ನನ್ನ ಜವಾಬ್ದಾರಿ ಜಾಸ್ತಿ ಆದಂತಾಯ್ತು!!!

12 ಮಾರ್ಚ್ 09

ಹದಿನೈದನೇ ವಯಸ್ಸಿನಲೇ
ಬರೆಯಲು ಆರಂಭಿಸಿದ್ದೆ
ಕವಿತೆಗಳನು ನಾನು

ಆದರೆಲ್ಲೂ ಪ್ರಕಟಿಸದೇ ನನ್ನ
ಜೊತೆಗೆ ಜೋಪಾನವಾಗಿ
ಕಾಪಾಡಿದ್ದೆ ಅವುಗಳನು

ಐದು ವರುಷಗಳ ಹಿಂದೆ
ಶುರುವಾಯ್ತು ಪ್ರಕಾಶಕ
ಜೊತೆಗೆ ನನ್ನ ನಂಟು

ಅಲ್ಲಿ ಬರೆದ ಕವನ ಬರಹ
ಓದಿದವರು ಪ್ರತಿಕ್ರಿಯಿಸಿ
ಮೆಚ್ಚಿದ್ದೂ ಉಂಟು

ಕನ್ನಡಧ್ವನಿಯಲಿ ನನ್ನ
ಧ್ವನಿಯೂ ಸೇರಿಕೊಂಡು
ಜಗಕೆಲ್ಲಾ ಕೇಳಿಬಂತು

ಸಂಪದದ ಸಹವಾಸದಲಿ
ಕವಿ-ಓದುಗನ ಸಂಬಂಧ
ಜೀವಂತವಾದಂತಾಯ್ತು

ವೈಯಕ್ತಿಕ ತಾಣದಲಿ
ಕೂಡಿಟ್ಟಾಗ ಹೊರಜಗಕೆ
ನನ್ನ ಪರಿಚಯವಾಯ್ತು

ಕನ್ನಡ ಪ್ರಭ ಮತ್ತು ಕೆಂಡ
ಸಂಪಿಗೆಗಳಲಿ ನನ್ನ ಕವಿತೆಗಳ
ಮೆಚ್ಚಿ ಬರೆದದ್ದಷ್ಟೇ ಸಾಕಾಯ್ತು

ನನ್ನ ಬಂಧು ಮಿತ್ರರಿಂದೆಲ್ಲಾ
ಅಭಿನಂದನೆಗಳ ಕರೆಗಳು
ಬರಲು ಆರಂಭವಾಯ್ತು

ಇದರಿಂದ ನನ್ನ ಓದುಗರ
ಸಂಖ್ಯೆ ಜಾಸ್ತಿ ಆಗಿದೆ
ಅದು ನನಗೆ ಗೊತ್ತು

ಹಾಗಾಗಿ ಈಗ ನನ್ನ
ಜವಾಬ್ದಾರಿಯೂ ಸ್ವಲ್ಪ
ಜಾಸ್ತಿ ಆದಂತಾಯ್ತು!!


ಏನ ಹೇಳಲಿ ನಾನು?

12 ಮಾರ್ಚ್ 09

ಸಖೀ,

ಏನ ಹೇಳಲಿ ನಾನು,
ನಮ್ಮ ಮಿಲನವಾಗಿರದೇ
ಇದ್ದಿದ್ದರೆ ಏನಾಗುತ್ತಿತ್ತೆಂದು
ಕೇಳಿದರೆ ನೀನು

ನನಗೇನೂ
ಆಗುತ್ತಿರಲಿಲ್ಲ,

ನಾನೂ ಕೂಡ
ಏನೂ ಆಗಿರುತ್ತಿರಲೇ ಇಲ್ಲ,

ಹತ್ತಾರು ವರುಷಗಳಿಂದ
ಕಂಡಿರುವ ನನ್ನ ಕನಸುಗಳು
ನನಸಾಗುತ್ತಿರಲಿಲ್ಲ,

ಪ್ರೀತಿ ಎಂದರೇನೆಂದೇ
ನನ್ನಿಂದ ಅರಿತು
ಕೊಳ್ಳಲಾಗುತ್ತಿರಲಿಲ್ಲ,

ಪ್ರೀತಿಯಲ್ಲಿರುವ ಈ
ನೋವು – ನಲಿವಿನ ಅನುಭವ
ನನಗಾಗುತ್ತಿರಲಿಲ್ಲ,

ನನ್ನ ಮನದ ಆಶಯಗಳಿಗೆ
ಈಗಿರುವ ಅರ್ಥ ಬರುತ್ತಿರಲಿಲ್ಲ,

ನನ್ನೊಳಗೂ ಒಂದು ಹೃದಯ
ಇದೆಯೆಂಬ ಅರಿವು
ನನಗಾಗುತ್ತಿರಲಿಲ್ಲ,

ನನಗಾಗಿ ಮಿಡಿಯುವೊಂದು
ಹೃದಯಕ್ಕಾಗಿ ಇದ್ದ
ನನ್ನ ಹುಡುಕಾಟ
ಕೊನೆಗೊಳ್ಳುತ್ತಿರಲಿಲ್ಲ.

ಬಾಳ ಬಟ್ಟೆಯಲಿ ಈಗಿರುವ
ಗತಿಯೂ ಇರುತ್ತಿರಲಿಲ್ಲ,

ಅಲ್ಲದೆ, ಅಲ್ಲಿ ಯಾವ
ಪ್ರಗತಿಯೂ ಆಗುತ್ತಿರಲಿಲ್ಲ,

ನನ್ನದೇ ಕಲ್ಪನಾ ಲೋಕದಲ್ಲಿ
ಇರುತ್ತಿದ್ದ ನಾನು
ಈ ವಾಸ್ತವ ಪ್ರಪಂಚಕ್ಕೆ
ಇಳಿಯುತ್ತಿರಲೇ ಇಲ್ಲ,

ನನ್ನ ಈ ಜೀವನದಲ್ಲಿ
ಈ ನನ್ನ ಜೀವ
ಇದ್ದಿರುತ್ತಿರಲೇ ಇಲ್ಲ,

ನಿಜ ಹೇಳಲೇ ಸಖೀ,
ನಾನು ನಾನಾಗಿರುತ್ತಿರಲೇ ಇಲ್ಲ!!!
*-*-*-*-*-*-*-*-*-*-*


ಕೆಂಡಸಂಪಿಗೆಯಲ್ಲಿ ಆಸುಮನದ ಮಾತುಗಳು!

12 ಮಾರ್ಚ್ 09

ಕೆಂಡಸಂಪಿಗೆಯಲ್ಲಿ ಆಸುಮನದ ಮಾತುಗಳು.

ದಿನಾಂಕ ೧೧ ಮಾರ್ಚ್ ೨೦೦೯, ಬುಧವಾರದಂದು ಕೆಂಡಸಂಪಿಗೆ ಯಲ್ಲಿ ಆಸುಮನದ ಬಗ್ಗೆ ಕಂಡು ಬಂದ ಮಾತುಗಳು ಇಲ್ಲಿವೆ.

http://kendasampige.com/article.php?id=1774

kendasampige1


ರೈತರ ಮೇಲೆ ಪ್ರಮಾಣ ಮಾಡಿದವರು ಮೋಸ ಮಾಡಲಾರರೇ?

11 ಮಾರ್ಚ್ 09

ರಾಜಕೀಯದಲ್ಲಿ ಯಾರು
ಯಾರೊಂದಿಗೆ ಬೇಕಾದರೂ
ಮಾಡಿಕೊಳ್ಳುತ್ತಾರೆ ರಾಜಿ

ಸ್ವಾರ್ಥದ ಚಿಂತನೆಯಷ್ಟೇ
ತುಂಬಿಹುದು ದೇಶದ ಭವಿಷ್ಯದ
ಬಗ್ಗೆ ಇಲ್ಲ ಎಳ್ಳಷ್ಟೂ ಕಾಳಜಿ

ನಿನ್ನೆ ತನಕ ಮುಖ ಕಂಡರೆ ಹರಿ
ಹಾಯುತ್ತಿದ್ದವರು ಒಂದಾಗಿದ್ದಾರೆ
ನಗುನಗುತಾ ನೋಡಿದರೆ ಇಂದು

ವೈರಿಯ ವೈರಿ ಆದುದಕಷ್ಟೆ ಆತ
ಆಗಿದ್ದಾನೆ ಅಗತ್ಯ ಇಲ್ಲದಿದ್ದರೂ
ಇಂದು ತನ್ನ ಆತ್ಮೀಯ ಬಂಧು

ರಾಜ್ಯಪಾಲರ ಪಕ್ಷಾತೀತ ಹುದ್ದೆ
ಅಲಂಕರಿಸಿ ಬಂದವರೂ ಈಗ
ಇಳಿದಿದ್ದಾರೆ ಪಕ್ಷ ರಾಜಕೀಯಕ್ಕೆ

ಆಶ್ಚರ್ಯ ಪಡಬೇಕಾಗಿಲ್ಲ ನಾಳೆ
ಒಂದು ವೇಳೆ ರಾಷ್ಟ್ರಪತಿಗಳು
ಇಳಿದರೂ ಚುನವಣಾ ಕಣಕ್ಕೆ

ತಂದೆ ಮಕ್ಕಳ ರಾಜಕೀಯವನು
ವರ್ಷಾನುಗಟ್ಟಲೆ ಮಾಡಿದವರು
ಊರೆಲ್ಲಾ ಲೇವಡಿ

ತನ್ನ ಮಗನ ಸರದಿ ಬಂದಾಗ
ಸೀಟು ದೊರಕಿಸಿಕೊಂಡರು
ತನ್ನೆಲ್ಲ ನಾಯಕರ ಬೇಡಿ

ದೇವರಾಣೆ ಹಾಕಿದವರು
ದೇವರನೇ ಮರೆತವರಂತೆ
ಮಾತಾಡುತಿರಲು ಇಂದು

ಹೇಗೆ ನಂಬಲಿ ರೈತರ ಮೇಲೆ
ಪ್ರಮಾಣ ಮಾಡಿದವರು ನಮಗೆ
ಮೋಸ ಮಾಡದೇ ಇರಲಾರರೆಂದು


ಕನ್ನಡ ಪ್ರಭ ಬ್ಲಾಗಾಯಣದಲ್ಲಿ ಆಸುಮನ!!

11 ಮಾರ್ಚ್ 09

www.kannadaprabha.com ನ ೧೦ ಮಾರ್ಚ್ ೨೦೦೯, ಮಂಗಳವಾರದ ಮುಖಪುಟದಲ್ಲಿ ಆಸುಮನದ ಮಾತುಗಳು.

 

kprabha


ಹೆಣ್ಣೇ ಹೆಣ್ಣ ಮೆಟ್ಟಿ ನಿಂತಿರಲು!!!

09 ಮಾರ್ಚ್ 09
ಸಮಾನರೆಲ್ಲ ಮನುಜರಿಲ್ಲಿ
ಮಹಿಳೆಯರೇ ನಿಮ್ಮನ್ನು
ನೀವೇ ಹಳಿಯದಿರಿ
 
ಸಮಾನತೆಯ ಕೋರೀ ಕೋರೀ
ಸಮಾನರಲ್ಲ ಎಂದು ನೀವೇ
ಜಗಕೆ ಸಾರದಿರಿ
 
ಸಮಾನತೆಯ ಬೇಡಿಕೆಯಲ್ಲೇ
ಸಮಾನರಲ್ಲ ಎಂಬುದಕೆ
ಸಮ್ಮತಿ ಇಹುದಲ್ಲವೇ
 
ಎಲ್ಲ ಒಂದೇ ಎನುವ ಭಾವ
ಇರಲು ಈ ಬೇಡಿಕೆಗಳ ನೀವು
ಮರೆಯಬಹುದಲ್ಲವೇ
 
ಎಲ್ಲ ರಂಗಗಳಲೂ ನಿಮಗೆ
ಮುಕ್ತ ಅವಕಾಶ ಇರಲು
ಸಾಧಸಿಯೇ ತೋರಿಸಿರಿ
 
ಪ್ರಸಿದ್ಧರಾದ ಮಹಿಳೆಯರೆಲ್ಲ
ಯಾವ ಮೀಸಲಾತಿಗೆ ಮೊರೆ
ಹೊಕ್ಕಿದ್ದರೆಂದು ಹೇಳಿರಿ
 
ಮಹಿಳೆ ಈಗ ರಾಷ್ಟ್ರಾಧ್ಯಕ್ಷೆ
ಮಹಿಳೆಯ ಆದೇಶದಂತೆ
ನಡೆಯುತಿದೆ ಸರಕಾರ
 
ಸಾಧನೆಗೈವವರಿಗೆ ಸದಾ
ಇಹುದು ಅವಕಾಶಗಳು
ಏಕೆ ಈ ಹಾಹಾಕಾರ
 
ಹೆಣ್ಣು ಮಗುವು ಜನಿಸಿದಾಗ
ಹೆಚ್ಚು ಮರುಗುವವಳು
ತಾನೂ ಒಬ್ಬ ಹೆಣ್ಣು
 
ಆ ಕೆಟ್ಟ ಯೋಚನೆಯೇ
ಮನದಿಂದ ತೊಲಗಿದರೆ
ಸಾಯಬೇಕಿಲ್ಲ ಹೆಣ್ಣು
 
ಹೆಣ್ಣೇ ಹೆಣ್ಣ ಮೆಟ್ಟಿ ನಿಂತು
ನಡೆಸಿಹಳು ಜಗದಲೆಲ್ಲ 
ಸಾಕಷ್ಟು ದುರಾಚಾರ
 
ಹೆಣ್ಣು ಹೆಣ್ಣ ಜಯಿಸಿದರೆ
ಈ ಜಗದಿ ಇರಲಾರದು
ಇನ್ನು ಈ ಅನಾಚಾರ

ಮಹಾತ್ಮಾ ಮತ್ತು ಮದ್ಯದ ದೊರೆ!!!

08 ಮಾರ್ಚ್ 09

ಮಹಾತ್ಮಾ ಗಾಂಧೀ ತಮ್ಮ ಜೀವನವಿಡೀ
ಸಾರಿದರು ಮದ್ಯಪಾನ ಮಾಡಬೇಡಿರೆಂದು
ಮದ್ಯಪಾನಿಗಳಿಂದಾಗಿಯೇ ಮಹಾತ್ಮರ
ಮಾನ ಉಳಿಯಿತಲ್ಲವೇ ನೋಡಿ ಇಂದು

ಮದ್ಯಪಾನಿಗಳಿಲ್ಲದೇ ಇದ್ದೊಡೆ ವಿಜಯ
ಮಲ್ಯ ಮದ್ಯದ ದೊರೆ ಹೇಗಾಗುತ್ತಿದ್ದ
ಮದ್ಯದ ದೊರೆ ಅಲ್ಲವಾಗಿದ್ದಿದ್ದಲ್ಲಿ ಆತ
ಮಹಾತ್ಮರ ಮಾನ ಹೇಗುಳಿಸುತ್ತಿದ್ದ

ನೇತಾರರು ಮಹಾತ್ಮರ ಆದರ್ಶಗಳನ್ನು
ತಾಯ್ನಾಡಲ್ಲೇ ಹಾಕಿರಲು ಹರಾಜು
ಪರದೇಶದಲಿ ವ್ಯಾಪಾರಿ ಮಹಾತ್ಮರ
ವಸ್ತುಗಳನ್ನು ಹಾಕಿದರೇನು ಹರಾಜು

ಹರಾಜು ನಿಲ್ಲಿಸಲು ಸರಕಾರ ಪ್ರಯತ್ನ
ಮಾಡದೇ ಎಣಿಸುತ್ತಿರಲು ಮೀನ ಮೇಷ
ವಿಜಯ ಮಲ್ಯನ ಮಂದಿ ಗುಟ್ಟಾಗಿಯೇ
ಹರಾಜಿನಲ್ಲಿ ಮಾಡಿಯಾಗಿತ್ತು ಪ್ರವೇಶ

ಹರಾಜಿನ ಬಗ್ಗೆ ಹೀಗೆ ಸುಖಾ ಸುಮ್ಮನೆ
ಆಗದೇ ಇರುತ್ತಿದ್ದಲ್ಲಿ ಸುದ್ದಿ ಜಾಸ್ತಿ
ಹರಾಜಿನಲ್ಲಿ ನಮಗಿನ್ನೂ ಕಡಿಮೆ ಬೆಲೆಗೆ
ಸಿಗಬಹುದಿತ್ತೇನೋ ಮಹಾತ್ಮರ ಆಸ್ತಿ
**************************


ನಾವೆಲ್ಲಾ ಹಾಡೋಣ ಬನ್ನಿ ಕನ್ನಡಿಗರೇ ಇಂದು!!!

06 ಮಾರ್ಚ್ 09

ಕನ್ನಡದ ಉಳಿವಿಗಾಗಿ ಯಾರೂ ಹೋರಾಡಬೇಕಾಗಿಯೇ ಇಲ್ಲ
ನಮ್ಮ ನಡೆ ನುಡಿಗಳಲ್ಲಿ ಸದಾ ಕನ್ನಡ ಇದ್ದರೆ ಅದುವೇ ಸಾಕಲ್ಲ

ಹೋರಾಟ ಮಾಡಿದವರೆಲ್ಲಾ ಕನ್ನಡವನು ಬಳಸಿದರೆಂದೇನೂ ಇಲ್ಲ
ಕನ್ನಡವ ಬೆಳೆಸಿದವರೆಲ್ಲಾ ಹೋರಾಟಗಾರರಾಗಿದ್ದರೆಂದೇನೂ ಅಲ್ಲ

ಹೋರಾಟ ಹಾರಾಟ ಇವು ಉಳಿಯುತ್ತವೆ ಬರೀ ಬಾಯಿ ಮಾತಾಗಿ
ಹೋರಾಡುವರು ಜನರಿಲ್ಲಿ ಹೆಚ್ಚಾಗಿ ತಮ್ಮ ಹೆಸರಿನ ಪ್ರಸಿದ್ಧಿಗಾಗಿ

ಹೋರಾಟಕೆ ಇಳಿಯೋಣ ನಾವೆಲಾ ಕೈಯಲ್ಲಿ ಲೇಖನಿಯ ಹಿಡಿದು
ಬರಿಯ ಬಾಯಿ ಮಾತೇಕೆ ಸಾರೋಣ ನಾವೆಲ್ಲಾ ಕನ್ನಡದಿ ಬರೆದು

ಬಳಕೆಯಿಂದಲೆ ಬೆಳೆಯುವುದು, ಬೆಳೆದರೆ ತಾನೇ ಉಳಿಯುವುದು
ಜೊತೆ ಜೊತೆಗೆ ನಾವೆಲ್ಲಾ ಹಾಡೋಣ ಬನ್ನಿ ಕನ್ನಡಿಗರೇ ಇಂದು

ಕನ್ನಡವ ಬಳಸೋಣ, ಕನ್ನಡವ ಕಲಿಸೋಣ, ಕನ್ನಡವ ಬೆಳೆಸೋಣ
ಕನ್ನಡವ ಉಳಿಸೋಣ, ಬನ್ನಿ ಎಲ್ಲಾ ಒಂದಾಗಿ ಕನ್ನಡವ ಉಳಿಸೋಣ


ತಾವರೆಯ ಎಲೆಗಳು ಆಗದೇ ಇರುವಂತೆ ಒದ್ದೆ!!!

06 ಮಾರ್ಚ್ 09

ಬರೆಯ ಬೇಕೆಂದಾಗಲೆಲ್ಲಾ ನನ್ನಿಂದ ಬರೆಯಲಾಗಲಿಲ್ಲ
ನಾನು ಬರೆದುದೆಲ್ಲವೂ ಕವನವಾಗಿ ಹೊರಬರಲೇ ಇಲ್ಲ

ನನ್ನೊಳಗಿನ ಭಾವನೆಗಳು ಚಡಪಡಿಸೆ ಹೊರ ಹೊಮ್ಮಲು
ಅಕ್ಷರಗಳನ್ನು ನಿಧಾನದಿ ಪೂರೈಸಿ ನಾನಲ್ಲಿ ಸಹಕರಿಸಲು

ಪದಗಳು ಮೈದುಂಬಿ ಸಾಲಾಗಿ ಹೊರಬಂದು ನಿಂದವು
ಓದುಗರ ಭಾವನೆಗಳಿಗೆ ತಕ್ಕಂತೆ ಅವು ಅರ್ಥ ನೀಡಿದವು

ಮೆಚ್ಚಿಕೊಂಡವರಿಂದ ಸಿಕ್ಕಿದರೆ ಸದಭಿಪ್ರಾಯದ ಪ್ರತಿಕ್ರಿಯೆ
ಮೆಚ್ಚದವರದು ಅದಕ್ಕಿಂತ ಭಿನ್ನ ಇಲ್ಲವೇ ಮೌನ ಪ್ರತಿಕ್ರಿಯೆ

ಎಲ್ಲಾ ಪ್ರತಿಕ್ರಿಯೆಗಳಿಗೂ ಕೋರುವೆ ಮನದಿ ನಾ ಸ್ವಾಗತ
ಪ್ರತಿಕ್ರಿಯೆ ಇಲ್ಲದಿರೆ ನನ್ನ ಕವನಗಳಾಗುವವು ಬರೀ ಸ್ವಗತ

ಮೆಚ್ಚುಗೆಗಳಿಂದ ಹಿರಿ ಹಿರಿ ಹಿಗ್ಗದೇ ಟೀಕೆಗಳಿಂದ ಕುಗ್ಗದೇ
ಸಮಚಿತ್ತದಿಂದ ಲ್ಲವ ನಾ ನಗುತಾ ಸ್ವೀಕರಿಸಬೇಕಲ್ಲದೇ

ಸ್ಪಂದಿಸುತ್ತಿದ್ದರೆ ಪ್ರತಿ ಪ್ರತಿಕ್ರಿಯೆಗೂ ಉಬ್ಬುತ್ತಾ ಕುಗ್ಗುತ್ತಾ
ನನ್ನ ಪರಿಶ್ರಮವನು ನಾನು ಮುಂದುವರಿಸಲು ಆಗುತ್ತಾ

ತಾವರೆಯ ಎಲೆಗಳು ನೀರಿನಲ್ಲಿದ್ದೂ ಆಗದೇ ಇರುವಂತೆ ಒದ್ದೆ
ಇರಲಭ್ಯಸಿಸಿದೊಡೆ ನಾನು ನನ್ನ ಕಾರ್ಯದಲಿ ನಿಜಕ್ಕೂ ಗೆದ್ದೆ


ವಿರಾಗಿಯ ಸ್ವಗತ!

04 ಮಾರ್ಚ್ 09
ಕೂಡುತಿದೆ ಅಂತರ 
ನಿನ್ನೆ – ಇಂದಿನ ನಡುವೆ. 
 
ಕಳೆಯುತಿದೆ ಅಂತರ 
ಇಂದು – ನಾಳಿನ ನಡುವೆ. 
 
ವರುಷಗಳು ನಿಮಿಷಗಳಂತೆ 
ಉರುಳುತಿಹುದು ನನ್ನ ಬಾಳಿನಲಿ; 
 
ಕಳೆದ ದಿನಗಳೇ ಹೆಚ್ಚು 
ಕಳೆಯಲಿರುವುದಿನ್ನು ಕಡಿಮೆ 
ನನ್ನ ಬಾಳಿನಲಿ. 
 
ಮುದುಕನಾಗಿಲ್ಲ ನಾನು 
ಆದರೂ, ಮುಗಿದುಹೋಗಿದೆ 
ಎಲ್ಲವೂ ಎನ್ನುವ ಭಾವನೆ 
ನನ್ನ ಮನದಲ್ಲಿ. 
 
ಯಾವುದನ್ನೂ ಸಾಧಿಸಿಲ್ಲ ನಾನು, 
ಆದರೂ, ಇನ್ನೇನನ್ನೂ 
ಸಾಧಿಸಲಾರೆ ಎನ್ನುವ 
ಭಾವನೆ ನನ್ನ ಮನದಲ್ಲಿ. 
 
ಕೂಡುತಿದೆ ಅಂತರ 
ನಿನ್ನೆ – ಇಂದಿನ ನಡುವೆ. 
 
ಕಳೆಯುತಿದೆ ಅಂತರ 
ಇಂದು – ನಾಳಿನ ನಡುವೆ. 
 
(ನಿನ್ನೆ ನನ್ನ  ಹುಟ್ಟು, 
ನಾಳೆ ನನ್ನ ಸಾವು)! 
*************