ಇರಬೇಕಲ್ಲವೇ ನಾನಾಗ?

20 ಮೇ 09
ಸಖೀ,
ಹೀಗಾಗಬೇಕಿತ್ತು, ಆಗಿದೆ ಅಷ್ಟೆ,
ಆಗಬಾರದ್ದೇನೂ ಆಗಿಲ್ಲವಷ್ಟೆ?
ಮೇಲಕ್ಕೇರಿದವರು ಕೆಳಗಿಳಿಯಲೇ ಬೇಕು,
ಇದು ಲೋಕ ನಿಯಮ;
ಆದರೇನು ಮಾಡೋಣ, ಇದ ಅರಿಯುವಷ್ಟು
ನಮಗಿಲ್ಲ ಸಂಯಮ.
ಅಂದು ನನ್ನ ಪ್ರತಿಯೊಂದು ಮಾತಿಗೂ
ಹೊಸ ಹೊಸ ಅರ್ಥವ ನೀಡಿ,
ನನ್ನನ್ನೇ ನಿನ್ನ ಪಾಲಿನ ದೇವರೆಂದು
ಮೇಲಕ್ಕೇರಿಸಿದೆ ನೀನು,
ಇಂದು ನನ್ನ ಮಾತುಗಳ ಹಿಂದಡಗಿರುವ
ನನ್ನ ಭಾವನೆಗಳ, ಆಶಯಗಳ
ನಿನ್ನಿಂದ ಅರಿಯಲಾಗದೆ,
ಆ ಮಾತುಗಳೆಲ್ಲಾ ಅಪಾರ್ಥಗೊಂಡಾಗ,
ಒಮ್ಮೆಲೇ ನಿನ್ನ ದೃಷ್ಟಿಯಿಂದ ನನ್ನ
ಕೆಳಗಿಳಿಸಿದೆ ನೀನು.
ಅಂದು ನಾನೇ ನೀನಾಗಿ, ನೀನೇ ನಾನಾಗಿದ್ದಾಗ,
ದಿನವೂ ಬರೇ ನನ್ನ ಜೊತೆಗಿನ ಆ ಮಧುರ
ಕ್ಷಣಗಳಿಗಾಗಿ ನನ್ನ ದಾರಿ ಕಾಯುತ್ತಿದ್ದವಳು ನೀನು,
ಇಂದು ನನ್ನ ನಿಜರೂಪದ ಹಿಂದೆ
ಇನ್ನೊಂದು ರೂಪ ಅಡಗಿದೆ ಎಂಬ
ಭ್ರಮೆಯಿಂದ ಅಸಹ್ಯಗೊಂಡು,
ನನ್ನಿಂದ ಆದಷ್ಟು ದೂರವಿರಲು
ಬಯಸುತಿರುವೆ ನೀನು.
ನನ್ನಲ್ಲಿ ಯಾವ ಸಬೂಬುಗಳೂ ಇಲ್ಲ ಸಖೀ,
ನನ್ನ ಒಳಗು ಹೊರಗುಗಳನ್ನೆಲ್ಲಾ ಸಂಪೂರ್ಣ
ಅರಿತಿರುವ ನಿನಗೆ ಇನ್ನು ಹೇಳಲೇನೂ ಉಳಿದಿಲ್ಲ.
ನಿಜ ಹೇಳಲೇ ಸಖೀ,
ಇನ್ನು ನನ್ನ ಬಾಳಲೇನೂ ಉಳಿದೇ ಇಲ್ಲ.
ಆದರೂ ಕಳೆಯಲಾಗದು ಈ ಜೀವವನು,
ಹೋಗಲಾರದು ದೂರ ತೊರೆದು ನಿನ್ನನು.
ನಿನ್ನ ಮನವ ಮುಸುಕಿರುವ ಈ ಭ್ರಮೆಯ ಮೋಡ
ಮರೆಯಾದಾಗ, ನಾಳೆ ನನಗಾಗಿ ಹುಡುಕಾಡಿ,
ಎಲ್ಲಿರುವೆ, ಓ ಗೆಳೆಯಾ ಎಂದು, ನೊಂದು
ನೀ ಕರೆವಾಗ, ಓ ಗೊಡಲು, ಇರಬೇಕಲ್ಲವೇ
ನಿನ್ನ ಇದಿರಲ್ಲೇ ನಾನಾಗ?!
*-*-*-*-*-*-*-*-*-*