ಪ್ರಭಾವಿತ ಸಾಹಿತ್ಯ ಕೃಷಿ…!

23 ನವೆಂ 10

ಕತೆ ಕವಿತೆ ಕಾವ್ಯವೆಂಬ ಸಾಹಿತ್ಯ ಕೃಷಿಯೆಂಬುದು
ವಾಹನ ಚಲಾಯಿಸಿದಂಥೆ ಎಂದೆಂಬ ಮಾತುಗಳನ್ನು ಕೇಳಿರುವೆನು ನಾನು

ವಾಹನ ಚಲಾಯಿಸಲು ತರಬೇತಿ ಪಡೆದರಷ್ಟೇ
ಉತ್ತಮ ಚಾಲಕರಾಗಬಲ್ಲರು ಎಂದೆಂಬ ಉದಾಹರಣೆಗೂ ಕಿವಿಯಾದೆ ನಾನು

ಅನ್ಯರು ಬರೆದುದೆಲ್ಲವ ಓದುತ್ತಾ ಇದ್ದು ಸಾಹಿತ್ಯ ಕೃಷಿ
ನಡೆಸಿದರಷ್ಟೇ ಉತ್ತಮ ಚಾಲಕರಂಥೆ ಉತ್ತಮ ಬರಹಗಾರರಾಗಬಲ್ಲರಂತೆ

ರಸ್ತೆ ಬದಿಯಲಿ ನಿಂತು ಓಡುವ ವಾಹನಗಳನ್ನು ನೋಡುತ್ತಾ
ವಾಹನ ಚಲಾಯಿಸಲು ಕಲಿಯಲಾದೀತೇ ಎಂಬುದೇ ನನ್ನನ್ನು ಕಾಡುವ ಚಿಂತೆ

ವಾಹನ ಚಲಾಯಿಸಲು ತರಬೇತಿ ಪಡೆದರೆ ತಪ್ಪಲ್ಲ ಬಿಡಿ
ಆದರೆ ತರಬೇತಿ ಪಡೆಯದವರೂ ಸುಕ್ಷೇಮವಾಗಿ ವಾಹನ ಚಲಾಯಿಸಬಲ್ಲರಲ್ಲಾ?

ಸಾಹಿತ್ಯ ಕೃಷಿಗೂ ತರಬೇತಿ ಪಡೆದರೆ ನಿಜಕ್ಕೂ ಶ್ರೇಷ್ಟ
ಆದರೆ ತರಬೇತಿ ಪಡೆಯದವರ ಸೃಜನಶೀಲ ಬರವಣಿಗೆ ಕೀಳೆಂದೂ ಅಲ್ಲವೇ ಅಲ್ಲ

ಅವರಿವರ ಓದಿ ಪ್ರಭಾವಿತಗೊಂಡು ಬರೆದರಷ್ಟೇ ಸಾಹಿತ್ಯ
ತನ್ನ ಮಟ್ಟವನ್ನು ಏರಿಸಿಕೊಂಡೀತು ಎಂಬ ಮಾತು ನಿಜದಿ ಹಾಸ್ಯಾಸ್ಪದವೇ ಸರಿ

ಅವರಿವರ ಸಾಹಿತ್ಯದ ಪ್ರಭಾವಕ್ಕೆ ಒಡ್ಡದೇ ತಮ್ಮದೇ ಛಾಪು
ಮೂಡಿಸಿ ಹೋದವರೇ ಈ ಕ್ಷೇತ್ರದಲಿ ದಿಗ್ಗಜರೆನಿಸಿಕೊಂಡಿಹರೆಂಬುದೂ ಅಲ್ಲವೇ ಸರಿ?
***********


ನುಡಿಸಿರಿಯಲ್ಲಿ ಭಾಗಿಯಾಗದ ಕನ್ನಡಿಗ ದುರ್ದೈವಿ!

02 ನವೆಂ 10

ಆಳು ಕಾಳುಗಳಿದ್ದೂ, ಇನ್ನಾವ ಆಳುವವರೂ, ಮಾಡಿರದ ಮಹತ್ಕಾರ್ಯ
ಡಾ. ಮೋಹನ ಆಳ್ವರು ಮಾಡಿ ತೋರಿಸುತ್ತಿದ್ದಾರಲ್ಲಿ ಕನ್ನಡದ ಕೈಂಕರ್ಯ

ಆಳ್ವಾಸ್ ನುಡಿಸಿರಿಯಲ್ಲಿ ಕನ್ನಡದ ಸಿರಿಯೆಮ್ಮ ಮೈಮನ ತುಂಬುವುದು
ರೋಮಾಂಚನಗೊಳಿಸುವ ಹೊಸ ಹೊಸ ಅನುಭವ ನಮಗಾಗುವುದು

ಮೂಡಬಿದರೆಯ ವಿದ್ಯಾಗಿರಿಗೆ ಕಾಲಿಟ್ಟ ಕ್ಷಣದಿಂದ ಭಾವನಾ ಲೋಕದಲ್ಲಿ
ತಂತಾನೇ ಸಾಗಿ ಭಾವ ಬಂಧನದಲ್ಲಿ ಬಂಧಿಯಾಗುವರು ಎಲ್ಲರೂ ಅಲ್ಲಿ

ಮೂರು ದಿನಗಳಲ್ಲಿ ಹತ್ತಿಪ್ಪತ್ತು ಗ್ರಂಥಗಳ ಓದಿದಂತಹ ಅನುಭವ ನಮಗೆ
ಯಾವುದೋ ಸೆಳೆತಕ್ಕೊಳಗಾಗಿ ಎತ್ತಲೋ ಸಾಗುತ್ತಿರುವನುಭವ ನಮಗೆ

ಕರಾವಳಿಯ ಕಲೆಗಳಾದ ಯಕ್ಷಗಾನ, ಭೂತಾರಾಧನೆ, ಡೋಲು ವಾದನ
ಇವೆಲ್ಲದರ ನಡುವಿನ ಸಾಹಿತ್ಯ ಲೋಕದಲ್ಲಿ ಅರಳುವುದು ಅಲ್ಲಿ ಎಲ್ಲರ ಮನ

ಯಾವುದೂ ಅತಿಯಲ್ಲ ಯಾವುದಕ್ಕೂ ಮಿತಿಯಿಲ್ಲ ಅನ್ನುವ ವಿಶಿಷ್ಟ ಶೈಲಿಯಲಿ
ಸಂಯೋಜನೆಗೊಂಡ ಈ ಹಬ್ಬ ಬೇರೆ ಎಲ್ಲೂ ನಡೆದಿರಲಾರದು ಈ ನಾಡಿನಲಿ

ಅಚ್ಚುಕಟ್ಟಿನ ನಿರ್ವಹಣೆಯೇ ಎಲ್ಲಾ  ಕಾರ್ಯಕ್ರಮಗಳಲ್ಲೂ ಪ್ರಮುಖಾಕರ್ಷಣೆ
ಎಲ್ಲೂ ಯಾರ ಮನದಲ್ಲೂ ಬೇಸರ ಮೂಡಿಸದ ತೆರದಿ, ಇದೆ ಸಂಯೋಜನೆ

ನೂರು ರೂಪಾಯಿಗಳಿಗೆ ಮೂರು ದಿನವೂ ವಾಹನ ವಸತಿ ಊಟೋಪಚಾರ
ಆ ಮೂರು ದಿನಗಳಲ್ಲೂ ಅಲ್ಲಿ ಯಾರೂ ತೋರಿದ್ದೇ ಇಲ್ಲ ಕಿಂಚಿತ್ತೂ ತಿರಸ್ಕಾರ

ಜೋಗವ ಮರೆತರೂ ಪರವಾಗಿಲ್ಲ, ಆಳ್ವಾಸ್ ನುಡಿಸಿರಿಯಲಿ ಭಾಗಿಯಾಗಿ ಬನ್ನಿ
ಆಳ್ವಾಸ್ ನುಡಿಸಿರಿಯಲ್ಲಿ ಭಾಗಿಯಾಗದ ಕನ್ನಡಿಗ ನಿಜಕ್ಕೂ ದುರ್ದೈವಿಯೇ ಅನ್ನಿ
********


ಕನ್ನಡದ ಕಂಪ ಪಸರಿಸುವಾ…!

22 ಜೂನ್ 10

 

ಕಾಲೆಳೆದು ಕಾಲೆಳೆದು ಪಡಲು ಸಂತೋಷ

ಬಹುಕೃತ ವೇಷ ವ್ಯರ್ಥ ಆವೇಷ

ಕಾಲೆಳೆದು ಕಾಲೆಳೆದು ಸೋತವರೇ ಎಲ್ಲ

ನೆಮ್ಮದಿಯ ಪಡೆದವರು ಯಾರೂ ಇಲ್ಲಿಲ್ಲ

 

ಸಾಹಿತ್ಯ ಲೋಕದಲಿ ಬಂಧುಗಳೇ ನಾವೆಲ್ಲಾ

ಮೇಲು ಕೀಳಾರಿಲ್ಲ ಜಾತಿಯಾ ಹಂಗಿಲ್ಲ

ಎಲ್ಲರನೂ ಸಮನಾಗಿ ಕಾಣುವಾ…

 

“ಕಾಲೆಳೆದು ಕಾಲೆಳೆದು ಪಡಲು ಸಂತೋಷ”

 

ಪ್ರತಿಕ್ರಿಯೆಗಳು ಬರಹಕ್ಕೇ ಸೀಮಿತವಾಗಿರಲಿ

ಬರೆದಾತ ಯಾರೆಂಬ ಗೋಜಿಲ್ಲದಿರಲಿ

ಎಲ್ಲರಲೂ ಒಂದಾಗಿ ಬೆರೆಯುವಾ…

 

“ಕಾಲೆಳೆದು ಕಾಲೆಳೆದು ಪಡಲು ಸಂತೋಷ”

 

ಕನ್ನಡದ ಭಾಷೆಯನು ಶ್ರೀಮಂತಗೊಳಿಸಿ

ಬೆರೆತಿರುವ ಕಳೆಯನ್ನು ಒಂದಾಗಿ ಅಳಿಸಿ

ಎಲ್ಲರೂ ಒಂದಾಗಿ ಶ್ರಮಿಸುವಾ….

 

“ಕಾಲೆಳೆದು ಕಾಲೆಳೆದು ಪಡಲು ಸಂತೋಷ”

 

ಕನ್ನಡಕೆ ಕನ್ನಡವೇ ಸಾಟಿ ತಾನೆಂದು

ಜಗಕೆಲ್ಲಾ ತೋರಿಸಲು ಪಣತೊಡುವ ಇಂದು

ಕನ್ನಡದ ಕಂಪ ಪಸರಿಸುವಾ…

 

“ಕಾಲೆಳೆದು ಕಾಲೆಳೆದು ಪಡಲು ಸಂತೋಷ”

*****************************