ಹೊಂದಾಣಿಕೆ ಎಂದರೆ…!!!

22 ಸೆಪ್ಟೆಂ 09

 

ಸಖೀ,

ಹೊಂದಾಣಿಕೆ ಎಂದರೆ ಬರೀ ಮಾತುಗಳಿಗೆ ಸಮ್ಮತಿ ನೀಡುವುದಲ್ಲ

ಮಾತುಗಳ ಉದ್ದೇಶಗಳನ್ನು ಅರ್ಥೈಸಿಕೊಂಡು ಸಮ್ಮತಿಸುವುದು

 

ಹೊಂದಾಣಿಕೆ ಎಂದರೆ ಪರಸ್ಪರರನ್ನು ಪ್ರಶ್ನಿಸದೇ ಇದ್ದು ಬಿಡುವುದಲ್ಲ

ಪ್ರಶ್ನೆಗಳಿಗೆ ದೊರೆವ ಉತ್ತರಗಳನ್ನು ಅರ್ಥೈಸಿಕೊಂಡು ಒಪ್ಪುವುದು

 

ಹೊಂದಾಣಿಕೆ ಎಂದರೆ ಕೋಪವನ್ನು ಬಚ್ಚಿಟ್ಟುಕೊಂಡು ಇರುವುದಲ್ಲ

ಕೋಪ ಬಾರದ ರೀತಿಯಲ್ಲಿ ಪರಿಹಾರವನ್ನು ಕಂಡು ಕೊಳ್ಳುವುದು

 

ಹೊಂದಾಣಿಕೆ ಎಂದರೆ ತಪ್ಪುಗಳನ್ನು ವಿಮರ್ಶೆ ಮಾಡದಿರುವುದಲ್ಲ

ತಪ್ಪುಗಳೇನಿದ್ದರೂ  ಮನಸ್ಸಿಗೆ ಮುದವಾಗುವಂತೆ ಒಪ್ಪಿಸುವುದು

 

ಹೊಂದಾಣಿಕೆ ಎಂದರೆ ಯಾವಾಗಲೂ  ಮೌನವಾಗಿದ್ದು ಬಿಡುವುದಲ್ಲ

ಮಾತುಗಳನ್ನು ಎಲ್ಲೆ ಮೀರಿ ಹೋಗದಂತೆ ಕಾಪಾಡಿಕೊಳ್ಳುವುದು

 

ಹೊಂದಾಣಿಕೆ ಎಂದರೆ ಯಾವಾಗಲೂ ನಗು ನಗುತ್ತಲೇ ಇರುವುದಲ್ಲ

ನೋವು ನಲಿವುಗಳೆರಡರಲ್ಲೂ ಸದಾ ಸಹಭಾಗಿಗಳಾಗಿ ಇರುವುದು

 

ಹೊಂದಾಣಿಕೆ ಎಂದರೆ ಜನರೆದುರು ಹೇಗೆ ವರ್ತಿಸುತ್ತೇವೆಂಬುದಲ್ಲ

ಏಕಾಂತದಲ್ಲಿ ಪರಸ್ಪರರ ಜೊತೆಗೆ ಹೇಗೆ ವರ್ತಿಸುತ್ತೇವೆ ಎಂಬುದು


ಜೀವನಕೆ ಅರ್ಥ ಕೊಡಲು ವಿಫಲನಾದೊಡೆ…?!

11 ಸೆಪ್ಟೆಂ 09

 

 

ಸಖೀ,

ನಿನ್ನ ಸಮಸ್ಯೆಗಳ ನನ್ನಲ್ಲಿ ಅರುಹು

ನಾನದಕೆ ಪರಿಹಾರ ಸೂಚಿಸಬಲ್ಲೆ

ನೀನೇ ಸಮಸ್ಯೆಯಾದೆಯೆಂದಾದರೆ

ನೀ ಹೇಳು ನಾ ಹೇಗೆ ಬಾಳಬಲ್ಲೆ…?

 

ನೀನು ನನ್ನ ಪ್ರೀತಿಸದಿದ್ದರೂ ಚಿಂತಿಲ್ಲ

ನಾ ನಿನ್ನ ಮನಸಾರೆ ಪ್ರೀತಿಸಬಲ್ಲೆ

ನೀನು ನನ್ನನ್ನೇ ಶಂಕಿಸುವೆಯಾದರೆ

ಅಸಹಾಯಕ ನಾನೇನು ಮಾಡಬಲ್ಲೆ…?

 

ನೀನು ನುಡಿದ ಮಾತುಗಳನು ಅರಿತು

ಅದರಂತೆ ನಾನು ನಡೆಯಲೂ ಬಲ್ಲೆ

ನೀನೆಣಿಸಿದಂತೆ ನಾ ನಡೆದಿಲ್ಲವೆಂದರೆ

ಅದಕೆ ನಾನು ಏನ ನುಡಿಯಬಲ್ಲೆ…?

 

ಹೊಂದಾಣಿಕೆಯೇ ಜೀವನ ಇದು ನಿಜ

ನಾನು ಹೊಂದಾಣಿಕೆಗಳಿಗೆ ಒಗ್ಗ ಬಲ್ಲೆ

ಹೊಂದಾಣಿಕೆಗಾಗಿ ನನ್ನನ್ನಷ್ಟೇ ಬಗ್ಗು

ಎಂದರೆ ನಾನು ಇನ್ನೆಷ್ಟು ಬಗ್ಗ ಬಲ್ಲೆ…?

 

ಸಂಬಂಧಗಳರ್ಥವೆನಗೆ ಚೆನ್ನಾಗಿಹುದು

ಅರ್ಥೈಸಿಕೊಂಡು ನಾನು ಬಾಳಬಲ್ಲೆ

ನನ್ನ ಜೀವನಕೇ ಒಂದು ಅರ್ಥ ಕೊಡಲು

ವಿಫಲನಾದೊಡೆ  ಹೇಗೆ ಬದುಕಿರಬಲ್ಲೆ…?