ಓದುಗರ ಸ್ನೇಹ!

01 ಸೆಪ್ಟೆಂ 12

ಸಖೀ,
ನಮ್ಮ ಬರಹಗಳನ್ನೆಲ್ಲಾ

ಓದಿ, ನಮ್ಮನ್ನು ಗುರುತಿಸಿ
ಹತ್ತಿರ ಬರುವವರಿಗೆ,
ನಮ್ಮೆಲ್ಲಾ ಬರಹಗಳಿಗೆ
ಅರ್ಥವನ್ನು ನೀಡುತ್ತಾ,
ಆ ಬರಹಗಳಿಗೂ ಮೀರಿ,
ನಿಸ್ವಾರ್ಥರಾಗಿ ನಾವು
ವ್ಯವಹರಿಸುವ ಪರಿಯೂ 
ಇಷ್ಟವಾದರಷ್ಟೇ, ನಮ್ಮ
ಸ್ನೇಹಕ್ಕೂ ಒಂದು ಅರ್ಥ!


ಸ್ನೇಹ ಮುರಿಯಬೇಡ!

28 ಜೂನ್ 12

ಸಖೀ,
ಅವರಿವರ 
ಮಾತುಗಳಿಗೆ
ಕಿವಿಗೊಟ್ಟು 
ಸ್ನೇಹವನೇ
ಮುರಿಯುವ
ಮಾತನ್ನು ನೀ
ಬಿಟ್ಟುಬಿಡು;

ನನ್ನೊಂದಿಗೆ
ಈ ಸ್ನೇಹ
ಬೆಳೆಸುವ
ಮೊದಲು ನೀ
ಅವರಾರನ್ನೂ
ಕೇಳಿರಲಿಲ್ಲ 
ನೋಡು!
*****


ಇದ್ದಂತೆಯೇ ಇದ್ದರೆ ಮಾತ್ರ ಚಿರಕಾಲ ಬಾಳುವುದು ಸ್ನೇಹ ಬಂಧ!

23 ಮೇ 12

ಅಯ್ಯೋ ಯಾವಾಗಲೂ ನೀನು ನಾನೆಣಿಸಿದ್ದನ್ನೇ ನುಡಿಯುತಿರುವೆ
ನನ್ನ ಮನದ ಮಾತುಗಳನ್ನೇ ನೀನು ಸದಾ ಇಲ್ಲಿ ಬರೆಯುತ್ತಿರುವೆ

ನೀನು ಬರೆದ ಮಾತೆಲ್ಲಾ ನನ್ನ ಮನವ ಕಲಕಿ ಹೋದ ಕನಸುಗಳು
ನಮ್ಮೀರ್ವರ ನಡುವಿಹವು ವಿಚಿತ್ರವಾಗಿಯೂ ಕೆಲವು ಸಾಮ್ಯತೆಗಳು

ಸಹಮನಸ್ಕರು ನಾವು ಈರ್ವರೂ ಸಹೃದಯಿಗಳು ನಿಜವಾಗಿಯೂ
ಹೇಳಿದ ಮಾತುಗಳು ಹಲವು ಉಳಿದಿರುವವೆಷ್ಟಿನ್ನು ಹೇಳದೆಯೂ

ಇಷ್ಟಾದರೆ ಸಾಕಿತ್ತು ಮಾತನ್ನು ಅಲ್ಲಿಗೇ ಮುಗಿಸಬೇಕಿತ್ತು ನಿಜದಿ
ಬಾಳಬಹುದಿತ್ತು ಸಂಬಂಧಕ್ಕೆ ಗೌರವಕೊಟ್ಟು ಸದಾ ಅನುನಯದಿ

ಒಂದೇ ಭಾವದ ಜೀವಿಗಳಾದ ನಾವೊಂದಾಗಿ ಬಾಳಬೇಕಿತ್ತಲ್ಲವೇ
ನಾವು ಒಂದಾಗಲೆಂದೇ ಇಲ್ಲಿ ಹೀಗೆ ಪರಿಚಿತರಾಗಿರಬೇಕಲ್ಲವೇ?

ಎಂಬ ಆಸೆ ಹೊರಹಾಕಿದ ಕ್ಷಣದಲ್ಲೇ ಕೆಟ್ಟುಹೋಯ್ತು ಆ ಸಂಬಂಧ
ಇದ್ದಂತೆಯೇ ಇದ್ದರೆ ಮಾತ್ರ ಚಿರಕಾಲ ಬಾಳುವುದು ಸ್ನೇಹ ಬಂಧ!
                             ****


ಸದ್ದಿಲ್ಲದೇ…!

15 ಸೆಪ್ಟೆಂ 11

ಸದ್ದಿಲ್ಲದೇ
ಮನದೊಳಗೆ
ಲಗ್ಗೆಯಿಟ್ಟವರೊಂದಿಗೆ
ಸದ್ದಿಲ್ಲದೇ
ಬೆಳೆದುಬಿಡುವುದು
ಗಾಢ ಸ್ನೇಹ,

ಸದ್ದಿಲ್ಲದೇ
ಮನದಿಂದ
ಹೃದಯದೊಳಗೆ
ಇಳಿದವರೊಂದಿಗೆ
ಸದ್ದಿಲ್ಲದೇ
ಅಂಕುರಿಸಿಬಿಡುವುದು
ಗಾಢವಾದ ಪ್ರೀತಿ,

ಒಳ್ಳೆಯದೆಲ್ಲವೂ
ಹೀಗೆಯೇ
ಸದ್ದಿಲ್ಲದೇ
ನಡೆಯುತ್ತಿರುತ್ತವೆ;

ಆದರೆ,
ಕ್ರೋಧ,
ದ್ವೇಷ,
ಮತ್ಸರ,
ಈ ಮನದಲ್ಲಿ
ಮನೆಮಾಡಿದಾಗ,
ಅವು ಎಲ್ಲಿಲ್ಲದ
ಸದ್ದು ಮಾಡುತ್ತವೆ,
ಹಗಲಿರುಳೂ
ರಂಪ ಮಾಡುತ್ತವೆ,
ಊರಿನುದ್ದಗಲಕ್ಕೂ
ಡಂಗುರ ಸಾರುತ್ತವೆ!
***


ಒಂದಷ್ಟು ಹನಿಗಳು!

05 ಆಕ್ಟೋ 10

 

ನಿನ್ನ ನೆನಪಿನಿಂದಲೇ
ನನ್ನ ಬೆಳಗು

ನಿನ್ನ ನೆನಪಿನಿಂದಲೇ
ನನ್ನ ಬೈಗು

***

ನೀನು ಇರದೇ ಇದ್ದರೂ
ಸದಾ ನನ್ನ ಹತ್ತಿರ

ನಿನ್ನ ನೆನಪಿನಿಂದಲೇ
ಇರುವೆ ನಾನು ಎಚ್ಚರ

***

ಸದಾ ನೆನಪಾಗಿ
ಹೀಗೆ ನನ್ನ ಕಾಡದಿರು

ಮರೆಯುವ ಮಾತನ್ನು
ನೀನೆಂದಿಗೂ ಆಡದಿರು

***

ಅದೆಂದೋ ಅದೆಲ್ಲೋ
ಕಳೆದುಹೋಗಿದ್ದ ಆ ಸ್ನೇಹ
ಈಗ ಇಲ್ಲಿ ಮತ್ತೆ ಸಿಕ್ಕಿದೆ

ಇನ್ನೊಮ್ಮೆ ಕಳೆದುಕೊಂಡು
ಮತ್ತೆ ಪಡೆವ ಧೈರ್ಯ
ನಿಜವಾಗಿ ಯಾರಲ್ಲಿದೆ?

***

ತುಂಬಾ ಮಾತಾಡಬೇಕು
ಎಂದೆನಿಸಿದಾಗಲೆಲ್ಲಾ ನಿನಗೆ
ಕರೆ ಮಾಡೋಕೆ ತುಂಬಾ ಕಷ್ಟ

ಇದು ಎಂಥಾ ಸ್ನೇಹವೋ
ನಾನರಿಯೆ, ಆದರೆ ನೀನಂದ್ರೆ
ನನಗೆ ತುಂಬಾ ಇಷ್ಟ

***


ಸಂಬಂಧ – ಸ್ನೇಹಬಂಧ!

12 ಜುಲೈ 10

ಸಂಬಂಧಗಳಿಗಿಂತ ನಿಜಕ್ಕೂ ಸ್ನೇಹಬಂಧಗಳೇ ಶ್ರೇಷ್ಠ

ತೊರೆಯಬಹುದು ಸಂಬಂಧಿಗಳನು, ಸ್ನೇಹಿತರನ್ನು  ಕಷ್ಟ

 

ರಕ್ತ ಸಂಬಂಧವೇ ಶಾಶ್ವತ ಅನ್ನುವ ಮಾತು ನನಗೆ ಅಪಥ್ಯ

ಸ್ನೇಹಿತರೇ ಒಂದು ಕೈ ಮೇಲು ಅನ್ನುವುದು ನಿಜವಾಗಿ ಸತ್ಯ

 

ಸಂಬಂಧಗಳು ಕೂಡಿದಂತೆಲ್ಲಾ ಕಳಕೊಂಡೂ ಬಂದವಲ್ಲಾ?

ಸ್ನೇಹಿತರು ಕೂಡಿಕೊಂಡದ್ದೇ ಜಾಸ್ತಿ ಕಳೆದುಕೊಂಡದ್ದಷ್ಟಿಲ್ಲ

 

ಸಂಬಂಧಿಗಳ ನಡುವೆ ಸಂಪರ್ಕ ವಿರಳವಾದರೆ ಅದು ಕಷ್ಟ

ಸ್ನೇಹಿತರು ಅದೆಷ್ಟೇ ದೂರ ಇದ್ದರೂ ಅವರು ಮನಕೆ ಇಷ್ಟ

 

ಹೆತ್ತವರನ್ನೂ ಆಶ್ರಮಕ್ಕೆ ಅಟ್ಟುವ ಮಕ್ಕಳಿದ್ದಾರೆ ಈ ನಾಡಿನಲ್ಲಿ

ಒಳ್ಳೆಯ ಸ್ನೇಹಿತರನು ಕೈಬಿಡುವವರು ಯಾರಿದ್ದಾರೆ ಹೇಳಿ ಇಲ್ಲಿ

*****************************


ಸ್ನೇಹಕ್ಕೆ ಸಂಬಂಧಗಳ ಅಡ್ಡ ಹೆಸರುಗಳೇಕೆ ಬೇಕು?

11 ಮಾರ್ಚ್ 10

 

“ಪ್ರಪಂಚದಲ್ಲಿ ಮಿಕ್ಕೆಲ್ಲಾ ಸಂಬಂಧಗಳಿಗಿಂತ

ಸ್ನೇಹ ಸಂಬಂಧಕ್ಕೇ ಸಿಗುವುದು ಗೆಲುವು

 

ಪ್ರೌಢರಾದ ಮೇಲೆ ಒಡಹುಟ್ಟಿದವರನ್ನೂ

ಸ್ನೇಹಿತರಂತೆ ನೋಡಿದರಷ್ಟೇ ಚೆಲುವು

 

ಸ್ನೇಹಿತರಂತೆಯೆ ಇರುವ ದಂಪತಿಗಳೂ

ಬೆಳೆಸಿಕೊಳ್ಳಬಲ್ಲರು ತಮ್ಮ ನಡುವೆ ಒಲವು

 

ಅಪ್ಪ ಮಕ್ಕಳೂ ಸ್ನೇಹಿತರಾಗಿ ಇರಬೇಕು

ಎನ್ನುವ ಮಾತಿಗೇ ಈಗ ಎಲ್ಲರ ಒಲವು”

 

ಇಂತಹ ಮಾತುಗಳು ನಮ್ಮ ಕಿವಿಗಳಿಗೆ

ಬೀಳುತ್ತಲೇ ಇರುತ್ತವೆ ದಿನ ಪ್ರತಿ ದಿನವೂ

 

ಸ್ನೇಹ ತಳವೂರಿದ ಮೇಲೆ ಸ್ನೇಹಿತರ ನಡುವೆ

ಸಂಬಂಧಗಳ ಕಲ್ಪಿಸಿಕೊಳ್ಳುವುದೇಕೆ ನಾವು?

 

ನಮ್ಮ ಸ್ನೇಹಿತೆಯರನ್ನು ಬರಿಯ ಸ್ನೇಹಿತೆಯರಲ್ಲ

ಸಹೋದರಿಯರಂತೆ ಅಂತನ್ನುವುದೇಕೆ ನಾವು?

 

ಸ್ನೇಹಿತರನ್ನು ಸ್ನೇಹಿತರಿಗಿಂತಲೂ ಹೆಚ್ಚಾಗಿ

ಸಹೋದರರಂತೆ ಅಂತನ್ನುವುದೇಕೆ ನಾವು?

 

 

ಸ್ನೇಹಕ್ಕೆ ಸಂಬಂಧಗಳ ಅಡ್ಡ ಹೆಸರನ್ನು ನೀಡಿ

ವೈರುಧ್ಯದ ಪ್ರದರ್ಶನ ಮಾಡುವುದೇಕೆ ನಾವು?

 

ಸ್ನೇಹವನು ಬರಿಯ ಸ್ನೇಹವಾಗಿಯೇ ಉಳಿಸಿ

ಬೆಳೆಸಿಕೊಂಡು ಹೋಗಲಾರೆವೇನು ನಾವು?

**************************