ಶಾಂತಿಯೇನೆಂದು ಅರಿತಿಲ್ಲ ನಾನು!

16 ಸೆಪ್ಟೆಂ 12

ಶಾಂತಿಯೇನೆಂದು ಅರಿತಿಲ್ಲ ನಾನು

ಕೊರತೆಗಳಿಹವು ನನ್ನೊಳಗೆ
ನನ್ನ ಹೊರಗೂ ಇರುವಂತೆ

ಒಳಹೊರಗಿನೀ ಕೊರತೆಗಳ
ನೀಗಿಸಿಕೊಳ್ಳುವ ಹಂಬಲವು 
ನನ್ನೀ ಮನದೊಳಗಿಹುದಂತೆ

ಶಾಂತಿಯನು ಒಪ್ಪಿಕೊಂಡಿಲ್ಲ ನಾನು!

ಈ ಪ್ರಯತ್ನದಲಿ ನಾನು ನನ್ನ
ಆಯುಷ್ಯವನ್ನೇ ಸವೆಸಿಹೆನು

ಜಗವೂ ಅಲ್ಲಿಯೇ ಇಹುದು
ನಾನೂ ಅಲ್ಲಿಯೇ ಇಹೆನು

ಅದು ನನ್ನ ಹೆಡ್ಡತನವಾಗಿತ್ತೇ?
ಎಂದೀಗೀಗ ಯೋಚಿಸುತ್ತಿಹೆನು

ಶಾಂತಿಯೇನೆಂದು ಅರಿತಿಲ್ಲ ನಾನು

ಆದರೂ 

ನಿರಾಶನಾಗಲೇಕೆ ನಾನು?
ನನ್ನೀ ಯತ್ನಗಳ ಹಿಂದೆ 
ಆತ್ಮಸ್ಥೈರ್ಯ ಇಲ್ಲವೇನು?
ಜಗದ ಮುಂದೆ ಸೋಲನ್ನು
ಒಪ್ಪಿಕೊಂಡರೂ ನಾನು,
ಸೋಲೊಪ್ಪಿಕೊಂಡಿಲ್ಲ
ನನ್ನಲ್ಲಿ ನಾನು,
ಶಾಂತಿಯೇನೆಂದು ಅರಿತಿಲ್ಲ ನಾನು
*********************

(ಅಮಿತಾಭ್ ಬಚ್ಚನ್ ರವರ ಪಿತ, ದಿ. ಹರಿವಂಶ್ ರಾಯ್ ಬಚ್ಚನ್‍ರವರ ಈ ಕವಿತೆಯ ಭಾವಾನುವಾದದ ಒಂದು ಯತ್ನ)