ಹೆತ್ತವರ ಗೋಳು!

01 ಸೆಪ್ಟೆಂ 12

 

ಸಖೀ,
ನಾನು ನೆಟ್ಟು, ಅಕ್ಕರೆಯಿಂದ

ಬೆಳೆಸಿದ ಗಿಡದಲ್ಲರಳಿದ ಎಲ್ಲಾ
ಹೂವುಗಳು ನನ್ನ ಹೂದೋಟದ 
ಒಳಗೆ ಭದ್ರವಾದ ಬೇಲಿಯೊಳಗೇ
ಇರಲಿ ಎಂಬ ಆಸೆ ನನ್ನೀ ಮನಕೆ;

ಗಿಡವೋ ಬೇಲಿಯಿಂದಾಚೆ ಬಾಗಿ
ಹೂವುಗಳನ್ನು ತೋರುತಿದೆ ಜಗಕೆ;

ದಾರಿಹೋಕರು ಬಳಿಬಂದು, ನಿಂದು
ಹೂಗಳ ಅಂದವ ಮೆಚ್ಚಿ, ಸೋತು,
ಸುಗಂಧವನ್ನು ಆಘ್ರಾಣಿಸಿ, ಮುಟ್ಟಲು
ಯತ್ನಿಸೆ, ಗಿಡಕೂ ನನಗೂ, ಅಂಜಿಕೆ!

 


ಬೂದಿಯಾಗುವವರು!!!

27 ಮೇ 09

ಸಖೀ,
ಕಂಡಿರಬಹುದು
ನೂರಾರು ಬಗೆಯ
ನಗುವ ಹೂಗಳನು ನೀನು;
ಆದರೆ,
ಆ ನಗೆಯ ಹಿಂದಡಗಿರುವ
ನೋವ ನೀ ಅರಿತಿರುವೆಯೇನು?

ಅವುಗಳೊಳಗೂ ಇವೆ ಬಯಕೆಗಳು,
ಅಸಹಾಯಕತೆಯಿಂದಾಗಿ
ಸುಡುತ್ತಿರುವ ಬೇಗೆಗಳು;

ದೇಗುಲದಿ ಹರಿಯ ಪಾದ
ಸೇರಿ ಮುಕ್ತರೆನಿಸಿಕೊಂಬ
ಬಯಕೆಗಳಿರುವಂತೆಯೇ,
ಮುತ್ತೈದೆಯರ ಮುಡಿಯೇರಿ
ಹೆಮ್ಮೆ ಪಡಬೇಕೆಂಬ
ಬಯಕೆಗಳೂ ಇವೆ.

ಆದರೆ,
ದೇಗುಲವ ಸೇರಿದವುಗಳೆಷ್ಟೋ?
ಶವಗಳ ಜೊತೆ ಸೇರಿ
ಚಿತೆಯೇರಿದವುಗಳೆಷ್ಟೋ?
ರಾಜಕೀಯ ಪುಡಾರಿಗಳ
ಕೊರಳ ಬಳಸಿ,
ಉಸಿರುಗಟ್ಟಿಸಿಕೊಂಡು
ಸತ್ತವುಗಳೆಷ್ಟೋ?
ಮದುವೆ – ಸಮ್ಮಾನ
ಸಮಾರಂಭಗಳಲಿ,
ಜನರ ಕಾಲಡಿಯಲಿ ಬಿದ್ದು
ನರಳಾಡಿದವುಗಳೆಷ್ಟೋ?
ಇನ್ನು, ಇದ್ದಲ್ಲೇ ಇದ್ದು,
ಬಿಸಿಲ ಬೇಗೆಯಲಿ ಉರಿದು
ಬೂದಿಯಾದವುಗಳೆಷ್ಟೋ?

ಅಂತೆಯೇ ನಾವೂ ಕೂಡ,
ನಮ್ಮೆಲ್ಲಾ ಬಯಕೆಗಳ
ಬಚ್ಚಿಟ್ಟುಕೊಂಡು
ನಮ್ಮ ಅಸಹಾಯಕತೆಯಿಂದಾಗಿ
ಒಳಗೊಳಗೆ ನೊಂದು,
ಬಡತನದ ಬೇಗೆಯಲಿ ಬೆಂದು,
ಬೂದಿಯಾಗುವವರೇ
ಮುಂದೊಂದು ದಿನ.

ಆದರೂ, ನೋವ ಮರೆತು
ನಗುತಿರುವ ಆ ಹೂಗಳಂತೆ,
ನಗುತಿರಬಾರದೇ
ನಾವೂ, ದಿನ – ಪ್ರತಿದಿನ?
*-*-*-*-*-*-*-*