ಯಡಿಯೂರಪ್ಪನವರ ಅಧಿಕಾರದ ಅಂತ…?!

17 ಫೆಬ್ರ 10

 

ಯಡಿಯೂರಪ್ಪನವರ ಅಧಿಕಾರದ ಅಂತ

ಕಾಣ ಬಯಸಿರುವಂತಿದೆ ನಮ್ಮ ಅನಂತ

ಇಲ್ಲವಾದರೆ ವಿಶ್ವೇಶ್ವರ ಭಟ್ಟರೇ ಇಂದೀಗ

ನೈಸ್ ಕತೆ ಯಾಕೆ ಬರೆಯಬೇಕಿತ್ತು ಅಂತ

 

ಅನಂತರು ಒಪ್ಪಿಗೆ ನೀಡದೇ ಭಟ್ಟರು ಕತೆ

ಬರೆದರೆಂದರೆ ನಂಬಲೇ ಆಗದು ನನ್ನಿಂದ

ಅನಂತರ ಜೊತೆಗೆ ದುಡಿದ ಆ ದಿನಗಳ

ಮರೆಯಲಾಗುವುದೇ ಹೇಳಿ ಈ ಭಟ್ಟರಿಂದ

 

ಹೊರಗಿನವರು ಎಷ್ಟು ಕಿರುಚಾಡಿದರೂ

ಯಡ್ಡಿ ಉಳಿದಿರಬಹುದು ಅಬಾಧಿತರಾಗಿ

ಕುರ್ಚಿಯೇ ಅಡಿಯಿಂದ ಸುಡತೊಡಗಿದರೆ

ಕೂತಿರಬಹುದೇ ಇನ್ನು ನಿರಾತಂಕವಾಗಿ

 

ಅಂತೂ ಇಂತೂ ಈ ನಿರ್ವೀರ್ಯ ಸರಕಾರ

ಪತನಗೊಳ್ಳುವ ಎಲ್ಲ ಸೂಚನೆಯೂ ಬಂದಿದೆ

ಆದರೆ ಆಸುಮನದೊಳಗೆ ಮುಂದೆ ಅದಿನ್ಯಾವ

ಸರ್ಕಾರ ಬರಬಹುದೆಂಬ ಭಯವೂ ಕಾಡಿದೆ!!!

***************************


ಕನ್ನಡವನೇ ಮರೆಸುವಂತಿದೆ ವಿಜಯ ಕರ್ನಾಟಕದ ಹೊಸ ರೂಪ!!!

20 ನವೆಂ 09

ವಿಶ್ವೇಶ್ವರ ಭಟ್ಟರು ಏಕೆ ಹೀಗಾದರೋ ಆ ದೇವರಿಗೇ ಗೊತ್ತು

ಕನ್ನಡದ ಮೇಲೆ ಅವರ ಆಸಕ್ತಿ ಕಡಿಮೆ ಆದಂತಿದೆ ಈ ಹೊತ್ತು

 

ವಿಜಯ ಕರ್ನಾಟಕದ ತುಂಬೆಲ್ಲಾ ಈಗ ಆಂಗ್ಲ ಪದಗಳ ದಾಳಿ

ಕನ್ನಡವನೇ ಮರೆಸುವಂತಿದೆ ಅದೀಗ ಹೊಸ ರೂಪವ ತಾಳಿ

 

ಲವಲvk ಎಂಬ ಹೊಸ ಪತ್ರಿಕೆ ಕಾದಿಹುದು ನೋಂದಣಿಗಾಗಿ

ಪ್ರತಿಭಟಿಸಲೇ ಬೇಕು ಕನ್ನಡವ ಕೊಲ್ಲುವವರನು ನಾವೊಂದಾಗಿ

 

ಮೊದಲೇ ತಪ್ಪುಗಳ ರಾಶಿಯಲಿ ಕನ್ನಡ ಕುಲಗೆಟ್ಟು ಹೋಗಿತ್ತು

ಈಗ ಆಂಗ್ಲ ಪದಗಳ ಬೆರಕೆಯಿಂದ ಸತ್ಯನಾಶ ಆದಂತಾಯ್ತು

 

ಯಾವ ಸಾಧನೆಗಾಗಿ ಈ ಪರಿಯ ಹುಚ್ಚಾಟವೋ ನಾನರಿಯೇ

ಹೆತ್ತ ತಾಯಿಯಿಂದಲೇ ಕ್ಯಾಬರೇ ಕುಣಿಸುವ ಮಹದಾಸೆಯೇ

 

ಟೈಮ್ಸ್ ಆಫ್ ಇಂಡಿಯಾವನಾಗಲೇ ಕಂಗ್ಲೀಷೀಕರಿಸಿಯಾಗಿದೆ

ಈಗ ನೋಡಿ ವಿ.ಕ. ವಿಚಿತ್ರ ಕರ್ನಾಟಕವಾಗಿ ಮಾರ್ಪಾಡಾಗಿದೆ

 

ಅಪ್ಪಟ ಕನ್ನಡವನು ನಮ್ಮ ಪತ್ರಿಕೆಗಳಲ್ಲಾದರೂ ಕಾಣಬಹುದಿತ್ತು

ಇದೀಗ ಈ ಹೊಸ ತಲೆಗೆಡುಕತನದಿಂದ ಅದಕೂ ಬಂತೇ ಕುತ್ತು

 

ಸರ್ಕಾರೀ ಮದ್ಯದ ಅಂಗಡಿಗಳಲ್ಲಿದ್ದವು ಕೆಂಪು ನಾಮ ಫಲಕಗಳು

ದಿನಪತ್ರಿಕೆಗಳಲೀಗ ಮತ್ತೇರಿಸುವ ಕೆಂಪು ಬಣ್ಣದ ತಲೆ ಬರಹಗಳು

 

ಇನ್ನಾದರೂ ಎಚ್ಚೆತ್ತು ಮರಳಿ ಬಂದು ಬಿಡಿ ನಮ್ಮ ಸವಿಗನ್ನಡಕೆ

ನಮ್ಮದು ಸದಾ ಚೆನ್ನ ಇವೆಲ್ಲಾ ಏನಿದ್ದರೂ ಬರೇ ನಾಲ್ಕು ದಿನಕೆ

 

ಹೊಗಳಿ ಬರೆದ ನೂರಾರು ಪತ್ರಗಳು ಬೆಳಕ ಕಂಡವು ವಿ.ಕ.ದಲ್ಲಿ

ನನ್ನ ಮಾತುಗಳು ಕಂಡಿಲ್ಲ ಹಾಗಾಗಿ ಪ್ರಕಟಿಸುತ್ತಿದ್ದೇನೆ ನಾನಿಲ್ಲಿ

*****************************************