ತೀರ್ಥರೂಪರ ಸ್ಮರಣೆಯಲ್ಲಿ!

appayya
ಡಾ. ಯು. ಚಂದ್ರಶೇಖರ್
ಪಯಣ: ಶುಕ್ರವಾರ, ೧೧ ಮಾರ್ಚ್ ೧೯೨೭ ರಿಂದ 
ಶುಕ್ರವಾರ, ೨೮ ಮಾರ್ಚ್ ೨೦೦೩ರ ವರೆಗೆ.
 
ನೀವು ನಮ್ಮನ್ನಗಲಿ ಇಂದಿಗೆ ಆರು ವರುಷಗಳು ಕಳೆದರೂ ಎಲ್ಲವೂ ನಿನ್ನೆ ಮೊನ್ನೆ ನಡೆದಂತೆ ಅನ್ನಿಸುತ್ತಿದೆ.
ನಿಮ್ಮ ಅಂದಿನ ನುಡಿಗಳೇ ಇಂದಿಗೂ ಹೆಜ್ಜೆ ಹೆಜ್ಜೆಗೂ ನನಗೆ ಮಾರ್ಗದರ್ಶನ ನೀಡುತ್ತಿವೆ.
ನೀವು ನಮ್ಮನ್ನಗಲಿದ ಮೂರು ದಿನದ ನಂತರ ನಾನು ಬರೆದ ಕವನ ಇಲ್ಲಿದೆ. ಓದ ಬಲ್ಲಿರಾ ಅಲ್ಲಿಂದಲೇ?
ಓದಿ ನನ್ನಿಚ್ಛೆಯನ್ನು ನಡೆಸಿಕೊಡಬಲ್ಲಿರಾ?
ನಿಮ್ಮ ಮೊಮ್ಮಗ ಕೃಷ್ಣರಾಜ ಬಿಡಿಸಲೆತ್ನಿಸಿದ ನಿಮ್ಮ ಚಿತ್ರವೂ ಇಲ್ಲಿದೆ.
appu 
 
ಬನ್ನಿ ಅಪ್ಪಯ್ಯ, ನನ್ನಲೊಂದಾಗಿ!
 
ಅಪ್ಪಯ್ಯಾ,
ಹಿಂದೆ ಎಲ್ಲಿಗೆ ಹೊರಡುವಾಗಲೂ ನೀವು,
ನಮ್ಮನ್ನೆಲ್ಲಾ ಕರೆದು, ನೀವಿಲ್ಲದಾಗ ನಾವು,
ಇಲ್ಲಿ ಮನೆಯಲ್ಲಿ ಹೇಗಿರಬೇಕೆಂದು ತಿಳಿಸಿ
ಬಸ್ಸು ಹತ್ತುತ್ತಿದ್ದವರು ನಮ್ಮೆಲ್ಲರ ಹರಸಿ;
 
ಇಂದು ಕಿವಿಗೊಟ್ಟು ನಿಲ್ಲದೇ ನಮ್ಮ ಕೂಗಿಗೆ,
ಇನ್ನೆಂದಿಗೂ ಮರಳಿ ಬಾರದ ದೂರದೂರಿಗೆ;
ಹೊರಟೇ ಹೋದಿರಲ್ಲಾ ಅಪ್ಪಯ್ಯಾ ನೀವು,
ಎಂತಿರಬೇಕು ನಿಮನ್ನಗಲಿ ಇಲ್ಲಿ ನಾವು?
 
ಕಾಣ ಸಿಕ್ಕಿರಬಹುದು ನಿಮಗಲ್ಲಿ ನಿಮ್ಮಮ್ಮ-ಅಪ್ಪ,
ನಮ್ಮ ಮುದ್ರಾಡಿಯಜ್ಜ, ಮತ್ತೆ ‘ಗುಡ್‌ಗುಡ್’ ದೊಡ್ಡಪ್ಪ;
ಸಿಕ್ಕಿರಬಹುದು ನಿಮಗೆ ನಿಮ್ಮ ಮೆಚ್ಚಿನ ಕವಿ ಕುವೆಂಪು,
ಕೇಳಿ ಬಂದಿರಬಹುದು ಬೇಂದ್ರೆಯವರ ಹಾಡಿನ ಇಂಪು;
 
ಬರಿನೆಲದಿ ಮುಸುಕೆಳೆದು ಮಲಗಿದ್ದ ನಿಮ್ಮತ್ತ, 
ನೋಡಲೆನಗೆ ಧೈರ್ಯ ಸಾಲಲಿಲ್ಲ, ಇದು ಸತ್ಯ;
ಮತ್ತೆ ಅಂದುಕೊಂಡೆ, ನಿಮ್ಮ ಮಗನಲ್ಲವೇ ನಾನು,
ಹೇಡಿಯಾದರೆ, ಅದು, ನಿಮಗೇ ಕಡಿಮೆಯಲ್ಲವೇನು?
 
ನಾನಳುವುದ ಕಂಡು ನೀವು ಒಳಗೊಳಗೆ ನಕ್ಕಂತೆ,
ಅನ್ನಿಸಿತ್ತು ನನಗೆ ನೀವೆನ್ನ ಗದರಿಸುತಿರುವಂತೆ;
‘ಸತ್ತಮೇಲೆ ನಮ್ಮ ತಲೆ ಎತ್ತಾದರೇನಂತೆ’,
ನಂಬಿದ್ದೆ ಇದುವರೆಗೆ ನಾನೂ ನಿಮ್ಮಂತೆ;
 
ನನ್ನ ಮಾತಿಗಿನ್ನು ಇಲ್ಲಿ ಕಿವಿಗೊಡುವವರಾರು?
ಸಂಪ್ರದಾಯಗಳ ಮೀರಲೆನ್ನ ಬಿಡುವವರಾರು?
ಹೌದು ಅಪ್ಪಯ್ಯಾ, ಅರಿವಾಗುತಿದೆ ನನಗಿಂದು,
ನೀವಿಲ್ಲದೆ ನಾನೊಂದು ಯಃಕಶ್ಚಿತ್ ಬಿಂದು;
 
ಆಡನ್ನು ಹಿಂಬಾಲಿಸಿ ನಡೆವ ಕುರಿಯಂತೆ,
ನಾನೂ ಆಡಿದೆ ಜನರಿಂದು ಆಡಿಸಿದಂತೆ;
ಜೀವ ಪಕ್ಷಿಯೇ ಇಲ್ಲದ ನಿರ್ಜೀವ ಗೂಡಿಗೆ,
ಶೃಂಗಾರ ಮಾಡಿ ನಡೆಸಿದೆವು ಮೆರವಣಿಗೆ;
 
ನನ್ನ ಹೊಡೆದರೂ ತಾನೇ ನೊಂದು ನನಗಿಂತ ಹೆಚ್ಚು,
ಮರುಗುತ್ತಿದ್ದ ಜೀವಕ್ಕೆ ನಾನೇ ಇಟ್ಟೆ ಇಂದು ಕಿಚ್ಚು;
ನಾಲ್ಕು ದಶಕಗಳ ನಮ್ಮ ಸಂಬಂಧದ ಕೊಂಡಿ, 
ಕಳಚಿಕೊಂಡು ಗಳಿಗೆಯಲಿ ಭಸ್ಮವಾಯಿತು ನೋಡಿ;
 
ನೀವಿದ್ದಾಗ ಇಣುಕಿ ನೋಡಿ ಕೇಳದೇ ಸುಖ ಕಷ್ಟ,
ಇಂದು ಆಡುತ್ತಿದ್ದರು ತಮಗಾದಂತೆ ಭಾರೀ ನಷ್ಟ;
ನಾನು ಕಂಡಂತೆ ಅವರ, ಗೊತ್ತು, ಕಂಡಿದ್ದೀರಿ ನೀವೂ,
ಇವರ ಡಂಬಾಚಾರಕ್ಕೆ ಬರಿದೆ ನಗಬೇಕಲ್ಲವೇ ನಾವು?
 
ಆತ್ಮಸಾಕ್ಷಿಯೇ ಇಲ್ಲದೇ ನಾಟಕವಾಡುವವರು,
ಇಲ್ಲಿ ನಿಂತು ನಿಮ್ಮಾತ್ಮಕ್ಕೆ ಶಾಂತಿ ಕೋರುವವರು;
ಅವರ ಬಡಿದು ನಗ್ನರನ್ನಾಗಿಸಬೇಕೆಂಬ ಆಸೆ ಇತ್ತಲ್ಲಿ,
ಆದರೆ ಬೆನ್ನು ತಟ್ಟಿ ‘ಭೇಷ್’ ಎನ್ನಲು ಇರಲಿಲ್ಲ ನೀವಲ್ಲಿ;
 
ಏನ ಮಾಡಿ ಯಾರ ಮೆಚ್ಚಿಸಬೇಕಾಗಿದೆ ನಾನಿನ್ನು?
ನೀವಲ್ಲದೆ ಯಾರಾದರೂ ನನ್ನ ಏಕೆ ಮೆಚ್ಚಬೇಕಿನ್ನು?
ಚಿಕ್ಕಂದಿನಿಂದಲೂ ನಿಜದಿ ಇತ್ತೆನಗೆ ನಿಮ್ಮ ಮೆಚ್ಚಿಸುವಾಸೆ,
ಆದರೆ ತೃಪ್ತರಾಗದೇ, ನಿಮಗೆ, ನನ್ನನ್ನಿನ್ನೂ ಬೆಳೆಸುವಾಸೆ;
 
ನಿಮ್ಮ ಅತೃಪ್ತಿಗೂ ನನ್ನ ಛಲಕ್ಕೂ ಸತತ ಪೈಪೋಟಿ,
ಹಾಗಾಗಿ ಅಪ್ಪಯ್ಯಾ ಇಂದು ನಿಜದಿ ನನಗಾರಿಹರು ಸಾಟಿ?
ನಡೆ ನುಡಿಗಳಲಿಂದು ಅಪ್ಪನಂತಹ ಮಗನೆನಿಸಿಕೊಂಡೆ,
ನಿಮ್ಮ ಮಗನಾದುದಕೆ ನಾನಿಂದು ಧನ್ಯನೆನಿಸಿಕೊಂಡೆ;
 
ಇನ್ನು ನನ್ನ ತಪ್ಪುಗಳ ಹುಡುಕಿ ಹೇಳುವವರಾರು?
ಹತ್ತಿರ ಕರೆದು ನನ್ನ ಗದರಿಸಿ ಬೆದರಿಸುವವರಾರು?
ನನ್ನ ಮೊಂಡುತನಕ್ಕೆ ಸವಾಲೆಸೆಯುವವರಾರು?
ಹಾಗಲ್ಲ ಮಗಾ ಹೀಗೆಂದು ನನ್ನ ತಿದ್ದುವವರಾರು?
 
ನಿಮ್ಮ ಕನಸುಗಳ ನನಸಾಗಿಸಬೇಕೆಂಬ ಬಲವಾದ ಇಚ್ಚೆ
ನನ್ನಲ್ಲಿ ಇರುವಾಗ ಬರುವ ಕಷ್ಟಗಳು ನನಗೆ ಹೆಚ್ಚೆ?
ಯಾರು ಏನೆಂದರೇನು, ಇರಲೆನಗೆ ನಿಮ್ಮ ಶ್ರೀರಕ್ಷೆ,
ನಿಮ್ಮ ಹಾದಿಯಲೇ ನಡೆಯಲಿಂದು ತೊಡುತ್ತೇನೆ ದೀಕ್ಷೆ;
 
ಬನ್ನಿ ಅಪ್ಪಯ್ಯ ನನ್ನಲೊಂದಾಗಿ, ನಾನೇ ನೀವಾಗಿ,
ಜೀವನ ಪಥದಲ್ಲಿ ನನ್ನ ಮನೋರಥಕ್ಕೆ ಸಾರಥಿ ಆಗಿ;
ನಿಮ್ಮ ಅಪೂರ್ಣ ಕಾರ್ಯಗಳ ಮುಗಿಸೋಣ ಬನ್ನಿ,
ನಿಮ್ಮೆಲ್ಲ ಶಕ್ತಿಯನೂ ನನಗಿಂದು ಧಾರೆಯೆರೆದು ತನ್ನಿ!
*-*-*-*-*-*-*-*-*-*-*-*-*–*-*-*-*
೩೧ ಮಾರ್ಚ್ ೨೦೦೩, ಸೋಮವಾರ, ೭.೦೦ ಘಂಟೆ, ಸಾಯಂಕಾಲ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: