಿಯೆಲ್ಲಿ?

22 ಮಾರ್ಚ್ 13

 

ಸಖೀ,
ಪರರನ್ನು ತನ್ನವರೆಂದು ಬಗೆದು
ತಿದ್ದಿ ತೀಡುತ್ತಾ ಬಂದವನಿಗಿಲ್ಲಿ

ತನ್ನವರ ಅನರ್ಥಗಳಿಗೇ ಸಾಕ್ಷಿ
ಆಗಬೇಕಾದಾಗ ನೆಮ್ಮದಿ ಎಲ್ಲಿ?


ಹಸುವಿನಿಂದ ಹಾಲು!

22 ಮಾರ್ಚ್ 13

ಸಖೀ,
ಹಸು ತಾನು ಅದೆಷ್ಟೇ ಬಡವಾದರೂ
ಸದಾ ಹಾಲನ್ನಷ್ಟೇ ನೀಡುತ್ತಿರಬೇಕು;

ಹಸುವಿನ ಕೆಚ್ಚಲಿನಿಂದ ನಾವೇಕೆ
ಸುಣ್ಣದ ನೀರನ್ನು ನಿರೀಕ್ಷಿಸಬೇಕು?


ಗೊತ್ತಾಗುವುದಿಲ್ಲ!

22 ಮಾರ್ಚ್ 13

ಸಖೀ,
ನನ್ನಿಂದ ನಿಮಗೆ ಬೇಜಾರಾಯ್ತಾ?
ನನ್ನ ಮೇಲೆ ನಿಮಗೆ ಕೋಪ ಬಂತಾ?
ನನ್ನಿಂದ ನಿಮಗೆ ತೊಂದರೆ ಆಯ್ತಾ?
ಛೇ… ನನಗೆ ಅದೆಲ್ಲಾ ಗೋತ್ತಾಗೋದಿಲ್ಲ;

ನಾವು ಏನೂ ಅನ್ನದೇ ಇದ್ದಾಗಲೂ
ಇಂಥ ಮಾತುಗಳನ್ನು ಪದೇ ಪದೇ
ಆಡುತ್ತಿರುವವರಿಗೆ ನಾನೇನ್ನಬೇಕು
ನನಗಂತೂ ಗೊತ್ತಾಗುವುದೇ ಇಲ್ಲ!


ಉಗುಳದಿರು!

22 ಮಾರ್ಚ್ 13

ಸಖೀ,
ಥೂ ಎಂದು ನೀ ಕ್ಯಾಕರಿಸಿ
ಉಗುಳುವಾಗಲೂ ಇರಲಿ
ಸ್ವಲ್ಪವಾದರೂ ಜಾಗ್ರತೆ;

ಜಗದಲ್ಲಿ ಕೆಲವು ಮುಖಗಳು
ಪ್ರತಿರೋಧ ಒಡ್ಡುತ್ತಾ ಅದನು
ಹಿಂದಕ್ಕೆ ಎರಚಿಬಿಡುವವಂತೆ!