ಮಗೂ, ಅಂದು ನಾ ದಾರಿ ಬಿಡುವೆ!

29 ಜುಲೈ 10
 
 “ನಿನ್ನ ಮೋಹದಿ ನನ್ನ ಬಂಧಿಸಿ

ಈ ಕತ್ತಲಲಿ ಕೂರಿಸದಿರು

ಅಪ್ಪಾ ಬೆಳಕಿಗೆ ಮೈಯೊಡ್ಡುವೆ ದಾರಿಬಿಡು”

 

“ಸುಳ್ಳಲ್ಲ ಮಗು ನಿನ್ನ ಮಾತು

ಅಪ್ಪಂದಿರ ಆಂತರಿಕ ಆತಂಕ

ಇಂದಿನ ಮಗುವಿಗೆ ಹೇಗೆ ಅರಿವಾಗಬೇಕು

 

ಮಗೂ ಸ್ವಾತಂತ್ರ್ಯ ಬೇಕು

ಸ್ವತಂತ್ರರಿಗೂ ಬೇಲಿ ಬೇಕು

ಸ್ವಾತಂತ್ರ್ಯದ ಪರಿಧಿಯಲಿ ನಿನ್ನಪ್ಪನಿರಬೇಕು

 

ಎಲ್ಲವನೂ ಹರಿದೊಗೆದು

ಒದ್ದು ನಡೆದರೆ ಮುಂದೆ

ಸಮಾಜದ ಮುಂದೆ ಬತ್ತಲಾಗಿ ನಿಲಬೇಕು

 

ನಿನ್ನ ಅರಿವಿನ ಮಟ್ಟ

ನೀನರಿತದ್ದೇ ಅಲ್ಲ ಈ ಅಪ್ಪನೂ

ಅರಿಯಬೇಕು ಅರಿತಂದು ನಿನಗೀತ ದಾರಿ ಬಿಡಬೇಕು”

************************


ಬಂಧನ!!!

18 ಏಪ್ರಿಲ್ 09
ಸಖೀ,
ಸ್ವಚ್ಛಂದ ಬಾನಿನಲ್ಲಿ
ಕಾಡೆಂಬ ತನ್ನ ನಾಡಿನಲ್ಲಿ
ಸ್ವತಂತ್ರವಾಗಿ
ಹಾರಾಡುತ್ತಿರುವ
ಗಿಳಿಯನ್ನು ತಂದು
ಪಂಜರದಲ್ಲಿ ಕೂಡಿಟ್ಟು
ನಮ್ಮ ಭಾಷೆಯನ್ನು
ಅದಕ್ಕೂ ಕಲಿಸಿದರೆ
ಸವಿಯಾದ ತಿನಿಸುಗಳ
ತಿನಿಸಿದರೆ
ಬಂಧನದ
ಅಸಹಾಯಕತೆಯಿಂದ
ತಿನಿಸುಗಳ ಆಸೆಯಿಂದ
ನಾವಾಡಿದಂತೆ
ಅದು ಆಡಬಹುದು
ನಮ್ಮ ಮನಕೆ
ತನ್ನ ಆಟಗಳಿಂದ
ಮುದ ನೀಡಬಹುದು
ಆದರೆ
ಒಂದಲ್ಲ ಒಂದು ದಿನ
ಸಿಗುವ ಅವಕಾಶವನು
ವ್ಯರ್ಥಗೊಳಿಸದೇ ಪುರ್ರನೇ
ಹಾರಿಬಿಡಬಹುದು
ಸ್ವಚ್ಛಂದ ಬಾನಿನತ್ತ
ಕಾಡಿನಲ್ಲಿರುವ
ತನ್ನ ನಾಡಿನತ್ತ
ಪಂಜರದಿಂದ ಹೊರಗೆ
ಬಂಧಿಸಿದರೆ ನಾವದನು
ಅನುಬಂಧದಿಂದ
ಆಡಿದರೆ ನಾಲ್ಕು ಮಾತು
ನಮ್ಮ ಹೃದಯದಾಳದಿಂದ
ಅಳೆದು, ಅರ್ಥೈಸಿಕೊಂಡರೆ
ಅದರ ನೋವನು
ನಾವು ನಮ್ಮ ಮನದಿಂದ
ಮುದ ನೀಡಿದರೆ ಅದಕೂ
ನಮ್ಮ ಪ್ರತಿಸ್ಪಂದನದಿಂದ
ಇರಬಹುದೇನೋ
ಸಖೀ
ಅನವರತ ಅದೂ
ನಮ್ಮೊಂದಿಗೆ ಆನಂದದಿಂದ!
***************