ನಿನ್ನ ನೆನಪಾಗುವುದೇಕೆ?

18 ಮೇ 10

 

ಸಖೀ,

ಬೆಟ್ಟದಾ ತಪ್ಪಲಲಿ

ಸಣ್ಣಗೆ ಹುಟ್ಟಿ,

ತಣ್ಣಗೆ ಇರುವವಳು,

ಅದ್ಯಾವುದೋ

ಅವ್ಯಕ್ತ ಸೆಳೆತಕ್ಕೊಳಗಾಗಿ,

ಮುನ್ನುಗ್ಗಿ, ಬಿದ್ದು, ಎದ್ದು,

ಬೆಟ್ಟ ಗುಡ್ಡಗಳ ಸುತ್ತಿ,

ಜಾರಿ ಜಲಪಾತವಾಗಿ,

ಬಯಲಿಗಿಳಿದು,

ಕಾವೇರಿಸಿಕೊಂಡು,

ಮೈ ಹಿಗ್ಗಿಸಿಕೊಂಡು,

ಅತ್ತ ಇತ್ತ ಕೈಚಾಚಿ,

ಸಿಕ್ಕಿದ್ದನ್ನೆಲ್ಲಾ ಬಾಚಿ

ತನ್ನೊಳಗೆ ಸೆಳೆದು,

ಸಮುದ್ರರಾಜನೊಂದಿಗಿನ

ತನ್ನ ಮಧುರ ಮಿಲನಕ್ಕೆ

ಹಾತೊರೆದು, ಅನವರತ

ಮೈನೆರೆತು ಮೈಮರೆತು,

ಹರಿವ ನದಿಯ,

ಕಂಡಾಗಲೆಲ್ಲಾ,

ನನಗೆ ಬಿಡದೆ ನಿನ್ನ

ನೆನಪಾಗುವುದೇಕೆ?

*****


ಸೆಳೆತ!!!

20 ಏಪ್ರಿಲ್ 09

ಸಖೀ,
ನಾವು
ಎದುರು
ಬದುರಾಗಿ
ಕೂತು
ಒಬ್ಬರನ್ನೊಬ್ಬರು
ಕಣ್ಣಲ್ಲಿ
ಕಣ್ಣಿಟ್ಟು
ನೋಡುವುದಕ್ಕಿಂತಲೂ,
ಸ್ವಲ್ಪ ದೂರ
ಪರಸ್ಪರ
ವಿರುದ್ಧ ದಿಕ್ಕಿನಲ್ಲಿ
ನಡೆದು,
ಒಮ್ಮೆಗೇ
ಇಬ್ಬರೂ
ಹಿಂತಿರುಗಿ
ನೋಡಿದಾಗ
ಆಗುವ
ಆ ಅನುಭವ
ಅದ್ಭುತ;

ಅಂತೆಯೇ,
ದಿನವೆಲ್ಲಾ
ಜೊತೆಗಿದ್ದು
ನಾವಾಡುವ
ಹತ್ತಾರು
ಮಾತುಗಳಿಗಿಂತಲೂ
ದೂರದೂರಿಂದ
ಕರೆ ಮಾಡಿ
ಆಡುವ
ಒಂದೇ ಒಂದು
ಪ್ರೀತಿಯ
ಮಾತಿನಲ್ಲಿದೆ
ಎಲ್ಲಿಲ್ಲದ
ಸೆಳೆತ!
****