ಈ ಹುಡುಗಾಟವ ನೀ ಬಿಟ್ಟು ಬಿಡು!

14 ಜುಲೈ 09
ಸಖೀ,
ಹೀಗೇಕೆ ಆಗಾಗ ಚುಚ್ಚುತ್ತಿರುವೆ
ಮನಸ್ಸನ್ನೇಕೆ ಘಾಸಿಗೊಳಿಸುತಿರುವೆ

ನನ್ನೊಳಗೂ ಒಂದು ಹೃದಯವಿದೆ
ನನ್ನ ಸಹನೆಗೂ ಒಂದು ಮಿತಿ ಇದೆ

ನನ್ನೊಳಗೆಲ್ಲಾ ನೀನೇ ತುಂಬಿಹೆ
ಅದು ನಿನಗೂ ಗೊತ್ತು
ಆದರೂ
ನನಗೆ ನಿನ್ನ ನೆನಪೆಷ್ಟಿದೆ ಎನ್ನುವ
ಪರೀಕ್ಷೆ ಅದೇಕೆ ಮತ್ತೂ ಮತ್ತೂ

ನೀನು ನಿರೀಕ್ಷಿಸಿದಂತೆ ನಾನು
ಬದುಕುತ್ತಿಲ್ಲದೇ ಇರಬಹುದು
ಆದರೂ
ಈ ರೀತಿ ಸದಾ ನನ್ನ ಪರೀಕ್ಷಿಸುತ್ತಿದ್ದರೆ
ನಾನೆಂತು ಬದುಕಿರಬಹುದು

ಬೇಕಿದ್ದರೆ ನನ್ನ ನೀ ಒಮ್ಮೆಗೇ ಮುಗಿಸಿಬಿಡು
ಆದರೆ ಆಗಾಗ
ಚುಚ್ಚಿ ಚುಚ್ಚಿ ನೋವನೀಯುವ
ಈ ಹುಡುಗಾಟವ ನೀ ಬಿಟ್ಟು ಬಿಡು!
*******************


ಮಣ್ಣಿನ ಪ್ರೇಮ ಚುನಾವಣೆಯಲಿ ಗೆಲುವ ತನಕ!!!

07 ಜುಲೈ 09
ಮಮತಾಳ ರೈಲು ಕರ್ನಾಟಕದಿಂದ ಕೇರಳದ ಕಡೆಗೆ
ಓಡುವುದೇಕೆ ಅನ್ನುವುದಕೇ ಅಲ್ಲ ನಮಗೀಗ ಚಿಂತೆ
ಬೆಂಗಳೂರು ಮಂಗಳೂರು ರೈಲು ಉತ್ತರಕ್ಕೆ ತಿರುಗಿ
ಕರ್ನಾಟಕದ ಕರಾವಳಿಯಲೇ ಮುಂದೆ ಸಾಗಬೇಕಿತ್ತಂತೆ

ಕರಾವಳಿಯ ಮತದಾರ ಕಾಂಗ್ರೇಸಿಗೆ ಮತ ನೀಡಿಲ್ಲ
ಎನ್ನುವುದರಿಂದ ಕಾಂಗ್ರೇಸಿಗರಿಗೆ ಮುನಿಸೇನೋ
ಹೀಗೆ ತಾರತಮ್ಯ ತೋರಿದರೆ ಮತದಾರ ಅವರಿಂದ
ಇನ್ನೂ ದೂರವಾಗುತ್ತಾನೆಂದವರು ಅರಿಯರೇನೋ

ಬೆಂಗಳೂರಿನಿಂದ ಹೊರಡುವ ರೈಲು ಇನೂ ಕಡಿಮೆ
ಸಮಯದಲಿ ಸಾಗಿ ಮಂಗಳೂರು ಸೇರಬೇಕಿತ್ತು
ಮೈಸೂರಿನ ದಾರಿ ಮರೆತು ಬೆಂಗಳೂರಿನಿಂದ
ಸೀದಾ ಸಕಲೇಶಪುರದ ಮೂಲಕ ಸಾಗಬೇಕಿತ್ತು

ಮೊಯ್ಲಿ, ಕೃಷ್ಣ, ಮುನಿಯಪ್ಪ, ಖರ್ಗೆ, ಇವರನ್ನೆಲ್ಲಾ
ನಮ್ಮವರೆಂದು ಕರೆದು ಸನ್ಮಾನ ಮಾಡಿಯಾಯ್ತು
ಸನ್ಮಾನ ಮುಗಿಸಿ ಹೋದವರು ಅಲ್ಲಿ ಮಮತಾಳ
ಆಯವ್ಯಯ ಪತ್ರಕ್ಕೆ ಖುಷಿಯಿಂದ ಮೇಜು ಕುಟ್ಟಿದ್ದಾಯ್ತು

ರಾಜಕೀಯವೇ ಹೀಗೆ ಇಲ್ಲಿ ನಮ್ಮವರೆಂಬವರೇ ಇಲ್ಲ
ಇದ್ದರೂ ಅವರು ನಮ್ಮವರಾಗಿಯೇ ಉಳಿಯುವುದಿಲ್ಲ
ಕನ್ನಡಿಗರ ನಾಡಿನಿಂದ ಕನ್ನಡಿಗರೇ ಚುನಾಯಿತರಾಗಿ
ಹೋದರೂ ಇಂದು ನಮಗೇನೂ ಲಾಭ ಆಗುತ್ತಲೇ ಇಲ್ಲ

ನಾಯಕರುಗಳ ಹೋರಾಟ ಭಾಷಾಭಿಮಾನ ಮಣ್ಣಿನ
ಮೇಲಿನ ಪ್ರೇಮ ಇವೆಲ್ಲಾ ಚುನಾವಣೆಯಲಿ ಗೆಲುವ ತನಕ
ಗೆದ್ದು ಹೊದ ಮೇಲೆ ಮರೆಯುತ್ತಾರೆ ಇತ್ತ ತಲೆ ಹಾಕದೇ
ಮುಖ ಕಾಣಿಸದೇ ಮುಂದಿನ ಮತದಾನದ ಬರುವನಕ


ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

01 ಜುಲೈ 09

 

ಕನ್ನಡಿಗರ ಮನೆಯಲ್ಲೇ ಇಂದು ಕನ್ನಡ ಸತ್ತು ನಾರುತ್ತಿದೆ

ಈ ನಾಡಿನನ್ಯ ಆಡುಭಾಷಿಗರ ಮೇಲೆ ದಬ್ಬಾಳಿಕೆ ಸಾಗುತಿದೆ 

 

ಅಮ್ಮನನ್ನು “ಮಮ್ಮಿ” ಎಂಬ ಕಂದಮ್ಮಗಳ ಬಾಯಲ್ಲಿ

ದೊಡ್ಡಪ್ಪ ಚಿಕ್ಕಪ್ಪನವರನ್ನೆಲ್ಲಾ “ಅಂಕಲ್” ಎಂಬವರಲ್ಲಿ

 

“ರೋಡ”ಲ್ಲಿ ನಡೆದು “ಸರ್ಕಲ್ಲ”ನ್ನು ಸುತ್ತಿ “ಸ್ಕೂಲಿ”ಗೆ ಹೋಗಿ

ಕಲಿತ ನಾಲ್ಕಕ್ಷರಗಳು ಕಂಡಿವೆ ಕನ್ನಡಕ್ಕಿಂತಲೂ ಹೆಚ್ಚಾಗಿ

 

ಆಡು ಭಾಷೆಯ ಸೋಗಿನಲಿ ಆಂಗ್ಲ ಹಾಸುಹೊಕ್ಕಾಗಿಹುದು

ಅಲ್ಲಿಂದ ಬರಹಕ್ಕೆ ಬಂದು ಕನ್ನಡವನೇ ಈಗ ಓಡಿಸಿಹುದು 

 

ಅಶ್ಟು ಇಶ್ಟು ಎಶ್ಟು ಎಂಬ ಭಾಶೆಯನು ಬಳಸಿ ಹಳೆಯದಿರಲಿ

ಎಂಬುವವರು ಚಡ್ಡಿಗಳ ಬಿಟ್ಟಿನ್ನು ಲಂಗೋಟಿಯನೇ ತೊಡಲಿ 

 

ದೊಡ್ಡ ತಾರಾ ಉಪಾಹಾರ ವಸತಿ ಗೃಹಗಳಲಿ ಕನ್ನಡವಿಲ್ಲ

ಪಾಪದ ಕಾಕಾ ತನ್ನ ತಿಂಡಿಯ ಸ್ವಭಾಷೆಯಲಿ ಕರೆಬಹುದಲ್ಲ 

 

ತಿಂಡಿಯ ನಾಮಕರಣ ಮಾಲೀಕನಲ್ಲದೆ ನಾ ಮಾಡಬಹುದೇ

ಕುಮಾರನನು ಗುಮಾರನೆಂದರೆ ಬರಿದೆ ಉರಿದಾಡಬಹುದೆ 

 

ಅನ್ಯರು ಅಲ್ಲಿ ಬಳಸಿದ ಭಾಷೆ ಯಾವುದೆನ್ನುವುದಷ್ಟೇ ಮುಖ್ಯ

ಕನ್ನಡ ನಾಡಲ್ಲಿ ಕನ್ನಡದ ಫಲಕಗಳು ಇರುವುದು ಪ್ರಾಮುಖ್ಯ 

 

ಅನ್ಯ ಭಾಷಿಗರ ಪರ ಮಾತಾಡಲೆನ್ನ ನಿರಭಿಮಾನಿ ಎಂಬರು

ಕನ್ನಡದ ಬಳಕೆ ಮಾಡದಲೇ “ಐ ಲವ್ ಕನ್ನಡ” ಎಂದೆಂಬರು 

 

ಹುಟ್ಟು ಕನ್ನಡಿಗ ಅಚ್ಚ ಕನ್ನಡಿಗರೆಂದು ತಮ್ಮ ಬೆನ್ನ ತಟ್ಟಿಕೊಂಬರು

ಕನ್ನಡ ನಾಡಲ್ಲಿ ಹುಟ್ಟಿ ಕನ್ನಡದಲೇ ಬರೆಯುವವರ ಜರೆಯುವರು 

 

ಕನ್ನಡದ ಹೆಸರಲ್ಲಿ ಹಗಲೆಲ್ಲಾ ನಾಡಲ್ಲಿ ವಸೂಲಿ ನಡೆಯುತಿಹುದು

ಕನ್ನಡ ಉಳಿಯದಿದ್ದರೂ ಅವರ ತಿಜೋರಿಗಳು ತುಂಬುತಿಹುದು 

 

ಸಾಹಿತಿಗಳ ಚಿಕ್ಕ ಚಿತ್ರಗಳ ಜೊತೆಗೆ ನಾಯಕರ ದೊಡ್ಡ ಭಾವಚಿತ್ರ

ಕನ್ನಡಕ್ಕಿಂತಲೂ ಈ ನಾಯಕರ ಪ್ರಚಾರವೇ ನಡೆದಿದೆ ಸರ್ವತ್ರ!!!


ಹೆಮ್ಮಕ್ಕಳ ಹರಸೋಣ!!!

01 ಜುಲೈ 09

ಇಂದು ಹೊಸ ದಿನ
ಇಂದು ಹೊಸ ತಿಂಗಳು
ಇಂದು ಹೊಸ ವಿಚಾರ ಬರಲಿ
ಇಂದು ಮನಕೆ ಹೊಸ ತಿನಿಸು ಸಿಗಲಿ

ಹಳಸಲು ವಿಚಾರ ಹಳಸಲು ತಿಂಡಿಯ ಮೆಲುಕು
ಹಾಕಿ ಕಳೆದಾಯ್ತು ಆ ಆರನೆಯ ತಿಂಗಳು
ಈ ವರುಷವೂ ಹಳತಾಗುವ ಮೊದಲು
ಈ ವರುಷವೂ ಹಳಸಲಾಗುವ ಮೊದಲು

ಹೆಮ್ಮಕ್ಕಳ ದಿನದಂದು ನಾವೆಲ್ಲಾ
ಹೆಮ್ಮಕ್ಕಳ ಹರಸೋಣ
ಹೆಮ್ಮಕ್ಕಳನು ಪಡೆದ ಹೆಮ್ಮೆಯ
ಮಾತಾಪಿತರನು ನಾವೆಲ್ಲರೂ ಸೇರಿ
ಅಭಿನಂದಿಸೋಣ!!!

“ಇದು ಯಾವುದೋ ಪಾಶ್ಚಾತ್ಯ ಆಚರಣೆಯ ನಕಲು ಮಾಡುವುದಕ್ಕಷ್ಟೇ ಅಲ್ಲ
ಒಳ್ಳೆಯದು ಯಾವ ದಿಕ್ಕಿನಿಂದ ಬಂದರೂ ನಾವದನು ಅನುಸರಿಸಬಹುದಲ್ಲಾ?”