ಹೊಂದಾಣಿಕೆ ಎಂದರೆ…!!!

22 ಸೆಪ್ಟೆಂ 09

 

ಸಖೀ,

ಹೊಂದಾಣಿಕೆ ಎಂದರೆ ಬರೀ ಮಾತುಗಳಿಗೆ ಸಮ್ಮತಿ ನೀಡುವುದಲ್ಲ

ಮಾತುಗಳ ಉದ್ದೇಶಗಳನ್ನು ಅರ್ಥೈಸಿಕೊಂಡು ಸಮ್ಮತಿಸುವುದು

 

ಹೊಂದಾಣಿಕೆ ಎಂದರೆ ಪರಸ್ಪರರನ್ನು ಪ್ರಶ್ನಿಸದೇ ಇದ್ದು ಬಿಡುವುದಲ್ಲ

ಪ್ರಶ್ನೆಗಳಿಗೆ ದೊರೆವ ಉತ್ತರಗಳನ್ನು ಅರ್ಥೈಸಿಕೊಂಡು ಒಪ್ಪುವುದು

 

ಹೊಂದಾಣಿಕೆ ಎಂದರೆ ಕೋಪವನ್ನು ಬಚ್ಚಿಟ್ಟುಕೊಂಡು ಇರುವುದಲ್ಲ

ಕೋಪ ಬಾರದ ರೀತಿಯಲ್ಲಿ ಪರಿಹಾರವನ್ನು ಕಂಡು ಕೊಳ್ಳುವುದು

 

ಹೊಂದಾಣಿಕೆ ಎಂದರೆ ತಪ್ಪುಗಳನ್ನು ವಿಮರ್ಶೆ ಮಾಡದಿರುವುದಲ್ಲ

ತಪ್ಪುಗಳೇನಿದ್ದರೂ  ಮನಸ್ಸಿಗೆ ಮುದವಾಗುವಂತೆ ಒಪ್ಪಿಸುವುದು

 

ಹೊಂದಾಣಿಕೆ ಎಂದರೆ ಯಾವಾಗಲೂ  ಮೌನವಾಗಿದ್ದು ಬಿಡುವುದಲ್ಲ

ಮಾತುಗಳನ್ನು ಎಲ್ಲೆ ಮೀರಿ ಹೋಗದಂತೆ ಕಾಪಾಡಿಕೊಳ್ಳುವುದು

 

ಹೊಂದಾಣಿಕೆ ಎಂದರೆ ಯಾವಾಗಲೂ ನಗು ನಗುತ್ತಲೇ ಇರುವುದಲ್ಲ

ನೋವು ನಲಿವುಗಳೆರಡರಲ್ಲೂ ಸದಾ ಸಹಭಾಗಿಗಳಾಗಿ ಇರುವುದು

 

ಹೊಂದಾಣಿಕೆ ಎಂದರೆ ಜನರೆದುರು ಹೇಗೆ ವರ್ತಿಸುತ್ತೇವೆಂಬುದಲ್ಲ

ಏಕಾಂತದಲ್ಲಿ ಪರಸ್ಪರರ ಜೊತೆಗೆ ಹೇಗೆ ವರ್ತಿಸುತ್ತೇವೆ ಎಂಬುದು


ಹೊಸದನ್ನು ಹುಟ್ಟುಹಾಕುವ ಇಚ್ಛಾಶಕ್ತಿ ನಮ್ಮಲ್ಲಿಲ್ಲ!!!

08 ಮೇ 09
 

 

ಹೊಸದನ್ನು ಹುಟ್ಟು ಹಾಕುವ ಶಕ್ತಿ-ಯುಕ್ತಿ-ಇಚ್ಚಾಶಕ್ತಿ ನಮ್ಮಲ್ಲಿಲ್ಲ
ಅದಕ್ಕೇ ಹಳೆಯದನ್ನು ಕೆಡವದೇ ಉಳಿಸಿ ಎನ್ನುತಿರುವೆವೆಲ್ಲಾ
 
ಕೆಟ್ಟಿದೆ ಕಾಲ ಈಗ ಹೊಸದು ಅಷ್ಟು ಬೇಗ ಹುಟ್ಟುವುದೇ ಇಲ್ಲ
ಹುಟ್ಟಿದರೂ ಬೆಳೆದು ಮರವಾಗಲು ಅದಕೆ ನೀರೇ ಸಿಗುವುದಿಲ್ಲ
 
ಗಿಡಗಳನ್ನು ಪೋಷಿಸಿ ಮರಗಳನಾಗಿಸುವುದಕೆ ನಮಗೆಲ್ಲಿ ಸಮಯ
ಅದಕೇ ಹಳೆಯ ಮರಗಳನ್ನು ಅಪ್ಪಿಕೊಂಡು ನೀಡುತ್ತೇವೆ ಅಭಯ
 
ನಾವು ಎಲ್ಲದಕ್ಕೂ ರಸ್ತೆಗಿಳಿದು ಮಾಡುತ್ತೇವೆ ಪ್ರತಿಭಟನೆ ಚಳುವಳಿ
ವಿರೋಧಿಸುವ ಹಕ್ಕಷ್ಟೇ ನಮ್ಮ ಮಕ್ಕಳಿಗೆ ನಮ್ಮಿಂದ ಸಿಗೋ ಬಳುವಳಿ
 
ನನ್ನಪ್ಪಯ್ಯನವರ ಮಾತು ಎಲ್ಲಾ ದಾನಕ್ಕೂ ದೊಡ್ದದು ಸಮ್ಮತಿ ದಾನ
ಒಳ್ಳೆಯ ಕಾರ್ಯಗಳಿಗೆ ಯಾವಾಗಲೂ ವ್ಯಕ್ತಪಡಿಸಬೇಕು ಸಮಾಧಾನ