ಯಾರೋ ಯಾರಿಗೆ ಗೊತ್ತು!

01 ಸೆಪ್ಟೆಂ 12

ಸಖೀ,
ಉಫ್ ಎಂದು ಕೈಚೆಲ್ಲಿ
ಕಣ್ಮುಚ್ಚಿ ಕೂತಾಗ
ನನ್ನೀ ಹಸ್ತಕ್ಕೇ ಮೃದು
ಸ್ಪರ್ಶವಾದಂತಾಯ್ತು

ತನ್ನ ಎರಡೂ ಹಸ್ತಗಳೊಳಗೆ
ನನ್ನ ಹಸ್ತವನ್ನು ತುಂಬಿಕೊಂಡು
ಶಕ್ತಿ ತುಂಬಿದಂತಾಯ್ತು

ಹಣೆಯ ಮೇಲೊಂದು
ಮುತ್ತನ್ನಿಟ್ಟು ನನ್ನ ತಲೆಯ
ಮೇಲೆ ಕೈಯಾಡಿಸಿ
ಹರಸಿದಂತಾಯ್ತು

ನನ್ನ ಕಿವಿಯಲ್ಲಿ ಮೆಲ್ಲನೆ
“ಮುಗಿದಿಲ್ಲ ಪಯಣ,
ಎದ್ದೇಳು ನಡೆ”
ಎಂದು ಉಸುರಿದಂತಾಯ್ತು

ಕಣ್ತೆರೆದು ನೋಡಿದರೆ
ಅಲ್ಲಾರೂ ಕಾಣಿಸದೇ,
ಮನಸಿನೊಳಗೇ
ಯೋಚಿಸುವಂತಾಯ್ತು

ಅಗಲಿಹ ನನ್ನ
ಜನ್ಮದಾತರೋ,
ಈ ನನ್ನ ಮನದೊಳಗೆ
ಮನೆಮಾಡಿ
ಕೂತವರೋ,
ಅವರು ಯಾರೆಂದು
ಯಾರಿಗೆ ಗೊತ್ತು?


ಅಬ್ಬಾ… ಅವಳ ಮಾತು!

13 ಮೇ 12

“ಅಂದು ಏಕಾಂತದಲ್ಲಿ,
ನನ್ನ ಹಸ್ತದ ಮೇಲೆ 
ನಿನ್ನ ಹಸ್ತವನ್ನು ಇಟ್ಟು,
ನೀನು ನಿನ್ನ ಮುಗ್ಧ 
ಮನಸ್ಸಿನ ಪರಿಚಯವನ್ನು
ನನಗೆ ಮಾಡಿಸಿದಾಗ,
ನಾನು ಕಿಂಚಿತ್ತೂ 
ವಿರೋಧ ವ್ಯಕ್ತಪಡಿಸದೇ, 

“ನನ್ನ ಸ್ಪರ್ಶ
ನಿನ್ನ ಪಾಲಿಗೆ 
ಓರ್ವ ಮಾತೆಯ
ಸ್ಪರ್ಶದಂತಿರಲಿ” 

ಎಂದು ಒಳಗೊಳಗೇ 
ಹಾರೈಸಿದ್ದು,
ನಿನ್ನ ಮೇಲೆ ನನಗೆ
ಪ್ರೀತಿ ಇರಲಿಲ್ಲವೆಂದಲ್ಲ,

ಆದರೆ, ನಮ್ಮ ಪ್ರೀತಿ 
ಕೆಡದೇ ಈಗಿರುವ ಹಾಗೆಯೇ
ಸದಾ ಇರಲಿ ಎಂದು ಅಷ್ಟೇ!”
********************