ನಾನು ಸಾಯುವುದಿಲ್ಲ!

07 ಸೆಪ್ಟೆಂ 12

 

ಸಖೀ,

ನೀನು
ಅದೇನು
ನುಡಿದರೂ
ನಾನು
ಸಾಯುವುದಿಲ್ಲ,

ನೀನು
ಅದೇನು
ಮಾಡಿದರೂ
ನಾನು
ಸಾಯುವುದಿಲ್ಲ,

ನೀನಷ್ಟೇ ಅಲ್ಲ
ಇನ್ನಾರು
ಯತ್ನಿಸಿದರೂ
ನಾನು
ಸಾಯುವುದಿಲ್ಲ,

ನನ್ನೊಳಗಿನ
ನಾನು 
ಸಾಯಬೇಕಾದರೆ
ನಾನೇ
ಕೊಲ್ಲಬೇಕು,

ನನ್ನ
ಒಳಗಿನ
ನನ್ನಿಂದ
ನಾನೇ
ದೂರವಾಗಬೇಕು!
**********

 


ಸಾವಿನ ವಾಸನೆ!

01 ಸೆಪ್ಟೆಂ 12

 

ಸಖೀ,
ಇತ್ತೀಚಿನ

ಕೆಲ ದಿನಗಳಿಂದ
ಈ ಅಗರಬತ್ತಿಗಳ
ಸುವಾಸನೆ,

ಅದ್ಯಾಕೋ
ತುಂಬಿತಿಹುದು 
ನನ್ನೊಳಗೆ
ಸಾವಿನ
ವಾಸನೆ!

 


ನನ್ನಿಂದಾಗೇ ಇಷ್ಟೆಲ್ಲಾ ಆಗಿದ್ದು…!

17 ನವೆಂ 10

ಅಂದೂ ಕೂಡ ಎಂದಿನಂತೆ ಮುಂಜಾನೆ ಐದು ಘಂಟೆಗೆ ನನ್ನ ಚರದೂರವಾಣಿಯಲ್ಲಿ ಎಚ್ಚರಿಕೆಯ ಘಂಟೆ ಹೊಡೆದುಕೊಂಡಾಗಲೇ ನಿದ್ದೆಯಿಂದ ಎದ್ದಿದ್ದೆ.

ಎರಡು ಲೋಟ ನೀರನ್ನು ಬಿಸಿಮಾಡಿ ಕುಡಿದು, ಹಲ್ಲುಜ್ಜಿ, ಮುಖ ತೊಳೆದುಕೊಂಡು, ಎಂದಿನಂತೆ ಮುಂಜಾನೆಯ ನಡಿಗೆಗೆ ಹೊರಡುವಾಗ ಸರಿಯಾಗಿ ಐದೂ ಇಪ್ಪತ್ತೈದು.

ಮಾಮೂಲಿನಂತೆ, ದಾರಿಯಲ್ಲಿ ಸಿಕ್ಕ ಪರಿಚಯಸ್ತರಿಗೆ ಮುಗುಳ್ನಗೆ ನೀಡುತ್ತಾ, ನಮಸ್ಕಾರ ಮಾಡುತ್ತಾ, ನಡಿಗೆ ಮುಗಿಸಿ, ಮನೆಗೆ ಬರುವಾಗ ಆರೂವರೆಗಿನ್ನೂ, ಐದು ನಿಮಿಷ ಬಾಕಿ.

ಆ ನಂತರವೂ ಮಾಮೂಲಿನ ದಿನಚರಿಯೇ. “ಗ್ರೀನ್ ಟೀ” ಸೇವನೆ, ಅಂದು ತೊಡುವ ಬಟ್ಟೆಗಳಿಗೆ ಇಸ್ತ್ರಿ, ಮುಖಕ್ಷೌರ, ಸ್ನಾನ, ದೂರದರ್ಶನದ ಕನ್ನಡ ಸುದ್ದಿವಾಹಿನಿಗಳಲ್ಲಿ ಅಂದಿನ ಪ್ರಮುಖ ಸುದ್ದಿಗಳನ್ನು ಕೇಳುತ್ತಾ, ವಿಜಯಕರ್ನಾಟಕದ ಪ್ರಮುಖ ತಲೆಬರಹಗಳನ್ನು ಓದುತ್ತಾ, ತಿಂಡಿ ಮುಗಿಸಿ ಎದ್ದೆ.

ಬಟ್ಟೆ ಧರಿಸಿ, ಇನ್ನೇನು ನನ್ನ “ಹೆಲ್ಮೆಟ್” ಕೈಗೆತ್ತಿಕೊಳ್ಳಬೇಕು ಅನ್ನುವಾಗ ಯಾರೋ ಬಾಗಿಲಾಚೆಯಿಂದ ಕರೆದಂತಾಯ್ತು.

ಬಾಗಿಲು ತೆರೆದರೆ,  ತನ್ನ ಬೆನ್ನ ಹಿಂದೆ ಚೀಲ ನೇತಾಡಿಸಿಕೊಂಡಿದ್ದ, ಓರ್ವ ಸ್ಪುರದ್ರೂಪಿ ಯುವಕ ನಿಂತಿದ್ದ.

“ಯಾರಪ್ಪಾ ಏನ್ ಬೇಕಾಗಿತ್ತು?” ಅಂದೆ,

ಅದಕ್ಕೆ “ಸಾರ್ ನಾನು ವಿಜಯ್ ಕುಮಾರ್ ಅಂತ. ನಿಮ್ ಜೊತೆ ಸ್ವಲ್ಪ ಮಾತಾಡ್ಬೇಕಿತ್ತು… ನೀವು ಈ ಕಂಪನಿಯಲ್ಲಿ ಕೆಲಸ ಮಾಡೋದಲ್ವಾ?”  ಅಂದವನು, ನಾನು ಕೆಲಸ ಮಾಡುವ ಕಂಪನಿಯ ಹೆಸರನ್ನೂ ಹೇಳಿದ.

“ಹೌದು … ಹೌದು ಏನ್ ಕೆಲ್ಸಾ …? ” ಕೇಳಿದೆ.

“ಸರ್  ಒಳಗೆ ಬರಬಹುದಾ?” ಆತ ಕೇಳಿದ.

“ಹೂಂ ಬನ್ನಿ.. ಬನ್ನಿ… ಕೂತ್ಕೊಳ್ಳಿ ಏನ್ ವಿಷಯ..?” ಅಂದೆ.

“ಸಾರ್… ನಂದೊಂದು ಕೆಲಸ ಇದೆ, ನಿಮ್ಮಿಂದ ಸಹಾಯ ಆಗ್ಬೇಕು. ಆಗೋದಿಲ್ಲ ಅಂತ ಅನ್ಬೇಡಿ…” ಅಂದ.

“ಸರಿ ಹೇಳಿ … ಬೇಗ ಹೇಳಿ… ಆದ್ರೆ ಮಾಡೋಣ…ಏನ್ ಕೆಲ್ಸಾ…?”

“ಈ ಪ್ಯಾಕೆಟ್ಟನ್ನು ನಿಮ್ ಆಫೀಸಿನಲ್ಲಿ ರಾಮ್ ಕುಮಾರ್ ಅಂತ ಇದಾರಲ್ವಾ ಅವರಿಗೆ ತಲುಪಿಸ್ಬೇಕು ಸರ್…”

“ಯಾರು ರಾಮ್ ಕುಮಾರ್ ನಂಗೊತ್ತಿಲ್ಲಲ್ವಾ… ಯಾವ ಟೀಂ ನವರು…?”

“ನಿಮಗೆ ಗೊತ್ತಿರೋಕೆ ಸಾಧ್ಯ ಇಲ್ಲಾ ಸಾರ್…ಅವರು ಹೊಸದಾಗಿ ಸೇರಿಕೊಂಡಿರೋರು … ನಾನ್  ಅವರಿಗೆ ಫೋನ್ ಮಾಡ್ತೀನಿ … ಅವರೇ ಬಂದು ತಗೋತಾರೆ ಸಾರ್…” ಅಂದ.

ನಾನು ಜಾಸ್ತಿ ಯೋಚನೆ ಮಾಡಲಿಕ್ಕೇ ಹೋಗದೇ  “…ಸರಿ ಸರಿ.. ಅವ್ರಿಗೆ ಹೇಳಿಬಿಡು ನನ್ನ ಬಳಿಯಿಂದ ತೆಗೆದುಕೊಂಡು ಹೋಗೊದಕ್ಕೆ .” ಅಂತ ಹೇಳಿದವನೇ, ಆ ಪ್ಯಾಕೆಟ್ಟನ್ನು ತೆಗೆದುಕೊಂಡು, ನನ್ನ ಮೋಟಾರ್ ಸೈಕಲ್ ಏರಿ ಹೊರಟುಬಿಟ್ಟೆ.

ಆತ ತನ್ನ ಮೋಟಾರ್ ಸೈಕಲ್ಲಿನತ್ತ ಹೋಗ್ತಾ ಇದ್ದ.

ನಾನು ಎಂದಿನಂತೆ ಕಛೇರಿಯ ಒಳಗೆ ಹೋದವನೇ, ನನ್ನ ಡೆಸ್ಕಿನ ಮೇಲೆ ಆ ಪ್ಯಾಕೆಟ್ಟನ್ನು ಇಟ್ಟು, ನನ್ನ ಲ್ಯಾಪ್‍ಟಾಪ್ ಹೊರತೆಗೆದು ಆನ್ ಮಾಡಿದೆ.

ಅಷ್ಟರಲ್ಲಿ ನನ್ನ ಚರವಾಣಿ ಗಂಟೆ ಬಡಿದುಕೊಳ್ಳತೊಡಗಿತು.

ನೋಡಿದ್ರೆ ನನ್ನ ಹೆಂಡತಿಯ ಕರೆ. “ಏನು?” ಅಂದೆ.

“ಅವರು ಮತ್ತೆ ಬಂದಿದ್ದಾರೆ… ನಿಮ್ಮ ಹತ್ತಿರ ಮಾತಾಡ್ಬೇಕಂತೆ…”

“ಮತ್ತೆ ..? ಮತ್ತೆ ಯಾಕೆ ಮನೆಗೆ ಬಂದ ಆತ …? ಸರಿ… ಕೊಡು ಆತನಿಗೆ…..ಹಲೋ…ಹಲೋ…”

“ಸರ್… ನಾನ್ ವಿಜಯ್ ಕುಮಾರ್ ಸರ್…”

“ಹೂಂ.. ಗೊತ್ತಾಯ್ತು … ಏನ್ ಕೆಲ್ಸ ರಾಮ್ ಕುಮಾರಿಗೆ ಹೇಳಿದ್ರಾ…?” ಅಂದೆ

“ಸರ್… ಆತ ಇಂದು ಕಛೇರಿಗೆ ಬರ್ತಾ ಇಲ್ವಂತೆ… ಒಂದು ಕೆಲ್ಸ ಮಾಡಿ ಸರ್… ನಿಮ್ಮ ಡೆಸ್ಕ್ ಮೇಲೇ ಇಟ್ಟು ಕೊಳ್ಳಿ … ನಾಳೆ ತೆಗೆದುಕೊಳ್ತಾರೆ ಅವರು… ” ಅಂದ

“ಇದು ಸ್ವಲ್ಪ ಜಾಸ್ತಿ ಆಯು ಕಣ್ರೀ… ಏನೋ ಉಪಕಾರ ಮಾಡೋಣ ಅಂತ ನೋಡಿದ್ರೆ…ಇದೊಳ್ಳೇ ತಲೆನೋವು ನನಗೆ…”

“ತಲೆನೋವು ಮಾಡ್ಕೋಬೇಡಿ ಸಾರ್… ನಾನ್ ನಿಮ್ಮ ಮನೆ ಒಳಗೆ ಇದ್ದೇನೆ… ಮನೆಯ ಬಾಗಿಲು ಮುಚ್ಚಿದೆ…ನಿಮ್ ಹೆಂಡತಿ ನನ್ನ ಎದುರು ಸೋಫಾ ಮೇಲೆ ಕೂತಿದ್ದಾರೆ … ನನ್ ಕೈಯಲ್ಲಿ ಗನ್ ಇದೆ…ನಾನ್ ಹೇಳಿದಷ್ಟು ಮಾಡಿ… ನಿಮ್ ಡೆಸ್ಕಿನ ಮೇಲೆ ಇಟ್ಟು … ಜೀವದ ಆಸೆ ಇದ್ರೆ … ಹಾಗೇ ಅರ್ಧ ಘಂಟೆಯಲ್ಲಿ…ಮನೆಗೆ ವಾಪಸ್ ಬಂದು ಬಿಡಿ… ಸರಿಯಾಗಿ ಇನ್ನು ನಲವತ್ತೈದು ನಿಮಿಷಕ್ಕೆ ಅದರಲ್ಲಿರೋ ಬಾಂಬ್  ಬ್ಲಾಸ್ಟ್ ಆಗುತ್ತೆ… ರಿಮೋಟ್ ಕಂಟ್ರೋಲರಿನಿಂದ ಸಿಡಿಸುತ್ತಾರಂತೆ… ನೀವು ವಾಪಸ್ ಬರದಿದ್ರೆ ನೀವೂ ಹೋಗ್ತೀರಿ… ನಂಬಿಕೆ ಬರದಿದ್ರೆ ನಿಮ್ ಹೆಂಡ್ತೀನಾ ಕೇಳಿ… ಮೇಡಮ್ ತಗೋಳ್ಳಿ …ನಿಮ್ ಯಜಮಾನ್ರಿಗೆ ಸ್ವಲ್ಪ ಹೇಳಿ…”

ನನ್ನ ದೇಹವೆಲ್ಲಾ ಕಂಪಿಸುವುದಕ್ಕೆ ಶುರು ಆಯ್ತು

“ಹಲೋ…ಹಲೋ… ಏನೇ ಇದು ..”

“ರೀ… ಹೌದು … ನೀವು ಬೇಗ ವಾಪಾಸ್ ಬಂದ್ ಬಿಡಿ… ಬನ್ನಿ… ನನಗೆ ಭಯ ಆಗ್ತಾ ಇದೆ…ಜಾಸ್ತಿ ಮಾತಾಡಬೇಡಿ… ಆತ ಏನ್ ಬೇಕಾದ್ರೂ ಮಾಡಬಹುದು… ” ಆಕೆ ಅಳುವುದಕ್ಕೆ ಶುರುಮಾಡಿ ಆಗಿತ್ತು.

“ಸರಿ ಬರ್ತೀನಿ ಕಣೇ…ಬರ್ತೀನಿ…”

ಅಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳಲು ಆಗಲಿಲ್ಲ. ಹತ್ತೇ ನಿಮಿಷದಲ್ಲಿ ಸೀದಾ ಮನೆ ಕಡೆ ಹೊರಟೆ. ಮನೆಯನ್ನು ತಲುಪುವಾಗ ಆತ ಹೇಳಿದ ಅವಧಿ ಪೂರ್ತಿ ಆಗುತ್ತಾ ಬಂದಿತ್ತು.

ಮನೆಯ ಬಾಗಿಲು ಮುಚ್ಚಿತ್ತು. ಕರೆಗಂಟೆ ಬಾರಿಸಿದೆ. ಆತನೇ ಬಾಗಿಲು ತೆರೆದ.

“ಸಾರ್… ನನ ಕೆಲ್ಸ ಮುಗೀತು… ಸಾರಿ ಸಾರ್…ನನ್ನ ಅಮ್ಮ ನಿನ್ನೆಯಿಂದ ಇನ್ಯಾರದೋ ಬಂಧಿಯಾಗಿ ನಮ್ಮ ಮನೆಯಲ್ಲಿ ಕೂತಿದ್ದಾರೆ ಸಾರ್… ನನಗೆ ಕೊಟ್ಟಿರುವ ಕೆಲಸ ಮಾಡದೇ ಹೋದರೆ ನನ್ನ ಅಮ್ಮನ ಪ್ರಾಣ ತೆಗೀತಾರೆ…. ನನ್ನ ಕೆಲಸ ಮುಗೀತು… ಈ ಪ್ಯಾಕೆಟಿನಲ್ಲಿ ನಿಮ್ಮ ಪಾಲಿನ ಹಣ ಇದೆ… ಇದನ್ನು ನಿಮಗೆ ಕೊಟ್ಟು ಬರಲು ಹೇಳಿದಾರೆ. ನಾನಿನ್ನು ಬರ್ತೀನಿ … ನಾನು ನನ್ನ ಅಮ್ಮನನ್ನು ಬಿಡಿಸಿಕೊಳ್ಳಬೇಕು …”  ಅಂದವನೇ ಆತನ ಬೈಕ್ ಏರಿ ಹೊರಟೇ ಬಿಟ್ಟಿದ್ದ.

ನನ್ನ ಪತ್ನಿ ಬಿಟ್ಟ ಕಣ್ಣು ಬಿಟ್ಟುಕೊಂಡೇ ಕೂತಿದ್ದಾಳೆ … ಕಣ್ಣೀರು ಧಾರಾಕಾರವಾಗಿ ಹರಿಯುತ್ತಿದೆ….

ನನಗೇನು ಮಾಡಬೇಕೆಂದೇ ತೋಚುತ್ತಿಲ್ಲ…

ಸಮಯ ಮೀರಿ ಹೋಗಿದೆ. ಆ ಬಾಂಬ್ ಈಗಾಗಲೇ ಸಿಡಿದು … ನಮ್ಮ ಕಛೇರಿಯ ಕಟ್ಟಡ ಕುಸಿದು ಹೋಗಿರಬಹುದು…

ಟಿವಿ ಹಾಕಿ ಟಿವಿ೯ನಲ್ಲಿ ಏನು ಬರ್ತಾ ಇದೆ ಅಂತ ನೋಡಿದ್ರೆ…

ಕೆಂಪು ಅಕ್ಷರಗಳಲ್ಲಿ ಬ್ರೇಕಿಂಗ್…ನ್ಯೂಸ್… ಬರ್ತಾ ಇದೆ.

ನಗರದ ಪ್ರತಿಷ್ಟಿತ ಐಟಿ ಕಂಪನಿಯೊಂದರಲ್ಲಿ ಬಾಂಬ್ ಸ್ಫೋಟ….ಬಹುಮಹಡಿ ಕಟ್ಟಡ ಕುಸಿತ … ೫೦ ಕ್ಕೂ ಹೆಚ್ಚು ಸಾವು…

ನಾನು ಸೋಫಾದ ಮೇಲೆ ಕುಕ್ಕರಿಸಿದವನೇ ತಲೆ ಮೇಲೆ ಕೈಹೊತ್ತು…ನನ್ನ ಅಸಹಾಯಕತೆಗಾಗಿ ಮರುಗಿದೆ….

“ನನ್ನಿಂದಾಗೇ ಇಷ್ಟೆಲ್ಲಾ ಆಗಿದ್ದು.. ಎಷ್ಟು ಮಂದಿ ಹೋದ್ರು ಕಣೇ… ಏನೇ ಮಾಡ್ಲೀ ನಾನು…ಅಯ್ಯೋ ದೇವ್ರೆ…”

“ರೀ…ರೀ… ನಿಮ್ ಮೊಬೈಲ್  ಅಲಾರ್ಮ್ ಹೊಡ್ಕೋತಾ ಇದೆ… ಏಳೋಲ್ವಾ… ಇವತ್ತು ವಾಕಿಂಗ್… ಹೋಗೋಲ್ವಾ…?”
*****************


ಮಾನವೀಯತೆಯ ಮೆರೆದು ಪ್ರೀತಿಸುತ್ತಿದ್ದರೆ ನಾವೆಲ್ಲರೂ ಒಂದೇ!

23 ಸೆಪ್ಟೆಂ 10

ಅಯೋಧ್ಯೆ ಎಂಬ ಪುಣ್ಯಭೂಮಿ ಯಾರದ್ದಾಗಿತ್ತು ಎಂಬ ಜಟಿಲ ಪ್ರಶ್ನೆಗೆ
ಲಕ್ನೋ ನ್ಯಾಯಾಲಯ ತೀರ್ಪು ನೀಡಲಿದೆ ಶುಕ್ರವಾರ ಸಂಜೆಯ ಒಳಗೆ

ತೀರ್ಪು ಯಾವ ಪಕ್ಷಕ್ಕೇ ಖುಷಿ ನೀಡಿದರೂ ಸೋಲುವುದು ನಮ್ಮದೇ ನಾಡು
ನಾಯಕರ ಹೇಳಿಕೆಗಳಿಂದ ಕೆಡುತ್ತದೆ ನೋಡಿ ಇನ್ನು ನಾಡಿನ ಜನರ ಪಾಡು

ಮರ್ಯಾದ ಪುರುಷೋತ್ತಮನ ಭಕ್ತರು ಆತನ ಮರ್ಯಾದೆ ಕಾಪಾಡಬೇಕು
ಅಲ್ಲಾಹನಿಗೆ ಪ್ರಿಯವಾದ ನಡತೆ ಆತನನು ಪೂಜಿಸುವವರಲ್ಲಿ ಇದ್ದಿರಬೇಕು

ಪರಿಸ್ಥಿತಿಯು ವಿಕೋಪಕ್ಕೆ ಹೋಗದಂತೆ ಮನಗಳೊಳಗೆ ಅಂಕುಶವಿರಲಿ
ಜನರೇನೇ ಅಂದರೂ ಮನ ಮನಗಳ ನಡುವೆ ಸಾಮರಸ್ಯ ಉಳಿದಿರಲಿ

ನಾಯಕರುಗಳೆಲ್ಲಾ ಇರುತ್ತಾರೆ ಸದಾ ಸುರಕ್ಷಾ ಸಿಬ್ಬಂದಿಯ ರಕ್ಷಣೆಯಲ್ಲಿ
ಬೀದಿಗಿಳಿಯುವ ಜನರ ಪ್ರಾಣವನು ರಕ್ಷಿಸಲು ಬರುವವರಾರೂ ಇಲ್ಲ ಅಲ್ಲಿ

ಯಾರೇ ಗಾಯಗೊಂಡರೂ ಅಲ್ಲಿ ಹರಿಯುವುದು ಭಾರತೀಯನದೇ ನೆತ್ತರು
ಭಾರತಮಾತೆ ಅಳುತ್ತಾಳೆ ಪುತ್ರಶೋಕದಲ್ಲಿ ಅಲ್ಲಿ ಯಾರೇ ಮೃತನಾದರೂ

ನಮ್ಮ ದೇವರನು ಮನದ ಮಂದಿರದಲ್ಲಿ ಸ್ಥಾಪಿಸಿಕೊಂಡು ಪೂಜಿಸುತ್ತಿರೋಣ
ಸಾಧ್ಯವಾದರೆ ಮಾಡುತ್ತಲಿರೋಣ ಭಗವದ್ಗೀತ ಖುರಾನ್ ಬೈಬಲಿನ ಪಠಣ

ಗೀತೆ, ಗುರುಗ್ರಂಥ, ಬೈಬಲ್, ಖುರಾನ್ ಎಲ್ಲವೂ ಸಾರಿ ಹೇಳಿರುವುದೊಂದೇ
ಮಾನವೀಯತೆಯ ಮೆರೆದು ಪರಸ್ಪರರ ಪ್ರೀತಿಸುತ್ತಿದ್ದರೆ ನಾವೆಲ್ಲರೂ ಒಂದೇ!

*********


ಕಾಡುವ ಪ್ರಶ್ನೆಗಳು!

16 ಸೆಪ್ಟೆಂ 10

 

ಪರಿಪಕ್ವವಾದ
ತೊಂಬತ್ತರ
ಇಳಿವಯಸ್ಸಿನಲ್ಲಿ,

ಕಾಯುತ್ತಿದ್ದರೂ
ಯಮರಾಜ
ಮನೆ ಬಾಗಿಲಿನಲ್ಲಿ,

ಅದ್ಯಾವುದೋ
ಅವ್ಯಕ್ತ ಸೆಳೆತಕ್ಕೆ
ಒಳಗಾಗಿ,

ದಿಢೀರನೇ
ಆತ್ಮಹತ್ಯೆಗೆ
ಶರಣಾಗಿ,

ಇಹಲೋಕ
ತ್ಯಜಿಸಿದವರ
ನೆನೆದು ನಾ
ನಿಜದಿ ಏನನ್ನಲಿ?

ತೃಪ್ತನಾಗನು
ಮನುಜ
ಪರಿಪಕ್ವನಾದರೂ,

ಹತ್ತಿಕ್ಕಲಾರ ತನ್ನ
ಆಸೆಗಳ, ಎಲ್ಲವೂ
ಮುಗಿದಿದ್ದರೂ,

ತನ್ನದೇನಿಲ್ಲದಿದ್ದರೂ,
ಎಲ್ಲವೂ ತನ್ನದೇ
ಎಂಬ ಭಾವವಿಹುದು,

ಜವಾಬ್ದಾರನಲ್ಲದೇ
ಇದ್ದರೂ, ಎಲ್ಲದಕೂ
ಮನ ಮರುಗುತಿಹುದು,

ತಾನೆಣಿಸಿದಂತೆ
ತನ್ನವರಿಲ್ಲ ಎಂಬ
ಕೊರಗು ಕಾಡಿರಬಹುದೇ?

ತಾನೆಣಿಸಿದಂತೆ
ತಾನೇ ಬಾಳಿಲ್ಲ ಎಂದಾ
ಆತ್ಮ ತೆರಳಿರಬಹುದೇ?

ಕೆಲವು ಪ್ರಶ್ನೆಗಳು,
ಸದಾ ಪ್ರಶ್ನೆಗಳಾಗೇ
ಉಳಿದು ಬಿಡುವವು,

ನಾವು ಮರೆಯಲು
ಯತ್ನಿಸಿದಷ್ಟೂ ಸದಾ
ನಮ್ಮನ್ನು ಕಾಡುವವು!
***********


ಯಾರು ಹೇಳುವರು ತಾನು ಮುಂಜಾನೆ ಏಳುವೆನೆಂದು?

02 ಆಗಸ್ಟ್ 10

 

ಮುಂಜಾನೆಯೇ ಕರೆಮಾಡಿ ವಿಚಾರಿಸಿದಳು, ದೂರದೂರಿನ ಆ ಅಭಿಮಾನಿ,

“ಯಾಕೆ ಮೊನ್ನೆಯಿಂದ ಏನೂ ಬರೆದೇ ಇಲ್ವಲ್ಲಾ, ನನಗೇನೋ ಗುಮಾನಿ”,

 

“ಛೇ.. ಗುಮಾನಿ ಯಾಕೆ? ಬರೆಯಲಾಗಿಲ್ಲ, ಹಾಗಾಗಿ ನಾನೇನೂ ಬರೆದಿಲ್ಲ ,

ನಿಜ ಹೇಳಬೇಕೆಂದರೆ ವಾರಾಂತ್ಯದಲಿ ನಾನೆಂದೂ ಹೆಚ್ಚಾಗಿ ಬರೆದೇ ಇಲ್ಲ,

 

ಇನ್ನು ಇಂದಿನ ಮಾತೇಕೆ ಹೇಳಿ, ಇಂದು ಇನ್ನೂ ಬಾಕಿಯಿದೆ, ಸಂಜೆಯಾಗಿಲ್ಲ,

ಸಂಜೆಯೊಳಗೆ ಏನಾದರೂ ನಾ ಬರೆದೇನು, ನೋಡಿ ನೀವು ಕಾಯ್ತೀರಲ್ಲಾ?”,

 

“ಹಾಗೇನಿಲ್ಲ, ನಿಮ್ಮ ಕವಿತೆಗಳಿಗೇ ಕಾಯುತ್ತೇನೆಂದು ತಿಳಿದು ಪಡದಿರಿ ಹೆಮ್ಮೆ,

ಸುಮ್ಮನೇ ಅಂತರ್ಜಾಲದಲಿ ಸುತ್ತಾಡುವಾಗ ಕಣ್ಣಾಡಿಸಿದೆ ಆಸುಮನದಲಿ ಒಮ್ಮೆ,

 

ದಿನಕ್ಕೆರಡರಂತೆ ಬರೆಯುವವರು, ಇಂದೇನೂ ಬರೆದಿಲ್ಲ ಎನ್ನುವ ಪ್ರಶ್ನೆ ಮೂಡಿತು,

ಹಾಗೇ ಕರೆಮಾಡಿದೆ, ನಿಮ್ಮ ಯೋಗಕ್ಷೇಮದ ಬಗ್ಗೆ ವಿಚಾರಿಸಿದಂತೆಯೂ ಆಯಿತು”

 

“ನಿಮ್ಮೀ ಅಭಿಮಾನ, ಅದುವೇ ನನ್ನಲ್ಲಿ ಮೂಡಿಸುವುದು ಬಿಗುಮಾನ, ಕೃತಜ್ಞ ನಾನು,

ಏನು ಮಾಡುವಿರೋ, ಒಂದೊಮ್ಮೆ ಯಾರಿಗೂ ಹೇಳದೇ ತೆರಳಿ ಬಿಟ್ಟರೆ ನಾನು?

 

ನಾನಿಲ್ಲದ ದಿನ ಪ್ರಕಟಿಸುವಂತೆ, ಒಂದು ಕವನವ ಬರೆದು ಬಚ್ಚಿಡಲೇ ನಾನು ಇಂದೇ?

ಕಾಯುವ ನನ್ನವರ ಹೆಚ್ಚು ಕಾಯಿಸದಂತೆ ಪ್ರಶ್ನೆಗಳಿಗೆ ಉತ್ತರವ ಕೊಟ್ಟಿಡಲೇ ನಂದೇ?”

 

“ಛೆ…ಛೆ… ಬಿಡ್ತು ಅನ್ನಿ, ಸಾವಿನ ಮಾತೇಕೆ ಆಡುವಿರಿ, ಮನದಲ್ಲಿ ತುಂಬಿದೆಯೇ ವಿರಸ?

ಮನದಲ್ಲಿದ್ದರೆ ಬೇಸರ, ಆ ಬೇಸರವ ಕಳೆಯಲೆಂದೇ ಬರೆದು ಬಿಡಿ ಕವಿತೆ, ತುಂಬಿ ಸರಸ”

 

“ಯಾಕೆ ಹೆದರುವಿರೋ ನೀವೆಲ್ಲಾ ಸಾವಿನಾ ಮಾತಿಂದ, ಸಾವೊಂದೇ ಅಲ್ಲವೇ ಖಾತ್ರಿ?

ಯಾರು ಹೇಳುವರು ಮುಂಜಾನೆ ಏಳುವೆನೆಂದು, ಮಲಗುವ ಮೊದಲು ಪ್ರತೀ ರಾತ್ರಿ?”

*********************************


ನಿತ್ಯ ರೋದನ!

21 ಏಪ್ರಿಲ್ 10

 

ಸತ್ತು ಅಗಲಿದವರಿಗಾಗಿ

ನಾವು ಮರುಗಿ

ಕಣ್ಣೀರಿಡುವುದು

ಬರೀ ಒಂದೆರಡು ದಿನ,

 

ಆದರೆ,

ಎಲ್ಲಾ ಸಂಬಂಧಗಳ

ಮುರಿದುಕೊಂಡು

ನಮ್ಮ ನಡುವೆ ಇದ್ದೂ

ಸತ್ತಂತೆ ಇರುವ ನಮ್ಮ 

ಕೆಲವು ಬಂಧುಗಳಿಗಾಗಿ

ಅದ್ಯಾಕೋ ನಿತ್ಯ ರೋದನ! 

*****

 


ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ?

19 ಮಾರ್ಚ್ 10

 

ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ

ದುಃಖವನು ನಾನರಿತರೂ ಹೇಗೆ ಹಂಚಿಕೊಳ್ಳಲಿ

 

ಅವರಿಗೆ ಅಲ್ಲಾದ ನಷ್ಟವನು ಅವರಷ್ಟೇ ಅರಿವರು

ನಮ್ಮ ನುಡಿಗಳಿಂದ ಆ ನೋವನೆಂತು ಮರೆವರು

 

ಆತ್ಮವಿಲ್ಲದ ದೇಹಕ್ಕೆ ಎಲ್ಲಾ ಮಂದಿ ನಮಿಸುವರು

ದೇಹಕ್ಕೆ ನಮಿಸಿದರೆ ಅಲ್ಲಿ ಇದ್ದವರಷ್ಟೇ ಅರಿವರು

 

ಶವ ಯಾರದ್ದೇ ಆದರೂ ಮನವ ಕರಗಿಸುವುದು

ನಮ್ಮಂತ್ಯದ ಚಿತ್ರವನು ಮನದಿ ಬಿಂಬಿಸುವುದು

 

ಆ ಅರೆಗಳಿಗೆ ಮನಸ್ಸು ಮುದುಡುವುದಷ್ಟೇ ನಿಜ

ಮತ್ತಿತ್ತ ಬಂದರೆ ಮರೆತು ಹೋಗುವುದೆಲ್ಲ ಸಹಜ

 

ಆ ಚಿತ್ರಗುಪ್ತನಿಗೆ ಈ ಸಾವುಗಳೆಲ್ಲ ಯಾವ ಲೆಕ್ಕ

ಆತನಿಗೋ ಈ ಹುಟ್ಟು ಸಾವುಗಳೆಲ್ಲ ಬರಿಯ ಲೆಕ್ಕ

 

ನಮ್ಮದೀ ಜೀವನದಿ ನಮ್ಮದೆಂದು ಏನಿಲ್ಲ ಪಕ್ಕಾ

ಶೂನ್ಯವನೇ ಸೇರುವುದೀ ಕೂಡು ಕಳೆಯುವ ಲೆಕ್ಕ

*****

 

 “ನನ್ನ ಸಹೋದ್ಯೋಗಿಯೋರ್ವರ ತಾಯಿ ನಿನ್ನೆ ರಾತ್ರಿ ಸ್ವರ್ಗಸ್ಥರಾದರು.

ಇಂದು ಮುಂಜಾನೆ ಅಂತಿಮ ದರ್ಶನ ಪಡೆದು ಹಿಂತಿರುಗಿದಾಗ

ಆಸುಮನದಲ್ಲಿ ಮೂಡಿದ ಭಾವನೆಗಳು ಅಕ್ಷರರೂಪ ಪಡೆದದ್ದು ಹೀಗೆ”


ಜರ್ದಾರಿ-ಒಬಾಮಾ ಸಂವಾದ…!!!

28 ಏಪ್ರಿಲ್ 09
ಜರ್ದಾರಿ: ಒಸಾಮ-ಬಿನ್-ಲಾಡೆನ್ ಜೀವಂತವಾಗಿಲ್ಲ.
ಒಬಾಮಾ: ನಾವು ಇದನ್ನು ನಂಬೋಲ್ಲ.
 
ಜರ್ದಾರಿ: ನಿಜವಾಗಿಯೂ ಆತ ಜೀವಂತವಾಗಿಲ್ಲ.
ಒಬಾಮಾ: ನಿಜವಾಗಿಯೂ ನಾವು ಇದನ್ನು ನಂಬೋಲ್ಲ.
 
ಜರ್ದಾರಿ: ಒಸಾಮ ಸತ್ತು ತಿಂಗಳುಗಳೇ ಆಗಿವೆ.
ಒಬಾಮಾ: ಒಸಾಮ ಸತ್ತ ಸುದ್ದಿ ನಮಗೆ ದೊರೆತೇ ಇಲ್ಲ.
 
ಜರ್ದಾರಿ: ಒಸಮಾ ಸಾವಿನ ಸುದ್ದಿ ನಿಜಕ್ಕೂ ನಂಬಲರ್ಹ.
ಒಬಾಮಾ: ನೀವ್ಯಾರೂ ನಂಬಲರ್ಹರಲ್ಲ, ಆ ಸುದ್ದಿಯೂ ಕೂಡ.
 
ಜರ್ದಾರಿ: ನಮ್ಮನ್ನು ನಂಬಬೇಡಿ, ಆದರೆ ಈ ಸುದ್ದಿಯ ಮೂಲವನ್ನಾದರೂ ನಂಬಿ.
ಒಬಾಮಾ: ಹೇಗೆ ನಂಬಬಹುದು ಆ ಸುದ್ದಿಯ ಮೂಲದ ಬಗ್ಗೆ ನಮಗೆ ಗೊತ್ತೇ ಇಲ್ಲ.
 
ಜರ್ದಾರಿ: ನಮಗೆ ಗೊತ್ತಿದೆ ಆ ನಂಬಲರ್ಹ ಮೂಲ ಯಾವುದೆಂದು. ದಯವಿಟ್ಟು ನಂಬಿ.
ಒಬಾಮಾ: ಹೇಗೆ ನಂಬಬಹುದು ಸ್ವಾಮೀ, ಯಾವುದದು ಅಷ್ಟು ನಂಬಿಕೆಯ ಮೂಲ?
 
ಜರ್ದಾರಿ: ಹೀಗೆಯೇ ಬನ್ನಿ, ಅಲ್ಲಿ ಒಳಕೋಣೆಯಲ್ಲಿ ಇದ್ದಾನೆ, ಈ ಸುದ್ದಿಯ ನಂಬಲರ್ಹ ಮೂಲ.
ಒಬಾಮಾ: ಯಾರವನು ನಿಮ್ಮ ಒಳಕೋಣೆಯಲ್ಲಿ ಕುಳಿತಿರುವವನು, ಅಷ್ಟು ನಂಬಿಕೆಯ ವ್ಯಕ್ತಿ?
 
ಜರ್ದಾರಿ: ನೀವು ಅವನ ಮಾತನ್ನಲ್ಲದೆ ಇನ್ಯಾರ ಮಾತನ್ನೂ ನಂಬೋಲ್ಲ ಅಂತ ಗೊತ್ತು. ಹೋಗಿ ಅಲ್ಲಿದ್ದಾನೆ ನೋಡಿ ಒಸಾಮಾ-ಬಿನ್-ಲಾಡೆನ್. ಅವನೇ ಹೇಳ್ಸಿರೋದು ನನ್ನಿಂದ ಇದನ್ನೆಲ್ಲಾ…
🙂

ಬಾರದೇಕೆ ಸಾವು!!!

10 ಏಪ್ರಿಲ್ 09

ಸಖೀ,
ಸಾವರಿಸಿಕೊಳ್ಳಬಹುದಾದರೂ ಬಾಳ
ಹಾದಿಯಲಿ ಮುಗ್ಗರಿಸಿ ಬಿದ್ದು ಎದ್ದು
ಸಹಿಸಲಾಗದು ನಮ್ಮವರಿಂದಲೇ ನಮಗೆ
ಸದಾ ಸಿಗುವ ಈ ಮುಸುಕಿನೊಳಗಿನ ಗುದ್ದು

ಇದು ಅತ್ತ ಉಗಿಯಲಾಗದೆ, ಇತ್ತ ನುಂಗಲಾಗದೆ
ನಮ್ಮ ಬಾಯೊಳಗಿದ್ದು ಸುಡುವ ಬಿಸಿ ತುಪ್ಪದಂತೆ
ನಮ್ಮನ್ನು ಒಳಗೊಳಗೆ ಕೊರಗಿಸುತಾ ಕ್ಷೀಣಿಸುತಾ
ಸದಾ ಕಾಲ ನಡೆವ ಒಂದು ಶೀತಲ ಯುದ್ಧದಂತೆ

ಸಾಕು ಸಾಕೆನಿಸುತಿದೆ ಈ ಮಾನಸಿಕ ಚಿತ್ರಹಿಂಸೆ
ಅನವರತ ನನ್ನೀ ಮನಕೆ ನೀಡುತಿರುವ ನೋವು
ಬರಬಾರದೇಕೆನಿಸುತಿದೆ ನನಗೆ ಈ ನೋವನ್ನೆಲ್ಲಾ
ಒಮ್ಮೆಗೇ ನುಂಗಿಬಿಡುವಂತೆ ಈಗಲೇ ನನ್ನ ಸಾವು

ಪ್ರಬುದ್ಧನಾಗಿರಿಸದೇ ಆ ದೇವರು, ಮೂರ್ಖರ
ನಡುವೆ ನನ್ನನ್ನೂ ಮೂರ್ಖನನ್ನಾಗಿರಿಸಬೇಕಿತ್ತು
ಎಲ್ಲರೊಂದಿಗೂ ಸ್ಪಂದಿಸುವ ಹೃದಯದ ಬದಲು
ಎನ್ನ ಈ ಎದೆಯೊಳಗೊಂದು ಕಲ್ಲನಿರಿಸಬೇಕಿತ್ತು

ಎಂತೆಂತವರನ್ನೆಲ್ಲಾ ಬೇಕೆಂದಾಗ ಕಾರಣ ನೀಡದೇ
ದೇವರು ತನ್ನಲ್ಲಿಗೆ ಮರಳಿ ಕರೆಸಿಕೊಳ್ಳುವಂತೆ
ನನ್ನ ಬಾಲ್ಯದ ಆ ಕೆಟ್ಟ ಖಾಯಿಲೆಯ ನೆಪದಲ್ಲಿ
ನನ್ನನ್ನೂ ತನ್ನಲ್ಲಿಗೆ ಒಯ್ದಿದ್ದರೆ ಏನಾಗುತ್ತಿತ್ತಂತೆ
*-*-*-*-*-*-*-*-*-*-*-*-*-*-*-*