ಬಂಧುಗಳು!

16 ಏಪ್ರಿಲ್ 15

ಸಖೀ,
ಅಪರಾತ್ರಿಯಲ್ಲಿ,
ಏಕಾಂತದಲ್ಲಿ
ನಮ್ಮ ದೇಹಕ್ಕಲ್ಲ,
ಕೇವಲ ಮನಸ್ಸಿಗೆ
ನೆನಪಾಗುವವರು,
ಜೊತೆಗಿದ್ದಿರಬೇಕು
ಎಂದನಿಸುವವರು,
ಅವರು ನಿಜವಾಗಿ
ನಮ್ಮ ಜನ್ಮಾಂತರದ
ಬಂಧು ಬಾಂಧವರು!


ಕಣ್ಣುಗಳು!

16 ಏಪ್ರಿಲ್ 15

ಸಖೀ,
ಚಂದಿರನಂದದ
ನಿನ್ನೀ ಮೊಗದಲಿ
ಕಮಲವ ನಾಚಿಸೋ ಕಣ್ಣುಗಳು;

ನಿನ್ನಯ ಅಂದವ
ಕಂಡಾನಂದದಿಂದ
ಸಂತೃಪ್ತ ಈಗ ನನ್ನೀ ಕಣ್ಣುಗಳು!


ಸಾರ್ಥಕ್ಯ ಭಾವ!

16 ಏಪ್ರಿಲ್ 15

ನಾವು ಯಾರದೋ ಸಕಾರಾತ್ಮಕ ಯೋಚನಾಲಹರಿಯ ಅಂಶವಾಗಿದ್ದೇವೆ ಅನ್ನುವುದೇ, ನಮ್ಮಲ್ಲಿ ಜೀವನ ಸಾರ್ಥಕ್ಯದ ಭಾವವನ್ನು ತುಂಬುತ್ತದೆ.

ಅವರು ನಮಗೇ ಯಾವುದೇ ರೀತಿಯಲ್ಲಿ ಸಂಬಂಧಿಸಿರದ ವ್ಯಕ್ತಿಗಳಾಗಿದ್ದರೆ, ಆ ಭಾವ ನಮ್ಮನ್ನು ಖಂಡಿತಕ್ಕೂ ಭಾವುಕರನ್ನಾಗಿಸುತ್ತದೆ.


ಚತುರೋಪಾಯ!

16 ಏಪ್ರಿಲ್ 15

ಸಖೀ,
ಮನದಿ ಸದ್ವಿಚಾರಗಳಿರಲಿ,
ನಿಸ್ವಾರ್ಥ ಪ್ರಯತ್ನಗಳಿರಲಿ,
ನಿರ್ಮೋಹಿ ಪ್ರೀತಿಯಿರಲಿ,
ನಮ್ಮ ಪ್ರಯತ್ನಗಳ ಮೇಲೆ
ಸದಾಕಾಲ ನಂಬಿಕೆಯಿರಲಿ!


ಪತಿಯನ್ನೇ ತೊರೆಯಲಂತೆ!

14 ಏಪ್ರಿಲ್ 15

ಜೀತದಾಳಿನ ಕಾಲ್ಗಳಿಗೆ ಬಿಗಿಯಲಾಗುವ ಸಂಕೋಲೆಯಲ್ಲ ತಾಳಿ,
ಸಂಕೋಲೆ ಮುರಿದು ಓಡಿಹೋಗಿ ಎಲ್ಲೋ
ತೋರಿಸಬಹುದು ಬಾಳಿ;

ತಾಳಿಯ ಕಿತ್ತೆಸೆದ ಹೆಂಡತಿಯೂ ಸೇರಬೇಕು
ಪತಿಯಾಸರೆಯ ಮನೆಯನ್ನು,
ಪತಿಯನ್ನೇ ತೊರೆಯುವ ಧೈರ್ಯ ತೋರಲಿ
ಎಸೆಯುವುದೇಕೆ ತಾಳಿಯನ್ನು?


ತಾಳಿ!

14 ಏಪ್ರಿಲ್ 15

“ಕಿತ್ತೆಸೆಯಿರಿ,
ಸ್ತ್ರೀಶೋಷಣೆಯ
ದ್ಯೋತಕ ಈ ತಾಳಿ”

“ನನ್ನ ಗಂಡನನ್ನೇ
ಕೊಂದುಬರುತ್ತೇನೆ
ಸ್ವಲ್ಪ ತಾಳಿ”


ಎಟುಕದಂತಾಗೋಣ!

13 ಏಪ್ರಿಲ್ 15

ನಮ್ಮ ನಡುವೆಯೇ ಇರುವ ಮಾನವರು ದಾನವರಾದಂತೆಲ್ಲಾ, ನಾವು ಇನ್ನೂ ಇನ್ನೂ ಸಾತ್ವಿಕರಾಗುತ್ತಾ ಹೋಗಬೇಕು.

ಆಗ ಅವರ ಮತ್ತು ನಮ್ಮ ನಡುವಣ ಅಂತರ ಹೆಚ್ಚುತ್ತಾ ಹೋಗುತ್ತದೆ.

ಕೊನೆಗೆ, ನಾವು ಅವರಿಗೆ ಎಟುಕದಷ್ಟು ದೂರ ಬಂದಿರುತ್ತೇವೆ.

🙂 🙂 🙂


ಮಾನವ – ದಾನವ!

13 ಏಪ್ರಿಲ್ 15

ದಾನವರು ಬೇರೆಯೇ ಒಂದು ಕುಲದಿಂದ ಜನಿಸಿದವರಲ್ಲ. ಜನಿಸುವವರೂ ಅಲ್ಲ.

ಮಾನವರೊಂದಿಗೇ ಜನಿಸಿ, ದಾನವಗುಣಗಳನ್ನು ರೂಢಿಸಿಕೊಂಡು, ದಾನವರಾದವರೇ ಎಲ್ಲಾ.

ದೇವಕಿಯ ಸಹೋದರ ದಾನವನಾದರೆ, ಮಕ್ಕಳು ಮಾನವೋತ್ತಮರಾದರು.

ಕೈಕಸೆಯ ಮಕ್ಕಳಲ್ಲಿ ಓರ್ವ ವಿಭೀಷಣ ಮಾತ್ರ ಮಾನವನಾಗಿಯೇ ಉಳಿದರೆ, ಉಳಿದ ಮೂವರು ದಾನವರಾದರು.

ನಮ್ಮ ನಡುವೆಯೇ ಇದ್ದು, ನಮ್ಮೊಂದಿಗೆ ದಿನನಿತ್ಯ ವ್ಯವಹರಿಸುತ್ತಾ ಇರುವವರಲ್ಲೂ ಕೆಲವರು ಕೆಲವೊಮ್ಮೆ ದಾನವರಾಗುತ್ತಾರೆ.

ಇನ್ನು ಕೆಲವರು ನಿಧಾನವಾಗಿ, ಶಾಶ್ವತವಾಗಿ ದಾನವರಾಗಿ ಬದಲಾಗಿಬಿಡುತ್ತಾರೆ.


ಸಾರಸ್ವತಲೋಕದ ವಿಪರ್ಯಾಸ!

12 ಏಪ್ರಿಲ್ 15

ಸ್ವಾತಂತ್ರ್ಯಪೂರ್ವದಲ್ಲಿ ಸಾರಸ್ವತಲೋಕದ ದಿಗ್ಗಜರು ಭಾರತೀಯರನ್ನೆಲ್ಲಾ ಒಗ್ಗೂಡಿಸಿ ವಿದೇಶೀ ಆಡಳಿತದ ವಿರುದ್ಧ ಹೋರಾಡುವಂತೆ ಹುರಿದುಂಬಿಸುತ್ತಿದ್ದರು.

ಈಗ, ಸಾರಸ್ವತಲೋಕದ “ದಿಗ್ಗಜರೆಂದು ಅನಿಸಿಕೊಂಡವರು”, ತಮ್ಮ ಮುಖಗಳನ್ನು “ಬುದ್ಧಿಜೀವಿಗಳು”, “ಸಮಾಜಮುಖಿ ಚಿಂತಕರು”,  “ಪ್ರಗತಿಪರರು”, “ಜಾತ್ಯತೀತರು”, ಅನ್ನುವ ವಿವಿಧ ಮುಖವಾಡಗಳ ಹಿಂದೆ ಬಚ್ಚಿರಿಸಿಕೊಂಡು, ಸಮಾಜದ ನಾಗರೀಕರನ್ನು ತಮ್ಮ ಸ್ವಾರ್ಥ ಯೋಜನೆಗಳಿಗೆ ಬಳಸಿಕೊಂಡು, ಸಮಾಜದ ಧ್ರುವೀಕರಣಕ್ಕೆ ಕಾರಣರಾಗುತ್ತಾ, ಆಡಳಿತಾರೂಢರಾಗಿರುವ ಭ್ರಷ್ಟಾಚಾರಿಗಳ ಆಶಯಗಳಿಗೆ ನೀರೆರೆದು ಪೋಷಿಸುತ್ತಿದ್ದಾರೆ.


ಕಾಲಾತೀತವಾಗಿರಲಿ!

12 ಏಪ್ರಿಲ್ 15

ಸಖೀ,
ಅವಧಿ ತೀರುತ್ತದೆ
ಕೆಲವು ಕನಸುಗಳದ್ದೂ;

ಕಾಲಾತೀತವಾಗಿರಲಿ
ನಮ್ಮ ಕನಸುಗಳೆಂದೂ