ಖಳನಾಯಕ – ನಾಯಕ!

16 ಸೆಪ್ಟೆಂ 12

ಸಖೀ,
ಆ ಸೂರ್ಯ
ತನ್ನುರಿಯಿಂದ
ಬೇಯಿಸಿ
ನೋಯಿಸಿ
ಹೋಗುವ
ಬುವಿಯ
ಮನಸ್ಸನ್ನು,
ತಂಪಾಗಿ
ಇರಿಸಲೆಂದೇ
ಆಗಾಗ
ಸುರಿಸುತ್ತಾನೆ
ನೀರ – ಕಣ್ಣೀರ
ಆ ಮೇಘರಾಜ!
********


ಹತೋಟಿ!

01 ಸೆಪ್ಟೆಂ 12

ಸಖೀ,
ಚಂದಿರ
ಈ ಭೂಮಿಯ
ಮೇಲೆಲ್ಲಾ
ಪಸರಿಸುವುದು
ಆ ರವಿಯ
ಬೆಳಕನ್ನೇ;

ಆದರೆ,
ಆ ಬೆಳಕಿನ
ಮೇಲಿನ
ಹತೋಟಿ
ಮಾತ್ರ
ಇರುವುದು
ಸದಾ
ಭೂಮಿಯ
ಕೈಯಲ್ಲೇ!


ಸೂರ್ಯನಂತೆ!

12 ಆಗಸ್ಟ್ 12
ಸಖೀ,
ನಿನ್ನ

ಮಾತೂ
ಸತ್ಯ,
ರಾಜಕೀಯ
ಇದ್ದದ್ದೇ
ದಿನನಿತ್ಯ,
ಕತೆಗಳು
ಹೊಸತಾದರೂ
ಹಳಸಿ
ಹಳತಾದಂತೆ!

ನಮ್ಮೊಲವು
ಹಾಗಲ್ಲ,
ಎಷ್ಟೇ
ಹಳತಾದರೂ,
ದಿನ ದಿನವೂ
ಹೊಸತು;
ಮೂಡಣದಿ
ನಿತ್ಯ ಹೊಸ
ಆಶಯದೊಂದಿಗೆ
ಮೂಡುವ
ಸೂರ್ಯನಂತೆ!
********


ಕಾಡದಿರಲಿ ಭೂತ ಭವಿಷ್ಯದ ಚಿಂತೆ!

16 ಏಪ್ರಿಲ್ 10

 
ಆ ಸೂರ್ಯ ಮರೆಯಾದ ಪಡುವಣದ ಕಡಲಲ್ಲಿ

 ನಾನಿಲ್ಲಿ ಸೆರೆಯಾದೆ ನಿನ್ನೀ ಬಾಹು ಬಂಧನದಲ್ಲಿ

 

ನಮ್ಮದೇ ಲೋಕದಲ್ಲಿ ಒಂದಾಗಿ ವಿಹರಿಸೋಣ ಬಾ

ದಿನದ ನೋವುಗಳನ್ನೆಲ್ಲಾ ನಾವು ಮರೆಯೋಣ ಬಾ

 

ಕೊಂಡೊಯ್ಯಲಿ ನಮ್ಮನ್ನುಂತ್ತುಂಗಕ್ಕೆ ಸುಖದ ಮತ್ತೇರಿ

ನೋಡುತ್ತಿರು ಬೀಳದಂತೆ ನಿನ್ನ ತೆಕ್ಕೆಯಿಂದ ನಾ ಜಾರಿ

 

ಹುಣ್ಣಿಮೆಯ ಚಂದಿರನು ನಗುವಂತೆ ಆ ಬಾನಂಗಳದಲ್ಲಿ

ತುಂಬಿ ತುಳುಕುತ್ತಿರಲಿ ನಲಿವು ನಮ್ಮೀ ಮನದಂಗಣದಲ್ಲಿ

 

ಮೂಡಣದಿ ನಾಳೆ ಮತ್ತೆ ಮೇಲೇರಿ ಬಂದಾಗ ಆ ನೇಸರ

ಕಾಯಕದ ಮೇಲೆ ನಾ ಹೊರಟರೆ ಪಡಬೇಡ ನೀ ಬೇಸರ

 

ಎಂದಿಗೂ ಸಾಗುತ್ತಿರಲಿ ನಮ್ಮ ಜೀವನ ಚಕ್ರ ಇಂತೆಯೇ

ನಮ್ಮನೆಂದಿಗೂ ಕಾಡದಿರಲಿ  ಭೂತ ಭವಿಷ್ಯದ ಚಿಂತೆಯೇ

*****

 


ಏನಿರಲೇಕೆ ಸಖೀ..?

09 ಜೂನ್ 09
ಸಖೀ,
ನೀನಿಲ್ಲದ ಮೇಲೆ ಏನಿರಲೇಕೆ?

ನಿನ್ನ ಮುಖವ ನೋಡಲಾಗದ
ನನ್ನೀ ಕಣ್ಣುಗಳಿರಲೇಕೆ?

ನಿನ್ನ ಸವಿ ಮಾತುಗಳನು
ಆಲಿಸಲಾಗದ,
ನನ್ನೀ ಕಿವಿಗಳಿರಲೇಕೆ?

ನೀನಿರುವೆಡೆ ಕೊಂಡೊಯ್ಯದ
ನನ್ನೀ ಕಾಲುಗಳಿರಲೇಕೆ?

ನಿನ್ನನ್ನೊಮ್ಮೆ ಸ್ಪರ್ಶಿಸಲಾಗದ
ನನ್ನೀ ಕೈಗಳಿರಲೇಕೆ?

ನಿನಗರ್ಪಿಸಲಾಗದ ಈ ಹೃದಯ
ನನ್ನೊಳಗಿರಲೇಕೆ?

ನಿನ್ನ ದರುಶನವಾಗದ ದಿನ,
ಆ ಸೂಯ೯ನಿರಲೇಕೆ?

ನಿಜ ಹೇಳಲೇ ಸಖೀ,
ನಿನ್ನೊಂದಿಗೆ ಸಹಜೀವನ
ನಡೆಸಲಾಗದ
ನನ್ನೀ ಜೀವವೇ ಇರಲೇಕೆ?

ಸಖೀ,
ನೀನಿಲ್ಲದ ಮೇಲೆ ಏನಿರಲೇಕೆ?
********************


ಗಾಳಿ ತಂಗಾಳಿಯಾದೀತು!!!

21 ಮೇ 09

ಸಖೀ,
ಇಂದು ನಿನ್ನ
ದರುಶನವಾಗಿಲ್ಲವೆಂಬ
ಮುನಿಸು ನನಗಿದ್ದಷ್ಟೇ
ಆ ಸೂರ್ಯನಿಗೂ
ಇದೆ ನೋಡು,
ಅದಕ್ಕೇ ಮರೆಯಾಗಿ
ಕೂತಿದ್ದಾನೆ
ಕೋಪಿಸಿಕೊಂಡು;

ನೀನಿಂದು ಎರಡು
ಸವಿಮಾತ ಆಡಿಲ್ಲವೆಂಬ
ಬೇಸರ ನನಗಿದ್ದಷ್ಟೇ
ಬೀಸುತ್ತಿರುವ ಗಾಳಿಗೂ ಇದೆ,
ನ್ನುಸಿರು ಬಿಸಿಯಾಗಿರುವಂತೆ
ಆ ಗಾಳಿಯಲೂ ಇಂದು
ಎಂದಿಲ್ಲದ ರೋಷವಿದೆ
ಕಂಡಿಲ್ಲದ ಬಿಸಿ ಇದೆ;

ಸಖೀ,
ಬಂದು ಬಿಡು
ಸೂರಿನಡಿಯಿಂದಾಚೆಗೆ,
ನಿನ್ನ ಕಂಡ ನಾನು
ತೃಪ್ತಿ ಪಡುವಂತೆ,
ಬಂದಾನು ಮುನಿಸ ಮರೆತು
ಸೂರ್ಯನೂ ಮೋಡಗಳ
ಮರೆಯಿಂದಾಚೆಗೆ;

ನೀ ನುಡಿದರೆ ನನ್ನ
ಕಿವಿಗಳಲಿ ಒಂದೆರಡು
ಸವಿಮಾತನಿಂದು,
ಈ ನನ್ನ ಮನವೂ ತಣಿದೀತು,
ಮಾತ ಕೇಳಿಸಿಕೊಂಡ
ಆ ಗಾಳಿಯೂ ತಣಿದು
ತಂಗಾಳಿಯಾದೀತು!
*-*-*-*-*-*-*-*