ಪರಾವಲಂಬಿಯಾದರೆ ಕೊನೆಗೂ ಸೋಲು!!!

10 ಮಾರ್ಚ್ 10

  

 ವಿಧವೆಯನು ವರಿಸಿದನಂದು ಆ ಮಹಾನ್ ಪುರುಷ

ಆತನ ದೃಷ್ಟಿಯಲಿ ಇದ್ದದ್ದು ಬರೀ ತನ್ನದೇ ಹರುಷ

 

ವಿಧವೆಯ ಪುತ್ರನನು ಒಲವಿಲ್ಲದೇ ನಿರ್ಲಕ್ಷ್ಯದಿ ಸಾಕಿ

ತನ್ನ ಪುತ್ರನ ಕಾಳಜಿಯಿಂದ ಬೆಳೆಸಿ ಮಾಡಿದ ಶೋಕಿ

 

ಹಿರಿಯ ಮಗನಾದರೆ ತನ್ನ ಬಲದಿಂದಲೇ ಜಗವ ಗೆದ್ದ

ಕಿರಿಯವನು ಸದಾ ಪರಾವಲಂಬಿಯಾಗಿಯೇ ಇರುತ್ತಿದ್ದ

 

ಕಿರಿಯನ ಬೆಳೆಸಿ ಚಕ್ರವರ್ತಿಯಾಗಿಸುವಾಸೆ ಆತನಿಗಿತ್ತು

ಹಿರಿಯನನು ಕೊನೆಗೆ ಒಳಸಂಚಿನಿಂದ ಮುಗಿಸಬೇಕಿತ್ತು

 

ತಾನೆಣಿಸಿದ ಕಾರ್ಯ ನಡೆಯಲೇ ಇಲ್ಲ ನೋಡಿ ಹೇಗೂ

ಹಿರಿಯನೆದುರು ಕಿರಿಯ ಸೋತು ಮರೆಯಾದ ಕೊನೆಗೂ

*******

ಟೈಮ್ಸ್ ಆಫ್ ಇಂಡಿಯಾ (ಆಂಗ್ಲ) ದ ಬರಿಯ ಕನ್ನಡ ಅನುವಾದ ರೂಪವಾಗಿದ್ದ ಟೈಂಸ್ ಆಫ್ ಇಂಡಿಯಾ (ಕನ್ನಡ) ಪತ್ರಿಕೆ ಇಂದಿನಿಂದ ಪ್ರಕಟವಾಗುವುದಿಲ್ಲ ಎಂಬ ಸುದ್ದಿ ಓದಿದಾಗ ಆಸುಮನದಲ್ಲಿ ಮೂಡಿದ ಭಾವನೆಗಳು ಅಕ್ಷರ ರೂಪ ತಾಳಿದ್ದು ಹೀಗೆ.

 


ಈ ಸೋಲು ಮುಂದಿನ ನಿನ್ನ ಗೆಲುವಿಗೆ ದಾರಿ…!!!

24 ಏಪ್ರಿಲ್ 09

prithvi3

ಇಂದಿನ ಈ ಸೋಲು ಮುಂದಿನ ನಿನ್ನ ಗೆಲುವಿಗೆ ದಾರಿ

ಒಮ್ಮೆಲೇ ನಕ್ಷತ್ರಗಳ ಹಿಡಿಯಬಾರದು ಆಕಾಶಕ್ಕೆ ಹಾರಿ

ಸೋಲಿನ ರುಚಿ ಉಂಡವಗೆ ಗೆಲುವಿನ ರುಚಿ ಸಹನೀಯ

ಒಮ್ಮೆ ಗೆದ್ದರೆ ಮತ್ತೆ ಸೋಲುಂಬುದದೆಷ್ಟು ಅಸಹನೀಯ

ಪಕ್ಷ ಮತ ಜಾತಿ ರಾಜಕೀಯದದಿಂದ ಇರಬೇಕು ದೂರ

ಆಗ ನೀ ಆಗುವೆ ಜನರ ಹೃದಯಗಳನೇ ಗೆಲ್ಲುವ ಶೂರ

ಶಾಶ್ವತ ಅಲ್ಲ ಗೆಲುವು ಬುದ್ಧಿವಂತಿಕೆಯಿಂದ ಜನರ ಗೆದ್ದರೆ

ಶಾಶ್ವತ ಜನರ ಒಲವು  ಹೃದಯವಂತಿಕೆ ನಿನಗೆ ತಂದರೆ

ನಿನ್ನ ಭವ್ಯ ಭವಿಷತ್ತಿನ ಕನಸು ಕಾಣುತಿವೆ ನನ್ನ ಕಂಗಳು

ಮುಂದಿನದಕೆ ಭದ್ರ ಬುನಾದಿ ಇಂದಿನ ಏಳು ಬೀಳುಗಳು

ಮಾತಾಪಿತರ ಆಶೀರ್ವಾದ ಎಂತಿಹುದೋ ನಿನ್ನೊಂದಿಗೆ

ಅಂತೆಯೇ ನಾನೂ ಇರುವೆ ಸದಾ ನಿನ್ನ ಜೊತೆ ಜೊತೆಗೆ

**********************************

ಇಂದು ನಡೆದ, ಉಡುಪಿ ಬಾರ್ ಕೌನ್ಸಿಲ್ ಕಾರ್ಯದರ್ಶಿಯ ಚುನಾವಣೆಯಲ್ಲಿ

ಸೋಲುಂಡ ನನ್ನ ತಮ್ಮ ಪೃಥ್ವಿರಾಜನಿಗೆ.