ಸುಳ್ಳಿನ ವ್ರತ!

01 ಸೆಪ್ಟೆಂ 12

ಸಖೀ,
ಸುಳ್ಳಿನ ಬದುಕನ್ನು
ಸಾಗಿಸುತ್ತಾ,
ಕಪಟದಿಂದಲೇ
ಅನ್ಯರ ಮೇಲೆ
ಸವಾರಿ ಮಾಡುತ್ತಾ,
ಜೀವನ ಸಾಗಿಸುವವರ
ಮನೆಯಲ್ಲಿ ನೋಡಿದರೆ,
ವರುಷ ವರುಷವೂ
ನಡೆಯುತ್ತಿರುವುದು
ಸತ್ಯ ನಾರಾಯಣ ವ್ರತ!


ತಿರುಚಲಾಗದು!

01 ಸೆಪ್ಟೆಂ 12

ಸಖೀ,
ಅದೆಷ್ಟೋ ಬಾರಿ,

ಯಾರು ಯಾರಿಂದಲೋ
ತಿರುಚಲ್ಪಟ್ಟರೂ,
ಸತ್ಯವೆನ್ನುವುದು
ಸದಾ ಸತ್ಯವಾಗಿಯೇ
ಉಳಿಯುತ್ತದೆ.
ಸತ್ಯ ಎಳ್ಳಷ್ಟೂ
ಸುಳ್ಳೆನಿಸುವುದಿಲ್ಲ.
ಸತ್ಯ ಎಂದಾದರೂ,
ಕಿಂಚಿತ್ತಾದರೂ
ಸುಳ್ಳೆನಿಸುತ್ತದಾದರೆ,
ಮೂಲತಃ
ಅದು ಸತ್ಯವೇ ಅಲ್ಲ!


ಸ್ವಪ್ನ ಲೋಕದಲ್ಲೂ ಒಂಟಿ!

22 ಏಪ್ರಿಲ್ 12

ತಪ್ಪು ಒಪ್ಪುಗಳ ವಿಮರ್ಶೆಯಲ್ಲಿ ಜೀವನವೇ ಸವೆದುಹೋಯ್ತು
ತಪ್ಪಾದಾಗಲೂ ಒಪ್ಪಿಸಿಕೊಂಡು ಹೊಂದಾಣಿಕೆ ನಡೆಸಿದ್ದಾಯ್ತು

ಗಾಯಗೊಂಡ ಅಂಗಗಳಿಗೆ ಮುಲಾಮು ಹಚ್ಚಿ ನೋಡಿದ್ದಾಯ್ತು
ಕಳಚಿದ ಅಂಗಗಳು ದೇಹದ ಅಸ್ಥಿತ್ವವನ್ನೇ ಅಲುಗಿಸಿದಂತಾಯ್ತು

ದೇಹವಿದೆ, ಬರಿಯ ಉಸಿರಿದೆ, ಕೆಚ್ಚು, ಹುಮ್ಮಸ್ಸೆಲ್ಲಾ ನಾಶವಾಯ್ತು
ಯಾರೋ ಹಿರಿಯರು ತನ್ನೆಡೆಗೆ ಕರೆಯುತಿರುವಂತೆ ಭಾಸವಾಯ್ತು

ಕರೆದವರ ಸೇರುವ ಯತ್ನದಲ್ಲಿ ಇತ್ತಲಿನ ಸಂಪರ್ಕ ಕಡಿದುಹೋಯ್ತು
ದಾರಿಯದ್ದಕ್ಕೂ ಒಮ್ಮೆಗೇ ಕತ್ತಲು ಕವಿದು ತಲೆ ಸುತ್ತಿ ಬಂದಂತಾಯ್ತು

ಸಾವರಿಸಿಕೊಂಡೆದ್ದು ಕಣ್ಣು ಹಾಯಿಸಿದಾಗ ಒಂಟಿತನದನುಭವವಾಯ್ತು
ರಾತ್ರಿ ಬೆಳಗಾಗುವುದರೊಳಗೆ ಲೋಕವೆಲ್ಲಾ ಸುತ್ತಾಟವಾದಂತಾಯ್ತು

ಕನಸು ಸತ್ಯದ ಮಾತಲ್ಲವಾದರೂ ಈ ಮನವನ್ನು ಕಲಕಿ ಇಟ್ಟಂತಾಯ್ತು
ಎಚ್ಚರಿಸಿದೆ ನನ್ನನ್ನು ಸ್ವಪ್ನ ಲೋಕದಲ್ಲೂ ನಾನು ಒಂಟಿ ಎಂಬ ಮಾತು!!
**************************************


ಆದರೂ ಪರವಾಗಿಲ್ಲ…

28 ಜುಲೈ 10

 

ಸತ್ಯವನ್ನಾಡಿ

ನೀನೆನ್ನ

ನೋಯಿಸಿದರೂ

ಪರವಾಗಿಲ್ಲ,

 

ಸುಳ್ಳು

ಮಾತುಗಳಿಂದ

ರಮಿಸದಿರು

ಸಖಿ!

 

ನನ್ನ

ಮಾತುಗಳ

ನೀ ಸುಳ್ಳೆಂದರೂ

ಪರವಾಗಿಲ್ಲ,

 

ಅನ್ಯರನು ನಂಬಿ

ನೀನು ಮೋಸ

ಹೋಗದಿರು

ಸಖಿ!

 

ನನ್ನ ನೋವಿಗೆ

ನೀನು

ಮರುಗದಿದ್ದರೂ

ಪರವಾಗಿಲ್ಲ,

 

ನಿನ್ನ ಮನದ

ನೋವುಗಳ ನನ್ನಿಂದ

ಮುಚ್ಚಿಡದಿರು

ಸಖಿ!

********


ಕಷ್ಟ ಬರಬಹುದೆಂದು ಸತ್ಯ ನನಗನಿಷ್ಟವೆಂದೆನ್ನಲೇ

29 ಏಪ್ರಿಲ್ 10

 

 

ಕ್ಷಮೆಯೊಂದೇ ಧರೆಯೊಳಗೇ ಪರಮವೆಂದು ಅಂದರೇ ಎಲ್ಲ

ಕ್ಷಮೆಯನ್ನು ಯಾಚಿಸದವನಿಗೆ ಧರೆಯೊಳಗೆ ಕ್ಷಮೆಯೇ ಸಲ್ಲ

 

ತಪ್ಪನ್ನು ತಪ್ಪೆಂದರುಹದೊಡೆ ಆ ತಪ್ಪನ್ನು ನಾಮಾಡಿದಂತೆ

ಬಾಯ ತೆರೆಯದಿದ್ದೊಡೆ ಅನಾಹುತಕ್ಕೆ ನಾ ಕಾರಣನಾದಂತೆ

 

ದುರ್ಜನರ ಸಹವಾಸವದು ಹಾವಿನೊಂದಿಗಿನ ಸರಸದಂತೆ

ಯಾವಾಗ ಎಲ್ಲಿ ಕಡಿಯುವುದೇನೋ ನಮಗೇ ಅರಿಯದಂತೆ

 

ಸಂಬಂಧಗಳ ನೆಪದಲ್ಲಿ ಆತ್ಮ ವಂಚನೆ ಮಾಡಿಕೊಳ್ಳಲೇಕೆ

ಎಲ್ಲರ ಮೇಲೆಳೆದುಕೊಂಡು ಮೈಯೆಲ್ಲಾ ಪರಚಿಕೊಳ್ಳಲೇಕೆ

 

ಅವರಿವರನ್ನು ಮೆಚ್ಚಿಸುತ್ತಾ ಬಾಳಲಾಗದು ಜೀವನದುದ್ದಕ್ಕೂ

ದೇವರು ಮೆಚ್ಚದಿದ್ದರೆ ಈ ಆತ್ಮಕ್ಕೆ ಗೋಳೇ ಬಾಳಿನುದ್ದಕ್ಕೂ

 

ಜನರು ಮೂರ್ಖರು ಅವರ ದೇವರೇ ಕ್ಷಮಿಸಲಿ ಎಂದೆನ್ನಲೇಕೆ

ತನ್ನತನವನೇ ಮರೆತು ನಪುಂಸಕನಾಗಿ ನಾನಿಲ್ಲಿ ಬಾಳಲೇಕೆ

 

ನನಗೆ ಕಷ್ಟ ಬರಬಹುದೆಂದು ಸತ್ಯ ನನಗೆ ಅನಿಷ್ಟವೆಂದೆನ್ನಲೇ

ಅಸತ್ಯವನೇ ಮೆರೆದು ದೇವನಿಗೇ ಇಷ್ಟವಿಲ್ಲದವನಂತಾಗಲೇ

************************************


ನಿತ್ಯಾನಂದನ ಮಾತಿನಲ್ಲೂ ಇದೆಯಂತೆ ಸತ್ಯ!?

15 ಮಾರ್ಚ್ 10

 

“ಬ್ರಹ್ಮಚರ್ಯ ಎನ್ನುವುದು ವಾಸ್ತವಿಕ ಮಿಥ್ಯ

ನಿತ್ಯಾನಂದನ ಮಾತಿನಲ್ಲೂ ಇದೆ ಸ್ವಲ್ಪ ಸತ್ಯ” 

 

ಹೀಗೆಂದು ವಾದಿಸುವ ಬಂಧುಗಳಿಗೆ ಕಿವಿಯಾದೆ

ಸ್ವಾಮಿಯನು ಬೆಂಬಲಿಸುತಿರುವುದಕೆ ದಂಗಾದೆ 

 

ಬ್ರಹ್ಮಚರ್ಯ ಕಡ್ಡಾಯ ಅಲ್ಲ ಅನ್ನುವುದೂ ಸರಿ

ಆದರೆ ನಿತ್ಯಾನಂದ ಆಗಲೇ ಬೇಕಿತ್ತೆ ವ್ಯಭಿಚಾರಿ 

 

ಬ್ರಹ್ಮಚಾರಿಯಾಗಿ ಇರಲಾಗದವನು ಆಗಲಿ ಗೃಹಸ್ಥ

ಕಂಡೆಲ್ಲ ಹೆಣ್ಣುಗಳ ಮೇಲೆ ಹರಿಯ ಬಿಡಲೇಕೆ ಚಿತ್ತ 

 

ವ್ಯಕ್ತಿ ಹೀಗೆಯೇ ಇರಬೇಕೆಂದು ಹೇಳುವುದಿಲ್ಲ ಜನ

ನುಡಿಯಂತೆ ನಡೆಯನ್ನು ನಿರೀಕ್ಷಿಸುವುದು ಅವರ ಮನ 

 

ಆದರಣೀಯನಾದರೆ ಆದರ್ಶಪ್ರಾಯನೂ ಆಗಿರಬೇಕು

ಸದಾ ತೆರೆದ ಪುಸ್ತಕದಂತೆ ಆತನ ಜೀವನ ಇರಬೇಕು 

 

ಮನೆಗೆ ಕನ್ನ ಹಾಕಿದರೊಮ್ಮೆ ಮನಸ್ಸು ಕ್ಷಮಿಸಬಹುದು

ನಂಬಿಕೆ ದ್ರೋಹ ಮಾಡಿದವನನ್ನು ಎಂದಿಗೂ ಕ್ಷಮಿಸದು

*********