ನಿರ್ಲಿಪ್ತ ನಾನೀಗ!

24 ಮಾರ್ಚ್ 15

ಸಖೀ,
ನಾನು ನಿಜವಾಗಿಯೂ ಯಾರನ್ನೂ
ದ್ವೇಷಿಸುವುದಿಲ್ಲ,

ಆದರೆ ಯಾರ ಮೇಲೂ ನನಗೆ ಈಗ
ಪ್ರೀತಿ ಉಳಿದಿಲ್ಲ;

ಎಲ್ಲವೂ ಲೆಕ್ಕಾಚಾರದಲ್ಲೇ ಮುಗಿದು
ಹೋಗುತ್ತಿವೆ ಈಗ,

ದಕ್ಕಿದಷ್ಟೇ ಹಿಂದೆ ನೀಡಿ ಸುಮ್ಮನಿರುವೆ
ನಿರ್ಲಿಪ್ತ ನಾನೀಗ!


ಮನ್ಮಥ!

21 ಮಾರ್ಚ್ 15

ಸಖೀ,
ಮನ್ಮಥ ಬಂದ,
ಇನ್ನು ಈ ವರ್ಷ
ತಾನಾಗಿದ್ದಿರಲಿ
ಮನ್ಮಥ ಬಂಧ;

ಲೀಲೆ ಕ್ರೀಡೆಗಳ
ಕಾಟವಿರದಿರಲಿ
ಮನಸ್ಸುಗಳಿರಲಿ
ಸದಾ ಸ್ವಚ್ಛಂದ!


ಏಳಿಗೆಯಾಗಲಿ!

21 ಮಾರ್ಚ್ 15

ಸಖೀ,
ಮತ್ತೆ ಯುಗಾದಿಹಬ್ಬ ಬಂದಿಹುದಂತೆ,
ಕಾಲದ ವೇಗಕ್ಕೆ ನನಗೆ ಅಚ್ಚರಿಯಂತೆ;

ಹೊಸ ಸಂವತ್ಸರವಿದು ಮನ್ಮಥವಂತೆ,
ಮನಗಳಲ್ಲಿ ಮಂಥನ ನಡೆಯಲಂತೆ;

ಬರಲಿ ಮಾತುಗಳೆಲ್ಲ ನವನೀತದಂತೆ,
ಬೆಳಗಲೆಲ್ಲರ ಬಾಳು ಕಹಿಯಾಗದಂತೆ;

ನಮ್ಮೆಲ್ಲರ ಬಾಳಲ್ಲಿ ಸಂತಸವಿರಲಂತೆ,
ಸರ್ವ ವಿಧಗಳಲ್ಲೂ ಏಳಿಗೆ ಆಗಲಂತೆ!


ಹೌದೇನೇ ಸಖೀ!?

20 ಮಾರ್ಚ್ 15

ಸಖೀ,
ಇಂದಿಗೂ ನೀನು ಬಿಳೀ ಹಾಳೆಯ ಮೇಲೆ ನನ್ನ
ಹೆಸರನ್ನು ಬರೆದು ಬರೆದು ಅಳಿಸುತ್ತಿರಬಹುದೇ?

ಲೇಖನಿಯನ್ನು ನಿನ್ನ ತುಟಿಗಳ ನಡುವೆ ಮೆತ್ತಗೆ ಅದುಮಿಟ್ಟುಕೊಂಡು ಯೋಚಿಸುತ್ತಿರಬಹುದೇ?

ಕಣ್ಣಂಚಿನಿಂದ ಜಾರುವ ಆ ಹನಿಗಳನ್ನು ಜನರಿಂದ
ಮುಚ್ಚಿಟ್ಟುಕೊಳ್ಳುವ ಯತ್ನ ಮಾಡುತ್ತಿರಬಹುದೇ?

ನನ್ನ ನೆನಪಲ್ಲಿ ನಿನ್ನ ಮುಖದ ಮೇಲೆ ಮಂದಹಾಸ
ಕಂಡೂ ಕಾಣದಂತೆ ಬಂದು ಹೋಗುತಿರಬಹುದೇ?


ಅರಿಯಬಾರದಿತ್ತು!

18 ಮಾರ್ಚ್ 15

ಸಖೀ,
ನಿನ್ನ ಪದಗಳ ಭಾವ ರಂಜನೀಯ ಅನ್ಯರಿಗೆ
ಘಾಸಿಗೊಳಿಸುತಿಹುದು ಚುಚ್ಚಿ ನನ್ನ ಎದೆಗೆ;

ವಾಸ್ತವದ ಅರಿವು ನನಗೆ ಆಗಲೇಬಾರದಿತ್ತು
ನೀನಾರೆಂಬುದನು ನಾನರಿಯಲೇಬಾರದಿತ್ತು!


ನೀನಿಟ್ಟ ಚುಕ್ಕಿಗಳು!

18 ಮಾರ್ಚ್ 15

ಸಖೀ,
ನೀನಿಲ್ಲಿಟ್ಟ ಈ ಚುಕ್ಕಿಗಳಿಗೂ
ಅರ್ಥ ಬರುತ್ತದೆ ಒಂದು ದಿನ,

ಈ ಚುಕ್ಕಿಗಳನ್ನು ಜೋಡಿಸಲು
ನಿರ್ಧರಿಸಿದಾಗಲೊಂದು ಮನ,

ಭಾವ ತುಂಬಿದಾಗ ಮಾತ್ರವಷ್ಟೇ
ಅಕ್ಷರಗಳರ್ಥವ ನೀಡುವ ತೆರದಿ,

ಒಲವಿನ ಗೆರೆಯಿಂದ ರಂಗೋಲಿ
ಅಂದ ನೋಡುಗರೆಲ್ಲರ ಮನದಿ!


ಸ್ವರ್ಗವೀ ಧರೆ!

17 ಮಾರ್ಚ್ 15

ಸಖೀ,
ನಾನೆಣಿಸಿದಂತೆ ನಿಜದಿ ನೀನಿಲ್ಲ
ನೀನೆಣಿಸಿದಂತೆ ನಾನೂ ಇಲ್ವಲ್ಲ;

ನಿನ್ನೊಲುಮೆಯರಿವು ನನಗಾಗಿ
ನನ್ನೊಲುಮೆಯರಿವು ನಿನಗಾಗಿ;

ನಾವರಿತರಿತು ಬಾಳುವಂತಾದರೆ
ಸ್ವರ್ಗವೆನಿಸದೇ ನಮಗೆ ಈ ಧರೆ?


ಹುಚ್ಚಷ್ಟೇ!

16 ಮಾರ್ಚ್ 15

ಸಖೀ,
ಗೀತೆ ಗುನುಗುವ ಹುಚ್ಚಷ್ಟೇ ನನ್ನಲ್ಲಿತ್ತು
ಸಂಗೀತದ ಗಂಧಗಾಳಿ ನನಗೆ ಎಲ್ಲಿತ್ತು?

ನಿನ್ನ ಪ್ರೀತಿಯ ಹುಚ್ಚಷ್ಟೇ ನನ್ನಲ್ಲಿ ಇತ್ತು
ಪ್ರೀತಿಸುವ ಪರಿಯರಿವು ನನ್ನಲ್ಲೆಲ್ಲಿತ್ತು?

ಹುಚ್ಚು ಹುಚ್ಚಾಗಿ ಇದ್ದರೂ ಪರವಾಗಿಲ್ಲ
ಎಲ್ಲದರಲೂ ಸಾಧನೆಯ ಹುಚ್ಚೆನಗಿಲ್ಲ!


ಜೊತೆಗಿರುವೆ!

13 ಮಾರ್ಚ್ 15

ಸಖೀ,
ಮತ್ತದೇ ಮೌನ,
ಮತ್ತದೇ ದಿವ್ಯ ನಿರ್ಲಕ್ಷ್ಯ;

ಎಲ್ಲಿಗೆ ಯಾನ?
ಎಲ್ಲಿಹುದು ನಿನ್ನ ಲಕ್ಷ್ಯ?

ಒಂಟಿ ಪಯಣ,
ದಾರಿ ಸಾಗುವುದು ಕಷ್ಟ,

ನಾನಲ್ಲ ಜಾಣ,
ಜೊತೆಗಿರುವುದಷ್ಟೇ ಇಷ್ಟ!


ನೀನೇ ನಾನು!

12 ಮಾರ್ಚ್ 15

“ಸಖೀ,
ನಿನ್ನನ್ನು ನನ್ನಿಂದ ಸಾಧ್ಯವಾವಷ್ಟೂ
ನಿಂದಿಸಿದ್ದೇನೆ ಇನ್ನೇನೂ
ಉಳಿದಿಲ್ಲ ಹಿಂದಿನಂತೆ”;

“ನಿನ್ನ ಬಾಳದೀಪಕ್ಕೆ ಒಲವಿನೆಣ್ಣೆ
ಸುರಿಯುತ್ತಲೇ ಇರುತ್ತೇನೆ
ಆ ದೀಪ ನಂದದಂತೆ”

“ನಿಂದಿಸಿದರೂ ನಂದದಿರು ಅನ್ನುವ
ಔದಾರ್ಯವೇ ತೆಗಳಿ ಬಿಡು
ನೀನೂ ನನ್ನನ್ನೊಮ್ಮೆ”

“ನಿನ್ನನ್ನು ಮೂದಲಿಸಿದರೆ ನನ್ನನ್ನು
ನಾನೇ ಮೂದಲಿಸಿದಂತೆ
ನೋಡೀ ಕಣ್ಣುಗಳಲ್ಲೊಮ್ಮೆ!”