ಸಂಬಂಧಗಳು!!!

27 ಜುಲೈ 09
ಸಖೀ,

ಪರಾಮರ್ಶಿಸಿ ನೋಡಿದರೆ
ಈ ಸಂಬಂಧಗಳೇ ಹೀಗೆ
ಬೆಳೆದು ಬಿಡುತ್ತವೆ ಎಲ್ಲಾದರೂ
ಮನ ಬಂದ ಹಾಗೆ

ಹಲವರೊಡನೆ
ನಾವು ಎಷ್ಟೇ ಬಯಸಿದರೂ
ಅವು ಗಾಢವಾಗುವುದೇ ಇಲ್ಲ

ಕೆಲವರೊಡನೆ ತಂತಾನೆ
ಬೆಳೆದು ನಮ್ಮನದೆಂತು
ಬಂಧಿಸಿಯೇ ಬಿಡುವುದಲ್ಲ

ನೂರು ಮೈಲಿಗಳಾಚೆ ಇದ್ದರೂ
ನೆನೆಸಿದಾಗಲೆಲ್ಲ ಮನ ಮಿಡಿದು
ನೋಯಿಸಿಕೊಳ್ಳುವುದು ಇದೆ

ಒಂದೇ ಸೂರಿನಡಿ ವರ್ಷಾನುವರ್ಷ
ಇದ್ದರೂ ಪರಸ್ಪರರ ಅರ್ಥೈಸಿಕೊಳ್ಳದೇ
ಕೊರಗಿ-ಕೊರಗಿಸುವುದೂ ಇದೆ

ಒಂದೇ ತಾಯಿಯ ಮಕ್ಕಳು
ಬೆಳೆದು ಕಡು ವೈರಿಗಳಾಗಿ
ಕಾದಾಡುವುದನು ಕಂಡದ್ದಿದೆ

ಬಾಳ ಬಟ್ಟೆಯಲಿ ಎದುರಾದ
ಅಪರಿಚಿತರು ಮನವ ಹೊಕ್ಕು
ನಮ್ಮವರೆಂದೆನಿಸಿಕೊಂಡುದಿದೆ

ಒಂದೆಡೆ ನಾವು ಅದೆಷ್ಟೇ
ಪ್ರಯತ್ನಿಸಿದರೂ
ಬೆಳೆಯದೇ ಇರುವ ಸಂಬಂಧ

ಇನ್ನೊಂದೆಡೆ ತಂತಾನೆ ಬೆಳೆದು
ನಮ್ಮನ್ನು ಆವರಿಸಿ ಗಾಢವಾಗುತಿರುವ
“some” ಬಂಧ

ಪರಾಮರ್ಶಿಸಿ ನೋಡಿದರೆ
ಈ ಸಂಬಂಧಗಳೇ ಹೀಗೆ
ಬೆಳೆದು ಬಿಡುತ್ತವೆ ಎಲ್ಲಾದರೂ
ಮನ ಬಂದ ಹಾಗೆ
**********