ನಕ್ಕುಬಿಡು ಇಂದೇ!

11 ಜೂನ್ 10

 

ಸಖೀ

ನೀನು ಮುಖ

ಸಿಂಡರಿಸಿಕೊಂಡಿದ್ದಾಗ

ನನ್ನ ಪಾಲಿಗೆ

ದಿನವೂ ಅಮವಾಸ್ಯೆ

 

ಇಂದು ನಿನ್ನ

ಮುಗುಳ್ನಗೆ ಕಂಡ ನನಗೆ

ಪಾಡ್ಯದ-ಬಿದಿಗೆಯ

ಚಂದ್ರನ ದರುಶನವಾಯ್ತು

 

ನನಗೀಗ ಆ ನಾಳಿನ

ನೀನು ಪೂರ್ತಿ ನಕ್ಕಾಗ ಸಿಗುವ

ಪೂರ್ಣಚಂದ್ರ ದರುಶನದ

ಹುಣ್ಣಿಮೆಯ ನಿರೀಕ್ಷೆ

 

ಏಕೆ ಕಾಯಿಸುವೆ

ಸುಮ್ಮನೆ ಸತಾಯಿಸುವೆ

 

ನಕ್ಕು ಬಿಡಬಾರದೇಕೆ

ಪೂರ್ಣಚಂದ್ರನ ದರುಶನ

ನನಗೆ ಮಾಡಿಸಬಾರದೇಕೆ

 

ನಿನಗೆಲ್ಲಿಯ ಕಟ್ಟುಕಟ್ಟಳೆ

ಆ ಚಂದ್ರನಿಗಿರುವಂತೆ

 

ನಕ್ಕುಬಿಡು ಇಂದೇ

ನಮ್ಮ ಮನದಂಗಳದಿ

ಬೆಳದಿಂಗಳ ಚೆಲ್ಲಿಬಿಡು ಇಂದೇ

 

ಏಕೆ ಕಾಯಿಸುವೆ

ಸುಮ್ಮನೆ ಸತಾಯಿಸುವೆ

************


ಕಾಣೆಯಾದಂತೆ ಚಂದಿರ!

09 ಸೆಪ್ಟೆಂ 09
 
 
ರಾತ್ರಿಯ ನೀರವತೆಯಲ್ಲಿ
ನಿನ್ನ ನಿಟ್ಟುಸಿರ ಸದ್ದು
ನಿನಗೆ ಅರಿವಾಗದಂತೇ
ನಾ ಕೇಳಿಸಿಕೊಂಡಿದ್ದೆ ಕದ್ದು
 
ನಿದ್ದೆ ಬರುವುದಿಲ್ಲ ನಿನಗೆ
ನೆಮ್ಮದಿ ಇಲ್ಲಿಲ್ಲ ನನಗೂ
ಪರಸ್ಪರರಿಂದ ಮುಚ್ಚಿಟ್ಟು
ಮಾಡಬೇಕಾಗಿದೆ ಬೆಳಗು
 
ಮಗಳಿಲ್ಲದ ಮನೆಯಿಂದು
ಮೂರ್ತಿರಹಿತ ಮಂದಿರ
ಹುಣ್ಣಿಮೆಯ ರಾತ್ರಿಯಲಿ
ಕಾಣೆಯಾದಂತೆ ಚಂದಿರ
 
ವಸತಿ ನಿಲಯದಲಿ ಮಗಳ
ನಿದ್ದೆ ಕೆಡದಿದ್ದರೆ ಸಾಕು
ತನ್ನ ಗುರಿ ತಲುಪಲು ಆಕೆ
ಶ್ರಮ ಪಡುತಿರಲೇ ಬೇಕು
 
ಇಲ್ಲಿ ನಮ್ಮ ಮನದೊಳಗೆ
ಮಗಳ ನಾವಿರಿಸಿಕೊಳ್ಳಬೇಕು
ಅಲ್ಲಿ ಮಗಳ ಮನದೊಳಗೆ
ನಾವು ಮನೆ ಮಾಡಿರಬೇಕು