ಗೊತ್ತಾಯ್ತೇನೇ…?

21 ಫೆಬ್ರ 11

 

ಸಖೀ,
ಹೌದು, ಬಹಳವಾಯ್ತು
ನನ್ನ ತುಂಟಾಟ,
ನಿನಗೋ ಸದಾ
ನನ್ನಿಂದ ಪೇಚಾಟ,
ಹೊತ್ತಲ್ಲದ ಹೊತ್ತಿನಲಿ
ಕಾಡುತಿಹೆ ನಾ ನಿನ್ನ
ಅದು ನನಗೆ ಗೊತ್ತು,
ಅದಕ್ಕೇ ಹೇಳುತ್ತಿದ್ದೇನೆ
ನಾನೇ ಬಾಯ್ಬಿಟ್ಟು
ಕೇಳು ನೀನೀ ಹೊತ್ತು;
ನಾನಿನ್ನು ಸಂದೇಶಗಳನು
ರವಾನಿಸುವುದಿಲ್ಲ,
ನಾನಿನ್ನು ನಿನಗೆ
ಕರೆ ಮಾಡುವುದಿಲ್ಲ,
ನಾನಿನ್ನು ನಿನಗುಪದ್ರವ
ಕೊಡುವುದೇ ಇಲ್ಲ,
ನಾನಿನ್ನು ನಿನ್ನ ನೆನಪು
ಮಾಡುವುದೇ ಇಲ್ಲ,
ನಾನಿನ್ನು ನಿನ್ನನ್ನು
ಪ್ರೀತಿಸುವುದೇ ಇಲ್ಲ,
ಅಂತೆಲ್ಲಾ
ಹೇಳಬೇಕೆನಿಸಿದರೂ,
ಅದನ್ನೆಲ್ಲಾ ನನ್ನಿಂದ
ಹೇಳಲಾಗುವುದೇ ಇಲ್ಲ,
ಗೊತ್ತಾಯ್ತೇನೇ?
**********


ನಾವು ಎಂಬ ಭಾವ ಮೂಡಿಸುವ ಸಂದೇಶಗಳು…

20 ಆಕ್ಟೋ 10

ನಾನು,
ನನ್ನವರು
ಎಂದುಕೊಂಡ
ಅಷ್ಟೂ ಮಂದಿಗೆ,
ಪ್ರತಿ ದಿನ
ಶುಭೋದಯದ,
ಶುಭರಾತ್ರಿಯ,
ಪುಟ್ಟ ಪುಟ್ಟ
ಸಂದೇಶಗಳನ್ನು
ರವಾನಿಸಿದರಷ್ಟೇ
ನನಗೆ ನೆಮ್ಮದಿ;

ಆ ಅಷ್ಟೂ
ಮಂದಿಯ
ಮೊಗಗಳಲ್ಲಿ
ಹುಸಿಯಾದರೂ
ಒಂದು ನಗು
ಮೂಡಿಸಿದ,
ಜೊತೆಗೇ
ಅವರಿಗೆಲ್ಲಾ
ನನ್ನ ನೆನಪು
ಮಾಡಿಸಿದ
ಸಂತೃಪ್ತಿ ನಿಜದಿ ;

ಸಂದೇಶಗಳ
ಆಯ್ಕೆಯ ಕೆಲಸ
ಸುಲಭದ್ದೇನಲ್ಲ
ಅವರಿವರ
ಸಂದೇಶಗಳನ್ನು
ಇದ್ದ ಹಾಗೆಯೇ
ನಾನು ಮತ್ತೆ
ರವಾನಿಸಿದರೆ
ಅವುಗಳಲ್ಲಿ
ನಿಜವಾಗಿಯೂ
ನನ್ನತನವಿರದು;

ಓದುವವನನ್ನು
ಗುರಿಯಾಗಿಸಿ
ಹೇಳುವಂತಹ
ಉಪದೇಶದ
ಮಾತಾಗಿ ಅಲ್ಲ,
ನಾವು ಎಂಬ
ಭಾವ ಮೂಡಿಸಿ
ನಮಗೆ ನಾವೇ
ಹೇಳುವಂತಾಗಿಸಿ
ರವಾನಿಸದಿರೆ
ನೆಮ್ಮದಿಯಿರದು!
********


ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!

14 ಸೆಪ್ಟೆಂ 10

ಹಿಂದೆಂದೂ ಕಂಡರಿಯದ
ಸುದೀರ್ಘ ಅನಾವೃಷ್ಟಿ,
ಆಸುಮನದಲ್ಲಿ ಆಗುತ್ತಿಲ್ಲ
ಈಗೇನೂ ಹೊಸಸೃಷ್ಟಿ;

ಏನನ್ನು ಕಂಡರೂ ಈಗ
ಈ ಮನ ಸ್ಪಂದಿಸುತಿಲ್ಲ,
ಏನನ್ನು ಕೇಳಿದರೂ ಈಗ
ಈ ಮನ ಸ್ಪಂದಿಸುತ್ತಿಲ್ಲ;

ಭಾವನೆಗಳ ಬಾವಿಯೇ
ಬತ್ತಿ ಹೋಗಿರುವಂತಿದೆ
ಹೊಸ ಮಾತೇನೂ ಈ
ಮನದಿಂದ ಬಾರದಂತಿದೆ;

ತೋರುತಿದೆ ನಿರಾಸಕ್ತಿ
ಮನಸ್ಸು ಈಗ ಎಲ್ಲದಕೆ,
ಯಾರೋ ಕೈಯೆತ್ತಿ ಶಾಪ
ನೀಡಿದಂತಿದೆ ಈ ಮನಕೆ;

ಕ್ರಿಯೆಯೂ ಇಲ್ಲ, ಇಲ್ಲಿ
ಯಾವ ಪ್ರತಿಕ್ರಿಯೆಯೂ ಇಲ್ಲ,
ಯಾರು ಏನೆಂದರೂ ಇದು
ಹೊರಡಿಸುವುದೇ ಇಲ್ಲ ಸೊಲ್ಲ;

ಅದು ಯಾವುದೋ ಅವ್ಯಕ್ತ
ನಿರೀಕ್ಷೆ ಈ ಮನದೊಳಗೆ,
ಏನನ್ನೋ ಕೇಳಬಯಸುವ
ಆಸೆ ಇದೆ ನನ್ನೀ ಕಿವಿಗಳಿಗೆ;

ಅದು ಯಾವುದರ ನಿರೀಕ್ಷೆ
ಎಂಬುದರ ಅರಿವೇ ಇಲ್ಲ,
ಆದರೆನಗೆ ನಿರೀಕ್ಷೆ ಸದಾ
ಇದೆ ಈ ಮಾತು ಸುಳ್ಳಲ್ಲ;

ಹಾರಿ ಬಂದೀತು ಸಂದೇಶವನು
ಹೊತ್ತ ಪಾರಿವಾಳ ಸದ್ಯದಲೇ,
ಮನವ ತೆರೆದು ಸ್ಪಂದಿಸುವಂತೆ
ಮಾಡೀತು ನಾನು ಅರಿಯದಲೇ;

ಕಾಯುತ್ತೇನೆ ಆ ಶುಭಗಳಿಗೆಗೆ
ಚಾತಕ ಪಕ್ಷಿಯಂತೆ ಹಗಲಿರುಳು,
ಮತ್ತೆ ಕೇಳಿ ನೀವೀ ಆಸುಮನದಲ್ಲಿ
ದಿನವೂ ಹೊಸ ಹೊಸ ಮಾತುಗಳು!
*************


ಅಪರಾತ್ರಿಯಲ್ಲಿ ನಿದ್ದೆಗೆಡಿಸುತ್ತವೆ!

12 ಮೇ 10

  

ತತ್ವ ಆದರ್ಶದ ಹಿತನುಡಿಗಳು

ಗಾದೆಗಳೆಲ್ಲಾ ಬರಿಯ

ದೂರವಾಣಿ ಸಂದೇಶಗಳಾಗಿ

ಉಳಿದುಬಿಟ್ಟಿವೆ

 

ತಮಗೆ ಸಹಕಾರಿಯಾಗಿ

ಇರುವುದಕ್ಕಿಂತಲೂ ಹೆಚ್ಚಾಗಿ

ಮುಂದಿನ ಮನೆಯಂಗಳಕೆ

ತಳ್ಳಿಬಿಡುವ ಸರಕುಗಳಾಗಿ ಬಿಟ್ಟಿವೆ

 

ರಾತ್ರಿ ಬೇಗ ಮಲಗುವುದು

ಒಳ್ಳೆಯದು ಎಂದೆನ್ನುವ

ಸಂದೇಶಗಳೂ ಅಪರಾತ್ರಿಯಲ್ಲಿ

ನಮ್ಮ ನಿದ್ದೆಗೆಡಿಸುತ್ತವೆ!!!

****


ನಿನ್ನ ಸಂದೇಶಕ್ಕಾಗಿ ಕಾಯುತ್ತಿದ್ದೇನೆ ನೋಡು!

03 ಮೇ 10

 

ಇಂದಿನ ಶುಭೋದಯದ

ಸಂದೇಶ ಏಕೋ ಸಪ್ಪೆಯೆಂದೆನಿಸಿತು

 

ನಿನ್ನ ಮನದಲ್ಲಿ ನೆಮ್ಮದಿ ಇಲ್ಲ

ಎಂಬ ಭಾವನೆ ನನ್ನನ್ನು ಆವರಿಸಿತು

 

ಅದು ನಿಜವೋ ಸುಳ್ಳೋ

ಎಂಬ ಪ್ರಶ್ನೆ ಮಾಡಿದೆ ನಾನಿನಗೆ

 

ಊಹೆ ನಿಜವಾದ ಸಂತಸದ

ಜೊತೆಗೆ ಈಗ ಬೇಸರವೂ ಇದೆಯೆನಗೆ

 

ನಿನ್ನ ಮನದ ದುಗುಡಕ್ಕೆ

ಕಾರಣ ಏನೆಂದು ನಾ ಕೇಳುವುದಿಲ್ಲ

 

ಯಾರಿಂದಾಗಿ, ಯಾಕಾಗಿ ಎಂಬ

ಪ್ರಶ್ನೆಗಳ ಸುರಿಮಳೆಗೈಯುವುದಿಲ್ಲ

 

ಕೆದಕಿದಷ್ಟೂ ಮನದ ದುಗುಡ

ಹೆಚ್ಚಾಗಬಹುದು ಎಂಬುದ ನಾಬಲ್ಲೆ

 

ಅದಕೇ ನಾ ಬೇರೇನನ್ನೂ

ಕೇಳದೇ ಈಗ ಮೌನವಾಗಿರುವೆನಲ್ಲೇ

 

ಕದಡಿದ ಕೊಳದ ನೀರನ್ನು

ಮುಟ್ಟದೇ ಬಿಟ್ಟರಷ್ಟೇ ತಿಳಿಯಾಗಬಹುದು

 

ಕಾಲದ ಮಾಯೆಯಿಂದ ನೋಡು

ಮನದ ದುಗುಡವೂ ಮರೆಯಾಗಬಹುದು

 

ನಿನಗಿಷ್ಟವಾದಾಗ ಮನದ ಮಾತ

ಹಂಚಿಕೊಂಬ ನಿರ್ಧಾರ ನೀನು ಮಾಡು

 

ನಿನ್ನ ಕಡೆಯಿಂದ ಬರುವ ಮುಂದಿನ

ಸಂದೇಶಕ್ಕಾಗಿ ನಾ ಕಾಯುತ್ತಿದ್ದೇನೆ ನೋಡು!!!

 

****************************


“ಹಾಯ್”!

06 ಏಪ್ರಿಲ್ 10

ಅವರಿವರಿಂದ

ಬರುವ

ಸಂದೇಶಗಳನ್ನು

ನಾನೂ ನಿನಗೆ

ಮರು ರವಾನಿಸಬಹುದು

ಓ ನನ್ನ ಚೆಲುವೆ,

 

ಆದರೆ,

ನನ್ನತನವಿಲ್ಲದ

ಆ ಉದ್ದುದ್ದ

ಸಂದೇಶಗಳಿಗಿಂತ

ನಿನಗೆ ನನ್ನೀ

ಮನದಿಂದ ಬರುವ

ಎರಡಕ್ಷರಗಳ

“ಹಾಯ್”

ಬಲು ಇಷ್ಟವೆಂದು

ನಾ ಅರಿತಿರುವೆ!!!

*****


ನನ್ನ ಆ ಅಪರಿಚಿತ “ಫ್ಯಾನು”

12 ನವೆಂ 09
 
 
ಪದೇ ಪದೇ ಸಂದೇಶ ಕಳುಹಿಸಿ

ಕುಶಲೋಪರಿ ವಿಚಾರಿಸುತ್ತಿದ್ದ

ಜಂಗಮ ದೂರವಾಣಿ ಸಂಖ್ಯೆಗೆ

ಸಂದೇಶ ರವಾನಿಸಿ ಕೇಳಿದೆ ಹೀಗೆ: 

 

“ಯಾರ್ರೀ ನೀವು ಅಪರಿಚಿತರು

ಹೀಗೆ ನನ್ನ ಕುಶಲವನ್ನು

ಸುಖಾ ಸುಮ್ಮನೇ

ವಿಚಾರಿಸ್ತೀರಲ್ಲಾ?

ಉತ್ತರಿಸಲು ನನಗೆ

ನಿಮ್ಮ ಪರಿಚಯ ಆಗಬೇಕಲ್ಲಾ”

 

“ನಾನು ನಿಮ್ಮ “ಆಸುಮನ” ದ

ಓದುಗೆ, ಅಲ್ಲದೆ ಆಗಿದ್ದೇನೆ

ನಾನೀಗ ನಿಮ್ಮ “ಫ್ಯಾನು”

 

“ನನಗೇಕೋ ಚಳಿ ಆಗ್ತಿದೆ

ಸದ್ಯಕ್ಕೆ ನಿಲ್ಲಿಸಿ ಬಿಡ್ತೀರಾ

ನನಗೇನೂ ಬೇಕಾಗಿಲ್ಲರೀ

ಈ ಅಪರಿಚಿತ “ಫ್ಯಾನು”

 

“ಬೇಡವೆಂದರೆ ಹೇಗೆ

ನೀವ್ಯಾರು ಬೇಡವೆನ್ನಲು?”

 

“ಸರಿ ನಿಮ್ಮಿಷ್ಟ, ಆದರೆ

ನಿಜಕ್ಕೂ ಮನಸ್ಸಿಲ್ಲ ಕಣ್ರೀ

ನನಗೆ ಅಪರಿಚಿತರೊಂದಿಗೆ

ಹೀಗೆಲ್ಲಾ ಸಂಭಾಷಿಸುತಿರಲು”