ಹೀಗೇಯೇ ನಡೆದರೆ ಐದು ವರ್ಷ ಉಳಿಯುವುದಿಲ್ಲ!!!

16 ಜೂನ್ 09
ನಮ್ಮ ಸರ್ಕಾರಕ್ಕೆ ಅದೇಕೋ ಇದೀಗ ಕೆಟ್ಟ ಕಾಲ
ರೆಡ್ಡಿಗಳು ನೋಡಿ ನಿಧಾನಕ್ಕೆ ಬಿಚ್ಚುತ್ತಿದ್ದಾರೆ ಬಾಲ
 
ಸಿರಿಯೊಂದಿಗೆ ಅಧಿಕಾರವೂ ಸೇರಲು ಅಧೋಗತಿ
ತನ್ನವರಿಗೇ ಜನರು ಕಾಣಿಸದೇ ಇರಲಾರರು ಗತಿ
 
ಗಣಿ ದೊರೆಗಳಿಗೆ ಗುಟ್ಟು ರಟ್ಟಾಗುವುದೆಂಬ ಭಯ
ಕೇಂದ್ರದ ತನಿಖೆಯಿಂದ್ಯಾರೂ ನೀಡುತ್ತಿಲ್ಲ ಅಭಯ
 
ತಮಗೇನು ಬೇಕೆಂಬುದನೇ ಇವರು ಅರಿತಂತಿಲ್ಲ
ತಾವು ಕುಳಿತ ಮರದ ರೆಂಬೆಯ ಕಡಿಯುತಿಹರಲ್ಲ
 
ಅಧಿಕಾರದ ಗದ್ದುಗೆಯೇರಿ ವರುಷವಾದುದಕೆ ಈಗ
ಸಂಭ್ರಮವೇಕೆ ಇರಲಾರರೇ ಐದು ತುಂಬುವಾಗ
 
ಅಭಿವೃದ್ಧಿ ಕಾರ್ಯಗಳ ಲೆಕ್ಕ ಗಣನೆಗೇ ಸಿಗುವುದಿಲ್ಲ
ಆದರೂ ಮರ್ಯಾದೆ ಬಿಟ್ಟವರಂತೆ ವರ್ತಿಸುತಿಹರಲ್ಲ
 
ಕುಮಾರಿ ಅಲ್ಲಿ ಅತ್ತು ಕೆಡಿಸಿದರೂ ಸಭೆಯ ಶೋಭೆ
ನಾ ನಿನ್ನ ಬಿಡಲಾರೆ ಎನುತಿಹನಲ್ಲಾ  ಮುದಿಗೂಬೆ
 
ಎಲ್ಲಾ ಸಫಲ ಪುರುಷರ ಹಿಂದೆ ಹೆಣ್ಣಿರುವಳೆಂಬಂತೆ
ಈತನ ಮಹಾಪತನವೂ ನಿಜದಿ ಈಕೆಯಿಂದಲಂತೆ
 
ಎಷ್ಟು ಒದೆ ತಿಂದರೂ ಬುದ್ಧಿ ಬರುವಂತೆ ಕಾಣುತ್ತಿಲ್ಲ
ಹೀಗೇಯೇ ನಡೆದರೆ ಐದು ವರ್ಷ ಉಳಿಯುವುದಿಲ್ಲ

ಕನಸಾದುದಕೇ…!!!

24 ಏಪ್ರಿಲ್ 09

ಸಖೀ,
ಆ ದೇವರು ಬಂದು,
ನನ್ನೆದುರಲಿ ನಿಂದು,
ವರ ಬೇಡಿಕೋ ಎಂದಾಗ,
ನಿನ್ನನೇ ಬೇಡಿ ಕಟ್ಟಿಕೊಂಡೆ,
ಜೊತೆಗೆ, ಬೇಕಾದಷ್ಟು
ಸಿರಿ ಸಂಪದವನೂ ಪಡೆದುಕೊಂಡೆ;
ನಿನ್ನೊಂದಿಗೆ ಮನ
ಇಚ್ಚಿಸಿದಲ್ಲೆಲ್ಲಾ ವಿಹರಿಸಿ ಬಂದು,
ಬಯಸಿದ್ದನ್ನೆಲ್ಲಾ ಗಡದ್ದಾಗಿ ತಿಂದು,
ಹಗಲೆಲ್ಲಾ ನಿನ್ನೊಂದಿಗೇ
ಮಾತಾಡಿ ಕಳೆದೆ,
ಮತ್ತೆ ರಾತ್ರಿ
ನಿನ್ನ ಬಿಸಿಯಪ್ಪುಗೆಯ
ಸುಖದ ಸೋಪಾನವೇರಿ
ಹಾಯಾಗಿ ನಿದ್ದೆಗಿಳಿದೆ.
ಮುಂಜಾನೆ,
ನನ್ನಾಕೆ ಕೂಗಿ ಎಬ್ಬಿಸಿದಾಗ,
ನಾನಂದುಕೊಂಡೆ
ಇಷ್ಟೆಲ್ಲಾ ಕನಸಲ್ಲೇ
ನಡೆದುದಕೆ ಚೆನ್ನಾಯ್ತೆಂದು,
ಅಲ್ಲಾ, ಸಖೀ,
ನಂಬುತ್ತಿದ್ದಳೇ ನನ್ನಾಕೆ,
ನಿನ್ನನ್ನು ದೇವರೇ
ನನಗೆ ಕಟ್ಟಿ ಕೊಟ್ಟಿದ್ದನೆಂದು?
ಅನ್ನುತ್ತಿರಲಿಲ್ಲವೇ,
ಅವಳನ್ನು ಮರೆತು,
ನಾನಾಗಿಯೇ ನಿನ್ನನ್ನು
ಕಟ್ಟಿಕೊಂಡಿದ್ದೇನೆಂದು?!
*-*-*-*-*-*-*